ಶನಿವಾರ, ಸೆಪ್ಟೆಂಬರ್ 25, 2021
26 °C

ಸಂಪಾದಕೀಯ: ಸಾರ್ವಜನಿಕ ಗಣೇಶೋತ್ಸವ ಆಚರಣೆಯಲ್ಲಿ ಇರಲಿ ಸ್ವಯಂಪ್ರೇರಿತ ಎಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ಆತಂಕದ ಸಂದರ್ಭದಲ್ಲೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಕಳೆದ ವರ್ಷ ಕೂಡ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತುಬದ್ಧ ಅವಕಾಶ ಕಲ್ಪಿಸಿತ್ತು. ಪ್ರಸ್ತುತ, ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದರಿಂದ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಕೆಲವು ಹಿಂದೂ ಸಂಘಟನೆಗಳು ಮತ್ತು ಬಿಜೆಪಿಯ ಜನಪ್ರತಿನಿಧಿಗಳು ಕೆಲವರು ಒತ್ತಡ ಹೇರಿದ್ದರಿಂದಾಗಿ, ಸಾರ್ವಜನಿಕ ಉತ್ಸವಕ್ಕೆ ಸರ್ಕಾರ ಅವಕಾಶ ನೀಡಿರುವುದು ನಿರೀಕ್ಷಿತವೇ ಆಗಿದೆ. ಈಗ ಸರ್ಕಾರ ನೀಡಿರುವ ಅವಕಾಶವನ್ನು ಬಳಸಿಕೊಂಡು ಗಣೇಶೋತ್ಸವವನ್ನು ಹೊಣೆಗಾರಿಕೆಯೊಂದಿಗೆ ಆಚರಿಸುವ ಸವಾಲು ಸಾರ್ವಜನಿಕರ ಮುಂದಿದೆ.

ಸರ್ಕಾರ ರೂಪಿಸಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯು ಉತ್ಸವದ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಲನೆಯಾಗುವಂತೆ ಎಚ್ಚರ ವಹಿಸಬೇಕಾಗಿದೆ. ಐದು ದಿನಗಳೊಳಗೆ ಗಣೇಶನ ಮೂರ್ತಿ ವಿಸರ್ಜಿಸಲು ಹಾಗೂ ‌ಉತ್ಸವದ ಸಂದರ್ಭದಲ್ಲಿ ಯಾವುದೇ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳದಿರಲು, ಮೆರವಣಿಗೆ ನಡೆಸದಿರಲು ಸರ್ಕಾರ ತಿಳಿಸಿದೆ. ಎಲ್ಲೆಂದರಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ, 20ಕ್ಕೂ ಹೆಚ್ಚು ಜನ ಸೇರದಂತೆ ಸೂಚಿಸಲಾಗಿದೆ. ಮನೆಗಳಲ್ಲಿ ಗರಿಷ್ಠ 2 ಅಡಿ ಉದ್ದದ ಮೂರ್ತಿ ಹಾಗೂ ಸಾರ್ವಜನಿಕವಾಗಿ ಗರಿಷ್ಠ 4 ಅಡಿಗಳವರೆಗಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ಗೊತ್ತುಪಡಿಸಿರುವ ನೀತಿಸಂಹಿತೆಯು ಕೊರೊನಾ ನಿಯಂತ್ರಣ ಕ್ರಮಗಳೊಂದಿಗೆ ಹಬ್ಬದ ಆಚರಣೆಗೂ ಅವಕಾಶ ಕಲ್ಪಿಸುವ ಸಮತೋಲನದ ಪ್ರಯತ್ನವಾಗಿದೆ. ಸರ್ಕಾರ ಗೊತ್ತುಪಡಿಸಿದ ನೀತಿಸಂಹಿತೆಯನ್ನು ಪಾಲಿಸುವುದು ನಾಗರಿಕರ ಕರ್ತವ್ಯ. ಆದರೆ, ಜವಾಬ್ದಾರಿಯುತ ಪ್ರಜೆ ತನ್ನ ಹೊಣೆಗಾರಿಕೆ ನಿರ್ವಹಿಸಲು ಸರ್ಕಾರದ ಆದೇಶಗಳಿಗೆ ಕಾದು ಕೂರಬಾರದು; ಸಾರ್ವಜನಿಕ ಹಿತಕ್ಕೆ ಅಗತ್ಯವಾದ ನಡವಳಿಕೆಯನ್ನು ಸ್ವಯಂಪ್ರೇರಣೆಯಿಂದ ರೂಪಿಸಿಕೊಳ್ಳುವ ನಾಗರಿಕಪ್ರಜ್ಞೆಯನ್ನು ಕೊರೊನಾ ಸಂದರ್ಭದಲ್ಲಿ ಗಣೇಶೋತ್ಸವ ಆಚರಿಸುವವರು ಪ್ರದರ್ಶಿಸಬೇಕಾಗಿದೆ.

ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಜನ ಕಿಕ್ಕಿರಿದು ಸೇರುವುದು ಹಾಗೂ ಖರೀದಿಯ ಭರಾಟೆಯಲ್ಲಿ ಕೊರೊನಾ ನಿಯಂತ್ರಣ ಮಾರ್ಗದರ್ಶಿ ಸೂತ್ರಗಳನ್ನು ನಿರ್ಲಕ್ಷಿಸುವುದು ಸಾಮಾನ್ಯ ಎನ್ನುವಂತಾಗಿದೆ. ಇಂತಹ ಬೇಜವಾಬ್ದಾರಿ ನಡೆಯು ಅಪಾಯಕ್ಕೆ ಆಸ್ಪದ ಮಾಡಿಕೊಡುವಂತಹದ್ದು. ಬೂದಿ ಮುಚ್ಚಿದ ಕೆಂಡದಂತೆ ಕೊರೊನಾ ಮೂರನೇ ಅಲೆಯ ಆತಂಕ ಕಾಡುತ್ತಿರುವಾಗ, ಯಾವುದೇ ಕಾರಣದಿಂದ ಮೈಮರೆಯುವುದು ಸರಿಯಲ್ಲ. ಕೊರೊನಾದ ಮೊದಲ ಎರಡು ಅಲೆಗಳು ಉಂಟುಮಾಡಿದ ಸಾವುನೋವಿನ ಅನುಭವ ಇನ್ನೂ ಹಸಿಯಾಗಿರುವಾಗ, ಇರುಳಿನಲ್ಲಿ ಕಂಡ ಬಾವಿಗೆ ಹಗಲು ಬೀಳುವ ಕುರುಡುತನ ಪ್ರದರ್ಶಿಸಬಾರದು. ನೆರೆಯ ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆ ಪರಿಸ್ಥಿತಿ ಕರ್ನಾಟಕದಲ್ಲೂ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಸಮಯವಿದು. ಈ ಜವಾಬ್ದಾರಿಯನ್ನು ಮರೆತು, ಗಣೇಶೋತ್ಸವ ಆಚರಣೆಯನ್ನು ರಾಜಕೀಯಗೊಳಿಸುವ ಪ್ರಯತ್ನಗಳೂ ನಡೆದಿವೆ. ಭಕ್ತಿ ಮತ್ತು ಸಾರ್ವಜನಿಕ ಹಿತಕ್ಕಿಂತಲೂ ರಾಜಕೀಯ ಹಿತಾಸಕ್ತಿಯನ್ನೇ ಮುಖ್ಯವಾಗಿಸಿಕೊಂಡು ಗಣೇಶೋತ್ಸವದ ಬಗ್ಗೆ ಮಾತನಾಡುವ ರಾಜಕಾರಣಿಗಳ ನಡವಳಿಕೆ ಸಮಾಜದ ಆರೋಗ್ಯಕ್ಕೆ ಪೂರಕವಾದುದಲ್ಲ. ಯಾವುದೇ ಒಂದು ಧರ್ಮದ ವಕ್ತಾರರಂತೆ ಮಾತನಾಡುವುದು ಪ್ರಜಾಪ್ರತಿನಿಧಿಗಳ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ; ಅಂಥ ನಡವಳಿಕೆ ಪ್ರಜಾಸತ್ತಾತ್ಮಕವೂ ಅಲ್ಲ. ರಾಜಕೀಯ ಕಾರ್ಯಕ್ರಮಗಳು ಹಾಗೂ ಜನಾಶೀರ್ವಾದ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಕೋವಿಡ್‌ ನಿಯಮಾವಳಿ ಸ್ಪಷ್ಟವಾಗಿ ಉಲ್ಲಂಘನೆಯಾಗಿತ್ತು. ಅದೇ ರಾಜಕಾರಣಿಗಳು ಈಗ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಗಣೇಶೋತ್ಸವ ಬರೀ ಧಾರ್ಮಿಕ ಆಚರಣೆಯಾಗಿರದೆ, ಸಮಕಾಲೀನ ತವಕತಲ್ಲಣಗಳಿಗೆ ಸ್ಪಂದಿಸುವ ಅನುಭವ ಮಂಟಪದ ರೀತಿಯಲ್ಲಿ ಗುರುತಿಸಿಕೊಂಡಿದೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಜನಜಾಗೃತಿ ಹಾಗೂ ಸಂಘಟನೆಯ
ಉದ್ದೇಶಗಳಿಗಾಗಿ ಗಣೇಶೋತ್ಸವ ವೇದಿಕೆಗಳು ಬಳಕೆಯಾಗಿದ್ದವು. ನಂತರದ ವರ್ಷಗಳಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ಪ್ರಕಾರಗಳ ಕಲಾವಿದರ ಸೃಜನಶೀಲ ಅಭಿವ್ಯಕ್ತಿಗೆ ಗಣೇಶೋತ್ಸವ ವೇದಿಕೆಯಾಗಿದೆ. ಗಣೇಶೋತ್ಸವದಂತಹ ಆಚರಣೆಗಳಿಗೆ ಇರುವ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಸಾಧ್ಯತೆಗಳು ಬಿಕ್ಕಟ್ಟುಗಳ ಶಮನಕ್ಕೆ ಬಳಕೆಯಾಗಬೇಕು. 

ಸಾಮಾನ್ಯವಾಗಿ ಎಲ್ಲ ಹಬ್ಬಗಳ ಹಿಂದೆಯೂ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶಗಳಿವೆ. ಹಬ್ಬಗಳ ಬಹುತೇಕ ವಿಧಿವಿಧಾನಗಳು ಮನೋವಿಕಾಸ ಹಾಗೂ ಮನರಂಜನೆಗೆ ಪೂರಕವಾಗಿದ್ದರೆ, ವಿಶೇಷ ಖಾದ್ಯಗಳು ದೈಹಿಕ ಆರೋಗ್ಯಕ್ಕೆ ಪುಷ್ಟಿವರ್ಧಕಗಳಾಗಿವೆ. ಈ ಆರೋಗ್ಯಲಾಭದ ನೆಲೆಗಟ್ಟು ಗಣೇಶ ಚತುರ್ಥಿಗೂ ಇದೆ. ಗಣಪತಿ ತಿಂಡಿಪ್ರಿಯನಷ್ಟೇ ಅಲ್ಲ, ವಿವೇಕ ಮತ್ತು ಸಾವಧಾನದ ಸಂಕೇತವೂ ಹೌದು. ಸದ್ಯದ ಸಂದರ್ಭದಲ್ಲಿ ನಮಗೆ ಮಾದರಿ ಆಗಬೇಕಾದುದು ವಿಶ್ವಸಂಚಾರದ ಷಣ್ಮುಖಪ್ರಜ್ಞೆಯಲ್ಲ; ಮನೆಯಲ್ಲಿರುವ ಅಪ್ಪ–ಅಮ್ಮನಿಗೆ ಪ್ರದಕ್ಷಿಣೆ ಹಾಕಿ ಲೋಕಸಂಚಾರ ಪೂರೈಸಿದ ಗಣೇಶಪ್ರಜ್ಞೆ. ಕೊರೊನಾ ಸೋಂಕಿನ ಆತಂಕವನ್ನು ಗೆಲ್ಲಲು ನಮಗೆ ಇದು ಪ್ರೇರಣೆಯಾಗಿ ಪರಿಣಮಿಸಬೇಕು. ಗಣೇಶೋತ್ಸವ ಆಚರಣೆಯ ಸಂಭ್ರಮವನ್ನು ಬಯಲಿನಿಂದ ಅಂತರಂಗಕ್ಕೆ ತಂದುಕೊಳ್ಳಲು ಇದು ಸಕಾಲ. ಕೊರೊನಾ ಸಂದರ್ಭವು ಸರಳತೆಯಲ್ಲಿ ಬದುಕಿನ ಚೆಲುವನ್ನು ನೋಡಲು ಒತ್ತಾಯಿಸುತ್ತಿದೆ. ಈ ಸರಳತೆಯು ಹಬ್ಬದ ಆಚರಣೆಗೂ ಅನ್ವಯವಾಗಬೇಕು. ಗಣೇಶನ ಆರಾಧನೆಯು ಕೋವಿಡ್‌ ನಿಯಂತ್ರಣದ ಪ್ರಯತ್ನಗಳಿಗೆ ಶಕ್ತಿಮದ್ದಾಗಿ ಪರಿಣಮಿಸಬೇಕೇ ವಿನಾ ವೈರಸ್‌ ಹರಡುವುದಕ್ಕೆ ಪೂರಕ ಪರಿಸ್ಥಿತಿ ಒದಗಿಸಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು