ಸಂಘರ್ಷಕ್ಕೆ ಗುರಿಯಾಗಿರುವ ಮಣಿಪುರಕ್ಕೆ ಪ್ರಧಾನಿ ಮೋದಿ ಅವರು ನೀಡಿರುವ ಭೇಟಿಯಿಂದ ಹೆಚ್ಚಿನ ಉಪಯೋಗ ಆಗಿಲ್ಲ. ಶಾಂತಿ ಸ್ಥಾಪನೆಯ ಪ್ರಕ್ರಿಯೆಯಲ್ಲೂ ಪ್ರಗತಿಯಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಶನಿವಾರ ನೀಡಿದ ಭೇಟಿಯು ಬಹಳ ತಡವಾಯಿತು. ರಾಜ್ಯವು ಎರಡು ವರ್ಷಗಳಿಂದ ಸಂಘರ್ಷಕ್ಕೆ ತುತ್ತಾಗಿದೆ, ಅಲ್ಲಿ ಅಶಾಂತಿ ಮನೆ ಮಾಡಿದೆ, ಜನರ ನಡುವೆ ನಂಬಿಕೆ ಮರೆಯಾಗಿದೆ. ಇವೆಲ್ಲವುಗಳನ್ನೂ ಸರಿಪಡಿಸಲು ಮೋದಿ ಅವರ ಭೇಟಿಯಿಂದ ಹೆಚ್ಚಿನ ನೆರವು ದೊರೆತಿಲ್ಲ. ಪ್ರಧಾನಿಯೊಬ್ಬರ ಭೇಟಿಯು ಸಾಮಾನ್ಯವಾಗಿ ಯಾವುದೇ ಪರಿಹಾರ ಒದಗಿಸುವುದಿಲ್ಲ. ಆದರೆ, ಮೋದಿ ಅವರ ಈ ಭೇಟಿಯು ಪರಿಹಾರದ ಸಂದೇಶವನ್ನೂ ರವಾನಿಸಲಿಲ್ಲ. ರಾಜ್ಯದಲ್ಲಿ ಸಂಘರ್ಷ ಶುರುವಾದ 864 ದಿನಗಳ ನಂತರ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು. 2023ರ ಮೇ ತಿಂಗಳಲ್ಲಿ ಅಲ್ಲಿ ಶಾಂತಿಗೆ ಭಂಗ ಉಂಟಾದ ನಂತರದಲ್ಲಿ ಸುಮಾರು 260 ಜನರ ಹತ್ಯೆಯಾಗಿದೆ, 60 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಮನೆಗಳಿಂದ ಬೇರೆಡೆ ತೆರಳಿದ್ದಾರೆ. ಹೀಗಿರುವಾಗ ಇಷ್ಟು ದಿನ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡದೆ ಇರಲು ಕಾರಣ ಏನು ಎಂಬುದನ್ನು ತಿಳಿಸಿಲ್ಲ. ಮೋದಿ ಅವರು ತಮ್ಮ ಭಾಷಣಗಳಲ್ಲಿ ಮಣಿಪುರದ ಸ್ಥಿತಿಯ ಬಗ್ಗೆ ಉಲ್ಲೇಖ ಮಾಡಿರುವುದು ಕೂಡ ಕಡಿಮೆ. ರಾಜ್ಯದಲ್ಲಿ ಧ್ರುವೀಕೃತಗೊಂಡಿರುವ ಎರಡು ಸಮುದಾಯಗಳ ನಡುವೆ ವಿಶ್ವಾಸದ ಸೇತುವೆಯೊಂದನ್ನು ಕಟ್ಟುವ ಕುರಿತು ಅವರು ಮಾತನಾಡಿದ್ದಾರೆ. ಭವಿಷ್ಯದಲ್ಲಿ ಭರವಸೆಯ ಹೊಸ ಅರುಣೋದಯವೊಂದು ಆಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿ ದ್ದಾರೆ. ರಾಜ್ಯದ ಭವಿಷ್ಯಕ್ಕಾಗಿ ಹೊಸ ದಾರಿಯೊಂದನ್ನು ತೋರಿಸುವ ಯತ್ನವನ್ನು ಅವರು ನಡೆಸಿದ್ದಾರಾದರೂ, ಆ ಹಾದಿಯು ಸ್ಪಷ್ಟವಾಗಿಲ್ಲ. ಹಾದಿ ಯಲ್ಲಿ ಏನೆಲ್ಲಾ ಇದೆ ಎಂಬುದೂ ಗೊತ್ತಾಗುವಂತಿಲ್ಲ.

ಕುಕಿ ಸಮುದಾಯದ ಪ್ರಾಬಲ್ಯ ಇರುವ, ಬೆಟ್ಟಗುಡ್ಡಗಳಿಂದ ಆವೃತ ವಾಗಿರುವ ಚುರಾಚಾಂದಪುರದಲ್ಲಿ ಪ್ರಧಾನಿಯವರು ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೆಯೇ ಮೈತೇಯಿ ಸಮುದಾಯದ ಪ್ರಾಬಲ್ಯವಿರುವ, ಬಯಲು ಪ್ರದೇಶವಾದ ಇಂಫಾಲ ದಲ್ಲಿಯೂ ಅವರು ಮಾತನಾಡಿದರು. ಶಾಂತಿಯೊಂದೇ ಮುಂದೆ ಸಾಗಲು ಇರುವ ಮಾರ್ಗ, ರಾಜ್ಯದಲ್ಲಿ ಶಾಂತಿ ನೆಲಸುವಂತೆ ಮಾಡಲು ತಮ್ಮ ನೇತೃತ್ವದ ಸರ್ಕಾರವು ಕೆಲಸ ಮುಂದುವರಿಸಲಿದೆ ಎಂದು ಹೇಳಿದರು. ಬೆಟ್ಟ-ಗುಡ್ಡಗಳು ಇರುವ ಜಿಲ್ಲೆಗಳಿಗೆ ಸಂಬಂಧಿಸಿದ ₹7,300 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅವರು ಉದ್ಘಾಟಿಸಿದರು. ಇಂಫಾಲದಲ್ಲಿ ಮಾಡಿದ ಭಾಷಣದಲ್ಲಿ ಅವರು, ರಾಜ್ಯದಲ್ಲಿ ನಡೆದ ಹಿಂಸಾಚಾರಗಳು ದುರದೃಷ್ಟಕರ ಎಂದರು. ಅಲ್ಲಿ ಅವರು ₹1,200 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು. ವಾಸ್ತವದಲ್ಲಿ, ಮಣಿಪುರದಲ್ಲಿ ನಡೆದ ಗಲಭೆಯು ಅಭಿವೃದ್ಧಿಗೆ ಸಂಬಂಧಿಸಿದ್ದಲ್ಲ. ಸಮಸ್ಯೆಯು ಶುರುವಾಗಿದ್ದು ಮೈತೇಯಿ ಸಮುದಾಯವು ಮೀಸಲಾತಿಯನ್ನು ಕೇಳುವುದರೊಂದಿಗೆ. ಹೀಗಾಗಿ, ಅಭಿವೃದ್ಧಿಯ ವಿಚಾರವು ಅಲ್ಲಿನ ಗಲಭೆಗಳ ಹಿಂದೆ ಪರೋಕ್ಷವಾಗಿ ಪ್ರಭಾವ ಉಂಟುಮಾಡಿರಬಹುದು. ಮೈತೇಯಿ ಸಮುದಾಯದವರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಿ ಎಂದು ನ್ಯಾಯಾಲಯವೊಂದು ಹೇಳಿದ್ದನ್ನು ವಿರೋಧಿಸಿ ಕುಕಿ ಸಮುದಾಯದವರು ಪ್ರತಿಭಟನೆ ಆರಂಭಿಸಿದಾಗ ಈಗಿನ ಬಿಕ್ಕಟ್ಟು, ಹಿಂಸಾಚಾರ ಆರಂಭವಾಯಿತು. ಆದರೆ, ಈಗ ಸಮಸ್ಯೆಯು ಇತರ ಹಲವು ಆಯಾಮಗಳನ್ನೂ ಒಳಗೊಂಡಿದೆ. ಅಭಿವೃದ್ಧಿ ಯೋಜನೆಗಳನ್ನು ತೋರಿಸಿ ಸಮಸ್ಯೆಯನ್ನು ಪರಿಹರಿಸುವುದು ಈಗ ಕಷ್ಟದ ಕೆಲಸ.

ಬಂಡುಕೋರ ಗುಂಪುಗಳ ಜೊತೆಗಿನ ‘ಕಾರ್ಯಾಚರಣೆಯ ಅಮಾನತು’ (ಎಸ್ಒಒ) ಕ್ರಮಕ್ಕೆ ಮತ್ತೆ ಜೀವ ನೀಡುವುದು, ‘ರಾಷ್ಟ್ರೀಯ ಹೆದ್ದಾರಿ–2’ರಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಸರ್ಕಾರ ಘೋಷಿಸಿದ್ದ ಎರಡು ಕ್ರಮಗಳಾಗಿದ್ದವು. ಆದರೆ ಇವುಗಳಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗದ ಕಾರಣಕ್ಕೆ ಎರಡೂ ಕ್ರಮಗಳು ಮುರಿದುಬಿದ್ದವು. ಶಾಂತಿ ಪ್ರಕ್ರಿಯೆಯು ಪ್ರಗತಿ ಕಾಣಬೇಕು ಎಂದಾದರೆ ಸಂಬಂಧಪಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಪ್ರಜಾತಾಂತ್ರಿಕ ಸಂವಾದದ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಕೆಲಸ ಆಗಬೇಕು. ಇದು ಮಣಿಪುರದಲ್ಲಿ ಆಗಿಲ್ಲ. ಪ್ರಧಾನಿಯವರ ಭೇಟಿಯು ಶಾಂತಿ ಪ್ರಕ್ರಿಯೆಯನ್ನು ಮುಂದಕ್ಕೆ ಒಯ್ಯುವ ಕೆಲಸ ಮಾಡಿಲ್ಲ ಎಂದು ರಾಜ್ಯದ ಎರಡೂ ಕಡೆಗಳ ಜನರಿಂದ ಅತೃಪ್ತಿ ವ್ಯಕ್ತವಾಗಿದೆ. ಮಣಿಪುರದ ಎರಡೂ ಗುಂಪುಗಳು ತಮ್ಮ ಹಟಮಾರಿ ಧೋರಣೆಯನ್ನು ಮುಂದುವರಿಸಿವೆ. ಶಾಂತಿ ಸ್ಥಾಪನೆಯ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ ಎಂಬುದನ್ನು ಇದು ತೋರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.