ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟ 2.0: ಅನುಭವಕ್ಕೆ ಮಣೆ, ಹೊಸಬರಿಗೆ ಅವಕಾಶ

Last Updated 1 ಜೂನ್ 2019, 1:32 IST
ಅಕ್ಷರ ಗಾತ್ರ

ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೀಗೆ ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾದವರ ಪೈಕಿ ಮೂರನೆಯವರು ಎನ್ನುವ ಹೆಗ್ಗಳಿಕೆ ಈಗ ಮೋದಿಯವರದ್ದಾಗಿದೆ. ಈ ಹಿಂದೆ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರು ಸ್ಪಷ್ಟ ಬಹುಮತ ಪಡೆದು ಸತತ ಎರಡನೇ ಬಾರಿ ಪ್ರಧಾನಿಯಾಗಿದ್ದರು. ಮೋದಿಯವರ ಜೊತೆಗೆ 24 ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು ಮತ್ತು 24 ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಿರೀಕ್ಷೆಯಂತೆ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ರಾಮ್‌ವಿಲಾಸ್ ಪಾಸ್ವಾನ್, ರವಿಶಂಕರ್ ಪ್ರಸಾದ್, ಪೀಯೂಷ್‌ ಗೋಯಲ್, ಪ್ರಕಾಶ್‌ ಜಾವಡೇಕರ್, ಧರ್ಮೇಂದ್ರ ಪ್ರಧಾನ್ ಮುಂತಾದ ಅನುಭವಿಗಳು ಸಂಪುಟದಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಪಕ್ಷದ ಭಾರಿ ಗೆಲುವಿಗೆ ಕಾರಣರಾದ ಸಂಘಟನಾ ಚತುರ ಅಮಿತ್ ಶಾ ಈ ಸಲ ಸಚಿವ ಸಂಪುಟ ಸೇರಿರುವುದು ವಿಶೇಷ. ವಿದೇಶಾಂಗ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು ಯಾವುದೇ ಸದನದ ಸದಸ್ಯರಾಗಿರದಿದ್ದರೂ ಸಂಪುಟಕ್ಕೆ ಸೇರಿಸಿಕೊಂಡು, ಅವರಿಗೆ ವಿದೇಶಾಂಗ ವ್ಯವಹಾರಗಳ ಹೊಣೆ ನೀಡಿರುವುದು ಜಾಣ್ಮೆಯ ನಡೆ.

ಗಡ್ಕರಿ, ಜಾವಡೇಕರ್‌, ಪ್ರಧಾನ್‌ ಮುಂತಾದವರ ಖಾತೆಗಳನ್ನು ಬದಲಿಸಿಲ್ಲ. ಹಿಂದಿನ ಸಂಪುಟದಲ್ಲಿ ಮಹತ್ವದ ರಕ್ಷಣಾ ಖಾತೆ ನಿಭಾಯಿಸಿದ್ದ ನಿರ್ಮಲಾ ಅವರಿಗೆ ಈ ಸಲವೂ ಅಷ್ಟೇ ಮಹತ್ವದ ಹಣಕಾಸು ಖಾತೆ ದೊರೆತಿದೆ. ರಕ್ಷಣಾ ಖಾತೆಯು ರಾಜನಾಥ್‌ ಸಿಂಗ್‌ ತೆಕ್ಕೆಗೆ ಬಂದಿದೆ. ಗೃಹ ಖಾತೆಯು ಶಾ ಹೆಗಲೇರಿದೆ. ಹಿಂದೆ ಗುಜರಾತಿನಲ್ಲಿ ಮೋದಿ ಮತ್ತು ಶಾ ಅವರು ಸಂಪುಟದ ಸಹೋದ್ಯೋಗಿಗಳಾಗಿ ಕೆಲಸ ಮಾಡಿದ್ದರು. 9 ವರ್ಷಗಳ ಬಳಿಕ, ಪುನಃ ಸಂಪುಟ ಸಹೋದ್ಯೋಗಿಗಳಾಗಿ ಕೆಲಸ ಮಾಡುವ ಅವಕಾಶ ಒಲಿದಿದೆ. ಆಗ ರಾಜ್ಯದಲ್ಲಿ, ಈಗ ಕೇಂದ್ರದಲ್ಲಿ. ಹಿಂದಿನ ಸಚಿವ ಸಂಪುಟದಲ್ಲಿ ಇದ್ದ 37 ಮಂದಿಯನ್ನು ಕೈಬಿಟ್ಟಿರುವುದು ಗಮನಾರ್ಹ. ಹೀಗೆ ಸಚಿವಸ್ಥಾನ ವಂಚಿತರಾದವರಲ್ಲಿ ಸುಷ್ಮಾ ಸ್ವರಾಜ್, ಮೇನಕಾ ಗಾಂಧಿ, ಸುರೇಶ್ ಪ್ರಭು ಮುಂತಾದ ಪ್ರಮುಖರೂ ಇದ್ದಾರೆ. ಒಟ್ಟು 57 ಸಚಿವರ ಪಟ್ಟಿಯಲ್ಲಿ 19 ಹೊಸ ಮುಖಗಳಿಗೆ ಅವಕಾಶ ದೊರಕಿದೆ.

ಹಳಬರ ಅನುಭವ ಮತ್ತು ಹೊಸಬರ ಪ್ರತಿಭೆ ಎರಡನ್ನೂ ಸರ್ಕಾರ ಮುನ್ನಡೆಸುವಲ್ಲಿ ಸಮನಾಗಿ ಬಳಸಿಕೊಳ್ಳುವ ಯೋಚನೆ ಪ್ರಧಾನಿಯವರಿಗೆ ಇದ್ದಂತಿದೆ. ಕಳೆದ ಸಂಪುಟದಲ್ಲಿ ತಮ್ಮ ಚುರುಕಿನ ಸ್ಪಂದನೆಯಿಂದ ಗಮನ ಸೆಳೆದಿದ್ದ ಸುಷ್ಮಾ ಸ್ವರಾಜ್ ಅವರನ್ನು ಕೈಬಿಟ್ಟಿರುವುದಕ್ಕೆ ಅನಾರೋಗ್ಯ ಕಾರಣ ಎನ್ನಲಾಗುತ್ತಿದ್ದರೂ ಅದನ್ನು ನಂಬುವುದು ಕಷ್ಟ. ಸುಷ್ಮಾ ಅವರಿಗಿಂತ ಹೆಚ್ಚು ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿಯವರನ್ನು ಪ್ರಧಾನಿ ಖುದ್ದಾಗಿ ಭೇಟಿಯಾಗಿ ಸಂಪುಟ ಸೇರಲು ಒತ್ತಾಯಿಸಿದ್ದರೂ ಅವರು ಒಪ್ಪಿಲ್ಲ ಎನ್ನಲಾಗಿದೆ. ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಗಮನಾರ್ಹ ಸಾಧನೆಯ ಹೊರತಾಗಿಯೂ ಸಚಿವ ಸಂಪುಟದಲ್ಲಿ ಆ ಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಬಿಜೆಪಿ ಮುಂದೆ ಬಂದಿಲ್ಲ ಎನ್ನುವುದು ಕುತೂಹಲಕರ. ಬಿಹಾರದಲ್ಲಿ 16 ಸ್ಥಾನ ಗೆದ್ದಿರುವ ಜೆಡಿಯು ಪಕ್ಷಕ್ಕೆ ಬಯಸಿದಷ್ಟು ಖಾತೆಗಳು ಸಿಗದಿರುವುದು ಇರಿಸುಮುರಿಸು ಉಂಟುಮಾಡಿದೆ. ಜೆಡಿಯು ಮುಖ್ಯಸ್ಥ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಅವರ ಪಕ್ಷದಿಂದ ಯಾರೂ ಸಚಿವ ಸಂಪುಟ ಸೇರಿಲ್ಲ. ‘ನಾವು ಸಚಿವ ಸಂಪುಟ ಸೇರುವುದಿಲ್ಲ, ಆದರೆ ಎನ್‌ಡಿಎ ಭಾಗವಾಗಿ ಇರುತ್ತೇವೆ’ ಎಂದು ನಿತೀಶ್ ಹೇಳಿರುವುದು ಉಭಯ ಪಕ್ಷಗಳ ಮಧ್ಯೆ ತುಸು ಕಿರಿಕಿರಿ ಇರುವುದನ್ನು ಸೂಚಿಸುತ್ತದೆ.

ಮೋದಿಯವರು ತಮ್ಮ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯದ ಕಡೆಗೂ ಗಮನ ಕೊಟ್ಟಿದ್ದಾರೆ. ಆದರೆ ಹಾಗೆ ಮಾಡುವಾಗ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಟ್ಟಿರುವ ರಾಜ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. 62 ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಉತ್ತರಪ್ರದೇಶಕ್ಕೆ ಸಿಂಹಪಾಲು ದೊರಕಿದ್ದು, ಅಲ್ಲಿಂದ ಪ್ರಧಾನಿಯಲ್ಲದೆ ಇತರ ಒಂಬತ್ತು ಮಂದಿ ಸಚಿವರಾಗಿದ್ದಾರೆ. ಬಿಹಾರದಿಂದ ಎಲ್‌ಜೆಪಿಯ ರಾಮ್‌ವಿಲಾಸ್‌ ಪಾಸ್ವಾನ್ ಸೇರಿ ಆರು ಮಂದಿ ಸಚಿವ ಸ್ಥಾನ ಪಡೆದಿದ್ದಾರೆ. ಆದರೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಗಮನಿಸಿದರೆ ಅಸಮತೋಲನ ಎದ್ದುಕಾಣಿಸುತ್ತಿದೆ. ಸಂಪುಟ ದರ್ಜೆಯ ಸಚಿವರಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಿಂಹಪಾಲು ದೊರೆತಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಕರ್ನಾಟಕವೂ ಸಚಿವ ಸಂಪುಟದಲ್ಲಿ ದೊಡ್ಡ ಪಾಲನ್ನೇ ಪಡೆದಿದೆ. ಸಂಪುಟದ ಹಿರಿಯ ಸಚಿವರಾದ ಸದಾನಂದ ಗೌಡ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಪಡೆದರೆ, ಪ್ರಹ್ಲಾದ್ ಜೋಶಿಯವರಿಗೂ ಮಹತ್ವದ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯೇ ದೊರಕಿದೆ.

ಸುರೇಶ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ನಿರ್ಮಲಾ ಅವರು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದವರು.ರಾಜ್ಯದಲ್ಲಿ ಈ ಸಲ ಬಿಜೆಪಿಯ ಚುನಾವಣಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿರುವ ದಲಿತ ಸಮುದಾಯದಿಂದ ಎಲ್ಲ ಏಳು ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಅವರಲ್ಲಿ ಒಬ್ಬರಿಗೂ ಸಚಿವ ಸ್ಥಾನ ದೊರಕಿಲ್ಲ. ಅದರಲ್ಲೂ ಹಿಂದಿನ ಸಚಿವ ಸಂಪುಟದಲ್ಲಿದ್ದ ರಮೇಶ ಜಿಗಜಿಣಗಿ ಸ್ಥಾನ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಎಸ್.ಯಡಿಯೂರಪ್ಪ ಖುದ್ದಾಗಿ ಶಾ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಕೆಲವರ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ನೀಡಿದ್ದರೂ, ಅವರಲ್ಲಿ ಯಾರನ್ನೂ ಪರಿಗಣಿಸಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT