ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಲ್ಲಿ ಶುರು– ಲೆಕ್ಕಾಚಾರದ ಎದೆಬಡಿತ

ಮುಗಿದ ಮತದಾನ: ಮತ ಯಂತ್ರಗಳಲ್ಲಿ ಭದ್ರ ಭವಿಷ್ಯ
Last Updated 14 ಮೇ 2018, 9:10 IST
ಅಕ್ಷರ ಗಾತ್ರ

ಉಡುಪಿ: ಮತದಾರರ ನಿರ್ಧಾರ ಮತ ಯಂತ್ರಗಳಲ್ಲಿ ಭದ್ರವಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳ ಸೋಲು– ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದಾರೆ. ಮತದಾನದ ಪ್ರಮಾಣ ಹಾಗೂ ಜನರ ಭಾವನೆ ಆಧಾರದ ಮೇಲೆ ತಮ್ಮದೇ ಗೆಲುವು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಹೇಳುತ್ತಿವೆ. ಜೆಡಿಎಸ್ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳು ಬರಬಹುದು, ಇಬ್ಬರ ಜಗಳದಲ್ಲಿ ತಮಗೆ ಲಾಭವಾಗಬಹುದೇ ಎಂದು ಲೆಕ್ಕಾಚಾರ ಮಾಡುತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳು ಸೇರಿದಂತೆ ಒಟ್ಟು ಶೇ 76.62 ರಷ್ಟು ಮತದಾನ ಆಗಿತ್ತು. ಆದರೆ, ಈ ಬಾರಿ ಶೇ 78.57ರಷ್ಟು ಮತದಾನವಾಗಿದೆ. ಶೇ 1.95 ರಷ್ಟು ಮತದಾನ ಪ್ರಮಾಣ ಜಾಸ್ತಿಯಾಗಿದೆ. ಆದ್ದರಿಂದ ಇದು ಆಡಳಿತ ಪಕ್ಷದ ವಿರುದ್ಧವೋ ಅಥವಾ ಪರವೋ ಎಂಬುದು ಸ್ಪಷ್ಟವಾಗುತ್ತಿಲ್ಲ. ಕಳೆದ ಬಾರಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾದರೆ ಅದನ್ನು ಆಡಳಿತ ವಿರೋಧಿ ಮತ ಎಂದು ಪರಿಗಣಿಸುವ ಪರಿಪಾಠವಿದೆ. ಆದರೆ, ಉಡುಪಿ ಜಿಲ್ಲೆಯ ವಿಷಯದಲ್ಲಿ ಮತ ಪ್ರಮಾಣ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ.

ಕ್ಷೇತ್ರವಾರು ಮತ ಪ್ರಮಾಣ ವಿಶ್ಲೇಷಣೆ ಮಾಡಿದರೆ ಉಡುಪಿಯಲ್ಲಿ ಕಳೆದ ಚುನಾವಣೆಯಲ್ಲಿ ಶೇ 75.89 ರಷ್ಟು ಮತದಾನವಾಗಿತ್ತು. ಈ ಬಾರಿ 77.38ರಷ್ಟು ಮತದಾನವಾಗಿದೆ. 1.49ರಷ್ಟು ಹೆಚ್ಚುವರಿ ಮತದಾನವಾಗಿದೆ. ಕಾಪು ಕ್ಷೇತ್ರದಲ್ಲಿ ಕಳೆದ ಬಾರಿ 72.86 ಮತದಾನವಾಗಿದ್ದರೆ, ಈ ಬಾರಿ ಅದು 76.79ಕ್ಕೆ ಏರಿಕೆಯಾಗಿದೆ. ಅಂದರೆ, 3.93ರಷ್ಟು ಹೆಚ್ಚುವರಿ ಮತದಾನವಾಗಿದೆ. ಬೈಂದೂರಿನಲ್ಲಿ ಕಳೆದ ಬಾರಿ ಮತದಾನ ಪ್ರಮಾಣ ಶೇ 75.68ರಷ್ಟಿದ್ದರೆ ಈ ಬಾರಿ ಅದು 77.76ಕ್ಕೆ ಏರಿಕೆದೆ. ಅಂದರೆ 2.06 ಏರಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 75.93ರಷ್ಟು ಮತದಾನವಾಗಿತ್ತು. ಅದು ಈ ಬಾರಿ 79.05ಕ್ಕೆ ಏರಿದ್ದು, ಶೇ3.12ರಷ್ಟು ಏರಿಕೆಯಾಗಿದೆ. ಕಾರ್ಕಳದಲ್ಲಿ ಕಳೆದ ಬಾರಿ ಶೇ80.56ರಷ್ಟು ಮತದಾನವಾಗಿತ್ತು. ಈ ಬಾರಿ 77.85ರಷ್ಟು ಮತದಾನವಾಗಿದೆ. ಅಂದರೆ ಶೇ2.69ರಷ್ಟು ಕಡಿಮೆ ಮತದಾನವಾಗಿದೆ.

ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯ ನಂತರ ಒಂದು ಗುಂಪು ಅಸಮಾಧಾನಗೊಂಡಿತ್ತು. ಹಾಲಿ ಶಾಸಕ ವಿ. ಸುನಿಲ್ ಕುಮಾರ್ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು. ಪರಿಣಾಮ ಬಿಜೆಪಿ ಮೇಲುಗೈ ಸಾಧಿಸಿದೆ ಎಂಬಂತಹ ವಾತಾವರಣ ಇದೆ ಎಂದು ಜನರು ಹೇಳುತ್ತಿದ್ದರು.

ಆ ನಂತರದ ಬೆಳವಣಿಗೆಗಳಲ್ಲಿ ಟಿಕೆಟ್ ವಂಚಿತ ಉದಯ ಶೆಟ್ಟಿ ಅವರನ್ನು ಪಕ್ಷದ ಹಿರಿಯರು ಸಮಾಧಾನಪಡಿಸಿದ್ದ ಕಾರಣ ಕಾರ್ಯಕರ್ತರ ನಿರುತ್ಸಾಹ ಕಡಿಮೆಯಾಗಿತ್ತು. ಮತಗಟ್ಟೆ ಸಮೀಪದ ಪಕ್ಷದ ಬೂತ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಹ ಉತ್ಸಾಹದಿಂದ ಇದ್ದದ್ದು ಶನಿವಾರ ಕಂಡುಬಂತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದು ಯಾರಿಗೆ ಲಾಭವಾಗಲಿದೆ ಎಂದು ಕಾದು ನೋಡಬೇಕಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಪರವಾದ ಅಭಿಪ್ರಾಯ ಇತ್ತಾದರೂ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ನಂತರ ಪರಿಸ್ಥಿತಿ ಸ್ವಲ್ಪ ಬದಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಉಡುಪಿಗೆ ಬಂದು ಪ್ರಚಾರ ಮಾಡಿದ್ದು ಆ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ನಗರ ಪ್ರದೇಶಗಳಲ್ಲಿ ಬಿಜೆಪಿ ಪರವಾದ ಅಲೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲಕರವಾಗಿದೆ ಎಂದು ಚರ್ಚೆ ಸಹ ನಡೆಯುತ್ತಿದೆ. ಅಂತಿಮವಾಗಿ ಮತದಾರರು ಯಾರನ್ನು ಬೆಂಬಲಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಮೇ15ರ ವರೆಗೆ ಕಾಯಲೇಬೇಕಾಗಿದೆ.

ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಪೈಪೋಟಿ ನೀಡುವುದು ಖಚಿತ ಎನ್ನುವ ಕಾಂಗ್ರೆಸ್ ಮುಖಂಡರು. ನಿಮ್ಮ ಅಭ್ಯರ್ಥಿ ಗೆಲ್ಲುತ್ತಾರ ಎಂಬ ಪ್ರಶ್ನೆಗೆ ಉತ್ತರ ನೀಡಲು ತಡಬಡಾಯಿಸುತ್ತಾರೆ. ಕೆಲವು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಬಹುದು ಎಂದು ಊಹಿಸಲಾಗಿದೆ. ಅಂತಿಮವಾಗಿ ಯಾರು ಗೆಲ್ಲುವರು, ಗೆಲುವಿನ ಅಂತರ ಎಷ್ಟಿರಲಿದೆ ಎಂದು ಕಾದು ನೋಡಬೇಕಿದೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿಯೂ ಪೈಪೋಟಿ ಇದೆ. ಹಾಲಿ ಶಾಸಕ ವಿನಯ ಕುಮಾರ್ ಸೊರಕೆ ಅವರು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಇಲ್ಲಿ ಬಿಜೆಪಿ ತನ್ನ ಸಂಘಟನೆಯ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಎಲ್ಲ ರೀತಿಯ ಪ್ರಯತ್ನ ಮಾಡಿದೆ. ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವೂ ಇರುವುದರಿಂದ ವಿಜಯ ಮಾಲೆ ಯಾರಿಗೆ ಬೀಳಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಬಾರಿ ಇಲ್ಲಿನ ಮತದಾನದ ಪ್ರಮಾಣ ಶೇ3.93ರಷ್ಟು ಏರಿಕೆಯಾಗಿದೆ. ಜಿಲ್ಲೆಯ ಮಟ್ಟಿಗೆ ಇದು ಅತಿ ಹೆಚ್ಚು.

ಫಲಿತಾಂಶ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು

ಬೈಂದೂರಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯ ಅಭಿವೃದ್ಧಿ ವರ್ಸಸ್‌ ಬಿಜೆಪಿ ಸಂಘಟನೆ ಎಂಬಂತ ವಾತಾವರಣದಲ್ಲಿಯೇ ಚುನಾವಣೆ ಮುಗಿದಿದೆ. ಕರಾವಳಿ ತೀರ ಪ್ರದೇಶಗುಂಟ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದರೆ, ಉಳಿದ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಲೆ ಇದೆ ಎಂಬ ಮಾಹಿತಿ ಇದೆ. ಚುನಾವಣೆಗೆ ಕೆಲವು ದಿನಗಳ ಮೊದಲು ಸಮಬಲದ ಹೋರಾಟ ಇತ್ತು, ಆದರೆ ಆ ನಂತರ ಬಿಜೆಪಿ ಮಾಡಿದ ವ್ಯವಸ್ಥಿತ ಹಾಗೂ ಬಿರುಸಿನ ಪ್ರಚಾರ ಆ ಪಕ್ಷಕ್ಕೆ ಒಂದಿಷ್ಟು ಲಾಭ ಮಾಡಿಕೊಡಬಹುದು ಎನ್ನಲಾಗಿದೆ. ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅಥವಾ ಬಿಜೆಪಿಯ ಸುಕುಮಾರ ಶೆಟ್ಟಿ ಯಾರ ಕೊರಳಿಗೆ ವಿಜಯ ಮಾಲೆ? ಫಲಿತಾಂಶ ಉತ್ತರ ನೀಡಲಿದೆ.

**
ಕಾಪು, ಉಡುಪಿ ಹಾಗೂ ಬೈಂದೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಅಂತರದಲ್ಲಿ ಜಯ ಗಳಿಸಲಿದೆ. ಕುಂದಾಪುರ ಹಾಗೂ ಕಾರ್ಕಳದಲ್ಲಿ ಸ್ವಲ್ಪ ಪೈಪೋಟಿ ಇದ್ದರೂ ಅಲ್ಲಿಯೂ ಗೆಲುವು ನಮ್ಮದೇ
- ಜನಾರ್ದನ ತೋನ್ಸೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಬೂತ್‌ಗಳಿಂದ ವರದಿ ತರಿಸಿಕೊಳ್ಳಲಾಗಿದ್ದು ಎಲ್ಲ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಬಿಜೆಪಿ ಪರ ಭಾವನೆ ಹಾಗೂ ಮೋದಿ ಅಲೆ ಸಹಾಯಕವಾಗಿದೆ
- ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT