ಕುಲಪತಿಗಳ ನೇಮಕವೂ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಹಾಗೂ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಸರ್ಕಾರ ಹೊಂದಿದೆ.

ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಇದು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಕಾಯ್ದೆಗೆ ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ತಿದ್ದುಪಡಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ. ಗುಜರಾತ್ನಲ್ಲಿ ರಾಜ್ಯಪಾಲರ ಪಾತ್ರವು ಘಟಿಕೋತ್ಸವದಲ್ಲಿ ಭಾಗವಹಿಸುವುದಕ್ಕೆ ಸೀಮಿತ. ಅವರ ಪಾತ್ರ ಆಲಂಕಾರಿಕ ಮಾತ್ರ. ತಿದ್ದುಪಡಿಯು ಅಂಗೀಕಾರ ಪಡೆದರೆ, ಕುಲಪತಿಗಳು ಮತ್ತು ಶೈಕ್ಷಣಿಕ ಸಮಿತಿಗಳ ಸದಸ್ಯರ ನೇಮಕದ ನಿಯಂತ್ರಣವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಕೈಗೆ ಬರುತ್ತದೆ.

ವಿಶ್ವವಿದ್ಯಾಲಯಗಳ ಆಡಳಿತವು ರಾಜ್ಯ ಸರ್ಕಾರದ ಕೈಯಲ್ಲಿ ಕೇಂದ್ರೀಕೃತವಾಗುತ್ತದೆ. ವಿಶ್ವವಿದ್ಯಾಲಯಗಳ ಸ್ವಾಯತ್ತೆಯನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಕುಲಾಧಿಪತಿಯ ಹೊಣೆಗಾರಿಕೆಯನ್ನು ರಾಜ್ಯಪಾಲರಿಗೆ ನೀಡಲಾಗಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಹಸ್ತಕ್ಷೇಪದಿಂದ ಪಾರು ಮಾಡುವುದು ಮತ್ತು ಶೈಕ್ಷಣಿಕ ವಲಯದ ಘನತೆಯನ್ನು ರಕ್ಷಿಸುವುದು ನಿಷ್ಪಕ್ಷಪಾತಿಯಾದ ರಾಜ್ಯಪಾಲರಿಂದ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರು ನಡೆದುಕೊಳ್ಳುತ್ತಿರುವ ರೀತಿ ಹಾಗೂ ನೇಮಕಾತಿಗಳಲ್ಲಿನ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ, ರಾಜ್ಯಪಾಲರು ತಟಸ್ಥ ನಿಲುವನ್ನು ನಿಜಕ್ಕೂ ಹೊಂದಿದ್ದಾರೆಯೇ ಎಂಬ ಸಂದೇಹ ಮೂಡುತ್ತದೆ. ಈಚಿನ ವರ್ಷಗಳಲ್ಲಿ ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆ ಹೆಚ್ಚು ಹೆಚ್ಚು ಪ್ರಶ್ನೆಗಳು ಮೂಡುತ್ತಿವೆ. ಕೇಂದ್ರ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲರು ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಕೇಂದ್ರದ ಆಡಳಿತ ಪಕ್ಷದ ರಾಜಕೀಯ ಕಾರ್ಯ ಸೂಚಿಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯಪಾಲರ ಪಾತ್ರಕ್ಕೆ ಕತ್ತರಿ ಹಾಕಿ ಈ ಹೊಣೆಗಾರಿಕೆಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಪ್ರಯತ್ನವನ್ನು ರಾಜ್ಯ ಸರ್ಕಾರಗಳು ಮಾಡಿವೆ.

ಕರ್ನಾಟಕದ ಉದ್ದೇಶಿತ ತಿದ್ದುಪಡಿಯಲ್ಲಿ ಒಳ್ಳೆಯ ಅಂಶಗಳ ಜತೆಗೆ ಕೆಲವು ಲೋಪಗಳೂ ಇವೆ. ಒಂದು ಪ್ರಮುಖ ಅನುಕೂಲಕರ ಅಂಶವೆಂದರೆ, ಚುನಾಯಿತ ಪ್ರತಿನಿಧಿಗಳ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಹೆಚ್ಚಾಗುತ್ತದೆ. ಜನರಿಂದ ಆಯ್ಕೆಯಾದ ನಾಯಕನಾಗಿರುವ ಮುಖ್ಯಮಂತ್ರಿಯು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ಕೈಯಲ್ಲಿ ಅತಿಯಾದ ಅಧಿಕಾರ ಕೇಂದ್ರೀಕರಣವು ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯಕ್ಕೆ ಕುತ್ತು ತರಬಹುದು ಎಂದು ಟೀಕಾಕಾರರು ಹೇಳುತ್ತಿದ್ದಾರೆ. ವಿಶ್ವವಿದ್ಯಾಲಯಗಳ ಮೇಲೆ ರಾಜಕೀಯ ಒತ್ತಡಗಳು ಸೃಷ್ಟಿಯಾಗಬಹುದು ಎಂಬ ಕಳವಳವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಬೌದ್ಧಿಕ ಸಂವಾದ ಮತ್ತು ವಿಭಿನ್ನ ಅಭಿಪ್ರಾಯಗಳಿಗೆ ವೇದಿಕೆ ಎಂಬ ವಿಶ್ವವಿದ್ಯಾಲಯದ ಪಾತ್ರಕ್ಕೆ ರಾಜಕೀಯ ಮೇಲಾಟಗಳಿಂದ ಧಕ್ಕೆ ಬರಬಹುದು. ಕುಲಪತಿಯಂತಹ ಪ್ರಮುಖ ಶೈಕ್ಷಣಿಕ ಹುದ್ದೆಗಳ ನೇಮಕಾತಿಯು ಪ್ರತಿಭೆಯ ಬದಲು ರಾಜಕೀಯ ನಿಷ್ಠೆಯ ಆಧಾರದಲ್ಲಿ ನಡೆದರೆ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ವಿಶ್ವವಿದ್ಯಾಲಯಗಳ ವಿಶ್ವಾಸಾರ್ಹತೆ ಕುಗ್ಗುತ್ತದೆ.

ಉದ್ದೇಶಿತ ತಿದ್ದುಪಡಿಯಿಂದಾಗಿ ವಿಶ್ವವಿದ್ಯಾಲಯಗಳು ಹೆಚ್ಚು ಸ್ಪಂದನಶೀಲವಾಗಬಹುದು, ಆಡಳಿತವು ಸ್ಥಳೀಯ ಅಗತ್ಯಗಳಿಗೆ ಹೆಚ್ಚಿನ ಮಹತ್ವ ನೀಡಬಹುದು. ಏನಿದ್ದರೂ ಉನ್ನತ ಶಿಕ್ಷಣದಲ್ಲಿ ರಾಜಕೀಯದ ಪ್ರವೇಶವು ಚಿಂತೆಯ ವಿಚಾರವೇ ಆಗಿದೆ. ವಿಶ್ವವಿದ್ಯಾಲಯದ ಆಡಳಿತದಲ್ಲಿ ಸಮಗ್ರ ಸುಧಾರಣೆಯ ಅಗತ್ಯ ಇದೆ. ಇದಕ್ಕೆ ಮಾದರಿ ಪರಿಹಾರವೆಂದರೆ, ದಕ್ಷ ಆಡಳಿತದ ಜೊತೆಗೆ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತೆಗೆ ಧಕ್ಕೆ ಆಗದಂತಹ ಸಮತೋಲಿತ ವ್ಯವಸ್ಥೆ. ರಾಜ್ಯವು ತರಲು ಹೊರಟಿರುವ ತಿದ್ದುಪಡಿಯು ಈ ಸಮತೋಲನವನ್ನು ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವವಿದ್ಯಾಲಯದ ಆಡಳಿತವು ಹೆಚ್ಚು ಪಾರದರ್ಶಕ, ಸ್ವತಂತ್ರ ಮತ್ತು ಉತ್ತರದಾಯಿ ಆಗಬೇಕು ಎಂಬುದರ ಸುತ್ತ ತುರ್ತಾಗಿ ಚರ್ಚೆ ನಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.