ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅಧಿಕಾರಕ್ಕೆ ಬಂದಾಕ್ಷಣ ಸೌಜನ್ಯದ ನಡೆ ಏಕೆ ಕಣ್ಮರೆಯಾಗುತ್ತದೆ?

Last Updated 22 ಮೇ 2020, 22:03 IST
ಅಕ್ಷರ ಗಾತ್ರ

ಅಧಿಕಾರ ಎನ್ನುವುದು ಜನರ ಸೇವೆ ಮಾಡುವುದಕ್ಕೆ ದೊರೆತ ಒಂದು ಅವಕಾಶ ಎಂದು ರಾಜಕಾರಣಿಗಳು ನಂಬಿದ್ದ ಕಾಲವೊಂದಿತ್ತು. ಅದಕ್ಕೆ ತಕ್ಕಂತೆ ಅವರು, ಜನರ ಜೊತೆಗೆ ಸೌಜನ್ಯ ಮತ್ತು ವಿನಯದಿಂದ ವರ್ತಿಸುವುದು ತಮ್ಮ ಕರ್ತವ್ಯ ಎಂದೂ ಭಾವಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅಧಿಕಾರ ಎನ್ನುವುದು ತಮ್ಮ ‘ಸಕಲ ಸಾಮರ್ಥ್ಯ’ದಿಂದ ಗಳಿಸಿಕೊಂಡಿರುವ ಪದವಿ ಎಂದು ಭಾವಿಸುವ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಿದೆ. ಅಧಿಕಾರ ಇರುವುದು ಅನುಭವಿಸುವುದಕ್ಕೆ ಎಂದು ರಾಜಕಾರಣಿಯೊಬ್ಬ ಭಾವಿಸತೊಡಗಿದಾಗ, ಆ ಅಧಿಕಾರದ ಅಮಲಿನಲ್ಲೇ ಅಹಂ ಹುಟ್ಟಿಕೊಳ್ಳುತ್ತದೆ. ಹೀಗಾದಾಗ ಸಾರ್ವಜನಿಕರು, ಜನಸಾಮಾನ್ಯರು ಅಧಿಕಾರಸ್ಥರ ಕಣ್ಣಿಗೆ ‘ಕೇವಲ’ ಎಂಬಂತೆ ಕಾಣಿಸುತ್ತಾರೆ. ರಾಜ್ಯದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗೆ ಕೋಲಾರದಲ್ಲಿ ರೈತಮಹಿಳೆಯೊಬ್ಬರ ಮೇಲೆ ರೇಗಿ ಕೆಟ್ಟ ಭಾಷೆಯಲ್ಲಿ ಬೈದ ಪ್ರಕರಣವೂ ಇದನ್ನೇ ಸೂಚಿಸುವಂತಿದೆ. ಕೋಲಾರಕ್ಕೆ ಹೋಗಿದ್ದ ಸಚಿವರನ್ನು ಹಸಿರು ಸೇನೆ ಮತ್ತು ರೈತಸಂಘದ ಮಹಿಳಾ ಸದಸ್ಯರು ಭೇಟಿಯಾಗಿದ್ದರು. ಕೆರೆ ಒತ್ತುವರಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದ್ದರು. ಮಾತಿನ ಮಧ್ಯೆ ಸಿಟ್ಟಿಗೆದ್ದ ಸಚಿವರು, ಮಹಿಳೆಯ ವಿರುದ್ಧ ‘ರ್‍ಯಾಸ್ಕಲ್‌, ಮುಚ್ಚುಬಾಯಿ’ ಎಂದು ಕೂಗಾಡಿದ್ದು ಈಗ ವಿವಾದವನ್ನೂ ಉಂಟುಮಾಡಿದೆ. ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ. ‘ಮಹಿಳೆಯರ ಬಗ್ಗೆ ಯಾರೂ ಲಘುವಾಗಿ ಮಾತನಾಡಬಾರದು, ಸಚಿವರನ್ನು ಕರೆಸಿ ಎಚ್ಚರಿಕೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ರೈತಸಂಘದ ಕಾರ್ಯಕರ್ತೆಯರ ಒತ್ತಾಯದಲ್ಲಿ ತಪ್ಪು ಅನ್ನಿಸುವಂಥದ್ದು ಏನೂ ಇಲ್ಲ. ಅವರ ಒತ್ತಾಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸಾರ್ವಜನಿಕ ಸೊತ್ತನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ರೈತಮಹಿಳೆಯರು ಸ್ವಲ್ಪ ಗಟ್ಟಿಧ್ವನಿಯಲ್ಲಿ ಮಾತನಾಡಿರಬಹುದು. ಸಚಿವರಾದವರು ಸಾರ್ವಜನಿಕರ ಆಕ್ರೋಶವನ್ನು ತಾಳ್ಮೆಯಿಂದಲೇ ಎದುರಿಸಬೇಕು. ತಮ್ಮನ್ನು ಭೇಟಿಯಾದ ಮಹಿಳೆಯರು ಸಲ್ಲಿಸಿದ ಅಹವಾಲನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಸಚಿವರು ಕೊಡಬಹುದಿತ್ತು. ಅದನ್ನು ಬಿಟ್ಟು, ಮಹಿಳೆಯರನ್ನು ಕೆಟ್ಟ ಪದಗಳಲ್ಲಿ ಬೈದದ್ದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಮಾಧುಸ್ವಾಮಿಯವರು ಈ ಹಿಂದೆಯೂ ಹೀಗೆ ಉದ್ಧಟತನದಿಂದ ವರ್ತಿಸಿದ ಪ್ರಕರಣವೊಂದು ಇನ್ನೂ ಜನಮಾನಸದಿಂದ ಮಾಸಿಲ್ಲ. ಸಚಿವರ ಮಾತಿನಿಂದ ಸಿಟ್ಟಿಗೆದ್ದ ಕುರುಬ ಸಮುದಾಯವು ಪ್ರತಿಭಟನೆ ನಡೆಸಿತ್ತು. ವೃತ್ತವೊಂದಕ್ಕೆ ಹೆಸರು ಇರಿಸುವ ಸಂಬಂಧ ಸೇರಿದ್ದ ಸಭೆಯಲ್ಲಿ ಮಾಧುಸ್ವಾಮಿ ದರ್ಪದ ಮಾತುಗಳನ್ನು ಆಡಿದ್ದರು ಎಂದು ವರದಿಯಾಗಿತ್ತು. ಬಳಿಕ, ಸಚಿವರ ಪರವಾಗಿ ಮುಖ್ಯಮಂತ್ರಿಯವರೇ ಬಹಿರಂಗ ಕ್ಷಮೆ ಯಾಚಿಸಿದ್ದರು. ಈಗ ಕೋಲಾರದ ಪ್ರಕರಣದಲ್ಲಿ ‘ರೈತ ಮಹಿಳೆಯರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ’ ಮಾಧುಸ್ವಾಮಿ ಅವರು ಮರುದಿನ ಹೇಳಿಕೆ ನೀಡಿದ್ದಾರೆ. ಆದರೆ, ಹಾಗೆ ಕ್ಷಮೆ ಕೋರುವಾಗಲೂ ವಿರೋಧ ಪಕ್ಷದ ನಾಯಕರ ವಿರುದ್ಧ ಲಘುಧಾಟಿಯಲ್ಲಿ ಮಾತನಾಡಿರುವುದು ಏನನ್ನು ಸೂಚಿಸುತ್ತದೆ? ಸಚಿವ ಸಂಪುಟದ ಸದಸ್ಯರ ಇಂತಹ ನಡೆಯನ್ನು ನಿಯಂತ್ರಿಸಲುಮುಖ್ಯಮಂತ್ರಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಗದ್ದಲದಲ್ಲಿ ಸಾರ್ವಜನಿಕ ಹಿತಾಸಕ್ತಿ ಮರೆಯಾಗದಂತೆ ನೋಡಿಕೊಳ್ಳುವ ಹೊಣೆಯೂ ಮುಖ್ಯಮಂತ್ರಿಯವರ ಮೇಲಿದೆ. ಕೋಲಾರದಲ್ಲಿ ಕೆರೆ ಒತ್ತುವರಿ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT