ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆ: ಆರಂಭದಲ್ಲಿಯೇ ತಪ್ಪು ನಡೆ ಬೇಡ

Published 26 ಮೇ 2023, 17:37 IST
Last Updated 26 ಮೇ 2023, 17:37 IST
ಅಕ್ಷರ ಗಾತ್ರ

ಸಂಸತ್ತಿನ ಹೊಸ ಕಟ್ಟಡವನ್ನು ‍ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂಬುದು ಹಲವು ರಾಜಕೀಯ ಪಕ್ಷಗಳಿಂದ ಹಾಗೂ ಬೇರೆ ಬೇರೆ ವರ್ಗಗಳಿಗೆ ಸೇರಿದ ಜನರಿಂದ ಟೀಕೆಗೆ ಗುರಿಯಾಗಿದೆ. ಉದ್ಘಾಟನೆಯ ಗೌರವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೊಡುವ ಬದಲು, ಉದ್ಘಾಟನಾ ಸಮಾರಂಭದಲ್ಲಿ ತಾವೇ ಕೇಂದ್ರ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಪ್ರಧಾನಿ ಮೋದಿ ಅವರ ಆಲೋಚನೆ. ಇದರ ಸುತ್ತ ವಿವಾದ ಉಂಟಾಗುವುದನ್ನು ತಡೆಯಬಹುದಿತ್ತು. ಸಾಂವಿಧಾನಿಕವಾಗಿ ಸೂಕ್ಷ್ಮವಾಗಿರುವ ವಿಚಾರಗಳನ್ನು ಕೇಂದ್ರವು ಉಪೇಕ್ಷೆ ಮಾಡಿರುವುದು ವಿವಿಧ ವಲಯಗಳಲ್ಲಿ ಕೋಪಕ್ಕೆ ಕಾರಣವಾಗಿದೆ. ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ತಾವು ಬಹಿಷ್ಕರಿಸುವುದಾಗಿ ಹಲವು ರಾಜಕೀಯ ಪಕ್ಷಗಳು ಹೇಳಿವೆ. ಆದರೆ, ಇದು ಮುಂದಿನ ದಿನಗಳಲ್ಲಿ ಸಂಸತ್ತಿನ ಕಾರ್ಯಕಲಾಪಗಳ ದೃಷ್ಟಿಯಿಂದ ಒಳ್ಳೆಯದಲ್ಲ.

ರಾಷ್ಟ್ರಪತಿಯು ಭಾರತ ಎಂಬ ಗಣರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು. ಸಂವಿಧಾನದ 79ನೆಯ ವಿಧಿಯು ‘ಒಕ್ಕೂಟಕ್ಕೆ ಒಂದು ಸಂಸತ್ತು ಇರಬೇಕು. ರಾಷ್ಟ್ರಪತಿ, ರಾಜ್ಯಸಭೆ ಮತ್ತು ಲೋಕಸಭೆಯನ್ನು ಅದು ಒಳಗೊಂಡಿರಬೇಕು’ ಎಂದು ಹೇಳುತ್ತದೆ. ಅಂದರೆ ರಾಷ್ಟ್ರಪತಿ ಬಹಳ ವಿಶಿಷ್ಟವಾದ ಸ್ಥಾನ ಹೊಂದಿದ್ದಾರೆ. ಅವರು ಕಾರ್ಯಾಂಗದ ಮುಖ್ಯಸ್ಥರು, ಸಂಸತ್ತು ರೂಪಿಸುವ ಶಾಸನಗಳಿಗೆ ಅಂತಿಮ ಮುದ್ರೆ ಹಾಕಬೇಕಿರುವುದು ರಾಷ್ಟ್ರಪತಿ. ಸಂಸತ್ ಭವನದಂತಹ ರಾಷ್ಟ್ರದ ಹೆಗ್ಗುರುತುಗಳನ್ನು ಯಾರು ಉದ್ಘಾಟಿಸಬೇಕು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ಏಕೆಂದರೆ, ಸಂವಿಧಾನ ರೂಪಿಸಿದವರಿಗೆ ಆ ದಿಸೆಯಲ್ಲಿ ಯಾವುದೇ ನಿಯಮ ರೂಪಿಸುವ ಅಗತ್ಯ ಎದುರಾಗಿರಲಿಕ್ಕಿಲ್ಲ.

ಆದರೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಸಾಂವಿಧಾನಿಕ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು, ತಮ್ಮ ನಡೆಯು ತಮಗೆ ಕೀರ್ತಿ ತರುವ ರೀತಿಯಲ್ಲಿ ವರ್ತಿಸಬೇಕು. ಇಂತಹ ವಿಷಯಗಳಲ್ಲಿ ಬರೀ ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ಮುಂದಡಿ ಇರಿಸಬಾರದು. ಈ ಹೊತ್ತಿನಲ್ಲಿ ಬಿಜೆಪಿ ನಾಯಕರು, ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಯಾಗಿ, ಹಿಂದೆ ಸಂಸತ್ ಭವನದ ಅನೆಕ್ಸ್ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟನೆ ಯಾರು ಮಾಡಿದ್ದರು ಎಂಬುದನ್ನು ಆಧಾರವಾಗಿ ಇರಿಸಿಕೊಂಡು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿಗೆ ಹಕ್ಕು ಇದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಪ್ರಧಾನಿಯು ಸಂಸತ್ತಿಗೆ ಉತ್ತರದಾಯಿ. ಹೀಗಾಗಿ, ರಾಷ್ಟ್ರಪತಿ ಹೊಂದಿರುವ ಸ್ಥಾನಕ್ಕೆ ಸರಿಸಮನಾದ ಸ್ಥಾನವನ್ನು ಪ್ರಧಾನಿ ಹೊಂದಿಲ್ಲ ಎಂಬ ಸತ್ಯವನ್ನು ಅವರು ಅಲಕ್ಷಿಸುತ್ತಿದ್ದಾರೆ.

ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿಯವರೇ ಉದ್ಘಾಟಿಸಿದರು. ಆದರೆ, ದೇಶದ ಸಶಸ್ತ್ರ ಪಡೆಗಳ ಪರಮೋಚ್ಚ ನಾಯಕಿ ಆಗಿರುವ ರಾಷ್ಟ್ರಪತಿ ಮುರ್ಮು ಅವರು ಅದನ್ನು ಉದ್ಘಾಟಿಸಬೇಕಿತ್ತು. ಈ ಉದ್ಘಾಟನೆಯನ್ನು ಪ್ರಧಾನಿ ತಾವೇ ಮಾಡುವ ಮೂಲಕ, ಪ್ರಧಾನಿಗೆ ಹೆಚ್ಚಿನ ಆದ್ಯತೆ ನೀಡುವ ಪರಿಪಾಟವನ್ನು ಆರಂಭಿಸಿಯಾಗಿದೆ. ಮೇ 28ರಂದು ನಡೆಯಲಿರುವ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿಯೂ ಇದನ್ನು ಮತ್ತೊಮ್ಮೆ ಪಾಲಿಸಿದಂತಾಗುತ್ತದೆ. ಅಧಿಕಾರವನ್ನು ಮೆರೆಯಿಸುವ ಈ ಧೋರಣೆಯ ಕಾರಣದಿಂದಾಗಿ ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿಯನ್ನು ಕೂಡ ಕಾರ್ಯಕ್ರಮದಿಂದ ದೂರ ಇರಿಸಲಾಗುತ್ತಿದೆ. ವಿರೋಧ ಪಕ್ಷಗಳ ‍ಪ್ರತಿಭಟನೆಯು ಎತ್ತಿ ತೋರಿಸುತ್ತಿರುವುದು ಇಂತಹ ನಡೆಗಳನ್ನು. ಈ ನಡುವೆ, ಉದ್ಘಾಟನೆಯ ವಿಚಾರದಲ್ಲಿ ಏಕಿಷ್ಟು ಗದ್ದಲ ಉಂಟಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಉದ್ಘಾಟನಾ ಕಾರ್ಯಕ್ರಮವನ್ನು ವಿರೋಧ ಪಕ್ಷಗಳು ಬಹಿಷ್ಕರಿಸುತ್ತಿರುವುದು ಸಾಂಕೇತಿಕ ಮಾತ್ರ. ಏಕೆಂದರೆ, ಮುಂದೆ ಸಂಸತ್ತಿನ ಕಲಾಪಗಳು ಅದೇ ಕಟ್ಟಡದಲ್ಲಿ ನಡೆಯುತ್ತವೆ ಹಾಗೂ ತಾವು ಅಲ್ಲಿ ಕಲಾಪದಲ್ಲಿ ಭಾಗಿಯಾಗಬೇಕು ಎಂಬುದು ಆ ಪಕ್ಷಗಳಿಗೆ ಗೊತ್ತಿದೆ. ಹೊಸ ಕಟ್ಟಡದ ನಿರ್ಮಾಣದ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅವರಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ಹೊಸ ಕಟ್ಟಡಕ್ಕೆ ವಿರೋಧ ಎಷ್ಟೇ ವ್ಯಕ್ತವಾಗಿರಲಿ, ಈ ಕಟ್ಟಡವು ಮೂರ್ತರೂಪ ಪಡೆದಿರಲು ಕಾರಣ ಮೋದಿ ಅವರ ಆಲೋಚನೆ. ಇವೆಲ್ಲ ಏನೇ ಇದ್ದರೂ, ಕಟ್ಟಡವು ಅದೆಷ್ಟೇ ಭವ್ಯವಾಗಿದ್ದರೂ ಅದು ಒಂದು ಕಟ್ಟಡ ಮಾತ್ರ. ಸಂಸತ್ತಿನ ಭವ್ಯತೆ ಇರುವುದು ಕಟ್ಟಡದಲ್ಲಿ ಅಲ್ಲ. ಬದಲಿಗೆ, ಸಂಸತ್ತು ಹಾಗೂ ಪ್ರಧಾನಿಯ ಕಾರ್ಯನಿರ್ವಹಣೆಗೆ ಕೈಪಿಡಿಯಂತೆ ಇರುವ ಸಂವಿಧಾನದಲ್ಲಿ ಅದರ ಭವ್ಯತೆಯು ಅಡಕವಾಗಿದೆ. ಪ್ರಧಾನಿಯವರು ಈಗ ಮುತ್ಸದ್ದಿಯಂತೆ ಹೆಜ್ಜೆ ಇರಿಸಬೇಕು. ಅವರು ಪ್ರಜಾತಂತ್ರದ ಹೊಸ ದೇವಸ್ಥಾನವನ್ನು ದೇಶದ ಜನರಿಗೆ ಅರ್ಪಣೆ ಮಾಡುವಂತೆ ರಾಷ್ಟ್ರಪತಿಯವರನ್ನು ಕೋರಬೇಕು. ಆಗ ನವ ಭಾರತವು ಸರಿ ದಾರಿಯಲ್ಲಿ ಹೆಜ್ಜೆ ಇರಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT