ಗುರುವಾರ , ಮಾರ್ಚ್ 23, 2023
28 °C

ಸಂಪಾದಕೀಯ: ಸಿದ್ದೀಕ್ ಕಪ್ಪನ್ ಪ್ರಕರಣ– ಪ್ರಜಾತಂತ್ರಕ್ಕೊಂದು ಪ್ರಶ್ನೆ

ಸಂಪಾದಕೀಯ: Updated:

ಅಕ್ಷರ ಗಾತ್ರ : | |

Prajavani

845 ದಿನಗಳನ್ನು ಜೈಲಿನಲ್ಲಿ ಕಳೆದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರು ಈಗ ಬಿಡುಗಡೆ ಆಗಿದ್ದಾರೆ. ಪ್ರಜೆಗಳ ಹಕ್ಕುಗಳನ್ನು ಪ್ರಭುತ್ವವು ಹೃದಯಹೀನವಾಗಿ ನಿರ್ಲಕ್ಷಿಸುವುದರ ವಿರುದ್ಧ ಸಿಕ್ಕ ಜಯಕ್ಕೆ ಒಂದು ನಿದರ್ಶನವನ್ನಾಗಿ ಅವರ ಬಿಡುಗಡೆಯನ್ನು ಕಾಣಬಹುದು. ಸಂವಿಧಾನವು ಅಂತೂ ತನ್ನ ಪಾರಮ್ಯವನ್ನು ಸಾಧಿಸಿದೆ, ಪ್ರಜೆಗಳ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಕೊಡುವ ಕಾನೂನು ಕೊನೆಗೂ ಜಯ ಗಳಿಸಿದೆ ಎಂಬುದು ನಿಜವಿರಬಹುದು. ಹೀಗಿದ್ದರೂ, ಕಪ್ಪನ್ ಅವರ ಪ್ರಕರಣವು ಹಲವು ಅಹಿತಕರ ಪ್ರಶ್ನೆಗಳನ್ನು ಎತ್ತುತ್ತದೆ. ಯಾವ ತಪ್ಪನ್ನೂ ಎಸಗದೆ ಇದ್ದ ತಮ್ಮನ್ನು ಶಿಕ್ಷೆಗೆ ಗುರಿಪಡಿಸುವ ಹಟ ತೊಟ್ಟಿದ್ದ ಪ್ರಭುತ್ವದ ವಿರುದ್ಧ ನಡೆಸಿದ ಹೋರಾಟದ ಕಾರಣಕ್ಕಾಗಿ ಕಪ್ಪನ್ ಅವರು ನೆನಪಿನ ಪುಟಗಳಲ್ಲಿ
ಉಳಿದುಕೊಳ್ಳಲಿದ್ದಾರೆ. ಕಾನೂನಿನ ಪ್ರಕಾರ ಯಾವ ಅಪರಾಧವನ್ನೂ ಅವರು ಎಸಗಿರಲಿಲ್ಲ. ಆದರೆ, ಪೂರ್ವಗ್ರಹದಿಂದಾಗಿ ಹಾಗೂ ಕೆಡುಕನ್ನು ಉಂಟುಮಾಡುವ ಉದ್ದೇಶದಿಂದ ಪ್ರಭುತ್ವವು ಅವರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಇಲ್ಲಿ ಉಲ್ಲಂಘನೆ ಆಗಿದ್ದು ಪ್ರಜೆಯೊಬ್ಬನ ಕಾನೂನುಬದ್ಧ ಹಕ್ಕುಗಳು ಅಥವಾ ಪತ್ರಕರ್ತನೊಬ್ಬನ ಹಕ್ಕುಗಳು ಮಾತ್ರವೇ ಅಲ್ಲ. ಮನುಷ್ಯನೊಬ್ಬನಿಗೆ ಸಿಗಲೇಬೇಕಿರುವ ಮೂಲಭೂತ ಮಾನವ ಹಕ್ಕುಗಳನ್ನು ಇಲ್ಲಿ ಉಲ್ಲಂಘಿಸಲಾಯಿತು.

ಯಾವ ಕಾರಣವೂ ಇಲ್ಲದೆ ಕಪ್ಪನ್ ಅವರಿಗೆ ನಿರಂತರವಾಗಿ ತೊಂದರೆ ಕೊಡಲಾಯಿತು. ಹೀಗಾಗಿಯೇ, ಕಪ್ಪನ್ ಅವರು ಎದುರಿಸಿದ
ಸಂಕಷ್ಟಗಳನ್ನು ಮತ್ತೆ ಮತ್ತೆ ಉಲ್ಲೇಖಿಸಬೇಕಾಗುತ್ತದೆ.
ಉತ್ತರಪ್ರದೇಶ ರಾಜ್ಯದ ಹಾಥರಸ್‌ನಲ್ಲಿ ನಡೆದ ದಲಿತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣವನ್ನು ವರದಿ ಮಾಡಲು ಕಪ್ಪನ್ ಅವರು ಹೋಗುತ್ತಿದ್ದರು. ಆ ಪ್ರಕರಣವು ಉತ್ತರಪ್ರದೇಶದ ಪೊಲೀಸರ ಮೇಲೊಂದು ಕಪ್ಪು ಚುಕ್ಕೆ ಇದ್ದಂತೆ. ಆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಜೊತೆ ಶಾಮೀಲಾಗಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಇದ್ದವು. ಪ್ರಕರಣದ ವರದಿಗಾರಿಕೆಗೆ ತೆರಳುತ್ತಿದ್ದ ಕಪ್ಪನ್ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿನ ಅತ್ಯಂತ ಕರಾಳವಾದ ಕೆಲವು
ಸೆಕ್ಷನ್‌ಗಳನ್ನು ಬಳಸಿ ಪ್ರಕರಣ ದಾಖಲಿಸಲಾಯಿತು. ಕಪ್ಪನ್ ಅವರು ಸಲ್ಲಿಸಿದ ಜಾಮೀನು ಅರ್ಜಿಗಳು ಹಲವು ಕೋರ್ಟ್‌ಗಳ ಮೆಟ್ಟಿಲು ಹತ್ತಿದವು. ಮಥುರಾ ನ್ಯಾಯಾಲಯ, ಲಖನೌ ಸೆಷನ್ಸ್ ನ್ಯಾಯಾಲಯ, ಅಲಹಾಬಾದ್ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದವು. ಸುಪ್ರೀಂ ಕೋರ್ಟ್‌, ಕಪ್ಪನ್ ಅವರಿಗೆ ಹಿಂದಿನ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನು ನೀಡಿತು. ಆದರೆ, ಅವರಿಗೆ ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು ಪಡೆಯಲು ತಿಂಗಳುಗಳೇ ಬೇಕಾದವು. ಕಪ್ಪನ್ ಅವರಿಗೆ ‍ಪತ್ರಿಕಾ ವೃತ್ತಿಯಲ್ಲಿನ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಬೆಂಬಲ ನೀಡಿದರು. ಕಪ್ಪನ್ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂಬುದು ಅವರಿಗೆ ಗೊತ್ತಿತ್ತು. ಕಪ್ಪನ್ ಅವರಿಗೆ ಕಾನೂನಿನ ನೆರವು ಕೂಡ ಚೆನ್ನಾಗಿಯೇ ಸಿಕ್ಕಿತ್ತು. ಹೀಗಿದ್ದರೂ, ಅವರು ತಮ್ಮ ಜೀವನದ ಎರಡಕ್ಕಿಂತ ಹೆಚ್ಚು ವರ್ಷಗಳನ್ನು ಜೈಲಿನಲ್ಲಿ ವ್ಯರ್ಥವಾಗಿ ಕಳೆಯಬೇಕಾಯಿತು.

‘ಜಾಮೀನು ನೀಡುವುದು ಸಹಜವಾಗಿರಬೇಕೇ ವಿನಾ ಜೈಲಿನಲ್ಲಿ ಕೂಡಿಹಾಕುವುದಲ್ಲ’ ಎಂಬುದು ನಾವು ಪಾಲಿಸಬೇಕಿರುವ ನಿಯಮ ಎಂಬ ನಂಬಿಕೆ ಇದೆ. ಹೀಗಿರುವಾಗ, ಈ ಮಟ್ಟದ ಬೆಂಬಲವಿರುವ ಕಪ್ಪನ್ ಅವರೇ ತಮ್ಮ ಸ್ವಾತಂತ್ರ್ಯಕ್ಕಾಗಿ ಇಷ್ಟೊಂದು ಹೋರಾಟ ನಡೆಸಬೇಕಾಯಿತು ಎಂದಾದರೆ, ಯಾವ ಬೆಂಬಲವೂ ಇಲ್ಲದವರ ಕಥೆ ಏನು? ಯಾವ ಬೆಂಬಲವೂ ಇಲ್ಲದವರ ಸಂಖ್ಯೆ ಸಾವಿರಾರು. ತಮ್ಮ ಹಕ್ಕುಗಳು ಏನು ಎಂಬುದೇ ಗೊತ್ತಿಲ್ಲದ ಸಾವಿರಾರು ಮಂದಿ ಜೈಲಿನಲ್ಲಿದ್ದಾರೆ. ಅವರಿಗೆ ತಮ್ಮ ಹಕ್ಕುಗಳನ್ನು ಹೇಳಿಕೊಳ್ಳುವುದು ಹೇಗೆಂಬುದು ಗೊತ್ತಿಲ್ಲ. ಅವರು ತಮ್ಮ ಜೀವನದ ಹಲವು ವರ್ಷಗಳನ್ನು ಜೈಲಿನಲ್ಲಿ ವ್ಯರ್ಥವಾಗಿ ಕಳೆಯುತ್ತಾರೆ. ಹಣಕಾಸಿನ ಬೆಂಬಲ ಇಲ್ಲದ ಹಾಗೂ ಅಗತ್ಯ ಮಾರ್ಗದರ್ಶನ ಇಲ್ಲದ ಪ್ರತೀ ವ್ಯಕ್ತಿಯೂ ಜೈಲಿನಲ್ಲಿ ಕಿರುಕುಳಕ್ಕೆ ಒಳಗಾಗಬಹುದು. ಕಪ್ಪನ್ ಅವರಿಗೂ ಇದೇ ರೀತಿ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಪತ್ರಕರ್ತ ಕಪ್ಪನ್ ಪ್ರಕರಣವು ಪ್ರಜಾತಂತ್ರ ವ್ಯವಸ್ಥೆಯ ಪಾಲಿಗೆ ಒಂದು ಪ್ರಶ್ನೆಯಾಗಿ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು