ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನಿರೀಕ್ಷೆ ಮೀರಿದ ಜಿಡಿಪಿ ಬೆಳವಣಿಗೆ; ಗ್ರಾಮೀಣ ಆರ್ಥಿಕತೆಯೇ ಸವಾಲು

Published 1 ಡಿಸೆಂಬರ್ 2023, 23:32 IST
Last Updated 1 ಡಿಸೆಂಬರ್ 2023, 23:32 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 7.6ರಷ್ಟು ಆಗಿದೆ. ಇದು, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾತ್ರವಲ್ಲದೆ ಆರ್ಥಿಕ ವಿಶ್ಲೇಷಕರ ಅಂದಾಜಿಗಿಂತಲೂ ತುಂಬಾ ಹೆಚ್ಚಾಗಿದೆ.

ಪ್ರತಿಕೂಲ ಸನ್ನಿವೇಶದಲ್ಲಿ ಆಗಿರುವ ಈ ಆರೋಗ್ಯಕರ ಬೆಳವಣಿಗೆ ಸೋಜಿಗವನ್ನೂ ಉಂಟುಮಾಡಿದೆ. ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಸಾಧಿಸುತ್ತಿರುವ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಮತ್ತೆ ಉಳಿಸಿಕೊಂಡಿದೆ. ಇದೊಂದು ಸಂತಸದಾಯಕ ವಿದ್ಯಮಾನ. ದೇಶದ ಈ ಆರ್ಥಿಕ ಬೆಳವಣಿಗೆಯಲ್ಲಿ ತಯಾರಿಕೆ ಮತ್ತು ನಿರ್ಮಾಣ ವಲಯದ ಚಟುವಟಿಕೆಗಳೇ ಬೆನ್ನೆಲುಬಾಗಿವೆ. ಜಿಡಿಪಿಗೆ ತಯಾರಿಕಾ ವಲಯದ ಕೊಡುಗೆಯು ಶೇ 13.9ಕ್ಕೆ ಏರಿದೆ. ಇದು, ಹಿಂದಿನ ಒಂಬತ್ತು ತ್ರೈಮಾಸಿಕಗಳಲ್ಲಿಯೇ ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಆರ್ಥಿಕ ಬೆಳವಣಿಗೆಗೆ ನಿರ್ಮಾಣ ವಲಯದ ಕೊಡುಗೆ ಕೂಡ ಶೇ 13.3ಕ್ಕೆ ಹೆಚ್ಚಿದೆ. ಮೂಲಸೌಕರ್ಯ ವಲಯದಲ್ಲಿ ಖಾಸಗಿ ಹೂಡಿಕೆಯ ಪ್ರಮಾಣ ಏರಿಕೆಯಾಗಿದ್ದರೆ, ನಿರ್ಮಾಣ ವಲಯದಲ್ಲಿ ಸರ್ಕಾರ ಮಾಡುತ್ತಿರುವ ಬಂಡವಾಳ ವೆಚ್ಚದ ಪ್ರಮಾಣ ಕೂಡ ಹೆಚ್ಚಳವಾಗಿದೆ. ಸರ್ಕಾರ ಮಾಡಿದ ವೆಚ್ಚದ ನೆರವಿನಿಂದ ಆರ್ಥಿಕ ಬೆಳವಣಿಗೆಯ ವೇಗ ನಿರೀಕ್ಷೆ ಮೀರಿದೆ.

ಗಣಿಗಾರಿಕೆ, ವಿದ್ಯುತ್‌ ಮತ್ತು ಮೂಲ ಸೌಕರ್ಯ ವಲಯಗಳ ಬೆಳವಣಿಗೆ ದರ ಎರಡಂಕಿಯನ್ನು ತಲುಪಿದ ವಿದ್ಯಮಾನಕ್ಕೂ ಈ ತ್ರೈಮಾಸಿಕ ಸಾಕ್ಷಿಯಾಗಿದೆ. ರಿಯಲ್‌ ಎಸ್ಟೇಟ್‌, ಹಣಕಾಸು, ಆತಿಥ್ಯ ಮತ್ತು ವ್ಯಾಪಾರ ವಲಯಗಳ ಪ್ರಗತಿ ಮಾತ್ರ ವರ್ಷದಿಂದ ವರ್ಷಕ್ಕೆ ತುಸು ಮಂದವಾಗುತ್ತಿದೆ. ಆರೋಗ್ಯಕರವಾದ ಈ ಜಿಡಿಪಿ ಬೆಳವಣಿಗೆಯನ್ನು ಗಮನಿಸಿರುವ ಬ್ಯಾಂಕ್‌ಗಳು, ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ದೇಶದ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಕುರಿತ ಅಂದಾಜಿನ ಪ್ರಮಾಣವನ್ನು  ಹೆಚ್ಚಿಸಬಹುದು. ಹಲವು ತೃಪ್ತಿಕರ ಅಂಶಗಳ ನಡುವೆಯೂ ಕಳವಳಕ್ಕೆ ಕಾರಣವಾಗುವ ಸಂಗತಿಗಳನ್ನೂ ಅಂಕಿಅಂಶಗಳು ಹೊರಹಾಕಿವೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಕೃಷಿ ವಲಯದ ಬೆಳವಣಿಗೆ ದರವು ಶೇ 1.3ರಷ್ಟು ಕುಸಿತ ಕಂಡಿದೆ. ಕುಟುಂಬಗಳು ಖರೀದಿ ಮೇಲೆ ಮಾಡುವ ವೆಚ್ಚದ (ಪಿಎಫ್‌ಸಿಇ) ಪ್ರಮಾಣ ಮೊದಲ ತ್ರೈಮಾಸಿಕದಲ್ಲಿ ಶೇ 6ರಷ್ಟು ಇತ್ತು. ಈಗ ಅದು ಶೇ 3.1ಕ್ಕೆ ಕುಸಿದಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟು ಆಗಿಲ್ಲ. ಮಳೆಯ ಕೊರತೆ ಪರಿಣಾಮವು ಗ್ರಾಮೀಣ ಆರ್ಥಿಕತೆಯನ್ನು ಬಾಧಿಸಿದೆ.  

ಆರ್ಥಿಕತೆ ಬೆಳವಣಿಗೆಯಲ್ಲಿ ಹಲವು ವೈರುಧ್ಯಗಳೂ ಗೋಚರಿಸಿವೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಕುಸಿತ ಆಗಿರುವುದನ್ನು ಮತ್ತು ನಗರ ಪ್ರದೇಶದ ಕೆಲವು ವಲಯಗಳ ನೌಕರ ವರ್ಗದ ಖರ್ಚು ಮಾಡುವ ಪ್ರವೃತ್ತಿಯೂ ಕಡಿಮೆ ಆಗಿರುವುದನ್ನು ಕಾರ್ಪೊರೇಟ್‌ ವಲಯದ ತಜ್ಞರು ಗುರುತಿಸಿದ್ದಾರೆ. ಪ್ರೀಮಿಯಂ ಕಾರುಗಳ ಮಾರಾಟ ಹೆಚ್ಚಾಗಿದ್ದರೂ ಸಾಮಾನ್ಯ ಕಾರುಗಳ ಮಾರಾಟ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ 40ರಷ್ಟು ಕುಸಿತ ಕಂಡಿದೆ. ದ್ವಿಚಕ್ರ ವಾಹನಗಳ ಮಾರುಕಟ್ಟೆ ಕೂಡ ಮಂದವಾಗಿರುವುದು ಗ್ರಾಮೀಣ ಆರ್ಥಿಕತೆಯಲ್ಲಾದ ಪಲ್ಲಟದ ಕಥೆಯನ್ನು ಹೇಳುತ್ತಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಕಂಪನಿಗಳು ಹೆಚ್ಚಾಗಿ ನಗರಪ್ರದೇಶವನ್ನೇ ಅವಲಂಬಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಕುಸಿದಿರುವುದೇ ಎರಡನೆಯ ತ್ರೈಮಾಸಿಕದಲ್ಲಿ ತನ್ನ ನೀರಸ ಪ್ರದರ್ಶನಕ್ಕೆ ಕಾರಣ ಎಂದು ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿ ಈಗಾಗಲೇ ಹೇಳಿಕೊಂಡಿದೆ. ವಸತಿ ಕ್ಷೇತ್ರದಲ್ಲೂ ಐಷಾರಾಮಿ ಮನೆಗಳು ಮಾರಾಟವಾದಷ್ಟು ವೇಗದಲ್ಲಿ ಕೈಗೆಟಕುವ ಸಾಮಾನ್ಯ ಮನೆಗಳು ಮಾರಾಟವಾಗಿಲ್ಲ. ಅಲ್ಲದೆ, ಈ ವರ್ಷದ ಹಬ್ಬದ ಋತು ಅಧಿಕ ಮಾಸದ ಕಾರಣದಿಂದಾಗಿ ಮುಂದಕ್ಕೆ ಹೋಗಿ ಅಕ್ಟೋಬರ್‌ ಮಧ್ಯದಲ್ಲಿ ಬಂದಿದೆ. ಹಬ್ಬದ ಋತುವಿನಲ್ಲಿ ಒಂದುವೇಳೆ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದರೆ ಅದು ಮೂರನೇ ತ್ರೈಮಾಸಿಕದ ಬೆಳವಣಿಗೆ ದರದಲ್ಲಿ ವ್ಯಕ್ತವಾಗಲಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಾರ್ವತ್ರಿಕ ಚುನಾವಣೆ ಸಮೀಪಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಯಾಣ ಯೋಜನೆಗಳ ಮೇಲೆ ಅಧಿಕ ಮೊತ್ತವನ್ನು ವಿನಿಯೋಗಿಸಲಿವೆ. ಗ್ರಾಮೀಣ ಭಾಗದಲ್ಲಿ ಇದರಿಂದ ಬೇಡಿಕೆ ಹೆಚ್ಚಿ, ಅಲ್ಲಿನ ಆರ್ಥಿಕ ಬೆಳವಣಿಗೆ ವೇಗ ಪಡೆಯಬಹುದು ಎಂದೂ ಅಂದಾಜಿಸಲಾಗಿದೆ. ಗ್ರಾಮೀಣ ಆರ್ಥಿಕತೆಯ ಸುಧಾರಣೆಗೆ ದೀರ್ಘಾವಧಿ ಯೋಜನೆಗಳು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT