ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನೋಂದಣಿ ಕಚೇರಿಗಳಲ್ಲಿನಅಕ್ರಮಗಳಿಗೆ ಕಡಿವಾಣ ಬೀಳಲಿ

ಉಪನೋಂದಣಿ ಕಚೇರಿಗಳಿಗೆ ಕಾಲಿಡಲು ಜನರು ಭಯಪಡಬೇಕಾದ ಪರಿಸ್ಥಿತಿ ಇದೆ
Last Updated 24 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ 43 ಉಪನೋಂದಣಿ ಕಚೇರಿಗಳಲ್ಲಿ ಇತ್ತೀಚೆಗೆ ದಿಢೀರ್‌ ತಪಾಸಣೆ ನಡೆಸಿರುವ ಲೋಕಾಯುಕ್ತ ಪೊಲೀಸ್‌ ವಿಭಾಗದ ಅಧಿಕಾರಿಗಳು, ಅಲ್ಲಿ ಹಲವು ಬಗೆಯ ಅಕ್ರಮಗಳು ಮತ್ತು ಭ್ರಷ್ಟಾಚಾರ ನಡೆಯುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಪ್ರತೀ ಉಪನೋಂದಣಿ ಕಚೇರಿಯಲ್ಲಿ ಕಂಡುಬಂದಿರುವ ಅಕ್ರಮ ಹಾಗೂ ನಿಯಮ ಉಲ್ಲಂಘನೆ ಕುರಿತು ವಿಸ್ತೃತ ವಿವರಗಳೊಂದಿಗೆ ತನಿಖಾ ತಂಡವು ಲೋಕಾಯುಕ್ತರಿಗೆ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ವಿಚಾರಣೆ ಆರಂಭಿಸಿದ್ದಾರೆ. ರಾಜ್ಯ ರಾಜಧಾನಿಯ ವ್ಯಾಪ್ತಿಯಲ್ಲಿರುವ ಉಪ ನೋಂದಣಿ ಕಚೇರಿಗಳು ಭ್ರಷ್ಟಾಚಾರ ಮತ್ತು ಅಕ್ರಮದ ಕೂಪಗಳಾಗಿದ್ದು, ಬಹುಪಾಲು ಕಚೇರಿಗಳು ದಲ್ಲಾಳಿಗಳ ಹಿಡಿತದಲ್ಲೇ ಇವೆ ಎಂಬುದನ್ನು ಲೋಕಾಯುಕ್ತ ಪೊಲೀಸರ ವರದಿ ಜಾಹೀರುಗೊಳಿಸಿದೆ. ತಪಾಸಣೆಯ ಅವಧಿಯಲ್ಲೇ ಹಲವು ಉಪನೋಂದಣಿ ಅಧಿಕಾರಿಗಳ ಕಚೇರಿಗಳ ಒಳಗೆ ದಲ್ಲಾಳಿಗಳು ಹಾಜರಿದ್ದರು, ಅವರ ಬಳಿ ಅನ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಡತಗಳು ಇದ್ದವು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಉದ್ಯಮಗಳ ಪರವಾಗಿ ಕೆಲಸ ಮಾಡುವ ದಲ್ಲಾಳಿಗಳು ತರುವ ದಾಖಲೆಗಳನ್ನು ಆದ್ಯತೆಯ ಮೇಲೆ ನೋಂದಣಿ ಮಾಡಲಾಗುತ್ತಿದೆ. ಜನಸಾಮಾನ್ಯರು ಉಪನೋಂದಣಿ ಕಚೇರಿಗಳ ಬಾಗಿಲಲ್ಲಿ ಕಾದು ಹೈರಾಣಾಗಬೇಕಾದ ಸ್ಥಿತಿ ಇದೆ ಎಂಬ ಉಲ್ಲೇಖವೂ ವರದಿಯಲ್ಲಿದೆ. ಬಹುತೇಕ ಉಪನೋಂದಣಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಹಾಜರಾತಿ ಕಡತಕ್ಕೆ ಸಹಿ ಹಾಕುತ್ತಿಲ್ಲ, ಹೊರಗುತ್ತಿಗೆ ಸಿಬ್ಬಂದಿಗೆ ಹಾಜರಾತಿ ವಹಿಯೇ ಇಲ್ಲ, ನಗದು ಘೋಷಿಸುವ ವ್ಯವಸ್ಥೆಯು ಕಾಟಾಚಾರಕ್ಕೆ ಪಾಲನೆಯಾಗುತ್ತಿದೆ, ಈ ಕಚೇರಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲ, ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಗುರುತಿನ ಚೀಟಿ ಧರಿಸದೇ ಕಾರ್ಯನಿರ್ವಹಿಸುತ್ತಾರೆ ಎಂದು ತನಿಖಾ ತಂಡದ ವರದಿ ಹೇಳಿದೆ. ನೋಂದಣಿ ಪ್ರಕ್ರಿಯೆಯಲ್ಲಿ ‘ಪ್ಯಾನ್‌’ ಸಂಖ್ಯೆ ನಮೂದಿಸದೇ ಆದಾಯ ತೆರಿಗೆ ವಂಚನೆಗೆ ಸರ್ಕಾರಿ ಅಧಿಕಾರಿಗಳೇ ಸಹಕರಿಸುತ್ತಿ ರುವುದು ಪತ್ತೆಯಾಗಿದೆ. ‘ಆಡಳಿತ ವೆಚ್ಚ’ದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು, ಬೆಂಗಳೂರು ನಗರದ ವ್ಯಾಪ್ತಿಯ ಯಾವುದೇ ಭಾಗದ ಆಸ್ತಿಯನ್ನು ಯಾವುದೇ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಬಹುದಾದ ಅವಕಾಶವನ್ನು ದುರ್ಬಳಕೆ ಮಾಡುತ್ತಿರುವುದು, ಅಗತ್ಯ ದಾಖಲೆಗಳೇ ಇಲ್ಲದೆ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುತ್ತಿರುವುದು ಸೇರಿದಂತೆ ಹಲವು ಬಗೆಯ ಅಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂಬುದನ್ನು ಲೋಕಾಯುಕ್ತ ಪೊಲೀಸರ ತಪಾಸಣಾ ವರದಿ ತೆರೆದಿಟ್ಟಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸರ್ವರ್‌ ಪದೇ ಪದೇ ಡೌನ್‌
ಆಗುತ್ತಿರುವುದರ ಬಗ್ಗೆಯೂ ತನಿಖಾ ತಂಡ ಸಂಶಯ ವ್ಯಕ್ತಪಡಿಸಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯ ಸರ್ಕಾರದ ಪ್ರಮುಖ ವರಮಾನ ಮೂಲಗಳಲ್ಲಿ ಒಂದು. ಸ್ಥಿರಾಸ್ತಿಗಳ ಖರೀದಿ, ಜನರಲ್‌ ಪವರ್‌ ಆಫ್‌ ಅಟಾರ್ನಿ (ಜಿಪಿಎ), ಕ್ರಯ ಒಪ್ಪಂದ, ದಾನಪತ್ರಗಳ ನೋಂದಣಿ, ವಿವಾಹ ನೋಂದಣಿ, ಋಣಭಾರ ಪ್ರಮಾಣಪತ್ರ (ಇಸಿ) ವಿತರಣೆ ಈ ಇಲಾಖೆಯ ಮೂಲಕ ನಡೆಯುತ್ತದೆ. ರಾಜ್ಯ ಸರ್ಕಾರದ ಒಟ್ಟು ವರಮಾನದ ಶೇಕಡ 11ರಷ್ಟನ್ನು
ಈ ಇಲಾಖೆಯಿಂದಲೇ ಸಂಗ್ರಹಿಸುವ ಗುರಿ ಇದೆ. ಇಂತಹ ಮಹತ್ವದ ಇಲಾಖೆಯು ಅತ್ಯಂತ ಜನ ಸ್ನೇಹಿಯಾಗಿ, ಸುಲಭವಾಗಿ ಸರ್ಕಾರಿ ಸೇವೆಗಳನ್ನು ಜನರಿಗೆ ಒದಗಿಸಬೇಕಿತ್ತು. ಆದರೆ, ಉಪನೋಂದಣಿ ಕಚೇರಿಗಳಿಗೆ ಕಾಲಿಡಲು ಜನರು ಭಯಪಡಬೇಕಾದ ಪರಿಸ್ಥಿತಿ ಇದೆ. ಈ ಕಚೇರಿಗಳು ಸುಲಿಗೆಯ ತಾಣ ಗಳಾಗಿದ್ದು, ಜನರನ್ನು ಪೀಡಿಸಿ, ನರಕಯಾತನೆ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ನೋಂದಣಿ ಪ್ರಕ್ರಿಯೆಯಲ್ಲಿನ ಲೋಪಗಳಿಂದ ವ್ಯಾಜ್ಯಗಳೂ ಸೃಷ್ಟಿಯಾಗಿ, ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸ್ಥಿತಿ ಬೆಂಗಳೂರಿನ 43 ಉಪನೋಂದಣಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಇದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ಸರ್ಕಾರ ವರಮಾನದ ಮೂಲವಾಗಿ ಮಾತ್ರ ನೋಡುತ್ತಿರುವುದು ಸರಿಯಲ್ಲ. ಇಲಾಖೆಯಲ್ಲಿ ತಂತ್ರಜ್ಞಾನದ ಬಳಕೆ ಬರೀ ಬಾಯುಪಚಾರದ ಮಾತಾಗಿ ಉಳಿದಿದೆ. ಕೆಲವು ವರ್ಷಗಳಿಂದ ಈಚೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯಾವುವೂ ಈ ಇಲಾಖೆಯ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಹೀಗಾಗಿ ದಲ್ಲಾಳಿಗಳ ಕಪಿಮುಷ್ಟಿಯಿಂದ ನೋಂದಣಿ ಇಲಾಖೆ ಹೊರಬರಲು ಸಾಧ್ಯವಾಗಿಲ್ಲ. ನೂತನ ತಂತ್ರಜ್ಞಾನವನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡು ಜನಸ್ನೇಹಿಯಾದ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತಹ ಕ್ರಮಗಳನ್ನು ಇಲಾಖೆಯು ತಕ್ಷಣ ಅಳವಡಿಸಿಕೊಳ್ಳಬೇಕಿದೆ. ನೋಂದಣಿ ಇಲಾಖೆಯ ವಹಿವಾಟನ್ನು ಸಂಪೂರ್ಣ ಪಾರದರ್ಶಕಗೊಳಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಇಲಾಖೆಯ ಎಲ್ಲ ಹಂತಗಳಲ್ಲಿ ಮೇಲುಸ್ತುವಾರಿ ಮತ್ತು ನಿಗಾ ವ್ಯವಸ್ಥೆ ಮಾಡಬೇಕು. ಎಲ್ಲ ಕಚೇರಿಗಳನ್ನೂ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿಗೆ ತರುವ ಮೂಲಕ ದಲ್ಲಾಳಿಗಳನ್ನು ಹೊರಹಾಕುವ ಕೆಲಸ ಮಾಡಬೇಕು. ನೋಂದಣಿ ಕಚೇರಿಗಳಲ್ಲಿ ಜನಸ್ನೇಹಿ ಮತ್ತು ಭ್ರಷ್ಟಾಚಾರರಹಿತ ಆಡಳಿತ ಎಂಬುದು ಬರೀ ಮಾತಿಗೆ ಸೀಮಿತವಾಗದಂತೆ ನಡೆದುಕೊಳ್ಳುವ ಬದ್ಧತೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT