ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಂತ್ರ: ಸಂಶಯ ಇನ್ನಾದರೂ ಕೊನೆಗೊಳ್ಳುವುದೇ?

Last Updated 10 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಯಶಸ್ಸಿನ ಮೂಲವಿರುವುದು ಚುನಾವಣಾ ಪ್ರಕ್ರಿಯೆಯಲ್ಲಿ. ಇದನ್ನು ನಿರ್ವಹಿಸುವ ಸಾಂಸ್ಥಿಕ ವ್ಯವಸ್ಥೆಯನ್ನು ಸರ್ಕಾರಿ ಹಸ್ತಕ್ಷೇಪಗಳಿಂದ ಹೊರಗಿರುವಂತೆ ರೂಪಿಸಿರುವುದೇ ಆ ಕಾರಣಕ್ಕಾಗಿ. ಭಾರತದ ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಇಡೀ ವಿಶ್ವವೇ ಅಚ್ಚರಿಯಿಂದ ನೋಡುವಂತೆ ನಿರ್ವಹಿಸುತ್ತಾ ಬಂದಿತ್ತು. ಮತಪತ್ರಗಳ ಕಾಲದಿಂದ ಮತಯಂತ್ರಗಳ ತನಕದ ಮಾರ್ಪಾಡಿನಲ್ಲಿಯೂ ಆಯೋಗದ ವಿಶ್ವಾಸಾರ್ಹತೆಗೆ ಯಾವ ಧಕ್ಕೆಯೂ ಬಂದಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆ ತನ್ನ ಮೂಲಗುಣವಾದ ‘ಸ್ವತಂತ್ರ ವಿವೇಚನೆ’ಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರುವಂತೆ ಕಾಣಿಸುತ್ತದೆ. ಮತಯಂತ್ರಗಳನ್ನು ಪರಿಚಯಿಸಿದಾಗಲೇ ಅದರ ಕುರಿತಂತೆ ಬಿಜೆಪಿಯೂ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಸಂಶಯ ವ್ಯಕ್ತಪಡಿಸಿದ್ದವು. ಆದರೆ ಆಗ ಆಯೋಗ ಈ ವಿಷಯವನ್ನು ಸಾಕಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. 2014ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಬಿಜೆಪಿಯ ಹೊರತಾದ ಅನೇಕ ರಾಜಕೀಯ ಪಕ್ಷಗಳು ಈ ಸಂಶಯವನ್ನು ಹೆಚ್ಚು ಬಲವಾಗಿ ಪ್ರತಿಪಾದಿಸತೊಡಗಿದವು. ಆಯೋಗ ಈ ಸಂಶಯಗಳನ್ನು ನಿವಾರಿಸುವುದಕ್ಕೆ ಕೈಗೊಂಡ ಏಕೈಕ ಕ್ರಮವೆಂದರೆ, ಮತಯಂತ್ರಗಳನ್ನು ಏಕಪಕ್ಷೀಯವಾಗಿ ಸಮರ್ಥಿಸಿಕೊಂಡದ್ದು. ನ್ಯಾಯಾಲಯದ ಮಧ್ಯಪ್ರವೇಶದ ನಂತರ, ಮತದಾರರು ತಾವು ಚಲಾಯಿಸಿದ ಮತವನ್ನು ಖಾತರಿಪಡಿಸಿಕೊಳ್ಳುವ ವಿವಿಪ್ಯಾಟ್ ವ್ಯವಸ್ಥೆಯನ್ನು ಆಯೋಗ ಕಾರ್ಯರೂಪಕ್ಕೆ ತಂದಿತಾದರೂ ಅದನ್ನು ಮತಯಂತ್ರದಲ್ಲಿ ದಾಖಲಾಗುವ ಸಂಖ್ಯೆಯೊಂದಿಗೆ ತಾಳೆ ಮಾಡುವ ಕ್ರಮವನ್ನು ವಿಸ್ತರಿಸುವುದಕ್ಕೆ ಸಿದ್ಧವಾಗಲಿಲ್ಲ. ಫಲಿತಾಂಶ ಪ್ರಕಟಣೆ ತಡವಾಗುತ್ತದೆ, ಇದಕ್ಕೆ ದೊಡ್ಡ ಸಂಖ್ಯೆಯ ಸಿಬ್ಬಂದಿ ಬೇಕು ಇತ್ಯಾದಿ ನೆಪಗಳನ್ನು ಒಡ್ಡುತ್ತಾ ಬಂದಿತು. ಈಗ ಮತ್ತೆ ನ್ಯಾಯಾಲಯ ಮಧ್ಯಪ್ರವೇಶಿಸಿದ ಪರಿಣಾಮವಾಗಿ, ವಿವಿಪ್ಯಾಟ್‌ನಲ್ಲಿ ದಾಖಲಾಗಿರುವ ಮತಗಳನ್ನು ಯಂತ್ರದಲ್ಲಿ ದಾಖಲಾಗಿರುವ ಸಂಖ್ಯೆಯೊಂದಿಗೆ ತಾಳೆ ಮಾಡುವ ಕ್ರಮವನ್ನು ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಯಂತ್ರಗಳಿಗೆ ವಿಸ್ತರಿಸಲು ಆಯೋಗ ಒಪ್ಪಿಕೊಂಡಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಕುರಿತ ಆಯೋಗದ ನಿಲುವು ಹೆಚ್ಚು ಟೀಕೆಗೆ ಗುರಿಯಾಗುವುದಕ್ಕೆ ಮತ್ತೊಂದು ಕಾರಣವಿದೆ. ಅದೆಂದರೆ, ಚುನಾವಣಾ ಆಯೋಗ ಇತ್ತೀಚಿನ ವರ್ಷಗಳಲ್ಲಿ ಆಡಳಿತಾರೂಢರ ಒತ್ತಡಗಳಿಗೆ ಮಣಿಯುತ್ತಿರುವುದು ಗೋಚರಿಸತೊಡಗಿರುವುದು.

2014ರ ಲೋಕಸಭಾ ಚುನಾವಣೆಯ ನಂತರ ಚುನಾವಣಾ ಆಯೋಗ ಎಡವುವುದು ಮತ್ತು ಜಾರುವುದು ಹೆಚ್ಚಾಗಿರುವುದು ಕೇವಲ ಕಾಕತಾಳೀಯವಲ್ಲ ಎನಿಸುತ್ತದೆ. ಮತಯಾಚನೆ ವೇಳೆ ಸೇನೆಯ ಸಾಧನೆಗಳನ್ನು ಬಳಸಬಾರದು ಎಂದು ಆಯೋಗವೇ ಹೇಳಿತ್ತು. ಆದರೆ ಸ್ವತಃ ಪ್ರಧಾನಿಯೇ ಹಲವು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಸೇನೆಯ ಸಾಧನೆಯನ್ನು ಬಳಸಿಕೊಂಡು ತಮ್ಮ ಪಕ್ಷಕ್ಕೆ ಮತ ಯಾಚಿಸಿದರೂ ಚುನಾವಣಾ ಆಯೋಗವು ಮೌನವಾಗಿಯೇ ಇದೆ. ಅಷ್ಟೇಕೆ, ಕೃತಕ ಉಪಗ್ರಹಗಳನ್ನು ನಾಶಪಡಿಸುವ ತಂತ್ರಜ್ಞಾನದ ಪರೀಕ್ಷೆಯ ಯಶಸ್ಸನ್ನು ಪ್ರಧಾನಿ ಪ್ರಕಟಿಸುವ ಹೊತ್ತಿಗೆ ನೀತಿ ಸಂಹಿತೆ ಜಾರಿಯಲ್ಲಿತ್ತು. ಚುನಾವಣಾ ಆಯೋಗದ ‘ತಾಂತ್ರಿಕ ವರದಿ’ಯ ಪ್ರಕಾರ ಅದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ. ‘ನಮೋ ಟಿವಿ’ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಹಿಂದೆಮುಂದೆ ನೋಡಿದ್ದು ಶಂಕೆಗೆ ಕಾರಣವಾಗಿತ್ತು. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವವೊಂದರ ಚುನಾವಣೆಯನ್ನು ನಡೆಸುವ ಹೊಣೆಯನ್ನು ಹೊತ್ತಿರುವ ಸಂಸ್ಥೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗುವುದು ಪ್ರಜಾಪ್ರಭುತ್ವಕ್ಕೇ ಅಪಾಯವನ್ನು ತರುವ ಸಂಗತಿ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡಬೇಕು ಎಂದು ಅರವತ್ತಕ್ಕೂ ಹೆಚ್ಚು ಮಂದಿ ನಿವೃತ್ತ ಹಿರಿಯ ಅಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿರುವುದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು. ಮತಯಂತ್ರದ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ನಿಜವೇ ಆಗಿರಬೇಕೆಂದಿಲ್ಲ. ಯಾದೃಚ್ಛಿಕವಾಗಿ ಆಯ್ದ ನಿರ್ದಿಷ್ಟ ಸಂಖ್ಯೆಯ ಮತಯಂತ್ರಗಳಲ್ಲಿ ದಾಖಲಾದ ಸಂಖ್ಯೆ ಮತ್ತು ವಿವಿಪ್ಯಾಟ್ ದಾಖಲೆಗಳನ್ನು ತಾಳೆ ಮಾಡಿದರೆ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಆದರೆ ಸಮಸ್ಯೆ ಇರುವುದು ಸಾರ್ವಜನಿಕರು ಕೇಳುವ ಪ್ರಶ್ನೆಗಳನ್ನು ಆಯೋಗವು ನಿರ್ವಹಿಸುವ ಮಾದರಿಯಲ್ಲಿ. ಮತದಾರರ ಪಟ್ಟಿಯನ್ನು ನಿರ್ವಹಿಸುವ ವಿಧಾನದಲ್ಲಿಯೂ ಬಹಳಷ್ಟು ಸಮಸ್ಯೆಗಳಿವೆ. ಈ ಬಗೆಯ ಸಣ್ಣಪುಟ್ಟ ಸಮಸ್ಯೆಗಳನ್ನು ಆಯೋಗಕ್ಕೆ ಅರ್ಥ ಮಾಡಿಸಬೇಕಾದರೂ ನ್ಯಾಯಾಲಯವನ್ನು ಸಮೀಪಿಸಬೇಕಾದ ಸ್ಥಿತಿ ಇರುವುದೇ ಈ ಸಂಸ್ಥೆಯ ವಿಶ್ವಾಸಾರ್ಹತೆಯ ಕುಸಿತಕ್ಕೆ ಕಾರಣವಾಗಿದೆ ಎಂಬ ವಿಚಾರವನ್ನು ಇಲ್ಲಿ ವಿಷಾದದಿಂದಲೇ ದಾಖಲಿಸಬೇಕಾಗಿದೆ. ಭಾರತದ ಚುನಾವಣಾ ಆಯೋಗಕ್ಕೆ ವಿಶ್ವಾಸಾರ್ಹತೆಯ ಸುದೀರ್ಘ ಇತಿಹಾಸವಿದೆ. ಇದು ವರ್ತಮಾನದಲ್ಲಿಯೂ ಭವಿಷ್ಯದಲ್ಲಿಯೂ ಮುಂದುವರಿಯಬೇಕಾಗಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT