ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲ್ಟ್‌ನ್ಯೂಸ್‌’ ಸಹಸಂಸ್ಥಾಪಕನ ಬಂಧನ: ಪ್ರತೀಕಾರದ ನಡೆಗೆ ಮತ್ತೊಂದು ನಿದರ್ಶನ

Last Updated 3 ಜುಲೈ 2022, 21:30 IST
ಅಕ್ಷರ ಗಾತ್ರ

ಸುದ್ದಿಯ ರೂಪದಲ್ಲಿ ಬರುವ ಕೆಲವು ವಿವರ, ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಆಲ್ಟ್‌ನ್ಯೂಸ್‌ ವೆಬ್‌ಸೈಟ್‌ನ ಸಹಸಂಸ್ಥಾಪಕ ಮಹಮ್ಮದ್ ಜುಬೈರ್ ಅವರನ್ನು ಕಳೆದ ವಾರ ಬಂಧಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಅವರ ಬಂಧನ ಹಾಗೂ ಈಚಿನ ವರ್ಷಗಳಲ್ಲಿ ನಡೆದಿರುವ ಇತರ ಕೆಲವು ಬಂಧನಗಳ ನಡುವೆ ಸಾಮ್ಯತೆ ಇದೆ. ಸರ್ಕಾರ ಅಥವಾ ಆಡಳಿತ ಪಕ್ಷದ ಟೀಕಾಕಾರರಂತೆ ಕಂಡುಬರುವ ಯಾವುದೇ ವ್ಯಕ್ತಿಯನ್ನು ಕ್ಷುಲ್ಲಕ ಆರೋಪಗಳ ಅಡಿ ಬಂಧಿಸಲಾಗುತ್ತದೆ. ಕೆಲವೊಮ್ಮೆ, ಹೇಳಿಕೊಳ್ಳುವಂತಹ ಯಾವುದೇ ಆಧಾರ ಇಲ್ಲದಿದ್ದರೂ ಬಂಧಿಸಲಾಗುತ್ತದೆ. ಸರ್ಕಾರದ ವಿರುದ್ಧ ಮಾತನಾಡುವ ಧೈರ್ಯ ತೋರಿಸುವ ಇತರರಿಗೆ ಈ ಬಂಧನದ ಮೂಲಕ ಒಂದು ಸಂದೇಶ ರವಾನಿಸುವ ಉದ್ದೇಶ ಇರುವಂತಿದೆ. ಧಾರ್ಮಿಕ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ, ಸಂಘರ್ಷ ಸೃಷ್ಟಿಸುವ ರೀತಿಯಲ್ಲಿ 2018ರಲ್ಲಿ ಒಂದು ಟ್ವೀಟ್ ಮಾಡಿದ್ದರು ಎಂಬುದು ಜುಬೈರ್ ಅವರ ಮೇಲಿರುವ ಆರೋಪ. ಆದರೆ ಆ ಟ್ವೀಟ್‌ ಗಮನಿಸಿದ್ದವರ ಪಾಲಿಗೆ ಇದು ತೃಪ್ತಿಕರವಾದ ಕಾರಣ ಅಲ್ಲ. 1983ರ ಒಂದು ಸಿನಿಮಾದ ದೃಶ್ಯವೊಂದನ್ನು ಆಧರಿಸಿದ ಟ್ವೀಟ್ ಅದಾಗಿತ್ತು ಎನ್ನಲಾಗಿದೆ. ಆ ಟ್ವೀಟ್ ಅಪಾಯಕಾರಿ ಆಗಿತ್ತು ಎಂದಾದರೆ ಅದು ಈ ವೇಳೆಗಾಗಲೇ ಕಲಹ ಸೃಷ್ಟಿ ಮಾಡಬೇಕಿತ್ತು. ಬಹುತೇಕರಿಗೆ ಆ ಟ್ವೀಟ್ ಗೊತ್ತೇ ಇರಲಿಲ್ಲ. ಆ ಟ್ವೀಟ್‌ನಿಂದಾಗಿ ಏನೂ ಆಗಿಲ್ಲ. ಹೀಗಿರುವಾಗ, ನಾಲ್ಕು ವರ್ಷಗಳ ನಂತರದಲ್ಲಿ ಜುಬೈರ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಆ ಟ್ವೀಟ್ ಕಾರಣವಾಗುವುದು ಹೇಗೆ?

ಜುಬೈರ್ ಅವರನ್ನು ಬಂಧಿಸಿದ ಬಗೆ ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅವರನ್ನು ದೆಹಲಿ ಪೊಲೀಸರು ಕರೆಸಿದ್ದರು. ಆದರೆ, ಆ ಪ್ರಕರಣದಲ್ಲಿ ಅವರು ಬಂಧನದಿಂದ ರಕ್ಷಣೆ ಪಡೆದುಕೊಂಡಿದ್ದರು. ಅವರನ್ನು ಹೊಸ ಪ್ರಕರಣದ ಅಡಿಯಲ್ಲಿ ಬಂಧಿಸಲಾಯಿತು. ಬಿಜೆಪಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಕುರಿತು ಆಡಿದ ಮಾತುಗಳನ್ನು ಜುಬೈರ್ ಅವರು ಹಲವರ ಗಮನಕ್ಕೆ ತಂದರು. ಶರ್ಮಾ ಅವರ ಹೇಳಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಯಿತು. ಸರ್ಕಾರಕ್ಕೆ ಇರುಸುಮುರುಸು ಆಯಿತು. ಆಗಲೂ, ಜುಬೈರ್ ಅವರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಬಂಧಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು. ಆಕ್ಷೇಪಾರ್ಹ ಮಾತುಗಳನ್ನು ಆಡಿದವರು ಜೈಲಿನಿಂದ ಹೊರಗೆ ಇದ್ದಾರೆ. ಆದರೆ ಜುಬೈರ್ ಅವರನ್ನು ಬಂಧಿಸಲಾಗಿದೆ.

ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ತಪ್ಪು ಮಾಹಿತಿ ನೀಡುವ ಅಭಿಯಾನವು ಈಗಿನ ಸಂದರ್ಭದಲ್ಲಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬಹುದೊಡ್ಡ ಬೆದರಿಕೆಗಳು. ಸುಳ್ಳು ಸುದ್ದಿಗಳನ್ನು ಗುರುತಿಸುವ ಮೂಲಕ ಹಾಗೂ ನಿಜ ಸುದ್ದಿ ಯಾವುದು ಎಂಬುದನ್ನು ತಿಳಿಸುವ ಮೂಲಕ ಆಲ್ಟ್‌ನ್ಯೂಸ್‌ ಈಚಿನ ವರ್ಷಗಳಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದೆ. ಈ ವೆಬ್‌ಸೈಟ್‌ ವಸ್ತುನಿಷ್ಠವಾಗಿ ಕೆಲಸ ಮಾಡಿದೆ. ಪಕ್ಷಪಾತಿಯಾಗಿ ವರ್ತಿಸಿಲ್ಲ. ಈ ವೆಬ್‌ಸೈಟ್‌, ಬಿಜೆಪಿಯ ತಪ್ಪುಗಳನ್ನು ಮಾತ್ರವೇ ಅಲ್ಲದೆ ಇತರ ‍ಪಕ್ಷಗಳ ತಪ್ಪುಗಳನ್ನೂ ಎತ್ತಿತೋರಿಸುವ ಕೆಲಸ ಮಾಡಿದೆ. ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವ ಯತ್ನ ನಡೆದಿರುವ ಹೊತ್ತಿನಲ್ಲಿ, ಇಂತಹ ಸುಳ್ಳುಗಳ ವಿರುದ್ಧ, ತಪ್ಪು ಮಾಹಿತಿ ಹಾಗೂ ತಪ್ಪು ಅರ್ಥೈಸುವಿಕೆಗಳ ವಿರುದ್ಧ ಕಟ್ಟೆಚ್ಚರ ವಹಿಸಬೇಕು. ಆಗ ಜನತಂತ್ರ ಗಟ್ಟಿಯಾಗುತ್ತದೆ. ಆಲ್ಟ್‌ನ್ಯೂಸ್‌ ವೆಬ್‌ಸೈಟ್‌ ತನ್ನ ಕೆಲಸಗಳ ಮೂಲಕ ಪ್ರಜಾತಂತ್ರಕ್ಕೆ ಸೇವೆ ಸಲ್ಲಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ಪ್ರಜಾತಂತ್ರಕ್ಕೆ ಸಂಬಂಧಿಸಿದ ಹೇಳಿಕೆಯೊಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿಯೇ
ಜುಬೈರ್ ಅವರನ್ನು ಬಂಧಿಸಲಾಗಿದೆ. ಅವರು ಮ್ಯೂನಿಕ್‌ನಲ್ಲಿ ನಡೆದ ಜಿ–7 ಶೃಂಗಸಭೆಯಲ್ಲಿ ಸಹಿ ಮಾಡಿದ ಈ ಹೇಳಿಕೆಯು ನಾಗರಿಕರ ಸ್ವಾತಂತ್ರ್ಯ ಎತ್ತಿಹಿಡಿಯುವ ವಚನ ನೀಡುವಂಥದ್ದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಮಾತೂ ಅದರಲ್ಲಿದೆ. ಮೋದಿ ಅವರು 1975ರ ತುರ್ತು ಪರಿಸ್ಥಿತಿಯ ಬಗ್ಗೆಯೂ ದೇಶಕ್ಕೆ ನೆನಪು ಮಾಡಿಕೊಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಗಿರುವ ಈ ಬಂಧನ ಒಂದು ವ್ಯಂಗ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT