ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಹಾಥರಸ್‌ನಲ್ಲಿ ಕಾಲ್ತುಳಿತ ದುರಂತ; ಮತ್ತೆ ಮತ್ತೆ ಲೋಪ, ಕಲಿಯದ ಪಾಠ

Published 3 ಜುಲೈ 2024, 21:10 IST
Last Updated 3 ಜುಲೈ 2024, 21:10 IST
ಅಕ್ಷರ ಗಾತ್ರ

ಉತ್ತರಪ್ರದೇಶ ರಾಜ್ಯದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಮಂಗಳವಾರ ಆಯೋಜನೆ ಆಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ 121 ಮಂದಿ ಪ್ರಾಣ ಕಳೆದುಕೊಂಡಿರುವುದು ತಲ್ಲಣ ಮೂಡಿಸುವಂಥದ್ದು.

ಧಾರ್ಮಿಕ ಕಾರ್ಯಕ್ರಮದ ವೇಳೆ ಇಂತಹ ದುರ್ಘಟನೆ, ಇಷ್ಟು ಜನರ ಪ್ರಾಣಹಾನಿ ಈಚಿನ ದಿನಗಳಲ್ಲಿ ಸಂಭವಿಸಿದ ನಿದರ್ಶನ ಇಲ್ಲ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ದೇಶದ ಹಲವು ಭಾಗಗಳಲ್ಲಿ ಕಾಲ್ತುಳಿತ ದುರಂತಗಳು ನಡೆದಿವೆ. ಜನರು ಭಾರಿ ಸಂಖ್ಯೆಯಲ್ಲಿ ಸೇರುವ  ಸಂದರ್ಭಗಳಲ್ಲಿ ಇಂಥವು ನಡೆದಿವೆ. ಅದರಲ್ಲೂ ಮುಖ್ಯವಾಗಿ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಹಾಗೂ ಯಾತ್ರಾ ಸ್ಥಳಗಳಲ್ಲಿ ಇಂತಹ ಕೆಟ್ಟ ಘಟನೆಗಳು ಹಲವು ಬಾರಿ ನಡೆದಿವೆ. ಏಕೆಂದರೆ, ಇಂತಹ ಕಾರ್ಯಕ್ರಮಗಳಲ್ಲಿ ಹಾಗೂ ಸ್ಥಳಗಳಲ್ಲಿ ಮೂಲಸೌಕರ್ಯದ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಿರುವುದಿಲ್ಲ, ಅಲ್ಲಿಗೆ ಬರುವ ಜನರ ಸಂಖ್ಯೆಯ ಮೇಲೆ ಯಾರಿಗೂ ನಿಯಂತ್ರಣ ಕೂಡ ಇರುವುದಿಲ್ಲ. ಹಾಥರಸ್‌ನಲ್ಲಿ ಆಗಿರುವುದು ಕೂಡ ಇದೇ. ಸಾಕಾರ ವಿಶ್ವಹರಿ ಭೋಲೆಬಾಬಾ ಎನ್ನುವ ಧಾರ್ಮಿಕ ಬೋಧಕರೊಬ್ಬರು ಸಣ್ಣ ಗ್ರಾಮದಲ್ಲಿ ಬಹಳ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು. ಭೋಲೆಬಾಬಾ ಅವರು ಈ ಪ್ರದೇಶದಲ್ಲಿ ಈಚೆಗೆ ಬಹಳ ಜನಪ್ರಿಯತೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಜನಜಂಗುಳಿಯನ್ನು ನಿಯಂತ್ರಿಸಲು ವ್ಯವಸ್ಥೆ ಇರಲಿಲ್ಲ, ಅಲ್ಲಿ ವೈದ್ಯಕೀಯ ಸೌಲಭ್ಯಗಳೂ ಲಭ್ಯವಿರಲಿಲ್ಲ ಎಂದು ವರದಿಗಳು ಹೇಳುತ್ತವೆ.

ಹಾಥರಸ್‌ನಲ್ಲಿ ನಡೆದ ಈ ಸತ್ಸಂಗದ ಸಂದರ್ಭದಲ್ಲಿ ಏನೆಲ್ಲ ಎಡವಟ್ಟುಗಳು ಆಗಬಹುದೋ ಅವೆಲ್ಲವೂ ಆಗಿಹೋದವು. ಅಲ್ಲಿ ಸೇರಿದ್ದ ಜನರ ನಿಖರ ಸಂಖ್ಯೆ ಎಷ್ಟು ಎಂಬ ಮಾಹಿತಿ ಇಲ್ಲ. ಸತ್ಸಂಗ ಕಾರ್ಯಕ್ರಮಕ್ಕೆ ಅಂದಾಜು ಒಂದು ಲಕ್ಷ ಮಂದಿ ಸೇರಿದ್ದರು ಎನ್ನಲಾಗಿದೆ. ಅಲ್ಲದೆ, ಗ್ರಾಮದಲ್ಲಿನ ಸಣ್ಣ ಸಭಾಂಗಣದಲ್ಲಿ ಅಷ್ಟೊಂದು ಜನರನ್ನು ಸೇರಿಸಲು ಆಗುತ್ತಿರಲಿಲ್ಲ ಎಂದೂ ಹೇಳಲಾಗಿದೆ. ಕಾರ್ಯಕ್ರಮ ಆಯೋಜಿಸಲು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ವಿಚಾರದಲ್ಲಿ ಖಚಿತತೆ ಇಲ್ಲ. ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಬಹುದು ಎಂಬ ಅಂದಾಜು ಆಧರಿಸಿಯೇ, ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಲಾಗುತ್ತದೆ. ಆದರೆ ಜನ ಯಾವ ಪ್ರಮಾಣದಲ್ಲಿ ಸೇರಬಹುದು ಎಂಬುದನ್ನು ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಭೋಲೆಬಾಬಾ ಅವರ ಬೆಂಗಾವಲು ವಾಹನಗಳಿಗೆ ಸಾಗಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಸಭಾಂಗಣದ ಒಂದು ದ್ವಾರವನ್ನು ಮುಚ್ಚಲಾಗಿತ್ತು, ಇದು ಕೂಡ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ವರದಿಗಳು ಹೇಳಿವೆ.

ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯ, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯೂ ಇರಲಿಲ್ಲ. ತುರ್ತು ಪರಿಸ್ಥಿತಿಯೊಂದರ ಸಂದರ್ಭದಲ್ಲಿ ಸ್ಪಂದಿಸುವುದು ಹೇಗೆ ಎಂಬ ಬಗ್ಗೆ ಕಾರ್ಯಕ್ರಮದ ಆಯೋಜಕರಿಗಾಗಲಿ, ಅಲ್ಲಿದ್ದ ಇತರ ಯಾರಿಗೇ ಆಗಲಿ ಗೊತ್ತಿರಲಿಲ್ಲ.

ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಬಹುತೇಕರು ಬಡ ಹಾಗೂ ದುರ್ಬಲ ವರ್ಗಗಳಿಗೆ ಸೇರಿರುವ ಸಾಧ್ಯತೆ ಇದೆ. ಏಕೆಂದರೆ, ಭೋಲೆಬಾಬಾ ಅವರ ಅನುಯಾಯಿಗಳಲ್ಲಿ ಹೆಚ್ಚಿನವರು ಈ ವರ್ಗಗಳಿಗೆ ಸೇರಿದವರು. ಮೃತರಲ್ಲಿ ಕೆಲವರನ್ನು ಗುರುತುಹಿಡಿಯುವುದೂ ಕಷ್ಟವಾಗಬಹುದು. ಈ ದುರಂತ ನಡೆಯಲು ಕಾರಣರಾದ ಕಾರ್ಯಕ್ರಮ ಸಂಘಟಕರು, ಬೇರೆ ಬೇರೆ ಹಂತಗಳ ಅಧಿಕಾರಿಗಳು, ಭೋಲೆಬಾಬಾ ಸೇರಿದಂತೆ ಎಲ್ಲರನ್ನೂ ಉತ್ತರದಾಯಿಗಳನ್ನಾಗಿಸಬೇಕು, ಅವರಿಂದ ಆಗಿರಬಹುದಾದ ಲೋಪಕ್ಕೆ ಶಿಕ್ಷೆ ವಿಧಿಸಬೇಕು. ಆದರೆ ಹೀಗೆ ಶಿಕ್ಷೆಗೆ ಗುರಿಪಡಿಸುವ ಕೆಲಸವು ಸಾಮಾನ್ಯ ಸಂದರ್ಭಗಳಲ್ಲಿ ಆಗುವುದೇ ಇಲ್ಲ. ವಿಚಾರಣೆ ನಡೆಸಲಾಗುತ್ತದೆ ಎಂಬ ಘೋಷಣೆ ಆಗುತ್ತದೆಯಾದರೂ ಅದು ತಾರ್ಕಿಕ ಅಂತ್ಯ ಮುಟ್ಟುವುದಿಲ್ಲ. ಭೋಲೆಬಾಬಾ ಅವರಿಗೆ ರಾಜಕೀಯ ಸಂಪರ್ಕ ಇದೆ ಎಂಬ ಮಾತಿದೆ. ಇಂತಹ ಘಟನೆಗಳು ನಡೆದ ನಂತರ ಮೂಲಸೌಕರ್ಯದ ಬಗ್ಗೆ, ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಮುಂಜಾಗರೂಕತಾ ಕ್ರಮಗಳ ಬಗ್ಗೆ ಬಹಳಷ್ಟು ಮಾತುಗಳನ್ನು ಆಡಲಾಗುತ್ತದೆ. ಆದರೆ ಅವುಗಳನ್ನು ಬಹಳ ಬೇಗ ಮರೆಯಲಾಗುತ್ತದೆ.

ಜನ ಭಾರಿ ಸಂಖ್ಯೆಯಲ್ಲಿ ಸೇರುವ ಎಲ್ಲ ಸಂದರ್ಭಗಳಲ್ಲಿಯೂ ಮೂಲಸೌಕರ್ಯವನ್ನು ಖಾತರಿಪಡಿಸುವ, ಅಗತ್ಯ ನೆರವು ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ಇರಿಸುವ ಕೆಲಸ ಆಗದೇ ಇದ್ದರೆ ಇಂತಹ ದುರಂತಗಳು ಮತ್ತೆ ಮತ್ತೆ ನಡೆಯುತ್ತಿರುತ್ತವೆ. ಈ ರೀತಿಯ ದುರಂತಗಳಿಗೆ ಮನುಷ್ಯನೇ ಕಾರಣ. ಇಂಥವುಗಳಲ್ಲಿ ಜನ ಜೀವ ಕಳೆದುಕೊಳ್ಳುತ್ತಾರೆ, ಹಲವರು ಗಾಯಗೊಳ್ಳುತ್ತಾರೆ, ಹಲವರು ಅನಾಥರಾಗುತ್ತಾರೆ. ಹೀಗಿದ್ದರೂ ಇಂಥವುಗಳಿಂದ ಪಾಠ ಕಲಿತುಕೊಳ್ಳದೇ ಇರುವುದು ತೀರಾ ದುರದೃಷ್ಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT