ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜ್ಯದ ಆರ್ಥಿಕ ಸ್ಥಿತಿಗತಿ ವೆಚ್ಚಗಳಲ್ಲಿ ಬೇಕು ವಿವೇಕ

Last Updated 2 ಜನವರಿ 2023, 19:45 IST
ಅಕ್ಷರ ಗಾತ್ರ

ರಾಜ್ಯದ ಆರ್ಥಿಕತೆಯ ಸ್ಥಿತಿಗತಿ ಕುರಿತ ‘ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ’ಯು ರಾಜ್ಯ ಸರ್ಕಾರದ ವರಮಾನಕ್ಕೆ ಸಂಬಂಧಿಸಿದಂತೆ ಬಹಳ ಸುಂದರವಾದ ಚಿತ್ರಣವನ್ನು ನೀಡಿದೆ. ಆದರೆ, ಇದು ಇಡೀ ವಿದ್ಯಮಾನದ ಒಂದು ಮುಖ ಮಾತ್ರ. ರಾಜ್ಯ ಸರ್ಕಾರವು ಸಾಲ ಮಾಡುವ ಪ್ರಮಾಣವನ್ನು ನಿಯಂತ್ರಿಸದೇ ಇದ್ದರೆ ಅದು ಮುಂದೊಂದು ದಿನ ದೊಡ್ಡ ಸಮಸ್ಯೆಗೆ ಸಿಲುಕಬಹುದು. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಮಂಡನೆಯಾಗಿರುವ ವರದಿ ಪ್ರಕಾರ, ಸಾಂಕ್ರಾಮಿಕದ ಅವಧಿಯಲ್ಲಿ ಮಂದಗತಿಗೆ ತಿರುಗಿದ್ದ ಅರ್ಥ ವ್ಯವಸ್ಥೆಯ ಬೆಳವಣಿಗೆಯು ನಂತರದಲ್ಲಿ ಶೇಕಡ 9.5ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯದ ವರಮಾನ ಸಂಗ್ರಹವು ಶೇ 10ರಷ್ಟು ಹೆಚ್ಚಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿ ವರಮಾನ ಸಂಗ್ರಹವು ಶೇ 30ರಷ್ಟು ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ಶೇ 6.39ರಷ್ಟು ಇದ್ದ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ
ಶೇ 5.81ಕ್ಕೆ ಇಳಿಕೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಸರಾಸರಿ ಹಣದುಬ್ಬರ ದರವು ಶೇ 7.4ರ ಮಟ್ಟದಲ್ಲಿದೆ ಎಂಬುದು ಗಮನಾರ್ಹ. ರಾಜ್ಯ ಸರ್ಕಾರವು ತನ್ನ ವಾರ್ಷಿಕ ಬಜೆಟ್‌ ಮೊತ್ತ ₹ 2.65 ಲಕ್ಷ ಕೋಟಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಸರ್ಕಾರದ ವರಮಾನವು ₹ 1 ಲಕ್ಷ ಕೋಟಿಗಿಂತ ತುಸು ಹೆಚ್ಚಿದೆ. ಇದರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ ಪಾಲು ಕೂಡ ಸೇರಿದೆ. ರಾಜ್ಯ ಸರ್ಕಾರದ ತೆರಿಗೆ ವರಮಾನ ಹಾಗೂ ತೆರಿಗೆ ಹೊರತುಪಡಿಸಿದ ವರಮಾನವು ವರ್ಷದ ಮೊದಲಾರ್ಧದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಳ ಕಂಡಿದೆಯಾದರೂ, ವರಮಾನ ಕೊರತೆ ಕಾಣಿಸುವಂತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ಪ್ರಸ್ತಾವನೆಯಲ್ಲಿ, ₹ 14,699 ಕೋಟಿ ವರಮಾನ ಕೊರತೆಯ ಅಂದಾಜು ಮಾಡಲಾಗಿತ್ತು. ಬಜೆಟ್‌ನಲ್ಲಿ, ರಾಜ್ಯದ ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ)
ಶೇ 3.26ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿತ್ತು. ಈಗ ಅದನ್ನು ಪರಿಷ್ಕರಿಸಲಾಗಿದ್ದು, ವಿತ್ತೀಯ ಕೊರತೆಯು ಶೇ 2.82ರಷ್ಟು ಮಾತ್ರ ಇರಲಿದೆ ಎಂದು ಹೇಳಲಾಗಿದೆ. ಇದು ಕೂಡ ಒಳ್ಳೆಯ ಸೂಚನೆಯೇ ಹೌದು. 2023ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ, ಉಚಿತ ಕೊಡುಗೆಗಳಿಗಾಗಿ ಒಂದಿಷ್ಟು ಹಣ ವಿನಿಯೋಗವಾಗುವ ಸಾಧ್ಯತೆ ಇರುತ್ತದೆ. ಆದರೆ ಸರ್ಕಾರವು ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬೇಕು, ವರಮಾನ ಕೊರತೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.

ಇಷ್ಟೆಲ್ಲ ಇದ್ದರೂ, ರಾಜ್ಯದ ಸಾಲ ಹೆಚ್ಚುತ್ತಿರುವುದರ ಕಡೆ ಆಡಳಿತದಲ್ಲಿ ಇರುವವರು ತುರ್ತಾಗಿ ಗಮನಹರಿಸಬೇಕಾಗಿದೆ. ಈ ವರ್ಷದಲ್ಲಿ ಸರ್ಕಾರವು ₹ 72 ಸಾವಿರ ಕೋಟಿ ಸಾಲ ಮಾಡುವ ಅಂದಾಜು ಇದೆ. ₹ 65 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವೇತನ ಹಾಗೂ ಪಿಂಚಣಿಗಾಗಿ ಮೀಸಲಿಡಬೇಕಾಗಿದೆ, ಸಾಲದ ಮರುಪಾವತಿ ಹಾಗೂ ಬಡ್ಡಿ ತೀರಿಸಲು ₹ 43 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತ ತೆಗೆದಿರಿಸಬೇಕಾಗಿದೆ. ಇವು ರಾಜ್ಯದ ಅಭಿವೃದ್ಧಿ ಕಾರ್ಯಗಳ ಮೇಲೆ ವಿನಿಯೋಗಿಸಲು ಸಿಗುವ ಹಣದ ಲಭ್ಯತೆಯನ್ನು ಕಡಿಮೆ ಮಾಡುತ್ತವೆ. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಲ್ಲಿ ಬಿಲ್‌ ಪಾವತಿ ಬಾಕಿ ಇರುವ ಕಾರಣ, ಅಲ್ಲಿ ಸರ್ಕಾರದ ಕಡೆಯಿಂದ ಆಗಬೇಕಿರುವ ಪಾವತಿಗಳ ಮೊತ್ತ ದೊಡ್ಡ ಪ್ರಮಾಣದಲ್ಲಿ ಇದೆ. ಇದು ಕೂಡ ಕಳವಳ ಮೂಡಿಸುವ ಅಂಶ. ರಾಜ್ಯ ಸರ್ಕಾರದಿಂದ ಆಗಬೇಕಿರುವ ಎಲ್ಲ ಬಗೆಯ ಪಾವತಿಗಳ ಒಟ್ಟು ಮೊತ್ತವು ₹ 5.16 ಲಕ್ಷ ಕೋಟಿ. ಇದು ರಾಜ್ಯದ ಈ ವರ್ಷದ ಬಜೆಟ್‌ ಮೊತ್ತದ ಸರಿಸುಮಾರು ಎರಡು ಪಟ್ಟ. ರಾಜ್ಯಕ್ಕೆ ಹೆಚ್ಚಿನ ವರಮಾನ ತಂದುಕೊಡುವುದು ಮಾಹಿತಿ ತಂತ್ರಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಉದ್ಯಮ ವಲಯಗಳು. ಜಾಗತಿಕ ಮಟ್ಟದಲ್ಲಿ ಎದುರಾಗಬಹುದಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಐ.ಟಿ. ಮತ್ತು ಐ.ಟಿ. ಸಂಬಂಧಿತ ಉದ್ಯಮ ವಲಯದಿಂದ ಸಿಗುವ ವರಮಾನದಲ್ಲಿ ಆಗುವ ಕುಸಿತವನ್ನೂ ಸರ್ಕಾರವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು. ವರಮಾನ ಹೆಚ್ಚಳವು ತುಸು ಸಮಾಧಾನ ಮೂಡಿಸುವಂತೆ ಇದೆಯಾದರೂ, ರಾಜ್ಯ ಸರ್ಕಾರದ ಹಣಕಾಸಿನ ಒಟ್ಟಾರೆ ಸ್ಥಿತಿಯು ಉತ್ತೇಜನಕಾರಿಯಾಗಿ ಇಲ್ಲ. ಹಣಕಾಸಿನ ವಿಚಾರದಲ್ಲಿ ಶಿಸ್ತು, ವೆಚ್ಚಗಳಲ್ಲಿ ವಿವೇಕ ಈ ಹೊತ್ತಿನ ತುರ್ತು. ಇದರಲ್ಲಿ ತಪ್ಪು ಹೆಜ್ಜೆ ಇರಿಸಿದರೆ ಕೆಲವು ವರ್ಷಗಳ ನಂತರದಲ್ಲಿ ರಾಜ್ಯವು ಹಣಕಾಸು ವಿಚಾರದಲ್ಲಿ ವಿಷವರ್ತುಲವೊಂದರಲ್ಲಿ ಸಿಲುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT