ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಸರಿಪಡಿಸಿಕೊಳ್ಳಲು ಭಾರತ ಮತ್ತು ಮಾಲ್ದೀವ್ಸ್ ಬಹಳಷ್ಟು ಶ್ರಮ ವಹಿಸಿವೆ ಎಂದು ಅನ್ನಿಸುತ್ತಿದೆ. ಆದರೆ ಇದು ಸಾಧ್ಯವಾಗಲು ಅರ್ಧ ವರ್ಷಕ್ಕಿಂತ ಹೆಚ್ಚಿನ ಸಮಯ ಬೇಕಾಯಿತು ಎಂಬುದು ಗಮನಾರ್ಹ. ಭಾರತಕ್ಕೆ ಮಾಲ್ದೀವ್ಸ್ ಬೇಕು, ಮಾಲ್ದೀವ್ಸ್ಗೆ ಭಾರತ ಬೇಕು. ಎರಡೂ ದೇಶಗಳಿಗೆ ಪರಸ್ಪರರು ಬೇಕು ಎನ್ನುವುದಕ್ಕೆ ಕಾರಣಗಳು ಬೇರೆ ಬೇರೆ. ಈ ವರ್ಷದ ಜನವರಿಯಿಂದ ಈಚೆಗೆ ನಡೆದ ಮಾತಿನ ತಿವಿತ, ಮಾಲ್ದೀವ್ಸ್ನ ಪ್ರವಾಸಿ ತಾಣಗಳನ್ನು ಬಹಿಷ್ಕರಿಸಲು ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಿದ ಅಭಿಯಾನ, ಮಾಲ್ದೀವ್ಸ್ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾದ ನೆಲದಲ್ಲಿ ನಿಂತು, ತಮ್ಮ ದೇಶದ ಸಾರ್ವಭೌಮತ್ವಕ್ಕೆ ಭಾರತ ಬೆದರಿಕೆ ಎಂದು ಹೇಳಿದ್ದು... ಇವೆಲ್ಲ ನಡೆದ ನಂತರದಲ್ಲಿ ವಾಸ್ತವದ ಅರಿವು ಆಗಿರುವಂತೆ ಕಾಣುತ್ತಿದೆ.

ಹಿಂದೂ ಮಹಾ ಸಾಗರದಲ್ಲಿನ ದ್ವೀಪಗಳ ಸಮೂಹವಾಗಿರುವ ಮಾಲ್ದೀವ್ಸ್ ದೇಶವು ಭಾರತದ ಬಹುಮುಖ್ಯ ಹಿತಾಸಕ್ತಿಗಳ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಮಾಲ್ದೀವ್ಸ್ ದೇಶವು ಅಂದಾಜು 3.7 ಬಿಲಿಯನ್ ಡಾಲರ್ (ಸರಿಸುಮಾರು ₹31 ಸಾವಿರ ಕೋಟಿ) ವಿದೇಶಿ ಸಾಲದ ಭಾರ ತಾಳಲಾರದೆ ಹೈರಾಣಾಗಿದೆ. ಈ ಸಾಲದಲ್ಲಿ ಚೀನಾದಿಂದ ಪಡೆದ ಸಾಲದ ಪ್ರಮಾಣವು ಶೇಕಡ 40ರಷ್ಟು ಇದೆ. ವಿತ್ತೀಯ ಕೊರತೆ ಹಾಗೂ ಕರೆನ್ಸಿ ಕೊರತೆಯನ್ನೂ ದೇಶವು ಎದುರಿಸುತ್ತಿದೆ. ಇಂಥದ್ದೇ ಪರಿಸ್ಥಿತಿಗೆ ಸಿಲುಕಿದ್ದ ಶ್ರೀಲಂಕಾಕ್ಕೆ ಆಗಿದ್ದೇ ತನಗೂ ಆಗಬಹುದು ಎಂಬುದನ್ನು ಮಾಲ್ದೀವ್ಸ್ ಅರ್ಥ ಮಾಡಿಕೊಂಡಿತು. ಹೀಗಾಗಿ ಅದು ನೆರವು ಯಾಚಿಸಲು ಮುಂದಾಯಿತು. ಆದರೆ ಆರ್ಥಿಕ ನೆರವು ಒದಗಿಸುವ ವಿಚಾರದಲ್ಲಿ ಚೀನಾ ಕಡೆಯಿಂದ ಉತ್ತಮ ಸ್ಪಂದನ ವ್ಯಕ್ತವಾಗಲಿಲ್ಲ. ನೆರೆಯ ದೇಶಗಳು ಕಷ್ಟಕ್ಕೆ ಸಿಲುಕಿದಾಗ ನೆರವಿಗೆ ಧಾವಿಸುವ ಮೊದಲ ರಾಷ್ಟ್ರ ತಾನು ಎಂದು ಹೇಳಿಕೊಳ್ಳುವ ಭಾರತವು ಈ ಪರಿಸ್ಥಿತಿಯಲ್ಲಿ, ಹಿಂದೆ ಶ್ರೀಲಂಕಾಕ್ಕೆ ನೆರವು ನೀಡಿದ್ದ ಮಾದರಿಯಲ್ಲಿ, ಮಾಲ್ದೀವ್ಸ್ಗೆ ನೆರವಿನ ಹಸ್ತ ಚಾಚಿತು. ಅದರ ಪರಿಣಾಮವು ಈಗ ಕಣ್ಣೆದುರಿನಲ್ಲಿ ಇದೆ. ಮುಯಿಜು ಅವರ ಭಾರತ ಭೇಟಿಯಿಂದಾಗಿ ಭಾರತಕ್ಕೂ ಮಾಲ್ದೀವ್ಸ್ಗೂ ಲಾಭವಾದಂತೆ ಕಾಣುತ್ತಿದೆ.

ಮುಯಿಜು ಅವರ ಭಾರತ ಭೇಟಿಯ ಪರಿಣಾಮವಾಗಿ ಎರಡೂ ದೇಶಗಳ ನಡುವೆ 750 ದಶಲಕ್ಷ ಡಾಲರ್ (ಅಂದಾಜು ₹6 ಸಾವಿರ ಕೋಟಿ) ಮೌಲ್ಯದ ಕರೆನ್ಸಿ ವಿನಿಮಯ ಒಪ್ಪಂದ ಸಾಧ್ಯವಾಗಿದೆ. ಅಲ್ಲದೆ, ಭಾರತ ಮತ್ತು ಮಾಲ್ದೀವ್ಸ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ (ಎಫ್ಟಿಎ) ಕುರಿತು ಮಾತುಕತೆ ಶುರುವಾಗಲಿದೆ ಎಂಬ ಘೋಷಣೆ ಹೊರಬಿದ್ದಿದೆ. ಮಾಲ್ದೀವ್ಸ್ ಕೆಲವು ವರ್ಷಗಳ ಹಿಂದೆಯೇ ಚೀನಾದ ಜೊತೆ ಎಫ್ಟಿಎ ಒಪ್ಪಂದ ಮಾಡಿಕೊಂಡಿದೆ. ಆದರೆ ಮಾಲ್ದೀವ್ಸ್ನ ಈ ಹಿಂದಿನ ಸರ್ಕಾರವು ಈ ಒಪ್ಪಂದವನ್ನು ಅನುಷ್ಠಾನಕ್ಕೆ ತರಲಿಲ್ಲ. ಈಗ ಮುಯಿಜು ನೇತೃತ್ವದ ಸರ್ಕಾರವು ಅದನ್ನು ಅನುಷ್ಠಾನಕ್ಕೆ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವೆ ಮಾತಿನ ಏಟು–ಎದಿರೇಟು ಜೋರಾಗಿದ್ದಾಗ, ಭಾರತದ ಯೋಧರು ಮಾಲ್ದೀವ್ಸ್ನಲ್ಲಿ ಇರುವಂತಿಲ್ಲ ಎಂದು ಮುಯಿಜು ತಾಕೀತು ಮಾಡಿದ್ದರು. ಆದರೆ ಈಗ ಭಾರತವು ಮಾಲ್ದೀವ್ಸ್ನಲ್ಲಿ ರಕ್ಷಣಾ ಸಹಕಾರ ಕಾರ್ಯಗಳನ್ನು ಹಾಗೂ ಅಲ್ಲಿನ ರಾಷ್ಟ್ರೀಯ ರಕ್ಷಣಾ ಪಡೆಗಳಿಗಾಗಿ ಬಂದರನ್ನುಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಲಿದೆ. ಅಲ್ಲದೆ, ರಕ್ಷಣಾ ವೇದಿಕೆಗಳನ್ನು ಭಾರತವು ಆ ದೇಶಕ್ಕೆ ಒದಗಿಸಲಿದೆ. ‘ರಕ್ಷಣಾ ವೇದಿಕೆಗಳನ್ನು’ ಎಂಬ ಪದಗಳು ಮಾಲ್ದೀವ್ಸ್ನ ಕರಾವಳಿ ಕಾವಲು ಪಡೆಗೆ ಹಡಗುಗಳನ್ನು ಒದಗಿಸುವುದು ಹಾಗೂ ರೇಡಾರ್ನಂತಹ ಕಣ್ಗಾವಲು ಉಪಕರಣಗಳನ್ನು ಒದಗಿಸುವುದನ್ನು ಒಳಗೊಳ್ಳಬಹುದು ಎಂದು ವ್ಯಾಖ್ಯಾನಿಸಲಾಗಿದೆ.

ಭಾರತವು ಆ ದೇಶದಲ್ಲಿ ಗೃಹ ಅಭಿವೃದ್ಧಿ ಸೇರಿದಂತೆ ಕೆಲವು ಮೂಲಸೌಕರ್ಯ ಯೋಜನೆಗಳನ್ನು ಮುಂದುವರಿಸಲಿದೆ. ಮುಯಿಜು ಭೇಟಿಯ ಸಂದರ್ಭದಲ್ಲಿ, ಮಾಲ್ದೀವ್ಸ್ನಲ್ಲಿ ರೂಪೇ ಕಾರ್ಡ್ಗಳ ಬಳಕೆಗೆ ಚಾಲನೆ ನೀಡಲಾಗಿದೆ. ಭಾರತದಿಂದ ಆ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮಾಲ್ದೀವ್ಸ್ನ ಕಾನ್ಸುಲೇಟ್ ಕಚೇರಿಯೊಂದು ಆರಂಭವಾಗಲಿದೆ. ಅದೇ ರೀತಿಯಲ್ಲಿ ಭಾರತವು ಮಾಲ್ದೀವ್ಸ್ನ ಎರಡನೆಯ ಅತಿದೊಡ್ಡ ನಗರವಾದ ‘ಅಡ್ಡು’ವಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲಿದೆ. ಮಾಲ್ದೀವ್ಸ್ ಜೊತೆಗಿನ ಸಂಬಂಧದಲ್ಲಿ ಆಗಿರುವ ಬದಲಾವಣೆಯು ಒಂದು ಸಂಗತಿಯನ್ನು ಸ್ಪಷ್ಟಪಡಿಸುತ್ತಿದೆ. ರಾಜತಾಂತ್ರಿಕರ ಮಟ್ಟದಲ್ಲಿ ನಡೆಯುವ ಕೆಲಸಗಳಿಗೆ ಪರ್ಯಾಯ ಇಲ್ಲ ಎಂಬುದು ಆ ಸಂಗತಿ. ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶಗಳನ್ನು ರವಾನಿಸುವುದು ಸರಿಯಾದ ಕ್ರಮ ಅಲ್ಲ. ಅಡೆತಡೆಗಳು ಹಲವು ರೂಪಗಳಲ್ಲಿ ಎದುರಾಗುತ್ತಲೇ ಇರುತ್ತವೆ. ಆದರೆ, ಸಣ್ಣದಾದರೂ ಬಹಳ ಮುಖ್ಯವಾದ ನೆರೆ ದೇಶದ ವಿಚಾರದಲ್ಲಿ ಮೂರನೆಯ ದೇಶವು ಪ್ರಭಾವ ಬೀರುವ, ಹಿಡಿತ ಸಾಧಿಸುವ ವಿಚಾರದಲ್ಲಿ ಕೇಂದ್ರವು ಜಾಗರೂಕವಾಗಿ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.