ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ಜನರ ಮೇಲೆ ಮತ್ತಷ್ಟು ತೆರಿಗೆ ಹೊರೆ ಸಮಂಜಸವಲ್ಲ

Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ನಗರ ಸ್ಥಳೀಯ ಸಂಸ್ಥೆಗಳ ವರಮಾನದ ಮೂಲವನ್ನು ಹೆಚ್ಚಿಸಿಕೊಳ್ಳುವ ಮತ್ತು ಅದನ್ನು ಆಧಾರವಾಗಿಟ್ಟುಕೊಂಡು ಸಾಲ ಪಡೆದು ಬಳಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ನಗರ–ಪಟ್ಟಣ ಪ್ರದೇಶಗಳಲ್ಲಿನ ಆಸ್ತಿ ತೆರಿಗೆ ದರವನ್ನು ಪರಿಷ್ಕರಿಸುವ ನಿರ್ಧಾರವನ್ನು ಕೈಗೊಂಡಿದೆ. ತೆರಿಗೆ ನಿಗದಿಯ ಮಾನದಂಡಗಳಲ್ಲಿ ಹಲವು ಬದಲಾವಣೆಗಳನ್ನು ತರುವ ಉದ್ದೇಶದೊಂದಿಗೆ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್ಸ್ (ಕೆಎಂಸಿ) ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ಇತರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ತಿದ್ದುಪಡಿ ಅನ್ವಯವಾಗಲಿದೆ. ಆದರೆ, ಪ್ರತ್ಯೇಕ ಕಾಯ್ದೆಯಡಿ ದತ್ತವಾಗಿರುವ ಅಧಿಕಾರ ಬಳಸಿಕೊಂಡು ಆಸ್ತಿ ತೆರಿಗೆ ಪರಿಷ್ಕರಿಸುವ ಪ್ರಸ್ತಾವ ಬಿಬಿಎಂಪಿ ಮುಂದೆಯೂ ಇದೆ. ಆಸ್ತಿ ತೆರಿಗೆಯ ಕನಿಷ್ಠ ದರದಲ್ಲಿ ಶೇ 0.1ರಷ್ಟು ಇಳಿಕೆ ಮಾಡಿದರೂ ಗರಿಷ್ಠ ದರದಲ್ಲಿ ಶೇ 0.5ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪರಿಣಾಮವಾಗಿ ಆಸ್ತಿಯ ಮೌಲ್ಯದ ಶೇ 1.5ರ
ವರೆಗೂ ಆಸ್ತಿ ತೆರಿಗೆ ವಿಧಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅವಕಾಶ ದೊರೆಯಲಿದೆ. ಕಟ್ಟಡಕ್ಕೆ ಹೊಂದಿಕೊಂಡಿರುವ ಖಾಲಿ ನಿವೇಶನಗಳು ಸದ್ಯ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಅಂತಹ ನಿವೇಶನಗಳಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಎಲ್ಲ ನಿವೇಶನಗಳನ್ನೂ ತೆರಿಗೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಸಂಪೂರ್ಣ ಖಾಲಿ ನಿವೇಶನಗಳಿಗೆ ತೆರಿಗೆ ವಿಧಿಸುವಾಗ 3,000 ಚದರ ಅಡಿಗಳವರೆಗಿನ ವಿಸ್ತೀರ್ಣದ ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಈವರೆಗೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರದ ಶೇ 50ರ ಮೌಲ್ಯವನ್ನು ಆಧಾರವಾಗಿಟ್ಟುಕೊಂಡು ತೆರಿಗೆ ನಿಗದಿ ಮಾಡಲಾಗುತ್ತಿತ್ತು. ಈ ಮಾನದಂಡವನ್ನು ಬದಲಿಸಿ, ಆಸ್ತಿಯ ಮಾರುಕಟ್ಟೆಯ ಮೌಲ್ಯದ ಶೇ 25ರಷ್ಟನ್ನು ಆಧಾರವಾಗಿಟ್ಟುಕೊಂಡು ತೆರಿಗೆ ನಿಗದಿಪಡಿಸುವ ಕ್ರಮ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಈ ಎಲ್ಲ ಬದಲಾವಣೆಗಳ ಪರಿಣಾಮವಾಗಿ ನಗರ ಪ್ರದೇಶಗಳ ಆಸ್ತಿ ಮಾಲೀಕರು ಪಾವತಿಸಬೇಕಾದ ತೆರಿಗೆ ಮೊತ್ತದಲ್ಲಿ ದೊಡ್ಡಮಟ್ಟದ ಏರಿಕೆಯಾಗುವುದು ನಿಶ್ಚಿತವಾಗಿದೆ.

ಕೋವಿಡ್‌ ನಿಯಂತ್ರಣದ ಉದ್ದೇಶದಿಂದ ಹೇರಿದ್ದ ಸುದೀರ್ಘ ಅವಧಿಯ ಲಾಕ್‌ಡೌನ್‌ ಮತ್ತು ನಂತರವೂ ಮುಂದುವರಿದಿರುವ ನಿರ್ಬಂಧಗಳ ಕಾರಣದಿಂದ ರಾಜ್ಯದಲ್ಲಿ ಆರ್ಥಿಕತೆ ಇನ್ನೂ ಸರಿದಾರಿಗೆ ಬಂದಿಲ್ಲ. 2020ರ ಮಾರ್ಚ್‌ನಿಂದ ಕುಸಿತ ಕಂಡಿದ್ದ ಆರ್ಥಿಕ ವಹಿವಾಟು ಕುಂಟುತ್ತಲೇ ಸಾಗಿದೆ. ಕೋವಿಡ್‌ ಲಾಕ್‌ಡೌನ್‌ ಮತ್ತು ನಿರ್ಬಂಧಗಳ ಪರಿಣಾಮ ಕೇವಲ ವ್ಯಾಪಾರ, ವಹಿವಾಟು ನಡೆಸುವ ವರ್ಗಕ್ಕೆ ಸೀಮಿತವಾಗಿಲ್ಲ. ಕೂಲಿ ಕೆಲಸದವರಿಂದ ಬೃಹತ್‌ ಉದ್ದಿಮೆಗಳ ಮಾಲೀಕರವರೆಗೆ ಎಲ್ಲರಿಗೂ ಬಿಸಿ ತಟ್ಟಿದೆ. ಲಕ್ಷಾಂತರ ಮಂದಿಯ ಉದ್ಯೋಗ ನಷ್ಟವಾಗಿದ್ದರೆ, ಸಾವಿರಾರು ಕಾರ್ಖಾನೆಗಳು, ಉದ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಕೋವಿಡ್‌ ಸೃಷ್ಟಿಸಿದ ಬಿಕ್ಕಟ್ಟು ವೇತನ ಕಡಿತ, ಕೆಲಸದ ದಿನಗಳ ಕಡಿತದಂತಹ ಕ್ರಮಗಳಿಗೂ ಎಡೆಮಾಡಿದೆ. ನಗರ ಪ್ರದೇಶಗಳಿಂದ ದೊಡ್ಡ ಸಂಖ್ಯೆಯ ಜನರು ಹಳ್ಳಿಗಳತ್ತ ಮರುವಲಸೆ ಹೋಗಿದ್ದಾರೆ. ಈ ಪ್ರಕ್ರಿಯೆ ಇನ್ನೂ ನಿಂತೇ ಇಲ್ಲ. ವಸತಿ, ವಾಣಿಜ್ಯ ಕಟ್ಟಡಗಳು ಬಾಡಿಗೆದಾರರಿಲ್ಲದೆ ತಿಂಗಳುಗಳಿಂದ ಖಾಲಿ ಬಿದ್ದಿವೆ. ಕಟ್ಟಡಗಳ ಮಾಲೀಕರು ಬಾಡಿಗೆ ಆದಾಯದ ಮೂಲವನ್ನೇ ಕಳೆದುಕೊಂಡಿದ್ದಾರೆ. ‘ಆಸ್ತಿ ತೆರಿಗೆ ಹೆಚ್ಚಳ ಮಾಡಿದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ 0.25ರಷ್ಟು ಮೊತ್ತದ ಸಾಲವನ್ನು ಹೆಚ್ಚುವರಿಯಾಗಿ ಪಡೆಯಲು ಅವಕಾಶ ನೀಡಲಾಗುವುದು’ ಎಂಬ ಕೇಂದ್ರ ಸರ್ಕಾರದ ಷರತ್ತಿಗೆ ಮಣಿದು ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಜನರ ಮೇಲೆ ತೆರಿಗೆ ಭಾರವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸಮರ್ಥನೀಯವಾದುದಲ್ಲ. ಕೇರಳ ಸೇರಿದಂತೆ ಕೆಲವು ರಾಜ್ಯಗಳು ತೆರಿಗೆ ಮತ್ತು ಶುಲ್ಕ ಕಡಿತದ ಮೂಲಕ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತಿವೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಜನರ ನೆರವಿಗೆ ಬರಬೇಕಾದುದು ಸರ್ಕಾರದ ಕರ್ತವ್ಯ. ದುಂದುವೆಚ್ಚದ ಕ್ರಮಗಳಿಗೆ ಕಡಿವಾಣ ಹಾಕಿ, ಜನರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ದಾರಿಗಳನ್ನು ಕಂಡುಕೊಳ್ಳಬೇಕೇ ವಿನಾ ಮತ್ತಷ್ಟು ತೆರಿಗೆ ಹೆಚ್ಚಿಸುವ ಮೂಲಕ ರಾಜ್ಯವು ಪಡೆಯುವ ಹೊಸ ಸಾಲಕ್ಕೆ ಮರುಪಾವತಿಯ ಖಾತರಿ ನೀಡುವ ನಡೆ ಉತ್ತಮವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT