ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಪ್ಯಾರಿಸ್ ಪ್ಯಾರಾಲಿಂಪಿಕ್ ಕೂಟ; ಭಾರತದ ಸಾಧನೆ ಸ್ಫೂರ್ತಿದಾಯಕ

ಟೋಕಿಯೊ ಮತ್ತು ಪ್ಯಾರಿಸ್‌ ಕೂಟಗಳು ಭಾರತದ ಪ್ಯಾರಾ ಕ್ರೀಡೆಗಳಿಗೆ ಹೊಸ ದಿಸೆ ತೋರಿಸಿದ ವೇದಿಕೆಗಳಾಗಿವೆ
Published : 8 ಸೆಪ್ಟೆಂಬರ್ 2024, 23:30 IST
Last Updated : 8 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಪ್ಯಾರಾಲಿಂಪಿಕ್‌ ಕೂಟದಲ್ಲಿ ಪದಕ ಗೆದ್ದವರು ಮತ್ತು ಗೆಲ್ಲದವರು ಇಬ್ಬರೂ ವಿಜೇತರೇ. ಯಾಕೆಂದರೆ ಇವರೆಲ್ಲರೂ ತಮ್ಮ ಅಂಗವೈಕಲ್ಯವನ್ನು ಮೀರಿ ತೋರಿದ ಸಾಹಸದಿಂದ ಕೋಟ್ಯಂತರ ಕ್ರೀಡಾಪ್ರಿಯರ ಮನಗೆದ್ದಿದ್ದಾರೆ. ಪೋಲಿಯೊ, ಯುದ್ಧ, ಅಪಘಾತ ಮತ್ತು ಅವಘಡಗಳಿಂದಾಗಿ ಅಂಗವಿಕಲರಾದವರು ಆಟೋಟಗಳಲ್ಲಿ ಸಾಮರ್ಥ್ಯ ಮೆರೆಯುವ ಆ ಪರಿಯನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅಂತಹ ಐತಿಹಾಸಿಕ ಸಾಧನೆಗಳಿಗೆ ವೇದಿಕೆಯಾದ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಇದೀಗ ತೆರೆಬಿದ್ದಿದೆ.

ಈ ಕೂಟದಲ್ಲಿ ಸ್ಪರ್ಧಿಸಿದ್ದ 170 ದೇಶಗಳ ನಾಲ್ಕು ಸಾವಿರಕ್ಕೂ ಹೆಚ್ಚು ಅಥ್ಲೀಟ್‌ಗಳಲ್ಲಿ ಪ್ರತಿಯೊಬ್ಬರದ್ದೂ ಛಲದ ಕತೆ. ಇಲ್ಲಿ ನಡೆದ 22 ಕ್ರೀಡೆಗಳ 549 ವಿಭಾಗಗಳಲ್ಲಿ ತಮ್ಮ ವಿಶೇಷ ದೈಹಿಕ ಸಾಮರ್ಥ್ಯವನ್ನು ಕ್ರೀಡಾಪಟುಗಳು ಪಣಕ್ಕೊಡ್ಡಿದ್ದರು. ಭಾರತದ ಕ್ರೀಡಾಪಟುಗಳ ಸಾಧನೆಯೂ ಗಮನಾರ್ಹ. ಈ ಬಾರಿ ದೇಶ ಒಟ್ಟು 29 ಪದಕಗಳನ್ನು ಗೆದ್ದು ಸಾರ್ವಕಾಲಿಕ ಸಾಧನೆ ಮಾಡಲು ಅವರು ಕಾರಣರಾಗಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚು ಸೇರಿವೆ. ಈ ಪೈಕಿ 17 ಪದಕಗಳು ಟ್ರ್ಯಾಕ್‌ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಒಲಿದಿರುವುದು ವಿಶೇಷ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದಿದೆ. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐದು ಚಿನ್ನ ಸಹಿತ 19 ಪದಕ ಜಯಿಸಿತ್ತು. ಕಳೆದ 12 ವರ್ಷಗಳಲ್ಲಿ ಭಾರತದ ಪ್ಯಾರಾ ಕ್ರೀಡಾಪಟುಗಳ ಸಾಧನೆ ಏರುಗತಿಯಲ್ಲಿ ಸಾಗುತ್ತಿರುವುದು ಗಮನಾರ್ಹ.

2008ರ ಬೀಜಿಂಗ್ ಪ್ಯಾರಾಲಿಂಪಿಕ್ ಕೂಟದಲ್ಲಿ ಭಾರತಕ್ಕೆ ಒಂದೂ ಪದಕ ಒಲಿದಿರಲಿಲ್ಲ. 2012ರಲ್ಲಿ ಲಂಡನ್‌ನಲ್ಲಿ ಒಂದು ಬೆಳ್ಳಿ ಪದಕ, 2016ರಲ್ಲಿ ರಿಯೊ ಡಿ ಜನೈರೊದಲ್ಲಿ ಒಟ್ಟು 4 ಪದಕಗಳು ಭಾರತಕ್ಕೆ ಸಂದಿದ್ದವು. ಟೋಕಿಯೊ ಮತ್ತು ಪ್ಯಾರಿಸ್‌ ಕೂಟಗಳು ಭಾರತದ ಪ್ಯಾರಾ ಕ್ರೀಡೆಗಳಿಗೆ ಹೊಸ ದಿಸೆ ತೋರಿಸಿದ ವೇದಿಕೆಗಳಾಗಿವೆ.

ದೇಶದಲ್ಲಿ ಅಂಗವಿಕಲ ಅಥ್ಲೀಟ್‌ಗಳು ಕ್ರೀಡೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಕ್ರೀಡಾಕೂಟಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಭಾರತದಲ್ಲಿಯೂ ಪ್ಯಾರಾ ಅಥ್ಲೀಟ್‌ಗಳ ವೈದ್ಯಕೀಯ ನೆರವು ಮತ್ತು ತರಬೇತಿಗಾಗಿ ಸೌಲಭ್ಯಗಳು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಬಾರಿ 84 ಅಥ್ಲೀಟ್‌ಗಳು ತಂಡದಲ್ಲಿದ್ದರು. ಶೂಟಿಂಗ್‌ನಲ್ಲಿ ಅವನಿ ಲೇಖರಾ ಸತತ ಎರಡನೇ ಕೂಟದಲ್ಲಿ ಚಿನ್ನದ ಪದಕ ಜಯಿಸಿದರು. ಪುರುಷರ ಆರ್ಚರಿ (ಹರವಿಂದರ್ ಸಿಂಗ್) ಹಾಗೂ ಕ್ಲಬ್ ಥ್ರೋ (ಧರಮ್‌ವೀರ್ ನೈನ್) ಸ್ಪರ್ಧೆಗಳಲ್ಲಿಯೂ ಈ ಬಾರಿ ಭಾರತಕ್ಕೆ ಸ್ವರ್ಣ ಒಲಿದಿರುವುದು ವಿಶೇಷ. ಕನ್ನಡಿಗ, ಐಎಎಸ್‌ ಅಧಿಕಾರಿ ಸುಹಾಸ್ ಯತಿರಾಜ್ ಅವರು ಸತತ ಎರಡನೇ ಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಜಯಿಸಿರುವುದು ಹೆಮ್ಮೆಯ ಸಂಗತಿ.

ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ರಾಕೇಶ್ ಕುಮಾರ್ ಅವರೊಂದಿಗೆ ಸೇರಿ ಕಂಚಿನ ಪದಕ ಗೆದ್ದ ಶೀತಲ್ ದೇವಿ ಅವರ ಸಾಧನೆ ಅಮೂಲ್ಯವಾದದ್ದು. ಎರಡೂ ತೋಳುಗಳಿಲ್ಲದೆ ಕಾಲುಗಳಿಂದಲೇ ಬಾಣ ಪ್ರಯೋಗಿಸುವ ಜಮ್ಮು ಮತ್ತು ಕಾಶ್ಮೀರದ 17 ವರ್ಷದ ಹುಡುಗಿ ಶೀತಲ್ ಸಾಧನೆ ಅತ್ಯುನ್ನತವಾದದ್ದು.  ಕೂಟದ ಕೊನೆಯ ದಿನ ನವದೀಪ್ ಸಿಂಗ್ ಅವರು ಕುಬ್ಜರ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದರು. ಇಲ್ಲಿ ಅವರಿಗೆ ನಿಕಟ ಪೈಪೋಟಿಯೊಡ್ಡಿದ್ದ ಇರಾನಿನ ಸದೇಗಾ ಬೀತ್ ಅವರು ಮೊದಲ ಸ್ಥಾನ ಪಡೆದಿದ್ದರು. ಆದರೆ ಅವರು ಸಂಭ್ರಮಾಚರಣೆ ಸಂದರ್ಭದಲ್ಲಿ ನಿಷೇಧಿತ ಧ್ವಜ ಪ್ರದರ್ಶಿಸಿ ಅನರ್ಹಗೊಂಡರು. ನವದೀಪ್ ಬೆಳ್ಳಿಯಿಂದ ಚಿನ್ನಕ್ಕೆ ಬಡ್ತಿ ಪಡೆದರು. ಈಚೆಗೆ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತವು ಬರೀ 6 ಪದಕಗಳನ್ನು ಜಯಿಸಿತ್ತು. ಅದರಿಂದಾಗಿ ಭಾರತದ ಕ್ರೀಡಾವಲಯದಲ್ಲಿ ಮೂಡಿದ್ದ ನಿರಾಶೆಯನ್ನು ಮರೆಸಿ, ತಂಪೆರೆಯುವಲ್ಲಿ ಪ್ಯಾರಾ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ.

ಈ ಕೂಟದ ಪದಕ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನ ಗಳಿಸಿತು. ಗ್ರೇಟ್‌ ಬ್ರಿಟನ್ ಹಾಗೂ ಅಮೆರಿಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.

ಭವಿಷ್ಯದಲ್ಲಿ ಈ ಅಗ್ರದೇಶಗಳ ಹಂತಕ್ಕೇರುವುದು ಭಾರತದ ಗುರಿಯಾಗಬೇಕು. ಅಂಗವೈಕಲ್ಯ ಮತ್ತು ದೈಹಿಕ ನ್ಯೂನತೆ ಹೊಂದಿದವರನ್ನು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅಲಕ್ಷ್ಯದಿಂದ ನೋಡಲಾಗುತ್ತದೆ. ಮೂಢನಂಬಿಕೆಗಳಿಂದಾಗಿ ಅಂಗವಿಕಲರ ಜೀವನ ದುಸ್ತರವಾಗುತ್ತದೆ. ಆದರೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಅವಕಾಶ ಕೊಟ್ಟರೆ ಕ್ರೀಡೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಲ್ಲರು. ಈ ದಿಸೆಯಲ್ಲಿ ಅಂಗವಿಕಲರ ಕುಟುಂಬಗಳು, ಸರ್ಕಾರ ಮತ್ತು ಸಂಘಟನೆಗಳು ಸೂಕ್ತ ವಾತಾವರಣ ನಿರ್ಮಿಸಬೇಕು. ಅದಕ್ಕಾಗಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಸಾಧನೆ ಸ್ಫೂರ್ತಿಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT