ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಾಶ್ಮೀರದಲ್ಲಿ ಜಿ20 ಸಭೆ: ಸರಿ ದಾರಿಯಲ್ಲಿ ಸ್ಪಷ್ಟ ಸಂದೇಶ

Published 22 ಮೇ 2023, 0:35 IST
Last Updated 22 ಮೇ 2023, 0:35 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಜಿ–20 ಗುಂಪಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತವು ಇಡೀ ವಿಶ್ವಕ್ಕೆ ಬಲವಾದ ಸಂದೇಶವೊಂದನ್ನು ರವಾನಿಸುತ್ತಿದೆ. ಈ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯದ ವಿಚಾರದಲ್ಲಿ ತಾನು ಸಾರ್ವಭೌಮ ಎಂಬುದನ್ನು ದೇಶವು ಸ್ಪಷ್ಟವಾಗಿ ಹೇಳುತ್ತಿದೆ.

ಈ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯದ ವಿಚಾರದಲ್ಲಿ ಪಾಕಿಸ್ತಾನ ಮತ್ತು ಚೀನಾ ಹಿಂದಿನಿಂದಲೂ ತಗಾದೆ ತೆಗೆಯುತ್ತಿವೆ. ಹೀಗಾಗಿ, ಭಾರತ ರವಾನಿಸಿರುವ ಈ ಸಂದೇಶವು ಬಹಳ ಮಹತ್ವದ್ದು. ಜಿ–20 ಗುಂಪಿನ ಈ ವರ್ಷದ ಅಧ್ಯಕ್ಷತೆಯನ್ನು ಹೊಂದಿರುವ ಭಾರತವು ಸರಿಸುಮಾರು 200 ಸಭೆಗಳನ್ನು, ಕಾರ್ಯಕ್ರಮಗಳನ್ನು ದೇಶದ ಬೇರೆ ಬೇರೆ ನಗರಗಳಲ್ಲಿ ಆಯೋಜಿಸುತ್ತಿದೆ. ಅರುಣಾಚಲ ಪ್ರದೇಶದ ಇಟಾನಗರದಲ್ಲಿ, ಲಡಾಖ್‌ನಲ್ಲಿ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಸಭೆಗಳು ನಡೆದಿವೆ.

ಶ್ರೀನಗರದಲ್ಲಿ ಸೋಮವಾರದಿಂದ ಸಭೆಯೊಂದು ನಡೆಯಲಿದೆ. ಈ ಸಭೆಗಳಿಗೆ ಚೀನಾ ಮತ್ತು ಪಾಕಿಸ್ತಾನ ತಕರಾರು ಎತ್ತಿವೆ. ಅರುಣಾಚಲ ಪ್ರದೇಶದ ಸರಿಸುಮಾರು 90 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನಾ ತನ್ನದೆಂದು ಹೇಳುತ್ತಿದೆ. ಅಲ್ಲದೆ, ಲಡಾಖ್‌ನ ಅಕ್ಸಾಯ್ ಚಿನ್ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಲಡಾಖ್‌ನಲ್ಲಿ 2020ರ ನಂತರ ತಾನು ಕಬಳಿಸಿಕೊಂಡಿರುವ ಹಲವು ಪ್ರದೇಶಗಳಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ.

ಜಮ್ಮು ಮತ್ತು ಕಾಶ್ಮೀರದ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳು ಗುಟ್ಟಾಗಿರುವಂಥದ್ದಲ್ಲ. ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಜಿ–20 ಗುಂಪಿನ ಸದಸ್ಯ ದೇಶವಾಗಿರುವ ಚೀನಾ, ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ನಡೆದ ಸಭೆಗಳಿಂದ ದೂರ ಉಳಿಯಲು ತೀರ್ಮಾನಿಸಿತು. ಶ್ರೀನಗರದಲ್ಲಿ ನಡೆಯಲಿರುವ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಂಟಿ ಕಾರ್ಯಪಡೆಯ ಸಭೆಯಲ್ಲಿಯೂ ಭಾಗವಹಿಸುವುದಿಲ್ಲ ಎಂದು ಅದು ಹೇಳಿದೆ.

ಅದೇ ರೀತಿ, ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ, ಶ್ರೀನಗರದ ಸಭೆಯಲ್ಲಿ ಟರ್ಕಿ ಕೂಡ ಭಾಗವಹಿಸುತ್ತಿಲ್ಲ. ಭಾರತವು ಸಭೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಿದ್ದಕ್ಕೆ ಸೌದಿ ಅರೇಬಿಯಾ ದೇಶವು ಆರಂಭಿಕ ಹಂತದಲ್ಲಿ ಆಕ್ಷೇಪ ಎತ್ತಿತ್ತು ಎನ್ನಲಾಗಿದೆ. ಆದರೆ ಅದು ಈಗ ಮನಸ್ಸು ಬದಲಾಯಿಸಿದೆ ಎಂಬ ವರದಿಗಳು ಇವೆ. ಜಾಗತಿಕ ಮಟ್ಟದ ಕಾರ್ಯಕ್ರಮಗಳನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅರುಣಾಚಲ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಭಾರತವು ಸರಿಯಾದ ಹೆಜ್ಜೆಯನ್ನು ಇರಿಸಿದೆ.

ಭಾರತದ ಭೂಭಾಗವೊಂದನ್ನು ಅನ್ಯ ರಾಷ್ಟ್ರಗಳು ತಮ್ಮದೆಂದು ಹೇಳಿಕೊಂಡ ಮಾತ್ರಕ್ಕೆ, ಭಾರತವು ತಾನು ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದನ್ನು, ಅಂತರರಾಷ್ಟ್ರೀಯ ಅತಿಥಿಗಳನ್ನು ಆಹ್ವಾನಿಸಿ ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಲ್ಲಿಸಲಾಗದು ಎಂಬ ಸಂದೇಶವು ರವಾನೆಯಾಗಿದೆ.

ಈ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇನ್ನೂ ಹಲವು ಸಂದೇಶಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಈ ಕಾರ್ಯಕ್ರಮಗಳ ನೆವದಲ್ಲಿ ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಉತ್ತಮಗೊಳ್ಳುತ್ತದೆ. ಆತಿಥ್ಯ ವಹಿಸುವ ನಗರಗಳು ಹಾಗೂ ಆ ನಗರಗಳ ಸುತ್ತಲಿನ ಕೆಲವು ಪ್ರದೇಶಗಳು ಇದುವರೆಗೆ ‘ಸಂಘರ್ಷಮಯ ಪ್ರದೇಶಗಳು’ ಎಂಬ ಚಿತ್ರಣ ‍ಪಡೆದುಕೊಂಡಿದ್ದರೂ, ಕಾರ್ಯಕ್ರಮಗಳ ಕಾರಣದಿಂದಾಗಿ ಮಾಧ್ಯಮಗಳ ಮೂಲಕ ಒಳ್ಳೆಯ ಪ್ರಚಾರ ಪಡೆಯಬಹುದು.

ಆಗ ಅಲ್ಲಿ ಪ್ರವಾಸೋದ್ಯಮ ಚಿಗುರುತ್ತದೆ. ಅದು ಸ್ಥಳೀಯರಿಗೆ ಒಳ್ಳೆಯ ಆದಾಯ ಮೂಲವಾಗುತ್ತದೆ. ಸ್ಥಳೀಯ ಅರ್ಥ ವ್ಯವಸ್ಥೆಗೆ ಬಲ ಸಿಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತವು ತನ್ನ ನಿಲುವನ್ನು ಇನ್ನಷ್ಟು ದೃಢವಾಗಿ ಜಗತ್ತಿಗೆ ಸಾರಿದೆ. ಆದರೆ, ಇದರ ಜೊತೆಯಲ್ಲೇ ಭಾರತವು ಅಲ್ಲಿ ತನ್ನ ಸಾರ್ವಭೌಮತ್ವವನ್ನು ಬಲಪಡಿಸಿಕೊಳ್ಳಲು ಇನ್ನೂ ಹಲವು ಕೆಲಸಗಳನ್ನು ಮಾಡಬೇಕಿದೆ.

ಈ ಪ್ರದೇಶಗಳಲ್ಲಿನ ಜನರ ಹೃದಯವನ್ನು ಗೆಲ್ಲುವುದಕ್ಕೆ ಆಳುವವರು ಹೆಚ್ಚಿನ ಗಮನ ನೀಡಬೇಕು. ದೇಶದ ಮುಖ್ಯವಾಹಿನಿಯಲ್ಲಿ ಈ ಪ್ರದೇಶಗಳ ಜನರ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಬೇಕು. ಹೀಗಾಗಿ, ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿವುದು ಸರಿ ದಾರಿಯಲ್ಲಿ ಇರಿಸಿರುವ ಸಣ್ಣ ಹೆಜ್ಜೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT