ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಈಚೆಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದು ಉತ್ತರದಾಯಿತ್ವದ ಪ್ರಜ್ಞೆಯಿಂದ ನೀಡಿರುವ ರಾಜೀನಾಮೆಯಂತೆ ಕಾಣುತ್ತಿಲ್ಲ; ಬದಲಿಗೆ ಇದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಗರಣವೊಂದರಿಂದ ಮೌನವಾಗಿ ಹೊರಬರುವ ಯತ್ನದಂತೆ ಕಾಣುತ್ತಿದೆ. ಹಲವರು ಸಲ್ಲಿಸಿದ್ದ ಪಿಎಚ್.ಡಿ ಪ್ರಮಾಣಪತ್ರಗಳು ಎಷ್ಟರಮಟ್ಟಿಗೆ ಅಸಲಿ ಎಂಬುದನ್ನು ಕಂಡುಕೊಳ್ಳಲು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ಪರಿಶೀಲನೆ ಆರಂಭಿಸಿದೆ. ಇದಾದ ನಂತರದಲ್ಲಿ ಈ ರಾಜೀನಾಮೆಗಳ ಬಗ್ಗೆ ವರದಿಯಾಗಿದೆ. ಇಲಾಖೆಯ ಪ್ರಯತ್ನದ ಪರಿಣಾಮವಾಗಿ ಸಾಂಸ್ಥಿಕ ವೈಫಲ್ಯವೊಂದು ಕಣ್ಣಿಗೆ ರಾಚುವಂತೆ ಕಂಡುಬಂದಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಅಥವಾ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ (ಕೆ–ಸೆಟ್) ಉತ್ತೀರ್ಣರಾಗಿದ್ದರೆ ಮಾತ್ರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಬಹುದು ಎಂಬ ನಿಯಮ ಇದೆ. ಪಿಎಚ್.ಡಿ ಪ್ರಮಾಣ ಪತ್ರ ಇದ್ದರೆ ಎನ್ಇಟಿ, ಕೆ–ಸೆಟ್ ಪ್ರಮಾಣಪತ್ರದ ಅಗತ್ಯ ಇರುವುದಿಲ್ಲ. ಹೀಗಾಗಿ ಹಲವರು ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಮೂಲಭೂತ ಪ್ರಶ್ನೆಯೊಂದನ್ನು ಎತ್ತುತ್ತದೆ. ಸರಿಯಾಗಿ ಪರಿಶೀಲನೆ ನಡೆಸದೆ ಈ ಪ್ರಮಾಣಪತ್ರಗಳನ್ನು ಒಪ್ಪಿಕೊಂಡಿದ್ದು ಹೇಗೆ? ನೇಮಕಾತಿ ಪ್ರಕ್ರಿಯೆ ನಿರ್ವಹಿಸುತ್ತಿರುವವರ ಪಾತ್ರ ಇಲ್ಲದೆ ಈ ಬಗೆಯ ಲೋಪಗಳು ಆಗುವುದು ಸಾಧ್ಯವಿಲ್ಲ.

ಇಂತಹ ಅಭ್ಯರ್ಥಿಗಳು ಅಕ್ರಮ ನಡೆಸಿರುವುದಷ್ಟೇ ಅಲ್ಲ; ಅವರು ತಮಗಿಂತ ಹೆಚ್ಚು ಅರ್ಹರಾಗಿದ್ದ ಇತರರಿಗೆ ಸಿಗಬಹುದಾಗಿದ್ದ ಅವಕಾಶ ಕಿತ್ತುಕೊಂಡಿದ್ದಾರೆ ಕೂಡ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಕಾರಣಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡಬಾರದು. ಸಿಐಡಿ ಪೊಲೀಸರಿಂದ ತನಿಖೆ ನಡೆಸಿ, ನಕಲಿ ಪ್ರಮಾಣಪತ್ರಗಳನ್ನು ಗಿಟ್ಟಿಸಿಕೊಂಡಿದ್ದು ಹೇಗೆ ಎಂಬುದನ್ನು ಪತ್ತೆ ಮಾಡಬೇಕು. ನಕಲಿ ಪ್ರಮಾಣಪತ್ರ ಸಿದ್ಧಪಡಿಸಿಕೊಡುವ ಜಾಲದ ಆಳ–ಅಗಲವನ್ನು ಬಯಲಿಗೆಳೆಯಬೇಕು. ಅಕ್ರಮದಲ್ಲಿ ವಿಶ್ವವಿದ್ಯಾಲಯಗಳ ಅಥವಾ ಅಲ್ಲಿನ ಕೆಲವು ವಿಭಾಗಗಳ ಅಧಿಕಾರಿಗಳ ಪಾತ್ರ ಏನಾದರೂ ಇದೆಯೇ ಎಂಬುದೂ ಗೊತ್ತಾಗಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಹಣದ ಕೊಡು–ಕೊಳ್ಳುವಿಕೆ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಮುಂದಿನ ದಿನಗಳಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಇಂತಹ ಅಕ್ರಮ ನಡೆಯುವುದನ್ನು ತಡೆಯಲು ಸಮಗ್ರವಾದ ಪ್ರಮಾಣಿತ ಕಾರ್ಯಾಚರಣೆ ವಿಧಾನವೊಂದನ್ನು (ಎಸ್ಒಪಿ) ರೂಪಿಸಲಾಗುತ್ತದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತೆ ಮಂಜುಶ್ರೀ ಎನ್. ಹೇಳಿದ್ದಾರೆ. ಆದರೆ, ಈಗ ಆಗಿರುವುದನ್ನೆಲ್ಲ ಗಮನಿಸಿದರೆ, ಲೂಟಿ ಕೆಲಸ ಮುಗಿದ ನಂತರ ಖಜಾನೆಯ ಕೀಲಿ ಭದ್ರಪಡಿಸುವ ಕೆಲಸ ಇದು ಎಂಬಂತೆ ಕಾಣುತ್ತಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಕಾರಣಕ್ಕಾಗಿ 40 ಮಂದಿ ಸಹಾಯಕ ಪ್ರಾಧ್ಯಾಪಕರನ್ನು 2017ರಲ್ಲಿ ಡಿಬಾರ್ ಮಾಡಲಾಗಿತ್ತು. ಇದು ಎಚ್ಚರಿಕೆಯ ಕರೆಗಂಟೆಯಾಗಿ ಕೆಲಸ ಮಾಡಬೇಕಿತ್ತು. ಯಾವುದೇ ಸುಧಾರಣೆಗಳ ಕೇಂದ್ರ ಸ್ಥಾನದಲ್ಲಿ ‘ಪಾರದರ್ಶಕತೆ’ ಇರಬೇಕು. ವಿಶ್ವವಿದ್ಯಾಲಯಗಳು ಪಿಎಚ್.ಡಿ ಹಾಗೂ ಎಂ.ಫಿಲ್ ಪಡೆದವರ ವಿವರವನ್ನು ತಮ್ಮ ವೆಬ್ಸೈಟ್ ಮೂಲಕ ಪ್ರಕಟಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಅಂಕಪಟ್ಟಿ, ಪದವಿ ಪ್ರಮಾಣಪತ್ರ ಸೇರಿದಂತೆ ವಿಶ್ವವಿದ್ಯಾಲಯಗಳ ಎಲ್ಲ ಪ್ರಮಾಣಪತ್ರಗಳನ್ನು ಡಿಜಿಟೈಸ್ ಮಾಡಬೇಕು. ಇಂತಹ ವ್ಯವಸ್ಥೆಯು ಅಕ್ರಮಗಳಿಗೆ ಲಗಾಮು ಹಾಕುವುದಷ್ಟೇ ಅಲ್ಲದೆ, ಪ್ರಮಾಣಪತ್ರ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಅದನ್ನು ತ್ವರಿತವಾಗಿ ಪಡೆಯುವುದಕ್ಕೂ ನೆರವಾಗುತ್ತದೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವುದು ಬಹಳ ಸಹಜವಾಗಿರುವುದು ಈ ಸಮಸ್ಯೆಯ ಮೂಲ ಕಾರಣದಂತೆ ಇದೆ. ತಾತ್ಕಾಲಿಕ ನೇಮಕದ ಸಂಸ್ಕೃತಿಯು ಅಡ್ಡದಾರಿಗಳನ್ನು ಕಂಡುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಬೋಧಕ ಹುದ್ದೆಗಳು ಖಾಲಿ ಆದಂತೆಲ್ಲ ಅವುಗಳನ್ನು ಭರ್ತಿ ಮಾಡುವ ಕೆಲಸ ಸರ್ಕಾರದ ಕಡೆಯಿಂದ ಆಗಬೇಕು. ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಉದ್ದಿಮೆಗಳ ಹಾಗೂ ವಿವಿಧ ಕ್ಷೇತ್ರಗಳ ಪರಿಣತರಿಗೆ ಮಾತ್ರ ಮೀಸಲಾಗಿ ಇಡಬೇಕು. ಅತಿಥಿ ಉಪನ್ಯಾಸಕ ಹುದ್ದೆಗಳು ಕಾಯಂ ಉಪನ್ಯಾಸಕರಿಗೆ ಪರ್ಯಾಯ ಎಂಬಂತೆ ಆಗಬಾರದು. ಈಗಿನ ವಿದ್ಯಮಾನವು ರಾಜ್ಯದ ಶಿಕ್ಷಣ ವ್ಯವಸ್ಥೆಯ ಸಮಗ್ರ ಪರಿಷ್ಕರಣೆಯ ಅಗತ್ಯವನ್ನು ಹೇಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.