ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಜ್ಯಪಾಲರ ಭಾಷಣ: ಬರಿದೇ ಬಡಿವಾರ, ಕಾಣದ ಮುನ್ನೋಟ

Last Updated 16 ಫೆಬ್ರುವರಿ 2022, 21:16 IST
ಅಕ್ಷರ ಗಾತ್ರ

‘ನೀರಸ’, ‘ನಿರಾಶಾದಾಯಕ’, ‘ಅಸ್ಪಷ್ಟ’, ‘ಗೊತ್ತು–ಗುರಿ ಇಲ್ಲದ ಭಾಷಣ’– ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದಾಗಲೆಲ್ಲ ಸಾಮಾನ್ಯವಾಗಿ ವಿರೋಧ ಪಕ್ಷ ಗಳ ನಾಯಕರಿಂದ ಕೇಳಿಬರುವ ಪ್ರತಿಕ್ರಿಯೆಗಳಿವು. ಆದರೆ, ಈ ವರ್ಷದ ಭಾಷಣ ಕೇಳಿದ ಯಾರೇ ಆಗಲಿ, ಅದೇ ರೀತಿಯಲ್ಲಿ ಹೇಳುವಂತಾಗಿದೆ. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ಒಂದು ವರ್ಷಕ್ಕೆ ಅದು ಹಾಕಿಕೊಂಡಿರುವ ಮುನ್ನೋಟದ ಗುರಿಗಳು ರಾಜ್ಯಪಾಲರ ಭಾಷಣದಲ್ಲಿ ಪ್ರತಿಫಲಿತವಾಗಬೇಕು ಎನ್ನುವುದು ಈ ಸಂಪ್ರದಾಯದ ಹಿಂದಿನ ಆಶಯ.

ಸರ್ಕಾರವೇ ಸಿದ್ಧಪಡಿಸಿಕೊಡುವ ಈ ಭಾಷಣವನ್ನು ಓದುವವರು ಮಾತ್ರ ರಾಜ್ಯಪಾಲರು. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಚಾಳಿಯಿಂದ ಪ್ರಸ್ತುತ ಸರ್ಕಾರವೂ ಹೊರತಾಗಿಲ್ಲ. ಸರ್ಕಾರವು ಕೋವಿಡ್‌ ಪರಿಸ್ಥಿತಿ ನಿಭಾಯಿಸಿದ ರೀತಿಯನ್ನು ಹಾಡಿಹೊಗಳಲು ಭಾಷಣದ ಶೇಕಡ 25ರಷ್ಟು ಭಾಗ ಮೀಸಲಾಗಿದೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಎದ್ದಿದ್ದ ಹಾಹಾಕಾರ, ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವು–ನೋವು, ಆಂಬುಲೆನ್ಸ್‌ ಅಲಭ್ಯತೆ ಹಾಗೂ ಜೀವರಕ್ಷಕ ಔಷಧಿಗಳ ತೀವ್ರ ಅಭಾವ... ಇವೆಲ್ಲಾ ಇನ್ನೂ ದುಃಸ್ವಪ್ನ ವಾಗಿ ಕಾಡುತ್ತಿರುವಾಗ ‘ಸರ್ಕಾರ ಕೋವಿಡ್‌ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿತು’ ಎಂದು ಹೇಳಿಕೊಳ್ಳುವುದು ನಗೆಪಾಟಲಿಗೆ ಈಡಾಗು ವಂಥದ್ದು.

ಭಾಷಣದಲ್ಲಿ ನೀಡಲಾಗಿರುವ ಅಂಕಿ–ಅಂಶಗಳು ಸರ್ಕಾರದ ವೈಫಲ್ಯವನ್ನು ಮರೆಮಾಚಲು ನಡೆಸಲಾದ ವ್ಯರ್ಥ ಪ್ರಯತ್ನವಲ್ಲದೆ ಬೇರೇನಲ್ಲ. ಕಳೆದ ವರ್ಷದಲ್ಲಿ ಆಡಳಿತದ ನಿರ್ವಹಣೆ ಹೇಗಿತ್ತು ಎನ್ನುವುದರ ಮೌಲ್ಯಮಾಪನವೂ ಈ ಭಾಷಣದಲ್ಲಿ ಆಗಬೇಕಿತ್ತು. ಆದರೆ, ಆಗಿನ ಬಜೆಟ್‌ ಭಾಷಣದಲ್ಲಿ ಉಲ್ಲೇಖಗೊಂಡ ಹಲವು ವಿವರಗಳನ್ನೇ ಮತ್ತೊಮ್ಮೆ ಹೇಳಿ, ಕೈತೊಳೆದುಕೊಳ್ಳಲಾಗಿದೆ. ಸಚಿವ ಸಂಪುಟದ ಸಭೆಗಳಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಸಾರ್ವಜನಿಕರಿಗೆ ಈ ಹಿಂದೆಯೇ ಸಿಕ್ಕಿದ್ದ ಮಾಹಿತಿ ಯನ್ನೂ ಪುನರುಚ್ಚರಿಸಲಾಗಿದೆ. ವಸ್ತುಸ್ಥಿತಿ ಬೇರೆಯೇ ಆಗಿರುವಾಗ ಈ ಬಡಿವಾರ ಏಕೆ ಮತ್ತು ಹೀಗೆ ಹುಸಿ ಸಂಭ್ರಮಪಡುವುದರಲ್ಲಿ ಯಾವ ಅರ್ಥವಿದೆ?

ಕೋವಿಡ್‌ನಿಂದ ನಲುಗಿರುವ ಅರ್ಥವ್ಯವಸ್ಥೆ ಇನ್ನೂ ತೆವಳುತ್ತಿದೆ. ಸರ್ಕಾರದ ಹಣಕಾಸು ಸ್ಥಿತಿ ಚಿಂತಾಜನಕವಾಗಿದೆ. ಸಾಲದ ಹೊರೆ ಮತ್ತಷ್ಟು ಹೆಚ್ಚಿದೆ. ಅದು ಬೆಟ್ಟದಂತೆ ಬೆಳೆಯುತ್ತಲೇ ಇದೆ. ಒಂದೆಡೆ, ಉದ್ಯೋಗ ನಷ್ಟದ ಕಳವಳಕಾರಿ ಸನ್ನಿವೇಶ ಮುಂದುವರಿದಿದ್ದರೆ, ಇನ್ನೊಂದೆಡೆ, ಹೊಸ ಉದ್ಯೋಗಗಳು ನಿರೀಕ್ಷಿಸಿದಂತೆ ಸೃಷ್ಟಿಯಾಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ಸರ್ಕಾರ ಹೇಗೆ ನಿಭಾಯಿ ಸಲಿದೆ ಎನ್ನುವುದರ ಮುನ್ನೋಟ ಭಾಷಣದಲ್ಲಿ ಸ್ಪಷ್ಟವಾಗಿ ಇರಬೇಕಿತ್ತು.

ಹಿಜಾಬ್‌ ವಿವಾದದ ಬೆಂಕಿಯಲ್ಲಿ ಬೆಂದ ಸಮಾಜಕ್ಕೆ ಮುಲಾಮು ಹಚ್ಚಿ, ಕಾಲೇಜು ಅಂಗಳದಲ್ಲಿ ಮತ್ತೆ ಸಾಮರಸ್ಯದ ವಾತಾವರಣ ಮೂಡಿಸಲು ಸಹ ಈ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಆದರೆ, ಸರ್ಕಾರ ವ್ಯರ್ಥವಾಗಿ ಕೈಚೆಲ್ಲಿತು. ಮೇಕೆದಾಟು ಮತ್ತು ಮಹದಾಯಿ ಯೋಜನೆಗಳ ಕುರಿತ ತನ್ನ ನಿಲುವನ್ನು ಸ್ಫುಟವಾಗಿ ಪ್ರತಿಬಿಂಬಿಸಲು ಇದ್ದ ಅವಕಾಶವನ್ನೂ ನಿರ್ಲಕ್ಷಿಸಲಾಯಿತು. ಹೆಚ್ಚುವರಿ ನೀರಿನ ಹಂಚಿಕೆಯ ವಿಷಯವು ಇತ್ಯರ್ಥವಾಗುವವರೆಗೆ ನದಿಗಳ ಜೋಡಣೆಗೆ ಸಹಮತವಿಲ್ಲ ಎಂಬ ರಾಜ್ಯದ ವಾದವನ್ನು ಗಟ್ಟಿಯಾಗಿ ಪ್ರತಿಪಾದಿಸುವ ಅಂಶ ಕೂಡ ಭಾಷಣದಲ್ಲಿ ಜಾಗ ಪಡೆಯಲಿಲ್ಲ.

ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ವಿಚಾರವಾಗಿ ರಾಜ್ಯಪಾಲರು ಮಾತನಾಡಿದರೇನೋ ನಿಜ. ಆದರೆ, ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಸರ್ಕಾರ ರೂಪಿಸಿರುವ ಯೋಜನೆ ಯಾವುದೆಂಬ ವಿವರ ಭಾಷಣದಲ್ಲಿ ಇರಲಿಲ್ಲ. ಹೀಗಾಗಿ ಈ ಭರವಸೆಯೂ ಜನರ ವಿಶ್ವಾಸ ಗಳಿಸುವಲ್ಲಿ ಸಫಲವಾಗಲಿಲ್ಲ. ವಿದೇಶದಲ್ಲಿರುವ ಭಾರತೀಯರ ಜ್ಞಾನವನ್ನು ಇಲ್ಲಿ ಬಳಸಿಕೊಳ್ಳುವುದಕ್ಕಾಗಿ ‘ಮರಳಿ ತಾಯ್ನಾಡಿಗೆ’ ಎಂಬ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂಬ ಘೋಷಣೆ ಮಾತ್ರ ಹೊಸದು. ಆದರೆ, ಯೋಜನೆಯ ಸ್ವರೂಪದ ಕುರಿತು ಅಲ್ಲಿಯೂ ಸ್ಪಷ್ಟತೆ ಇಲ್ಲ.

ಇನ್ನು ರಾಜ್ಯಪಾಲರು ಭಾಷಣ ಓದಿದ್ದು ಹಿಂದಿಯಲ್ಲಿ. ಶಾಸಕರಿಂದ ಮಾತ್ರವಲ್ಲದೆ ಸಾರ್ವಜನಿಕ ವಲಯದಿಂದಲೂ ಈ ಕುರಿತು ವಿರೋಧ ಬಂದಿದ್ದರ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ವಿಧಿ 175 (1)ರ ಪ್ರಕಾರ, ಪ್ರತೀ ವರ್ಷದ ಮೊದಲ ಅಧಿವೇಶನದ ಆರಂಭದಲ್ಲಿ ರಾಜ್ಯ ಪಾಲರು ಭಾಷಣ ಮಾಡುವುದು ತಪ್ಪದೇ ನಡೆಯಬೇಕಾದ ವಿಧಿ.

ಆದರೆ, ಸರ್ಕಾರವೇ ಆ ಭಾಷಣವನ್ನು ಸಿದ್ಧಪಡಿಸಿಕೊಡುವುದರಿಂದ ಕಾಲಾಂತರದಲ್ಲಿ ಅದು ಮಹತ್ವ ಕಳೆದುಕೊಳ್ಳುತ್ತಾ ಬಂದಿದೆ. ರಾಜ್ಯದ ಸದ್ಯದ ಬಿಕ್ಕಟ್ಟುಗಳಿಗೆ ಏನು ಕಾರಣ ಎಂಬುದನ್ನು ವಿಶ್ಲೇಷಿಸುವ ಜತೆಗೆ ಸ್ಪಷ್ಟವಾದ ಮುನ್ನೋಟದ ಬೆಳಕನ್ನೂ ಹೊಂದಿದರೆ ಅಂತಹ ಭಾಷಣ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತದೆ. ಔಪಚಾರಿಕ ಪ್ರಕ್ರಿಯೆ ಯಾಗಿ ಮಾತ್ರ ಉಳಿದಿರುವ ಈ ಭಾಷಣವು ತನ್ನ ಮಹತ್ವವನ್ನು ಮತ್ತೆ ಪಡೆಯಬೇಕಾದರೆ ಅದನ್ನು ಸಿದ್ಧಪಡಿಸುವಾಗ ವಾಸ್ತವಿಕ ಮಾಹಿತಿಗೆ, ಭವಿಷ್ಯದ ನಡೆಯ ಸ್ಪಷ್ಟತೆಗೆ ಹೆಚ್ಚಿನ ಒತ್ತು ನೀಡುವುದು
ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT