ಭಾನುವಾರ, ಸೆಪ್ಟೆಂಬರ್ 15, 2019
27 °C

ಅಗೌರವದ ಡಾಕ್ಟರೇಟ್‌ಗಳ ದಂಧೆಗೆ ಕಡಿವಾಣ ಅಗತ್ಯ

Published:
Updated:

ಭೀಮಾತೀರದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಮಹಾದೇವ ಸಾಹುಕಾರ ಬೈರಗೊಂಡ ಎಂಬುವರಿಗೆ ಗೌರವ ಡಾಕ್ಟರೇಟ್‌ ಪದವಿ ದೊರೆತಿದೆ. ಏಷ್ಯನ್ ಇಂಟರ್‌ ನ್ಯಾಷನಲ್‌ ಇಂಡೊನೇಷ್ಯಾ ಹೆಸರಿನ ವಿಶ್ವವಿದ್ಯಾಲಯವು ಈ ಪದವಿಯನ್ನು ನೀಡಿದೆ. ಗೌರವ ಡಾಕ್ಟರೇಟ್‌ನ ‘ಗೌರವ’ ಯಾವ ಮಟ್ಟಕ್ಕಿಳಿದಿದೆ ಎನ್ನುವುದಕ್ಕೆ ಹಾಗೂ ನಕಲಿ ವಿಶ್ವವಿದ್ಯಾಲಯಗಳ ಹಾವಳಿಗೆ ಈ ಪ್ರಸಂಗ ಉದಾಹರಣೆಯಂತಿದೆ. ಪ್ರಸಕ್ತ ಘಟನೆಯೊಂದಿಗೆ, ಒಂದು ವರ್ಷದ ಅವಧಿಯಲ್ಲಿ ಮಂಡ್ಯ ಜಿಲ್ಲೆಯ 350ಕ್ಕೂ ಹೆಚ್ಚು ಮಂದಿ ಗೌರವ ಡಾಕ್ಟರೇಟ್‌ ಪದವಿ ಪಡೆದಿರುವುದನ್ನು ನೆನ‍ಪಿಸಿಕೊಳ್ಳಬಹುದು.

ವ್ಯಕ್ತಿತ್ವಕ್ಕೆ ಹಾಗೂ ಸಾಧನೆಗೆ ಸಲ್ಲಬೇಕಾದ ಗೌರವ ಡಾಕ್ಟರೇಟ್‌ಗಳು ಈಗ ಮಾರುಕಟ್ಟೆಯ ಸರಕುಗಳಾಗಿವೆ. ವಿಶ್ವವಿದ್ಯಾಲಯಗಳ ‘ಟೋಪಿ’ ಹಾಕಿಸಿಕೊಳ್ಳಲು ₹ 30 ಸಾವಿರದಿಂದ ₹ 1 ಲಕ್ಷ ರೂಪಾಯಿವರೆಗೆ ಬೆಲೆ ಕಟ್ಟಲಾಗುತ್ತಿದೆ. ತಮಿಳುನಾಡು ಮೂಲದ ಖಾಸಗಿ ವಿಶ್ವವಿದ್ಯಾಲಯವೊಂದರ ಹೆಸರಿನಲ್ಲಿ ದಂಧೆಗೆ ಕರ್ನಾಟಕವನ್ನು ವೇದಿಕೆಯಾಗಿಸಿಕೊಂಡು, ತಾಲ್ಲೂಕು ಮಟ್ಟದಲ್ಲಿ ಏಜೆಂಟರನ್ನು ನೇಮಿಸಿಕೊಳ್ಳಲಾಗಿತ್ತು. ಈ ಏಜೆಂಟರ ಮೂಲಕ ರಾಜಕಾರಣಿಗಳು, ಕಲಾವಿದರು, ಪೆಟ್ರೋಲ್‌ ಬಂಕ್‌ ಮಾಲೀಕರು, ಪತ್ರಕರ್ತರು, ಶಿಕ್ಷಕರು ಸೇರಿದಂತೆ ಸಮಾಜದ ಪ್ರಜ್ಞಾವಂತ ವಲಯಗಳಿಗೆ ಸೇರಿದ ನೂರಾರು ಮಂದಿ ದುಡ್ಡು ಕೊಟ್ಟು ಡಾಕ್ಟರೇಟ್‌ಗಳನ್ನು ಖರೀದಿಸಿದ್ದಾರೆ. ಅದ್ಧೂರಿ ಪದವಿ ಪ್ರದಾನ ಕಾರ್ಯಕ್ರಮಗಳು ಬೆಂಗಳೂರು, ಪುದುಚೇರಿ, ಪಣಜಿಗಳಲ್ಲಿ ನಡೆದಿವೆ. ಈಗ ಇವೆಲ್ಲಕ್ಕೆ ಕಿರೀಟವಿಟ್ಟಂತೆ ಕೊಲೆ ಆರೋಪಿಯ ‘ಸಮಾಜ ಸೇವೆ’ಗೆ ಗೌರವ ಡಾಕ್ಟರೇಟ್‌ ದೊರೆತಿದೆ. ಆರೋಪಿಯ ಸ್ವಗ್ರಾಮವಾದ ವಿಜಯಪುರ ಜಿಲ್ಲೆಯ ಕೆರೂರು ಗ್ರಾಮಕ್ಕೇ ಡಾಕ್ಟರೇಟ್‌ ಪದವಿ ಹುಡುಕಿಕೊಂಡು ಬಂದಿದೆ. ಜೋಡಿ ಕೊಲೆ ಪ್ರಕರಣಗಳ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಆರೋಪಿಯನ್ನು ಸಮಾಜ ಸೇವಕನನ್ನಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ಇದು, ಅಪಾಯಕಾರಿ ನಡೆ. ಗೌರವ ಡಾಕ್ಟರೇಟ್‌ಗಳು ಹೀಗೆ ಬಿಕರಿಯಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯಗಳ ಗೌರವ ಪದವಿಗಳ ಗೌರವವನ್ನು ಕುಂದಿಸುವಂತಹ ಕೆಲಸ.

ಗೌರವ ಡಾಕ್ಟರೇಟ್‌ ದಂಧೆ ಈಗ ಶುರುವಾಗಿರುವುದೇನೂ ಅಲ್ಲ. ಯುರೋಪಿನ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ ಪಡೆದವರು ಹಾಗೂ ವಿದೇಶಗಳಲ್ಲಿ ಪೌರಸನ್ಮಾನ ಮಾಡಿಸಿಕೊಂಡ ಸಾಕಷ್ಟು ಮಂದಿಯನ್ನು ಸಿನಿಮಾರಂಗದಲ್ಲಿ, ಉದ್ಯಮ ವಲಯದಲ್ಲಿ ಕಾಣಬಹುದು. ಬಿರುದುಬಾವಲಿಗಳ ಮೋಹ ಸಿನಿಮಾಮಂದಿಗೆ ಸಹಜ. ಉದ್ಯಮಿಗಳಿಗೆ ತಮ್ಮ ಹೆಸರಿನೊಂದಿಗಿನ ಪದವಿಯು ವರ್ಚಸ್ಸು– ವ್ಯಾಪಾರದ ಕಿಮ್ಮತ್ತನ್ನು ಹೆಚ್ಚಿಸುವ ತಂತ್ರವಾಗಿರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರು ಕೂಡ ವಿಶ್ವವಿದ್ಯಾಲಯಗಳ ಈ ಗೌರವದ ಪರಿಧಿಗೆ ಸೇರಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸದಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿಲ್ಲ ಎನ್ನುವ ಆರೋಪ ಇದ್ದೇ ಇದೆ. ಇದಕ್ಕೆ ಇನ್ನೊಂದು ತುದಿಯಲ್ಲಿ, ಮೂಲೆಮೂಲೆಗಳಲ್ಲಿ ‘ಸಾಧಕ’ರನ್ನು ಸೃಷ್ಟಿಸುವ ಕೆಲಸವನ್ನು ನಕಲಿ ವಿಶ್ವವಿದ್ಯಾಲಯಗಳು ಮಾಡುತ್ತಿವೆ. ಹೀಗೆ ರೂಪುಗೊಳ್ಳುವ ಸಾಧಕರ ಕಟೌಟ್‌– ಹೋರ್ಡಿಂಗ್‌ಗಳು ನೈಜ ಪ್ರತಿಭೆಗಳನ್ನು ಮಂಕಾಗಿಸುವಷ್ಟು ಪ್ರಖರವಾಗಿರುತ್ತವೆ. ದುಡ್ಡು ಕೊಟ್ಟು ಡಾಕ್ಟರೇಟ್‌ ಪಡೆಯುವ ಕೆಲವರಿಗೆ, ತಾವು ವಂಚನೆಗೆ ಒಳಗಾಗಿರುವುದು ಅರಿವಾದರೂ ಅದನ್ನು ಹೇಳಿಕೊಳ್ಳಲು ಹೋಗುವುದಿಲ್ಲ.

ಅಸ್ತಿತ್ವದಲ್ಲಿಯೇ ಇಲ್ಲದ, ಸರ್ಕಾರಿ ಮನ್ನಣೆ ಪಡೆಯದ ನಕಲಿ ಸಂಸ್ಥೆಗಳ ದಂಧೆಯ ಬಗ್ಗೆ ದೂರುಗಳಿಲ್ಲದ ಕಾರಣದಿಂದಾಗಿ ಪೊಲೀಸರು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ನಕಲಿ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಗೌರವ ಡಾಕ್ಟರೇಟ್‌ಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಮಾಡಬೇಕು. ಈ ದಂಧೆಯ ಬಗ್ಗೆ ಶೈಕ್ಷಣಿಕ ವಲಯ ಕೂಡ ದನಿ ಎತ್ತಬೇಕು. ಇಲ್ಲದೇ ಹೋದಲ್ಲಿ, ಎಲ್ಲೆಡೆ ನಕಲಿಗಳೇ ತುಂಬಿಕೊಂಡು ಅಸಲಿ ಸಾಧಕರನ್ನು ಗುರುತಿಸುವ ಬಗ್ಗೆಯೇ ಸಂಶೋಧನೆಗಳು ನಡೆಯಬೇಕಾದ ಸಂದರ್ಭ ಸೃಷ್ಟಿಯಾದೀತು.

Post Comments (+)