ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮಹತ್ವಾಕಾಂಕ್ಷಿ ‘ಮಿಷನ್ ಮೌಸಮ್’ ಅತಿಯಾದ ಉತ್ಸಾಹ ಬೇಡ

Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಕೇಂದ್ರ ಸಚಿವ ಸಂಪುಟವು ಈಚೆಗೆ ಅನುಮೋದನೆ ನೀಡಿರುವ ‘ಮಿಷನ್ ಮೌಸಮ್’ ಹೆಸರಿನ ಯೋಜನೆಯು ಹವಾಮಾನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ದಿಕ್ಕಿನಲ್ಲಿ ಬಹಳ ಮುಖ್ಯವಾದ ಉಪಕ್ರಮದಂತೆ ಕಾಣುತ್ತಿದೆ. ಅದರಲ್ಲೂ, ಹವಾಮಾನ ಬದಲಾವಣೆಯ ವಿಷಯ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಈ ಉಪಕ್ರಮಕ್ಕೆ ಕೇಂದ್ರವು ಒಪ್ಪಿಗೆ ನೀಡಿದೆ. ಈ ಯೋಜನೆಯು ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ದೇಶಕ್ಕೆ ನೆರವು ನೀಡಲಿದೆ. ₹2,000 ಕೋಟಿ ಮೊತ್ತದ ಈ ಯೋಜನೆಯು ಹವಾಮಾನ ಮುನ್ಸೂಚನೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಹಾಗೂ ಸಾಮರ್ಥ್ಯವನ್ನು ಉತ್ತಮಪಡಿ ಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ, ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ಹೆಚ್ಚು ನಿಖರವಾಗಿಸುವ, ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿದ ಅಲ್ಪಾವಧಿ ಹಾಗೂ ಮಧ್ಯಮಾವಧಿ ಮುನ್ಸೂಚನೆಗಳನ್ನು ಇನ್ನಷ್ಟು ಹೆಚ್ಚು ವಿಶ್ವಾಸಾರ್ಹ ಆಗಿಸುವ ಉದ್ದೇಶ ಕೂಡ ಇದಕ್ಕೆ ಇದೆ. ವಾತಾವರಣದ ಸ್ಥಿತಿಯಲ್ಲಿ ಕೃತಕವಾಗಿ ಪರಿವರ್ತನೆ ತರುವ ಮಾದರಿಗಳ ಕುರಿತಾಗಿ ಸಂಶೋಧನೆ ನಡೆಸುವ ಉದ್ದೇಶ ಕೂಡ ಈ ಯೋಜನೆಗೆ ಇದೆ. ಈಗ ಬಳಕೆಯಲ್ಲಿ ಇರುವ ಹವಾಮಾನ ಕಣ್ಗಾವಲು ಜಾಲವನ್ನು ಸೂಪರ್‌ ಕಂಪ್ಯೂಟರ್‌ಗಳು, ರೇಡಿಯೊ ಮೀಟರ್‌ಗಳು ಹಾಗೂ ಇತರ ಆಧುನಿಕ ಪರಿಕರಗಳನ್ನು ಬಳಸಿ ಇನ್ನಷ್ಟು ಬಲಪಡಿಸಲಾಗುತ್ತದೆ. ಮುಂಗಾರಿನ ಕುರಿತಾಗಿ ನಾವು ಹೊಂದಿರುವ ತಿಳಿವಳಿಕೆಯನ್ನು ಉತ್ತಮ ಪಡಿಸುವ ವಿಚಾರವಾಗಿ ‘ರಾಷ್ಟ್ರೀಯ ಹವಾಮಾನ ಬದಲಾವಣೆ ಮಿಷನ್– 2012’ ಬಹಳಷ್ಟು ಕೆಲಸಗಳನ್ನು ಮಾಡಿದೆ. ದಿನನಿತ್ಯದ ಹಾಗೂ ನಿರ್ದಿಷ್ಟ ಅವಧಿಯ ಹವಾಮಾನ ಮುನ್ಸೂಚನೆಗೆ ಅಗತ್ಯವಿರುವ ಹವಾಮಾನ ಮಾದರಿಗಳನ್ನು ಅದು ಅಭಿವೃದ್ಧಿ ಪಡಿಸಿದೆ. ಬಿಸಿಗಾಳಿಯ ಮುನ್ಸೂಚನೆಗೆ ಕೂಡ ಇದನ್ನು ಬಳಸಲಾಗಿದೆ. ಆದರೆ ಈ ಮುನ್ಸೂಚನೆಗಳ
ವಿಶ್ವಾಸಾರ್ಹತೆಯ ವಿಚಾರವಾಗಿ ಪ್ರಶ್ನೆಗಳು ಇವೆ.

ಮಿಷನ್ ಮೌಸಮ್‌ ಇನ್ನಷ್ಟು ವ್ಯಾಪಕವಾದ ಹಾಗೂ ದೊಡ್ಡದಾದ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ.
ಅತ್ಯಾಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡು, ಹವಾಮಾನ ಬದಲಾವಣೆ
ಯನ್ನು ಅಧ್ಯಯನ ಮಾಡುವ ಉದ್ದೇಶ ಈ ಯೋಜನೆಗೆ ಇದೆ. ಅಧ್ಯಯನದ ಮೂಲಕ ಕಂಡು
ಕೊಳ್ಳುವ ಅಂಶಗಳನ್ನು ಕೃಷಿ, ವಿಪತ್ತು ನಿರ್ವಹಣೆ, ರಕ್ಷಣೆ, ವಿಮಾನಯಾನ, ಇಂಧನ, ಜಲಸಂಪನ್ಮೂಲ
ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಉದ್ದೇಶ ಇದೆ. ಹವಾಮಾನ ಮನ್ಸೂಚನೆಯ ಆಚೆಗೂ ಕೈಚಾಚಿ, ನಿರ್ದಿಷ್ಟ ಪ್ರದೇಶದ ಹವಾಮಾನದಲ್ಲಿ ಕೃತಕವಾಗಿ ಬದಲಾವಣೆಗಳನ್ನು ತರುವ ಸಾಧ್ಯತೆಗಳ ಬಗ್ಗೆಯೂ ಇದು ಗಮನಹರಿಸುವ ಉದ್ದೇಶ ಹೊಂದಿದೆ. ಮಳೆ, ಹೊಂಜು, ಸಿಡಿಲಿನಂತಹ ನೈಸರ್ಗಿಕ ಆಗುಹೋಗುಗಳನ್ನು ಕೃತಕವಾಗಿ ಕಡಿಮೆ ಮಾಡುವ ಅಥವಾ ಅವುಗಳಲ್ಲಿ ಬದಲಾವಣೆ ತರುವುದಕ್ಕೆ ನೆರವು ನೀಡುವ ಪ್ರಯೋಗಾಲಯವೊಂದನ್ನು ಪುಣೆಯಲ್ಲಿ ಆರಂಭಿಸುವ ಉದ್ದೇಶವು ಭಾರತೀಯ ಹವಾಮಾನ ಇಲಾಖೆಗೆ ಇದೆ. ಇದು ಮಳೆಯ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಹಾಗೂ ಮಿಂಚು–ಸಿಡಿಲಿನ ಪ್ರಮಾಣವನ್ನು ನಿಯಂತ್ರಿಸು ವಲ್ಲಿ ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈಚಿನ ವರ್ಷಗಳಲ್ಲಿ ದೇಶದಲ್ಲಿ ಸಿಡಿಲು ಬಡಿಯುವುದು ಹಾಗೂ ಅದಕ್ಕೆ ಜನ ಬಲಿಯಾಗುವುದು ಹೆಚ್ಚಾಗುತ್ತಿದೆ ಎಂಬುದನ್ನು ಗಮನಿಸಬೇಕು.

ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2026ರ ಮಾರ್ಚ್‌ವರೆಗೆ ಜಾರಿಯಲ್ಲಿ ಇರಲಿರುವ ಮೊದಲ ಹಂತವು ಹವಾಮಾನ ನಿಗಾ ಜಾಲವನ್ನು ವಿಸ್ತರಿಸುವುದಕ್ಕೆ ಗಮನ ನೀಡಲಿದೆ. ಎರಡನೆಯ ಹಂತವು ಹವಾಮಾನ ನಿಗಾ ಸಾಮರ್ಥ್ಯವನ್ನು ಹೆಚ್ಚು ಮಾಡಲು ಉಪಗ್ರಹಗಳನ್ನು ನಿಯೋಜಿಸುವುದನ್ನು ಒಳಗೊಂಡಿದೆ. ಐದು ವರ್ಷಗಳ ಅವಧಿಯಲ್ಲಿ ಹವಾಮಾನವನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಗಮನ ನೀಡಲಾಗುತ್ತದೆ. ಆ ಮೂಲಕ, ಹವಾಮಾನವನ್ನು ಹೆಚ್ಚು ಚೆನ್ನಾಗಿ ನಿಭಾಯಿಸಲು ಹವಾಮಾನ ಇಲಾಖೆಗೆ ಹಾಗೂ ವೈಜ್ಞಾನಿಕ ಸಂಸ್ಥೆಗಳಿಗೆ ಅಗತ್ಯ ಪರಿಕರಗಳನ್ನು ಕಂಡುಕೊಳ್ಳುವುದಕ್ಕೆ ನೆರವು ಒದಗಿಸಲಾಗುತ್ತದೆ. ಇವೆಲ್ಲ ಸುಲಭವಾಗಿ ಆಗುವ ಕೆಲಸಗಳಲ್ಲ. ಏಕೆಂದರೆ ಹವಾಮಾನ ಎಂಬುದು ಬಹಳ ಸಂಕೀರ್ಣವಾದುದು. ದೇಶದ ಹವಾಮಾನದಲ್ಲಿ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಅನುಗುಣವಾಗಿ ಬಹಳಷ್ಟು ವ್ಯತ್ಯಾಸಗಳಿವೆ. ಹವಾಮಾನವು ಬಹಳ ಸಂಕೀರ್ಣವಾಗಿರುವ ಕಾರಣದಿಂದಾಗಿ, ಅದು ಬದಲಾಗುತ್ತ ಇರುವುದರಿಂದಾಗಿ ಅದನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯೂ ಒಂದೆಡೆ ಇದೆ. ಅರ್ಥ ಮಾಡಿಕೊಳ್ಳುವುದು ಸಾಧ್ಯವಾದಲ್ಲಿ, ಅದು ಹವಾಮಾನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆಯೇ, ಅಂತಹ ನಿಯಂತ್ರಣವು ಅಪೇಕ್ಷಣೀಯವೇ, ಅದರಿಂದ ಕೆಟ್ಟ ಪರಿಣಾಮಗಳು ಇರುವುದಿಲ್ಲವೇ ಎಂಬ ಪ್ರಶ್ನೆಗಳೂ ಇವೆ. ಬೇರೆ ದೇಶಗಳಲ್ಲಿ ನಡೆದಿರುವ ಹವಾಮಾನದ ಮೇಲಿನ ನಿಯಂತ್ರಣದ ಪ್ರಯತ್ನಗಳು ಮಿಶ್ರ ಫಲಿತಾಂಶ ನೀಡಿವೆ. ಆದರೆ, ಈಗ ಮೂಡಿರುವ ಪ್ರಶ್ನೆಗಳನ್ನು ಕೇಳಬೇಕಾದ ಕಾಲಘಟ್ಟವನ್ನು ಭಾರತವು ಇದುವರೆಗೆ ತಲುಪಿರಲಿಲ್ಲ. ಕೇಂದ್ರದ ಈಗಿನ ಪ್ರಯತ್ನವು ಮಹತ್ವಾಕಾಂಕ್ಷೆಯಿಂದ ಕೂಡಿದೆ. ಒಂದಿಷ್ಟು ಪ್ರಶ್ನೆಗಳೊಂದಿಗೆ ಈ ಪ್ರಯತ್ನವನ್ನು ಕೈಗೊಳ್ಳಬಹುದು. ಆದರೆ ಈ ವಿಚಾರದಲ್ಲಿ ಅತಿಯಾದ ಉತ್ಸಾಹ ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT