ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹಣದುಬ್ಬರ ನಿಯಂತ್ರಿಸದೇ ಇದ್ದರೆ ಆರ್ಥಿಕ ಚೇತರಿಕೆಗೆ ಪೆಟ್ಟು

Last Updated 19 ಏಪ್ರಿಲ್ 2022, 19:47 IST
ಅಕ್ಷರ ಗಾತ್ರ

ಮಾರ್ಚ್‌ ತಿಂಗಳಿನಲ್ಲಿ ದೇಶದಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇಕಡ 14.55ರಷ್ಟು ಆಗಿದೆ. ಹಣದುಬ್ಬರ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ ಪಾಲಿಗೆ ಇದು ಕಳವಳಕಾರಿ. ಇದರ ಜೊತೆಯಲ್ಲೇ ಗಮನಿಸಬೇಕಿರುವ ಇನ್ನೊಂದು ಅಂಶ, 2021–22ನೇ ಹಣಕಾಸು ವರ್ಷದ ಅಷ್ಟೂ ತಿಂಗಳುಗಳಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇಕಡ 10ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದುದು.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಂತ್ರಣದಲ್ಲಿ ಇರಿಸುವ ಗುರಿಯನ್ನು ಇಟ್ಟುಕೊಂಡಿರುವುದು ಚಿಲ್ಲರೆ ಹಣದುಬ್ಬರ ದರವನ್ನು; ಸಗಟು ಹಣದುಬ್ಬರವನ್ನು ಅಲ್ಲ ಎಂಬುದು ನಿಜ. ಆದರೆ, ಸಗಟು ಹಣದುಬ್ಬರದ ಪ್ರಮಾಣದಲ್ಲಿ ಆಗುವ ಏರಿಕೆಯು ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿಯೇ ಇದೆ.

ಚಿಲ್ಲರೆ ಹಣದುಬ್ಬರ ದರವು ಮೂರು ತಿಂಗಳ ಹಿಂದೆಯೇ ಶೇಕಡ 6ರ ಗಡಿ ದಾಟಿದೆ. ಆರ್‌ಬಿಐ ಚಿಲ್ಲರೆ ಹಣದುಬ್ಬರ ದರವನ್ನು ಶೇ 4ರ ಮಟ್ಟದಲ್ಲಿ ನಿಯಂತ್ರಿಸಬೇಕಿತ್ತು. ಅದಕ್ಕಿಂತ ಶೇ 2ರಷ್ಟು ಅದು ಹೆಚ್ಚಾಗಲು ಅವಕಾಶ ಇದೆ. ಆದರೆ, ಅದು ಈಗಾಗಲೇ ನಿಯಂತ್ರಣ ಮೀರಿ ಹೋಗಿದೆ. ಹೊಂದಾಣಿಕೆಯ ಹಣಕಾಸಿನ ನೀತಿಯಿಂದ ತುಸುವಾದರೂ ಸರಿದು, ವ್ಯವಸ್ಥೆಯಲ್ಲಿನ ನಗದು ಹರಿವಿನ ಮೇಲೆ ನಿಯಂತ್ರಣ ತರಬೇಕಾದ ಅನಿವಾರ್ಯವನ್ನು ಚಿಲ್ಲರೆ ಹಣದುಬ್ಬರ ದರದ ಏರಿಕೆಯು ಈಗಾಗಲೇ ಹೇಳಿಯಾಗಿದೆ.

ಸಗಟು ಹಣದುಬ್ಬರದ ಪ್ರಮಾಣವು ಮೊದಲಿಗೆ ಅನುಭವಕ್ಕೆ ಬರುವುದು ತಯಾರಿಕಾ ವಲಯದಲ್ಲಿ ತೊಡಗಿಸಿಕೊಂಡವರಿಗೆ. ಅವರು ತಮ್ಮ ಅಗತ್ಯದ ವಸ್ತುಗಳ ಬೆಲೆಯಲ್ಲಿ ಆಗುವ ಹೆಚ್ಚಳವನ್ನು ಎಲ್ಲ ಬಾರಿಯೂ ಗ್ರಾಹಕರಿಗೆ ವರ್ಗಾವಣೆ ಮಾಡುವುದಿಲ್ಲ. ಸಗಟು ಹಣದುಬ್ಬರವು ಮುಂದೆ ಇಳಿಕೆಯಾಗಬಹುದು ಎಂದೂ ಅವರು ಭಾವಿಸುವುದಿದೆ. ಆದರೆ, ರಷ್ಯಾ–ಉಕ್ರೇನ್ ಯುದ್ಧದಿಂದ ಪೂರೈಕೆ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆಗಳು, ಕೆಲವೆಡೆ ಮತ್ತೆ ಹೆಚ್ಚಾಗುತ್ತಿರುವ ಕೋವಿಡ್‌–ಲಾಕ್‌ಡೌನ್‌ ತಲೆಬಿಸಿ, ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ ಇನ್ನೂ 100 ಡಾಲರ್‌ಗಿಂತ ಹೆಚ್ಚಾಗಿಯೇ ಇರುವುದು ಸಗಟು ಹಣದುಬ್ಬರ ಪ್ರಮಾಣವನ್ನು ಹೆಚ್ಚಿನ ಮಟ್ಟದಲ್ಲಿಯೇ ಇರಿಸಬಹುದು. ಆಗ, ತಯಾರಿಕಾ ವಲಯವು ಅಗತ್ಯ ವಸ್ತುಗಳ ಬೆಲೆಯ ಏರಿಕೆಯನ್ನು ನಿಭಾಯಿಸಲಾಗದೆ, ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ತೀರ್ಮಾನ ಕೈಗೊಂಡರೆ, ಚಿಲ್ಲರೆ ಹಣದುಬ್ಬರವು ಮತ್ತಷ್ಟು ಜಾಸ್ತಿ ಆಗಬಹುದು.

ಲಾಕ್‌ಡೌನ್‌ಗಳು, ಕೋವಿಡ್‌ನ ಅಲೆಗಳಿಂದಾಗಿ ಬಸವಳಿದುಹೋಗಿದ್ದ ಅರ್ಥ ವ್ಯವಸ್ಥೆಯು ಈಗ ಚೇತರಿಕೆಯ ಹಾದಿಯಲ್ಲಿ ಇದೆ. ಈ ಮಾತಿಗೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾಗುತ್ತಿರುವ ವರಮಾನ, ತಯಾರಿಕೆ ಮತ್ತು ಸೇವಾ ವಲಯದಲ್ಲಿನ ಚಟುವಟಿಕೆಗಳ ಹೆಚ್ಚಳ ಸೇರಿದಂತೆ ಕೆಲವು ಸೂಚಕಗಳನ್ನು ಆಧಾರವಾಗಿ ಇರಿಸಿಕೊಳ್ಳಬಹುದು. ಆದರೆ, ಸಗಟು ಹಣದುಬ್ಬರವು ಕಡಿಮೆ ಆಗದಿದ್ದರೆ, ಕೈಗಾರಿಕೆಗಳು ಮಾಡಬೇಕಿರುವ ವೆಚ್ಚ ಜಾಸ್ತಿ ಆಗಿ, ಅವುಗಳ ಲಾಭಾಂಶದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಕೈಗಾರಿಕೆಗಳು ತಮ್ಮ ಪಾಲಿನ ವೆಚ್ಚ ಹೆಚ್ಚಳವನ್ನು ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾವಣೆ ಮಾಡಿದರೆ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕಬಹುದು. ಈ ಸನ್ನಿವೇಶವು ಆರ್ಥಿಕತೆಯ‌ಲ್ಲಿ ಕಂಡುಬಂದಿರುವ ಚೇತರಿಕೆಗೆ ಪೆಟ್ಟು ಕೊಡಬಹುದು. ಕೈಗಾರಿಕೆಗಳ ವೆಚ್ಚ ಹೆಚ್ಚಳ ಮತ್ತು ಲಾಭಾಂಶದಲ್ಲಿ ಕುಸಿತವು ಹೂಡಿಕೆದಾರರು ಹಣ ತೊಡಗಿಸಲು ನಿರುತ್ತೇಜಕ ಅಂಶವಾಗಿ ಪರಿಣಮಿಸಬಹುದು. ಈ ಎಲ್ಲ ಕಾರಣಗಳಿಂದಾಗಿ ಹಣದುಬ್ಬರ ದರವನ್ನು – ಚಿಲ್ಲರೆ ಹಣದುಬ್ಬರ ಹಾಗೂ ಸಗಟು ಹಣದುಬ್ಬರ – ಆದಷ್ಟು ಬೇಗ ಕಡಿಮೆ ಮಾಡಲೇಬೇಕಾದ ಸಂದರ್ಭ ಎದುರಾಗಿದೆ ಎನ್ನುವುದನ್ನು ಆರ್‌ಬಿಐ ಮತ್ತು ಸರ್ಕಾರಗಳು ಅರಿತುಕೊಳ್ಳಬೇಕು. ಆರ್ಥಿಕ ಚಟುವಟಿಕೆಗಳ ಪುನಶ್ಚೇತನದ ಉದ್ದೇಶದಿಂದ ಬಡ್ಡಿ ದರ ಕಡಿಮೆ ಇರಿಸಲಾಗಿದೆಯಾದರೂ, ಹಣದುಬ್ಬರ ಹೆಚ್ಚಳವಾದಾಗ ಆರ್ಥಿಕ ಚೇತರಿಕೆಯು ಹೆಚ್ಚಿನ ಅವಧಿಗೆ ಸ್ಥಿರವಾಗಿ ನಿಲ್ಲುವುದಿಲ್ಲ.

ಆರ್‌ಬಿಐ ಈಚೆಗೆ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಹೇಳಿರುವ ಮಾತುಗಳನ್ನು ಗಮನಿಸಿದರೆ, ರೆ‍‍ಪೊ ದರ ಹೆಚ್ಚಳವಾಗುವ ಕಾಲ ಹತ್ತಿರವಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ರೆಪೊ ದರ ಹೆಚ್ಚಳವಾದ ನಂತರದಲ್ಲಿ, ಬ್ಯಾಂಕ್‌ನಿಂದ ಸಿಗುವ ಸಾಲದ ಮೇಲಿನ ಬಡ್ಡಿ ಹಾಗೂ ಬ್ಯಾಂಕ್‌ನಲ್ಲಿನ ಠೇವಣಿ ಹಣಕ್ಕೆ ಸಿಗುವ ಬಡ್ಡಿ ಕೂಡ ಜಾಸ್ತಿ ಆಗಬಹುದು. ಸಾಲದ ಬಡ್ಡಿ ದರವನ್ನು ಎಸ್‌ಬಿಐ ಮತ್ತು ಬ್ಯಾಂಕ್‌ ಆಫ್ ಬರೋಡ ಈಗಾಗಲೇ ಹೆಚ್ಚಿಸಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಸಣ್ಣ ಹೂಡಿಕೆದಾರರ ಪಾಲಿಗೆ ಸುರಕ್ಷಿತ ಯೋಜನೆಗಳಾಗಿರುವ ಪಿಪಿಎಫ್, ರಾಷ್ಟ್ರೀಯ ಉಳಿತಾಯ‍ಪತ್ರದ (ಎನ್‌ಎಸ್‌ಸಿ) ಮೇಲೆ ಸಿಗುವ ಬಡ್ಡಿ ದರವನ್ನು ಹೆಚ್ಚಿಸುವತ್ತಲೂ ಕೇಂದ್ರ ಸರ್ಕಾರವು ಮುಂದಡಿ ಇರಿಸಬೇಕು. ಈ ಯೋಜನೆಗಳ ಅಡಿ ಈಗ ಸಿಗುತ್ತಿರುವ ಬಡ್ಡಿ ದರವು ಉಳಿತಾಯವನ್ನು ಉತ್ತೇಜಿಸುವಂತೆ ಇಲ್ಲ. ಅಲ್ಲದೆ, ಬಡ್ಡಿ ದರವನ್ನೇ ನೆಚ್ಚಿಕೊಂಡು ಜೀವನ ಸಾಗಿಸುವ ವಯೋವೃದ್ಧರ ಖರ್ಚುಗಳಲ್ಲಿನ ಏರಿಕೆಯನ್ನು ನಿಭಾಯಿಸುವಂತೆಯೂ ಇಲ್ಲ. ಹಣದುಬ್ಬರ ನಿಯಂತ್ರಣದ ಜೊತೆಯಲ್ಲೇ ಈ ಆಯಾಮಗಳತ್ತಲೂ ನೀತಿ ನಿರೂಪಕರು ಗಮನ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT