ಭಾನುವಾರ, ಸೆಪ್ಟೆಂಬರ್ 15, 2019
27 °C

ಪ್ರಧಾನಿಯ ಭೂತಾನ್‌ ಭೇಟಿ ಬಾಂಧವ್ಯ ವೃದ್ಧಿಗೆ ಪೂರಕ

Published:
Updated:
Prajavani

ಹಿಮಾಲಯದ ತಪ್ಪಲಲ್ಲಿರುವ ಪುಟ್ಟ ದೇಶ ಭೂತಾನ್‌. ಭಾರತದ ಜತೆ ಈ ದೇಶ ಸೌಹಾರ್ದ ಸಂಬಂಧ ಹೊಂದಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಈ ರಾಷ್ಟ್ರವನ್ನೇ ಆಯ್ದುಕೊಂಡಿದ್ದರು. ಎರಡನೇ ಬಾರಿಗೆ ಪ್ರಧಾನಿಯಾದ ಮೂರು ತಿಂಗಳ ಒಳಗೇ ಮತ್ತೆ ಈ ದೇಶಕ್ಕೆ ಭೇಟಿ ನೀಡಿದರು. ದಕ್ಷಿಣ ಏಷ್ಯಾ ವಲಯದಲ್ಲಿ ಭಾರತ ಹಲವು ಬಗೆಯ ಸವಾಲುಗಳನ್ನು ಎದುರಿಸುತ್ತಿದೆ. ಈ ವಲಯದಲ್ಲಿನ ವಿವಿಧ ರಾಷ್ಟ್ರಗಳಿಗೆ ನೆರವಿನಹಸ್ತ ಚಾಚುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ ಸತತವಾಗಿ ಪ್ರಯತ್ನಿಸುತ್ತಿರುವುದು ಇದಕ್ಕೆ ಒಂದು ಪ್ರಧಾನ ಕಾರಣ. ಹಾಗಾಗಿ, ನೆರೆರಾಷ್ಟ್ರಗಳ ಜತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಈ ನೆಲೆಯಲ್ಲಿ ಪ್ರಧಾನಿಯವರ ಭೂತಾನ್‌ ಭೇಟಿಯನ್ನು ವಿಶ್ಲೇಷಿಸಬೇಕಾಗಿದೆ. ಈ ಭೇಟಿಯು ಒಂದು ರೀತಿಯಲ್ಲಿ ಫಲಪ್ರದವೂ ಆಗಿದೆ. ಪ್ರಧಾನಿಯವರ ಎರಡು ದಿನಗಳ ಈ ಭೇಟಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಹತ್ತು ಒಪ್ಪಂದಗಳಾಗಿವೆ. 720 ಮೆಗಾವಾಟ್ ಸಾಮರ್ಥ್ಯದ ಮಂಗ್ಡೆಚ್ಚು ಜಲವಿದ್ಯುತ್‌ ಉತ್ಪಾದನಾ ಘಟಕವನ್ನು ಮೋದಿ ಉದ್ಘಾಟಿಸಿದ್ದಾರೆ. ವಿದ್ಯುತ್‌ ಕ್ಷೇತ್ರದಲ್ಲಿ ಸಹಕಾರ ವರ್ಧನೆಗೆ ಇದು ನೆರವಾಗಲಿದೆ. ಅಲ್ಲದೆ, 2,500 ಮೆಗಾವಾಟ್‌ ಸಾಮರ್ಥ್ಯದ ಸಂಕೋಶ್‌ ಯೋಜನೆ ಕುರಿತು ಮಾತುಕತೆ ನಡೆಸಲು ಉಭಯ ದೇಶಗಳೂ ಮುಂದಾಗಿವೆ. ಇದರಿಂದಾಗಿ, ಜಲವಿದ್ಯುತ್‌ ವಲಯದಲ್ಲಿ ಸಹಕಾರ ವೃದ್ಧಿಯು ಮತ್ತಷ್ಟು ಬಿಸುಪು ಪಡೆಯಲಿದೆ.

ಥಿಂಪುವಿನಲ್ಲಿ ಇಸ್ರೊ ಸಹಯೋಗದಲ್ಲಿ ಸ್ಥಾಪಿಸಿರುವ ಉಪಗ್ರಹ ಕೇಂದ್ರದ ಉದ್ಘಾಟನೆಯು ಪ್ರಧಾನಿ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ಇದರಿಂದಾಗಿ, ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯ ಪ್ರಯೋಜನವನ್ನು ಭೂತಾನ್‌ ಕೂಡ ಪಡೆದುಕೊಳ್ಳಬಹುದು. ಟೆಲಿಮೆಡಿಸಿನ್, ದೂರ ಶಿಕ್ಷಣ, ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸುವುದು, ಹವಾಮಾನ ಮುನ್ಸೂಚನೆ, ನೈಸರ್ಗಿಕ ವಿಪತ್ತು ನಿರ್ವಹಣೆಯಂತಹ ಕೆಲಸಗಳಿಗೆ ಈ ಕೇಂದ್ರದಿಂದ ಅನುಕೂಲ ಆಗಲಿದೆ. ಆಗಿರುವ ಒಪ್ಪಂದಗಳ ಪೈಕಿ ಹೆಚ್ಚಿನವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿವೆ. ಭೂತಾನ್‌ನ ಹಿಂದಿನ  ತಲೆಮಾರು ಎಲ್ಲದಕ್ಕೂ ಭಾರತದ ಕಡೆಗೆ ನೋಡುತ್ತಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಅಲ್ಲಿನ ಇಂದಿನ ತಲೆಮಾರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಭಾರತದ ಆಚೆಗೂ ದೃಷ್ಟಿ ಹಾಯಿಸುತ್ತಿದೆ. ಚೀನಾದ ‘ಒಂದು ವಲಯ, ಒಂದು ರಸ್ತೆ’ ಯೋಜನೆಯಿಂದ ನೆರೆಹೊರೆಯ ದೇಶಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂಬ ಅಂಶವನ್ನು ಭೂತಾನ್‌ನ ಯುವಕರ ತಲೆಯಲ್ಲಿ ತುಂಬಲಾಗುತ್ತಿದೆ. ಅಂತಹ ಅವಕಾಶಗಳ ನಿರೀಕ್ಷೆಯಲ್ಲಿ ಭೂತಾನ್‌ನ ಯುವಕರೂ ಇದ್ದಾರೆ. ಭೂತಾನ್‌ ಜನರ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವ ತಗ್ಗಿಸುವ ಉದ್ದೇಶ ಕೂಡ ಪ್ರಧಾನಿಯವರ ಭೇಟಿಯ ಹಿಂದೆ ಇದ್ದಿರಲಿಕ್ಕೆ ಸಾಕು. ಭಾರತದ ಐಐಟಿಗಳು ಹಾಗೂ ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌ ನಡುವೆ ಕೊಡು–ಕೊಳ್ಳುವಿಕೆಯ ಸಾಧ್ಯತೆಯು ಮೋದಿ ಅವರಿಗೆ ಬೆಳ್ಳಿಗೆರೆಯಂತೆ ಕಂಡಿರಬಹುದು. ಶೈಕ್ಷಣಿಕ ಒಪ್ಪಂದಗಳಿಂದ ಉಭಯ ದೇಶಗಳ ನಡುವೆ ಬೌದ್ಧಿಕ ಸಂಪತ್ತಿನ ವಿನಿಮಯ ಆಗಲಿದೆ. ಇದೇ ವೇಳೆ ಮೋದಿ ಅವರು ರುಪೇ ಕಾರ್ಡ್‌ ಸೇವೆಗೆ ಚಾಲನೆ ನೀಡಿ, ಭೂತಾನ್‌ನಲ್ಲಿ ವಹಿವಾಟಿನ ಡಿಜಿಟಲೀಕರಣಕ್ಕೆ ಭಾರತ ಇಂಧನವಾಗಬಲ್ಲದು ಎನ್ನುವ ಸಂದೇಶ ನೀಡಿದ್ದಾರೆ. ಹೆಚ್ಚಿನ ಒಪ್ಪಂದಗಳು ಅಲ್ಲಿನ ಯುವಮನಸ್ಸುಗಳನ್ನು ಸೆಳೆಯುವ ಉದ್ದೇಶ ಹೊಂದಿರುವುದು ಸ್ಪಷ್ಟ. ಭೂತಾನ್‌ ಜನರ ಅಪೇಕ್ಷೆಗಳನ್ನು ಭಾರತ ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಬೇಕು. ಭಾರತ ಅಲ್ಲಿ ಆರಂಭಿಸಲಿರುವ ಜಲವಿದ್ಯುತ್‌ ಯೋಜನೆಗಳಿಂದ ಅಲ್ಲಿನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಹೊಣೆ ಕೂಡ ಭಾರತದ ಮೇಲಿದೆ. 

Post Comments (+)