ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಹೆಸರು ಬದಲಿಸುವ ಚೀನಾ ನಡೆ: ಸಂಬಂಧ ಕೆಡಿಸುವ ಅಪ್ರಬುದ್ಧ ಹೆಜ್ಜೆ

Published 6 ಏಪ್ರಿಲ್ 2024, 0:29 IST
Last Updated 6 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ

ಅರುಣಾಚಲ ಪ್ರದೇಶಕ್ಕೆ ಸೇರಿದ ಮೂವತ್ತು ಸ್ಥಳಗಳಿಗೆ ಚೀನಾ ತನ್ನದೇ ಆದ ಹೆಸರು ನೀಡುವ ಕೆಲಸ ಮಾಡಿದೆ. ಆ ದೇಶವು ಇಂತಹ ಕೆಲಸ ಮಾಡುತ್ತಿರುವುದು 2017ರ ನಂತರದಲ್ಲಿ ಇದು ನಾಲ್ಕನೆಯ ಬಾರಿ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಹೆಸರುಗಳನ್ನು ಶಿಷ್ಟಗೊಳಿಸುವ ಪ್ರಕ್ರಿಯೆ ಎಂದು ಇದನ್ನು ಕರೆದುಕೊಂಡಿದೆ. ಭಾರತದ ದೃಷ್ಟಿಯಿಂದ ನೋಡುವುದಾದಲ್ಲಿ, ಈ ಇಡೀ ಪ್ರಕ್ರಿಯೆಯು ಭಾರತಕ್ಕೆ ಸೇರಿದ ಭೂಭಾಗವೊಂದರ ಮೇಲೆ ಚೀನಾ ತನ್ನ ಹಕ್ಕು ಸಾಧಿಸುವುದಕ್ಕೆ ಸಮನಾದುದು. ಚೀನಾ ದೇಶವು ಇಡೀ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಗುರುತಿಸುತ್ತದೆ. ಚೀನಾದ ನಕಾಶೆಗಳು ಭಾರತಕ್ಕೆ ಸೇರಿರುವ ರಾಜ್ಯವನ್ನು ಚೀನಾದ್ದು ಎಂಬಂತೆ ತೋರಿಸುತ್ತವೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಸೇಲಾ ಪಾಸ್ ಅಡಿಯಲ್ಲಿ ನಿರ್ಮಿಸಿರುವ ಸೇಲಾ ಸುರಂಗವನ್ನು ಉದ್ಘಾಟಿಸಿದ ನಂತರ ಚೀನಾ ಇಂತಹ ಕೆಲಸ ಮಾಡಿರುವುದು ಆಶ್ಚರ್ಯ ಮೂಡಿಸುವ ಸಂಗತಿಯೇನೂ ಅಲ್ಲ. ಗುವಾಹಟಿ ಮತ್ತು ತವಾಂಗ್ ನಡುವೆ ಸರ್ವಋತು ಸಂಪರ್ಕ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಸುರಂಗವನ್ನು ನಿರ್ಮಿಸಲಾಗಿದೆ. ಈ ಭಾಗದಲ್ಲಿ ಗಡಿಗಳನ್ನು ಕಾಯುತ್ತಿರುವ ಸೇನೆಯ ಪಾಲಿಗೆ ಈ ಸೇತುವೆಯು ಬಲವರ್ಧಕದಂತೆ ಇದೆ. ಹಾಗೆಯೇ, ಸಾರ್ವಜನಿಕರ ಪಾಲಿಗೂ ಇದು ಅನುಕೂಲಗಳನ್ನುಕಲ್ಪಿಸಿಕೊಟ್ಟಿದೆ. ಈ ಹಿಂದೆ ಮಾಡಿರುವಂತೆಯೇ ಭಾರತವು ಹೆಸರು ಬದಲಾಯಿಸುವ ಚೀನಾದ ನಡೆಯನ್ನು ಖಂಡಿಸಿದೆ. ಹೊಸ ಹೆಸರುಗಳನ್ನು ಚೀನಾ ಹುಡುಕಿಕೊಂಡಿರುವುದಕ್ಕೆ ಯಾವ ಆಧಾರವೂ ಇಲ್ಲ ಎಂದು ಹೇಳಿದೆ. ಅಲ್ಲದೆ, ಹೆಸರುಗಳನ್ನು ಬದಲಾವಣೆ ಮಾಡಿದ ಮಾತ್ರಕ್ಕೆ ಅವು ಭಾರತದ ಅವಿಭಾಜ್ಯ ಅಂಗಗಳು ಎಂಬ ಸಂಗತಿಯು ಬದಲಾಗುವುದಿಲ್ಲಎಂದು ಕೂಡ ಹೇಳಿದೆ. ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಅರುಣಾಚಲ ಪ್ರದೇಶವು ಚೀನಾದ ಭಾಗ ಆಗುವುದಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಭಾರತ ಮತ್ತು ಚೀನಾದ ನಡುವಿನ ಗಡಿ ಸಮಸ್ಯೆಯು ಇತ್ಯರ್ಥ ಕಾಣದೇ ಇರುವುದು ಇಲ್ಲಿ ಸಮಸ್ಯೆಯ ಮೂಲ. ಭಾರತಕ್ಕೆ ಸೇರಿರುವ ಪ್ರದೇಶಗಳನ್ನು ತನ್ನ ದೇಶಕ್ಕೆ ಸೇರಿದವು ಎಂದು ನಕಾಶೆಯಲ್ಲಿ ತೋರಿಸುವ, ಆ ಪ್ರದೇಶಗಳಿಗೆ ತನ್ನದೇ ಆದ ಹೆಸರುಗಳನ್ನು ನೀಡುವ ಕೃತ್ಯದ ಮೂಲಕ ಚೀನಾ ದೇಶವು ತಾನು ಹೇಳಿದಂತೆ ಒಪ್ಪಂದ ಆಗದಿದ್ದರೆ ಒಪ್ಪಂದವೇ ಬೇಡ ಎಂಬಂತೆ ನಡೆದುಕೊಳ್ಳುತ್ತಿದೆ.
ಇಂತಹ ಸಂದೇಶವನ್ನು ಚೀನಾ ಮತ್ತೆ ಮತ್ತೆ ರವಾನಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನಿಕರು 2020ರಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದರು. ಅದರ ಪರಿಣಾಮವಾಗಿ, ಮಿಲಿಟರಿ ಕಮಾಂಡರ್‌ಗಳ ಮಟ್ಟದಲ್ಲಿ ಮಾತುಕತೆ ನಡೆದು, ಎರಡೂ ಕಡೆಯ ಸೈನಿಕರು ತೆರಳಲು ಅವಕಾಶ ಇಲ್ಲದ ಬಫರ್ ವಲಯಗಳನ್ನು ಗುರುತಿಸುವ ಕೆಲಸ ಆಯಿತು. ಚೀನಾದ ಸೈನಿಕರು ನುಗ್ಗಿದ್ದ ಪ್ರದೇಶಗಳಲ್ಲಿ ಈ ರೀತಿ ಬಫರ್ ವಲಯಗಳನ್ನು ಗುರುತಿಸಲಾಯಿತು. ಭಾರತದ ಪಾಲಿಗೆ ಇದರ ಅರ್ಥ, 2020ಕ್ಕೂ ಮೊದಲು ಭಾರತದ್ದೇ ಆಗಿದ್ದ ಪ್ರದೇಶಗಳಿಗೆ ಈಗ ಭಾರತದವರೇ ತೆರಳಲು
ಸಾಧ್ಯವಾಗುತ್ತಿಲ್ಲ. ಪೂರ್ವ ಲಡಾಖ್‌ನಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಚೀನಾ ಈಗ ಭಾವಿಸಿದೆ. ಹಳಸಿದ ಸಂಬಂಧವನ್ನು ಸರಿಪಡಿಸಲು ಎರಡೂ ದೇಶಗಳು ಈಗ ಮುಂದಾಗಬೇಕಿದೆ.

ಆದರೆ, ಭಾರತಕ್ಕೆ ಸೇರಿರುವ ಪ್ರದೇಶಗಳಿಗೆ ತನ್ನದೇ ಆದ ಹೆಸರುಗಳನ್ನು ನೀಡುವ ಅಪ್ರಬುದ್ಧ ನಡೆಯನ್ನು ಚೀನಾ ಅನುಸರಿಸುವವರೆಗೆ ಇಂತಹ ಮಾತುಕತೆಗಳು ಸಾಧ್ಯವಾಗುವುದಿಲ್ಲ. ಭೂಪ್ರದೇಶಗಳ ಮೇಲೆ ಹಕ್ಕು ಸಾಧಿಸುವಾಗ ಇನ್ನೊಂದು ದೇಶದ ಮೇಲೆ ಹಗೆತನ ಪ್ರದರ್ಶಿಸುವುದಕ್ಕೆ ಚೀನಾ ಹಿಂಜರಿಯುವುದಿಲ್ಲ ಎಂಬುದನ್ನು ತೈವಾನ್ ದೇಶವನ್ನು ಬೆದರಿಸುವ ಚೀನಾದ ನಡೆ ತೋರಿಸಿಕೊಟ್ಟಿದೆ. ಇಂತಹ ನಡೆಗಳು ತಾನು ಸೂಪರ್‌ಪವರ್ ಎಂದು ಭಾವಿಸಿರುವ ಚೀನಾಕ್ಕೆ ತಕ್ಕುದಲ್ಲ. ತನ್ನ ಸರ್ಕಾರಿ ಹೇಳಿಕೆಗಳಲ್ಲಿ ‘ಏಕ ಚೀನಾ’ ಉಲ್ಲೇಖವನ್ನು ಕೈಬಿಡುವ ಮೂಲಕ ಭಾರತವು ಚೀನಾದ ಆಟಕ್ಕೆ ಉತ್ತರ ನೀಡುವ ಯತ್ನ ಮಾಡಿದೆ. ಜೈಶಂಕರ್ ಅವರು ಈಚೆಗೆ ಚೀನಾ ಭೇಟಿಯ ಸಂದರ್ಭದಲ್ಲಿ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಾಡುವ ಯಾವುದೇ ಹಗೆತನದ ಕೃತ್ಯಗಳಿಗೆ ಎದುರಾಗಿ ತನ್ನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಅಧಿಕಾರವು ಫಿಲಿಪ್ಪೀನ್ಸ್‌ ರಾಷ್ಟ್ರಕ್ಕೆ ಇದೆ ಎಂದು ಹೇಳಿದ್ದಾರೆ. ಅವೇನೇ ಇದ್ದರೂ, ಚುನಾವಣೆಯ ಈ ಹೊತ್ತಿನಲ್ಲಿ ಚೀನಾ ಇರಿಸುತ್ತಿರುವ ಈ ಹೆಜ್ಜೆಗಳು ಭಾರತದ ನಾಯಕತ್ವ ಹಾಗೂ ಭಾರತದ ಮತದಾರರ ಪಾಲಿಗೆ ‘ದೇಶದ ಎದುರು ಇರುವ ಗಡಿ ಸಮಸ್ಯೆ ಇದೇ’ ಹೊರತು ಈ ಹಿಂದೆಯೇ ಇತ್ಯರ್ಥಗೊಂಡಿರುವ ಕಚ್ಚತೀವು ದ್ವೀಪದ ವಿಷಯ ಅಲ್ಲ (ಅದನ್ನು ಮತಗಳ ಮೇಲೆ ಕಣ್ಣಿಟ್ಟು ಈಗ ಪ್ರಸ್ತಾಪಿಸಲಾಗಿದೆ) ಎಂಬುದನ್ನು ಬಹಳ ಕಠಿಣವಾದ ರೀತಿಯಲ್ಲಿ ನೆನಪಿಸಿಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT