ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಎ ಚುಕ್ಕಾಣಿ ಉಷಾ ಕೈಗೆ: ಎದುರಿಗಿವೆ ಕಠಿಣ ಸವಾಲು

Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಭಾರತದ ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ಪಿ.ಟಿ. ಉಷಾ. ಅಥ್ಲೀಟ್‌ ಮತ್ತು ತರಬೇತುದಾರರಾಗಿ ಅವರ ಕೊಡುಗೆ ಅನನ್ಯವಾದುದು. ಈ ಕ್ರೀಡಾತಾರೆ ಈಗ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 95 ವರ್ಷಗಳ ಇತಿಹಾಸವಿರುವ ಸಂಸ್ಥೆಯ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದು. ಅದೂ ಅವಿರೋಧ ಆಯ್ಕೆ. ಇದರೊಂದಿಗೆ ಭಾರತದ ಕ್ರೀಡಾರಂಗದಲ್ಲಿ ನವಯುಗವೊಂದು ಆರಂಭವಾಗುವ ನಿರೀಕ್ಷೆ ಮೂಡಿದೆ. 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನ ಗೆದ್ದ ನಂತರ ಭವಿಷ್ಯದಲ್ಲಿ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಇನ್ನೂ ದೊಡ್ಡ ಸಾಧನೆಯ ಭರವಸೆ ಮೂಡಿದೆ. ಇದೇ ಹೊತ್ತಿನಲ್ಲಿ ಉಷಾ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಆಶಾದಾಯಕ ಬೆಳವಣಿಗೆ. ಐಒಎ ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಪದಾಧಿಕಾರಿಗಳು ಮತ್ತು ಸದಸ್ಯರಲ್ಲಿ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು ಎಂಬ ನಿಯಮ ಜಾರಿಯಾಗಿರುವುದರಿಂದ ಉಷಾ ಅವರಂತಹ ಮೇರು ಅಥ್ಲೀಟ್‌ಗೆ ಅಧ್ಯಕ್ಷೆಯಾಗುವ ಅವಕಾಶ ಸಿಕ್ಕಿದೆ. ಆದರೆ ಅವರ ಮುಂದೆ ಹತ್ತಾರು ಕಠಿಣ ಸವಾಲುಗಳ ಹಾದಿ ಇದೆ.

ಕೆಲವು ವರ್ಷಗಳಿಂದ ಪಟ್ಟಭದ್ರರಿಂದ ಆಗಿರುವ ಅವ್ಯವಸ್ಥೆಗಳನ್ನು ಸರಿಪಡಿಸುವುದರ ಜೊತೆಗೆ ಭಾರತದ ಕ್ರೀಡಾರಂಗದ ಭವಿಷ್ಯದ ಬೆಳವಣಿಗೆಗೆ ಅಡಿಪಾಯ ಹಾಕುವ ಗುರುತರ ಹೊಣೆ ಅವರ ಮೇಲೆ ಇದೆ. ಐಒಎ ಅಧೀನದಲ್ಲಿ ಬರುವ ಕೆಲವು ಕ್ರೀಡಾ ಫೆಡರೇಷನ್‌ಗಳು ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸುತ್ತಲೇ ಇವೆ. ಅಲ್ಲದೆ ಫೆಡರೇಷನ್‌ಗಳಲ್ಲಿ ಸ್ವಜನಪಕ್ಷಪಾತ,
ಭ್ರಷ್ಟಾಚಾರದೊಂದಿಗೆ ಪಟ್ಟಭದ್ರರ ಬಿಗಿಹಿಡಿತ ಇದೆ. ಅವುಗಳೆಲ್ಲವನ್ನೂ ಕಾನೂನಿನ ನೆರವಿನೊಂದಿಗೆ ಪರಿಹರಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಕ್ರೀಡೆಗಳಿಗೂ ಕೇಂದ್ರ ಸರ್ಕಾರ ಮತ್ತು ಖಾಸಗಿ ಪ್ರಾಯೋಜಕರಿಂದ ಹಣದ ಹರಿವು ಹೆಚ್ಚಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಆದರೆ ಇದು ಸಾಲದು. ಈಗಲೂ ತಂಡಗಳ ಆಯ್ಕೆ ಮತ್ತು ತರಬೇತಿ ವಿಷಯಗಳಲ್ಲಿ ತಾರತಮ್ಯಗಳಾಗುತ್ತಿರುವ ಆರೋಪಗಳಿವೆ. ಹೋದ ವರ್ಷ ‘ವಾಡಾ’ (ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ) ಪ್ರಕಟಿಸಿರುವ ನಿಯಮ ಉಲ್ಲಂಘನೆಯ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇದು ಕ್ರೀಡಾಕ್ಷೇತ್ರಕ್ಕೆ ಅತ್ಯಂತ ಕಳವಳಕಾರಿ ಮತ್ತು ಅವಮಾನಕರ ಸಂಗತಿ. ಉದ್ದೀಪನ ಮದ್ದು ಪರೀಕ್ಷೆಗೆ ಅತ್ಯಾಧುನಿಕ ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಕ್ರೀಡಾಪಟುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕ್ರೀಡಾ ಇಲಾಖೆ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಮೇಲೆ ಒತ್ತಡ ಹಾಕುವ ಕೆಲಸ ಉಷಾ ಅವರಿಂದ ಆಗಬೇಕಿದೆ. ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಲಿಂಗ ತಾರತಮ್ಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಇವುಗಳನ್ನು ತೊಡೆದುಹಾಕುವ ಸವಾಲೂ ಅವರ ಮುಂದಿದೆ.

ಐಒಎಯು ತನ್ನ ಅಧೀನದಲ್ಲಿರುವ ರಾಜ್ಯ ಒಲಿಂಪಿಕ್ ಸಂಸ್ಥೆಗಳಿಗೂ ಕಾಯಕಲ್ಪ ನೀಡುವ ಅಗತ್ಯವಿದೆ. ಅಥ್ಲೆಟಿಕ್ಸ್‌ನ ವಿವಿಧ ವಿಭಾಗಗಳಲ್ಲಿ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳುವ ಬಹಳಷ್ಟು ಕ್ರೀಡಾಪಟುಗಳು ಗ್ರಾಮೀಣ ಮತ್ತು ಬಡ ಕುಟುಂಬಗಳಿಂದಲೇ ಬಂದವರಾಗಿರುತ್ತಾರೆ. ಕ್ರಿಕೆಟ್ ಆಕರ್ಷಣೆಯೇ ಹೆಚ್ಚಿರುವ ಈ ದೇಶದಲ್ಲಿ ಮಕ್ಕಳನ್ನು ಅಥ್ಲೆಟಿಕ್ಸ್‌ನತ್ತ ಸೆಳೆಯುವಂತಹ ವ್ಯವಸ್ಥೆಯೊಂದು ರೂಪುಗೊಳ್ಳಬೇಕಾದ ಅಗತ್ಯವಿದೆ. ಟ್ರ್ಯಾಕ್‌ ಮತ್ತು ಫೀಲ್ಡ್‌ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳಿಗೆ ವೃತ್ತಿಪರ ಭವಿಷ್ಯ ಲಭಿಸುವಂತಾಗಬೇಕು. ಆಗ ಮಾತ್ರ ಅಮೆರಿಕ, ಚೀನಾ ಮತ್ತು ಯುರೋಪ್‌ ದೇಶಗಳ ಮಾದರಿಯಲ್ಲಿ ಭಾರತದ ಕ್ರೀಡಾ ಕ್ಷೇತ್ರ ಬೆಳೆಯಲು ಸಾಧ್ಯ. ಬಡ ಕುಟುಂಬದಿಂದಲೇ ಬಂದ ಉಷಾ ಅವರು 1984ರ ಲಾಸ್‌ ಏಂಜಲೀಸ್ ಒಲಿಂಪಿಕ್‌ ಕೂಟದ 400 ಮೀಟರ್ಸ್ ಹರ್ಡಲ್ಸ್‌ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿ ದಂತಕಥೆಯಾದರು. ಆ ಕಾಲದಲ್ಲಿ ಇದ್ದ ಕನಿಷ್ಠ ಸೌಲಭ್ಯಗಳು ಮತ್ತು ಅವಕಾಶಗಳಲ್ಲಿಯೇ ಅಂತಹದೊಂದು ಸಾಧನೆ ಮಾಡಿದ್ದು ಅವರ ಹೆಗ್ಗಳಿಕೆ. ಅಂದು ಅವರು ಕೂದಲೆಳೆಯ ಅಂತರದಲ್ಲಿ ಪದಕವಂಚಿತರಾಗಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಅಂತಹ ಹತ್ತಾರು ಪದಕಗಳನ್ನು ಜಯಿಸಿ ಬರುವ ಪ್ರತಿಭಾವಂತರನ್ನು ಸಿದ್ಧಗೊಳಿಸುವ ಅವಕಾಶವಿರುವ ಅಧಿಕಾರ ಅವರಿಗೆ ಲಭಿಸಿದ್ದು ಅಪಾರ ನಿರೀಕ್ಷೆ ಮೂಡಿಸಿದೆ. ಅವರಿಗೆ ಮಹಾಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ಉಳಿದ ಪದಾಧಿಕಾರಿಗಳು ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT