ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಅಣೆಕಟ್ಟೆಗೆ ಸ್ಟಾಪ್‌ಲಾಗ್‌ ಅಳವಡಿಕೆ: ತಜ್ಞರ ಕಾರ್ಯ ಶ್ಲಾಘನೀಯ

Published : 23 ಆಗಸ್ಟ್ 2024, 0:56 IST
Last Updated : 23 ಆಗಸ್ಟ್ 2024, 0:56 IST
ಫಾಲೋ ಮಾಡಿ
Comments

ತುಂಗಭದ್ರಾ ಅಣೆಕಟ್ಟಿನ ಕೊಚ್ಚಿಹೋದ ಕ್ರಸ್ಟ್‌ಗೇಟ್‌ ಜಾಗದಲ್ಲಿ ಸ್ಟಾಪ್‌ಲಾಗ್‌ ವ್ಯವಸ್ಥೆ ಅಳವಡಿಕೆ ಕಾರ್ಯವು ನಿರೀಕ್ಷೆಗೂ ಮೀರಿದ ವೇಗದಲ್ಲಿ ಪೂರ್ಣಗೊಂಡಿರುವುದು ಅಚ್ಚುಕಟ್ಟು ಪ್ರದೇಶದ ರೈತ ಸಮೂಹದಲ್ಲಿ ಸಂತಸ ಮೂಡಿಸಿದೆ. ಇದಕ್ಕಾಗಿ ಶ್ರಮಿಸಿದ ತಜ್ಞರು, ಅಧಿಕಾರಿಗಳು, ಶ್ರಮಿಕರ ಕೆಲಸ ಶ್ಲಾಘನೀಯ. ಕೊಂಡಿ ಕಳಚಿ ಗೇಟ್‌ ಕೊಚ್ಚಿಹೋಗುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಬೇಕಿತ್ತು; ಕಾಲಕಾಲಕ್ಕೆ ನಿರ್ವಹಣೆಯನ್ನು ಮಾಡಬೇಕಿತ್ತು. ಈ ಕೆಲಸದಲ್ಲಿ ಎಚ್ಚರ ತಪ್ಪಿದ್ದರಿಂದ ಬಂದೊದಗಿದ ಅಪಾಯವನ್ನು ಎದುರಿಸಲು ತಕ್ಷಣವೇ ಕಾರ್ಯತತ್ಪರರಾಗಿ, ಸಂಬಂಧಪಟ್ಟ ಎಲ್ಲರನ್ನೂ ಅಣಿಗೊಳಿಸಿ ಸ್ಟಾಪ್‌ಲಾಗ್‌ ವ್ಯವಸ್ಥೆ ಅಳವಡಿಸಿದ್ದರಿಂದ 30 ಟಿಎಂಸಿ ಅಡಿಗಳಷ್ಟು ನೀರನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಜಡ್ಡುಗಟ್ಟಿದ ಆಡಳಿತ, ಸಮನ್ವಯದ ಕೊರತೆ, ಭ್ರಷ್ಟಾಚಾರ ಇವೆಲ್ಲವೂ ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಇದ್ದಾಗಲೂ ಜಾಡ್ಯದಂತೆಯೇ ಇವೆ. ಹೀಗಿರುವಾಗ ಇಂತಹದೊಂದು ಸಾಧನೆಯೂ ಸಾಧ್ಯವಾಗುತ್ತದೆ ಎಂದಾದರೆ, ಸಾರ್ವಜನಿಕರ ಸಣ್ಣ ಮೆಚ್ಚುಗೆಯೂ ಕರ್ತವ್ಯಪರರಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ಹೆಚ್ಚಿಸುತ್ತದೆ. ತುಂಗಭದ್ರಾ ಜಲಾಶಯವನ್ನು ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ 70 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕರ್ನಾಟಕದ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ 12 ಲಕ್ಷ ಎಕರೆ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಐದು ಲಕ್ಷ ಎಕರೆ ಕೃಷಿ ಜಮೀನುಗಳಿಗೆ ಇದು ನೀರಾವರಿ ಒದಗಿಸುತ್ತದೆ. ಕೈಗಾರಿಕೆಗಳೂ ಇದೇ ನೀರನ್ನು ಆಶ್ರಯಿಸಿವೆ. ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಈ ತಿಂಗಳ 10ರ ರಾತ್ರಿ ಕೊಚ್ಚಿ ಹೋಗಿ, ಭಾರಿ ಪ್ರಮಾಣದಲ್ಲಿ ನೀರು ಹರಿದುಹೋಗಲು ಆರಂಭಿಸಿತು. ತ್ವರಿತ ಕ್ರಮ ಮತ್ತು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ನೀರಿನ ಪೋಲು ನಿಯಂತ್ರಿಸಲು ಸಾಧ್ಯವಾಯಿತು. 

‌ಈ ವಿಷಯದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ತಕ್ಷಣ ಸ್ಪಂದಿಸಿದವು. ಅಧಿಕಾರಿಗಳು, ಎಂಜಿನಿಯರ್‌ಗಳು, ತಜ್ಞರು ಸೇರಿ ಸ್ಟಾಪ್‌ಲಾಗ್‌ ವ್ಯವಸ್ಥೆ ಅಳವಡಿಕೆಗೆ ಬೇಕಾದ ಸಿದ್ಧತೆಯನ್ನು ಆರಂಭಿಸಿದರು. ಅನುಭವಿ ಎಂಜಿನಿಯರ್ ಕನ್ನಯ್ಯ ನಾಯ್ಡು ತಮ್ಮ ಪರಿಣತಿ ಹಾಗೂ ಶ್ರಮವನ್ನು ಧಾರೆ ಎರೆದರು. ಆಗಸ್ಟ್ 17ಕ್ಕೆ ಅಂದರೆ ಏಳೇ ದಿನಕ್ಕೆ ಸ್ಟಾಪ್‌ಲಾಗ್‌ ವ್ಯವಸ್ಥೆ ಅಳವಡಿಸುವ ಕೆಲಸ ಪೂರ್ಣಗೊಂಡಿತು. ಇದರಿಂದಾಗಿ 70 ಟಿಎಂಸಿ ಅಡಿ ನೀರು ಅಣೆಕಟ್ಟೆಯಲ್ಲೇ ಉಳಿಯಿತು. ಕರ್ನಾಟಕದ ಮಟ್ಟಿಗೆ ಇದೊಂದು ಹೆಮ್ಮೆಯ ಸಾಧನೆ ಹಾಗೂ ಪಾಠವೂ ಹೌದು. ರಾಜ್ಯದ ಅನೇಕ ಜಲಾಶಯಗಳು 70 ವರ್ಷದ ಆಸುಪಾಸಿನ ಇತಿಹಾಸ ಹೊಂದಿವೆ. ಇಷ್ಟು ಸುದೀರ್ಘ ವರ್ಷ ನೀರನ್ನು ತನ್ನ ಒಡಲೊಳಗಿಟ್ಟುಕೊಂಡ ಅಣೆಕಟ್ಟುಗಳು ಹಾಗೂ ನೀರಿನ ಹೊಡೆತವನ್ನು ತಾಳಿಕೊಂಡೇ ಇರುವ ಕ್ರಸ್ಟ್‌ಗೇಟ್‌ಗಳು ಸ್ವಾಭಾವಿಕವಾಗಿಯೇ ದುರ್ಬಲ ಗೊಂಡಿರುತ್ತವೆ. ಎಲ್ಲ ಅಣೆಕಟ್ಟುಗಳ ಸಾಮರ್ಥ್ಯದ ಪರಿಶೀಲನೆ, ಕ್ಷಮತೆಯ ಮೌಲ್ಯಮಾಪನವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಹಿಂದೆಲ್ಲ, ಜಲಸಂಪನ್ಮೂಲ ಖಾತೆ ಹೊಂದಿರುವವರಿಗೆ ಅದೊಂದೇ ಖಾತೆಯ ಉಸ್ತುವಾರಿ ಇರುತ್ತಿತ್ತು. ಈಗ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಅದರೊಂದಿಗೆ ಬೆಂಗಳೂರಿನ ಅಭಿವೃದ್ಧಿಯ ಹೊಣೆಯೂ ಇದೆ. ರಾಜಧಾನಿಯ ನಿಭಾವಣೆ ಹೊತ್ತವರಿಗೆ, ಜಲಸಂಪನ್ಮೂಲದಂತಹ ಜವಾಬ್ದಾರಿಯುತ ಖಾತೆಯನ್ನು ನಿಭಾಯಿಸುವುದು ಕಷ್ಟಸಾಧ್ಯ. ಹೆಚ್ಚಿನ ಸಮಯವನ್ನು ಈ ಇಲಾಖೆಯ ಉಸ್ತುವಾರಿಗೆ ನೀಡಲಾಗದು. ಈ ಅಂಶ ಕೂಡ ಇಲಾಖೆಯ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು. ಇದನ್ನು ಸರಿಪಡಿಸುವ ದಿಸೆಯಲ್ಲೂ ಸರ್ಕಾರ ಯೋಚಿಸಬೇಕು. ಅಂತೆಯೇ ಎಲ್ಲ ಅಣೆಕಟ್ಟೆಗಳನ್ನು ಪರಿಶೀಲಿಸಿ, ಅವುಗಳ ಸುರಕ್ಷತೆಗೆ ತಕ್ಷಣದ ಹಾಗೂ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲು ಸಲಹೆ ನೀಡುವ ಕಾರ್ಯಪಡೆಯನ್ನು ತಜ್ಞರ ನೇತೃತ್ವದಲ್ಲಿ ರಚಿಸಿ, ಕಾಲಮಿತಿಯಲ್ಲಿ ವರದಿ ಪಡೆಯಬೇಕು. ಮುಂದಿನ ಮಳೆಗಾಲದೊಳಗಾದರೂ ಎಲ್ಲ ಅಣೆಕಟ್ಟುಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ತುಂಗಭದ್ರಾ ಕ್ರಸ್ಟ್‌ಗೇಟ್‌ ಕೊಚ್ಚಿ ಹೋದ ಪ್ರಕರಣ ದಾರಿ ಮಾಡಿಕೊಡಲಿ. ಸರ್ಕಾರ ಈ ಬಗ್ಗೆ ಕಾರ್ಯಪ್ರವೃತ್ತವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT