ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪನ್ನು ಸರಿಪಡಿಸಿದ ಸುಪ್ರೀಂ ಕೋರ್ಟ್‌: ನಿದರ್ಶನವಾಗಿ ಉಳಿಯಲಿರುವ ತೀರ್ಪು

ಭ್ರಷ್ಟಾಚಾರದ ಬಗ್ಗೆ ಕಾನೂನು, ನೈತಿಕತೆ ಹಾಗೂ ನ್ಯಾಯದ ದೃಷ್ಟಿಯಿಂದ ಅತ್ಯುತ್ತಮವಾದ ನಿಲುವು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ವ್ಯಕ್ತವಾಗಿದೆ
Published 5 ಮಾರ್ಚ್ 2024, 22:59 IST
Last Updated 5 ಮಾರ್ಚ್ 2024, 22:59 IST
ಅಕ್ಷರ ಗಾತ್ರ

ಶಾಸನಸಭೆಗಳ ಸದಸ್ಯರು ಸಚ್ಚಾರಿತ್ರ್ಯದಿಂದ ಇರಬೇಕಿರುವುದರ ಮಹತ್ವವನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ. 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸುವ ಮೂಲಕ, ಶಾಸನಸಭೆಗಳ ಸದಸ್ಯರಿಗೆ ಇರುವ ಹಕ್ಕುಗಳ ಮಿತಿ ಏನು ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ. 1998ರ ತೀರ್ಪು ಶಾಸನಸಭೆಗಳ ಸದಸ್ಯರು, ಸದನದಲ್ಲಿ ಮತ ಚಲಾಯಿಸಲು ಅಥವಾ ಮಾತನಾಡಲು ಲಂಚ ಪಡೆದಿದ್ದರೂ ಅವರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇದೆ ಎಂದು ಹೇಳಿತ್ತು. ಸಂವಿಧಾನದ 105ನೇ ವಿಧಿ ಹಾಗೂ 194ನೇ ವಿಧಿ ಆ ರಕ್ಷಣೆಯನ್ನು ನೀಡಿವೆ ಎಂದು ಹೇಳಿತ್ತು. ಈಗ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಸದನದಲ್ಲಿ ಮತ ಚಲಾಯಿಸಲು ಅಥವಾ ಮಾತನಾಡಲು ಲಂಚ ಪಡೆಯುವ ಶಾಸಕರು ಹಾಗೂ ಸಂಸದರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. 1993ರಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರಕ್ಕೆ ಅವಿಶ್ವಾಸ ಗೊತ್ತುವಳಿಯನ್ನು ಸೋಲಿಸಲು ಸಹಾಯ ಮಾಡುವ ಉದ್ದೇಶದಿಂದ ಜೆಎಂಎಂ ಪಕ್ಷದ ಐದು ಮಂದಿ ಸಂಸದರು ಲಂಚ ಪಡೆದಿದ್ದರು ಎಂಬ ಆರೋಪ ಇದೆ. ಲಂಚ ಪಡೆದ ಆರೋಪ ಇದ್ದರೂ, ಸದನದಲ್ಲಿ ಮತ ಚಲಾಯಿಸಿದ್ದವರಿಗೆ ಸಂವಿಧಾನದ ವಿಧಿ 105(2)ರ ಅಡಿಯಲ್ಲಿ ರಕ್ಷಣೆ ಇದೆ ಎಂದು ಕೋರ್ಟ್ ಆಗ ಹೇಳಿತ್ತು. ತೀರ್ಪು ಬಂದಾಗಿನಿಂದಲೂ ಅದರ ಬಗ್ಗೆ ಆಕ್ಷೇಪಗಳು ಇದ್ದವು. ಈಗ ಏಳು ನ್ಯಾಯಮೂರ್ತಿಗಳ ನ್ಯಾಯಪೀಠವು ಆ ತೀರ್ಪನ್ನು ಅಸಿಂಧುಗೊಳಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ.

ಶಾಸಕರು ಹಾಗೂ ಸಂಸದರು ಲಂಚ ಪಡೆದರೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯಕ್ಕೆ ಹಾನಿ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸರಿಯಾಗಿಯೇ ಇದೆ. ಭ್ರಷ್ಟಾಚಾರದ ಬಗ್ಗೆ ಕಾನೂನು, ನೈತಿಕತೆ ಹಾಗೂ ನ್ಯಾಯದ ದೃಷ್ಟಿಯಿಂದ ಅತ್ಯುತ್ತಮವಾದ ನಿಲುವನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿರುವ ತೀರ್ಪು ತಾಳಿದೆ. ಭ್ರಷ್ಟಾಚಾರದ ಕುರಿತ ಗ್ರಹಿಕೆಗಳು ಹಾಗೂ ಅದನ್ನು ನಿಗ್ರಹಿಸುವ ಕ್ರಿಯೆಗಳಿಗೆ ಇದು ಮುಂದಿನ ದಿನಗಳಲ್ಲಿ ಮಾರ್ಗದರ್ಶಿಯ ರೀತಿಯಲ್ಲಿ ಬಳಕೆಯಾಗಬೇಕು. 1998ರ ತೀರ್ಪು ಶಾಸನಸಭೆಗಳ ಸದಸ್ಯರಿಗೆ ತಮ್ಮ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪರವಾನಗಿ ನೀಡುವ ಕೆಲಸ ಮಾಡಿತ್ತು, ದುರ್ಬಳಕೆಗೆ ಒಂದು ಸಮರ್ಥನೆಯನ್ನು ಒದಗಿಸಿಕೊಟ್ಟಿತ್ತು. ಅದು ಭ್ರಷ್ಟಾಚಾರಕ್ಕೆ ಮಾನ್ಯತೆ ನೀಡಿದಂತೆ ಇತ್ತು. ಅಲ್ಲದೆ, 1998ರ ತೀರ್ಪಿನಲ್ಲಿ ಬಹಳ ವಿಚಿತ್ರವಾದ ಒಂದು ವಿರೋಧಾಭಾಸ ಕೂಡ ಇತ್ತು. ಲಂಚದ ಪ್ರಭಾವಕ್ಕೆ ಗುರಿಯಾಗಿ, ಅದಕ್ಕೆ ಅನುಗುಣವಾಗಿ ಮತ ಚಲಾಯಿಸಿದವರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇದೆ; ಆದರೆ, ಲಂಚ ಪಡೆದಿದ್ದರೂ ಲಂಚದ ಉದ್ದೇಶಕ್ಕೆ ಅನುಗುಣವಾಗಿ ಅಲ್ಲದೆ, ಸ್ವತಂತ್ರವಾಗಿ ಮತ ಚಲಾಯಿಸಿದರೆ ಕಾನೂನಿನ ಕ್ರಮದಿಂದ ರಕ್ಷಣೆ ಇರುವುದಿಲ್ಲ ಎಂಬ ಅರ್ಥವನ್ನು ಅದು ನೀಡುತ್ತಿತ್ತು. ಆದರೆ ಈಗ ಬಂದಿರುವ ತೀರ್ಪು ಶಾಸನಸಭೆಗಳ ಸದಸ್ಯರಿಗೆ ಇರುವ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇಲ್ಲ, ಲಂಚವೆಂದರೆ ಲಂಚವೇ, ಅದನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಉದ್ದೇಶಕ್ಕೆ ಯಾರೇ ಪಡೆದಿದ್ದರೂ ಅದು ಲಂಚವೇ ಎಂದು ಸ್ಪಷ್ಟಪಡಿಸಿದೆ.

ಶಾಸನಸಭೆಗಳ ಸದಸ್ಯರ ಹಕ್ಕುಗಳ ಬಗ್ಗೆ ಈ ತೀರ್ಪು ಸ್ಪಷ್ಟವಾಗಿ ವಿವರಣೆಗಳನ್ನು ನೀಡಿದೆ. ಶಾಸನಸಭೆಗಳ ಸದಸ್ಯರಿಗೆ ಇರುವ ವಿಶೇಷ ಹಕ್ಕುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ, ಅವುಗಳನ್ನು ಹಲವು ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಕ್ಕುಗಳನ್ನು ಸದನದ ಎಲ್ಲ ಕಾರ್ಯಕಲಾಪಗಳ ಜೊತೆ ಇರಿಸಿ ನೋಡಬೇಕು ಎಂದು ಕೋರ್ಟ್‌ ಹೇಳಿದೆ. ಸದಸ್ಯರ ಕರ್ತವ್ಯಗಳ ಜೊತೆ ಈ ಹಕ್ಕುಗಳಿಗೆ ಸಂಬಂಧ ಇರಬೇಕು ಎಂದು ವಿವರಿಸಿದೆ. ಸದಸ್ಯರ ಹಕ್ಕುಗಳು ಸದನದ ಕಲಾಪಗಳಿಗೆ ನೆರವಾಗುವ ರೀತಿಯಲ್ಲಿ ಮಾತ್ರ ಇರುತ್ತವೆ ಎಂದು ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದುವರಿದ ಭಾಗವಾದ ಮತದಾನದ ಹಕ್ಕು ಯಾವುದೇ ಶಾಸನಸಭೆಯ ಪಾಲಿಗೆ ಅತ್ಯಗತ್ಯವಾದುದು. ಆದರೆ, ಆ ಹಕ್ಕು ಸದಸ್ಯರಿಗೆ ಅಸಮಾನವಾದ ಯಾವುದೇ ಸ್ಥಾನವನ್ನು ಕಲ್ಪಿಸಿಕೊಡುವುದಿಲ್ಲ. ವಿಶೇಷ ಹಕ್ಕುಗಳ ಪರಿಕಲ್ಪನೆಯನ್ನು ಕೋರ್ಟ್‌ ಬಹಳ ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಅಲ್ಲದೆ, ಆ ಹಕ್ಕುಗಳನ್ನು ಲಂಚ ಅಥವಾ ಅಪರಾಧದಿಂದ ಪ್ರತ್ಯೇಕಿಸಿದೆ. ಈ ತೀರ್ಪು ಭವಿಷ್ಯದಲ್ಲಿ ಒಂದು ಪೂರ್ವನಿದರ್ಶನವಾಗಿ ನಿಲ್ಲಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT