ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮಕ್ಕಳಿಗೆ ಪೌಷ್ಟಿಕ ಆಹಾರ: ತುರ್ತು ಕ್ರಮದ ಅಗತ್ಯ ಇದೆ

Published 1 ಜುಲೈ 2024, 19:30 IST
Last Updated 1 ಜುಲೈ 2024, 19:30 IST
ಅಕ್ಷರ ಗಾತ್ರ

ಮಕ್ಕಳ ಪೌಷ್ಟಿಕತೆ ಕುರಿತು ಯುನಿಸೆಫ್‌ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಜಗತ್ತಿನಾದ್ಯಂತ ಮತ್ತು ಭಾರತದ ಮಕ್ಕಳ ಮೇಲೆ ಅಪೌಷ್ಟಿಕತೆಯು ಬೀರಬಹುದಾದ ಪರಿಣಾಮವು ಕಳವಳ ಮೂಡಿಸುವಂತಿದೆ. ಮಕ್ಕಳ ಪೌಷ್ಟಿಕತೆ ವರದಿ– 2024ರ ಪ್ರಕಾರ, ಜಗತ್ತಿನಲ್ಲಿ ಐದು ವರ್ಷದ ಒಳಗಿನ 18.1 ಕೋಟಿ ಮಕ್ಕಳು ತೀವ್ರವಾದ ಆಹಾರ ಕೊರತೆಯನ್ನು ಎದುರಿಸುತ್ತಿದ್ದಾರೆ. ಭಾರತ, ಚೀನಾ, ಅಫ್ಗಾನಿಸ್ತಾನ, ಪಾಕಿಸ್ತಾನ ಸೇರಿದಂತೆ 20 ದೇಶಗಳ ಪಾಲು ಇದರಲ್ಲಿ ಶೇಕಡ 65ರಷ್ಟಿದೆ ಎಂಬುದು ಆತಂಕಕಾರಿ ವಿಚಾರ.

ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿಯೂ ಮಕ್ಕಳ ಆಹಾರ ಕೊರತೆಯು ಕಳವಳ ಮೂಡಿಸುವ ಪ್ರಮಾಣದಲ್ಲಿ ಇದೆ. ಮೂವರಲ್ಲಿ ಇಬ್ಬರು ಮಕ್ಕಳು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ನಾಲ್ಕರಲ್ಲಿ ಒಂದು ಮಗು ತೀವ್ರ ಪ್ರಮಾಣದ ಆಹಾರದ ಕೊರತೆ ಎದುರಿಸುತ್ತಿದೆ. ಭಾರತದ ಮಕ್ಕಳ ಪೈಕಿ ಶೇ 40ರಷ್ಟು ಮಕ್ಕಳಿಗೆ ಆಹಾರದ ಕೊರತೆ ಇದೆ. ಕುಟುಂಬದಲ್ಲಿನ ಬಡತನವೇ ಅಪೌಷ್ಟಿಕತೆಗೆ ಮುಖ್ಯ ಕಾರಣ. ಪೌಷ್ಟಿಕಾಂಶಗಳು ಇಲ್ಲದ ಆಹಾರ ಸೇವನೆಯೊಂದೇ ಅಪೌಷ್ಟಿಕತೆಗೆ ಕಾರಣ ಅಲ್ಲ. ಬೇಕಾದಷ್ಟು ಪ್ರಮಾಣದಲ್ಲಿ ಆಹಾರ ಸೇವಿಸದಿರುವುದು, ಆಹಾರ ಸೇವನೆಯ ವಾತಾವರಣ ಕೂಡ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ. ಐದು ವರ್ಷದವರೆಗಿನ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮತ್ತು ಸಮತೋಲಿತ ಆಹಾರ ಸಿಗದಿರುವುದು ಮತ್ತು ಸೇವಿಸದಿರುವುದನ್ನು ಮಕ್ಕಳಿಗೆ ಆಹಾರದ ಕೊರತೆ ಎಂದು ಯುನಿಸೆಫ್‌ ವ್ಯಾಖ್ಯಾನಿಸಿದೆ.

ಮಕ್ಕಳ ಪೌಷ್ಟಿಕತೆ ಪರಿಸ್ಥಿತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಕುಟುಂಬದ ಆದಾಯವೊಂದೇ ಮುಖ್ಯ ಅಲ್ಲ ಎಂಬುದು ವರದಿಯಲ್ಲಿ ಇರುವ ಒಂದು ಮುಖ್ಯ ಅಂಶ. ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ ಮಕ್ಕಳ ಪೈಕಿ ಅರ್ಧದಷ್ಟು ಮಕ್ಕಳು ತುಲನಾತ್ಮಕವಾಗಿ ಉತ್ತಮ ವರಮಾನ ಹೊಂದಿರುವ ಕುಟುಂಬಗಳಲ್ಲಿಯೇ ಇದ್ದಾರೆ. ಬಾಧಿತರಾದ ಶೇ 46ರಷ್ಟು ಮಕ್ಕಳು ಬಡ ಕುಟುಂಬಗಳಲ್ಲಿ ಇರುವವರು. ಆದರೆ, ಶೇ 54ರಷ್ಟು ಮಕ್ಕಳು ಬಡತನ ರೇಖೆಗಿಂತ ಮೇಲೆ ಇರುವ ಕುಟುಂಬಗಳಲ್ಲಿ ಇರುವವರು. ಆಹಾರ ಸೇವನೆಯಲ್ಲಿ ಅಸಮರ್ಪಕತೆ, ಆಹಾರ ಸೇವನೆಯ ವಾತಾವರಣದಲ್ಲಿನ ಮಾಲಿನ್ಯ ಮತ್ತು ಅಗ್ಗದ ಅನಾರೋಗ್ಯಕರ ಆಹಾರ ಸೇವನೆ ಕೂಡ ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಾರಣ. ಸಂಘರ್ಷಗಳು, ಹವಾಮಾನ ಬಿಕ್ಕಟ್ಟು, ಆರ್ಥಿಕ ಅಸಮಾನತೆಗಳು ಈ ಪರಿಸ್ಥಿತಿಯು ಮತ್ತಷ್ಟು ಶೋಚನೀಯಗೊಳ್ಳುವಂತೆ ಮಾಡಿವೆ. ಆಹಾರದ ಅತಿ ಹೆಚ್ಚಿನ ದರ ಕೂಡ ಹಲವರಿಗೆ ಪೌಷ್ಟಿಕ ಆಹಾರ ದೊರಕದಂತೆ ಮಾಡಿದೆ. 

ಪ್ರತಿ ದಿನವೂ ಎರಡು ಬಗೆಯ ಆಹಾರಗಳನ್ನು ಮಾತ್ರ ತೆಗೆದುಕೊಳ್ಳುವ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಶೇ 50ರಷ್ಟು ಹೆಚ್ಚು ಎಂಬುದರತ್ತ ವರದಿಯು ಗಮನ ಸೆಳೆದಿದೆ. ಎರಡು ಬಗೆಯ ಆಹಾರ ಎಂದರೆ ಪ್ರತಿ ದಿನವೂ ಹಾಲು ಮತ್ತು ಅನ್ನವನ್ನು ಮಾತ್ರ ತೆಗೆದುಕೊಳ್ಳುವುದು. ಎಂಟು ಬಗೆಯ ಪ್ರಮುಖ ಆಹಾರಗಳಲ್ಲಿ ಐದು ಬಗೆಯ ಆಹಾರಗಳನ್ನಾದರೂ ತೆಗೆದುಕೊಳ್ಳಬೇಕು. ಅವುಗಳೆಂದರೆ, ಎದೆಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ಮಾಂಸ ಮತ್ತು ಮೀನು, ಧಾನ್ಯಗಳು ಮತ್ತು ಬೀಜಗಳು, ವಿಟಮಿನ್‌ ಎ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು, ಕಾಳು ಮತ್ತು ಗೆಡ್ಡೆಗಳು. ಈ ಮಾರ್ಗಸೂಚಿಯು ಜನರಿಗೆ ತಲುಪುವಂತೆ ಮಾಡಬೇಕಿದೆ.

ಹೀಗೆ ಜನರಿಗೆ ತಲುಪಿದರೆ ಮಾತ್ರ ಕುಟುಂಬಗಳಿಗೆ ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಮಹತ್ವ ಅರ್ಥವಾಗುತ್ತದೆ. ಭಾರತದ ಮುಂದೆ ಎರಡು ಸವಾಲುಗಳಿವೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಖಾತರಿಗಾಗಿ ಕುಟುಂಬದ ಬಡತನದ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಬೇಕಾದಷ್ಟು ಪೌಷ್ಟಿಕತೆಯನ್ನು ಒದಗಿಸಬೇಕಿದ್ದರೆ ಮೂಲಭೂತವಾದ ಆಹಾರವಷ್ಟೇ ಸಾಲುವುದಿಲ್ಲ. ಮಹಿಳೆಯರು, ಹಸುಳೆಯರು ಮತ್ತು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದ್ದರೂ ಅವು ಅಗತ್ಯ ಇರುವವರಿಗೆ ಪೌಷ್ಟಿಕತೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಉತ್ತಮ ಸ್ಥಿತಿಯಲ್ಲಿರುವ ಕುಟುಂಬಗಳು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವಂತೆ ಜಾಗೃತಿ ಮೂಡಿಸುವುದು ಮತ್ತೊಂದು ಸವಾಲಾಗಿದೆ. ಹಲವು ಕುಟುಂಬಗಳಲ್ಲಿ ಪೌಷ್ಟಿಕತೆ ಕೊರತೆಯ ಮುಖ್ಯ ಕಾರಣ ಸಂಪನ್ಮೂಲದ ಕೊರತೆ ಅಲ್ಲ, ಬದಲಿಗೆ ಜಾಗೃತಿ ಇಲ್ಲದಿರುವುದಾಗಿದೆ. ಹಾಗಾಗಿ ಜಾಗೃತಿ ಮೂಡಿಸುವುದು ಕೂಡ ಬಹಳ ಮುಖ್ಯವಾದ ಕೆಲಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT