ಶುಕ್ರವಾರ, ಆಗಸ್ಟ್ 23, 2019
25 °C

ಸಾರ್ವಜನಿಕ ಜೀವನದಲ್ಲಿ ಕೋಪಾವೇಶ ಪ್ರದರ್ಶನ ಸರಿಯಲ್ಲ

Published:
Updated:
Prajavani

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯವು ಬಹಳಷ್ಟು ಸುದ್ದಿ ಮಾಡುತ್ತಿದೆ. ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಬೀದರ್‌ ಮುಂತಾದ ಜಿಲ್ಲೆಗಳ ಅತ್ಯಂತ ಹಿಂದುಳಿದ ಹಳ್ಳಿಗಳಿಗೆ ಮುಖ್ಯಮಂತ್ರಿ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಶಾಲೆಗಳಲ್ಲಿ ವಾಸ್ತವ್ಯ ಹೂಡಿ, ಜನಸಾಮಾನ್ಯರ ದೂರು ದುಮ್ಮಾನಗಳನ್ನು ಆಲಿಸಿ ಪರಿಹಾರ ಕ್ರಮಗಳನ್ನು ಸೂಚಿಸುತ್ತಿರುವುದು ಸ್ವಾಗತಾರ್ಹ.

ಜಡ್ಡುಗಟ್ಟಿರುವ ಆಡಳಿತಯಂತ್ರ ಈ ಕಾರ್ಯಕ್ರಮದ ಪರಿಣಾಮವಾಗಿ ಚುರುಕುಗೊಂಡರೆ ಒಳ್ಳೆಯದೇ. ಅಷ್ಟೇ ಅಲ್ಲದೆ, ರಾಜಧಾನಿಯಲ್ಲಿ ಮೊಕ್ಕಾಂ ಹೂಡಿರುವ ಉನ್ನತ ಅಧಿಕಾರಿ ವರ್ಗಕ್ಕೆ ಹಳ್ಳಿಗಾಡಿನ ಸಮಸ್ಯೆಗಳ ತೀವ್ರತೆ ಮನವರಿಕೆ ಆಗಬಹುದು. ಆದರೆ ಈ ಗ್ರಾಮವಾಸ್ತವ್ಯವು ಗುಣಾತ್ಮಕ ಕಾರಣಗಳಿಗಿಂತ ಹೆಚ್ಚಾಗಿ ನಕಾರಾತ್ಮಕ ಕಾರಣಗಳಿಗೇ ಸುದ್ದಿ ಆಗುತ್ತಿರುವುದು ಒಳ್ಳೆಯದಲ್ಲ. ಈ ಭೇಟಿಯ ವೇಳೆ ಮುಖ್ಯಮಂತ್ರಿಯವರು ಒಂದೆರಡು ಕಡೆ ತಾಳ್ಮೆ ಕಳೆದುಕೊಂಡು ಜನರ ಮುಂದೆ ತಮ್ಮ ಕೋಪತಾಪ ಪ್ರದರ್ಶಿಸಿದ್ದು ಸರಿಯಲ್ಲ. ಮಾನ್ವಿ ತಾಲ್ಲೂಕಿನ ಕರೇಗುಡ್ಡ ಕ್ರಾಸ್‌ನಲ್ಲಿ ಬುಧವಾರ ತಾವು ಹೋಗುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿದ, ಬಿಜೆಪಿ ಧ್ವಜ ಹಿಡಿದ ಪ್ರತಿಭಟನಕಾರರ ಮೇಲೆ ಕುಮಾರಸ್ವಾಮಿಯವರು ಹರಿಹಾಯ್ದಿದ್ದಾರೆ. ‘ಚುನಾವಣೆಯಲ್ಲಿ ಮೋದಿಗೆ ವೋಟು ಹಾಕ್ತೀರಿ. ಸಮಸ್ಯೆ ಪರಿಹಾರಕ್ಕೆ ನಮ್ಮ ಹತ್ರ ಬರುತ್ತೀರಾ? ಈಗ ಬಸ್‌ಗೆ ದಾರಿ ಬಿಡದಿದ್ದರೆ ಲಾಠಿಚಾರ್ಜ್‌ ಮಾಡಿಸುತ್ತೇನೆ’ ಎಂದು ಮುಖ್ಯಮಂತ್ರಿಯವರು ಗದರಿಸಿರುವುದು ಅವರ ಸ್ಥಾನಕ್ಕೆ ತಕ್ಕ ನಡೆಯಲ್ಲ. ರಾಜ್ಯದ ಸಮಸ್ತರನ್ನೂ ಪ್ರತಿನಿಧಿಸುವ ಮುಖ್ಯಮಂತ್ರಿ ಹುದ್ದೆಗೆ ಅದರದ್ದೇ ಆದ ಘನತೆ, ಗೌರವ ಇದೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಜೊತೆಗೆ ಅಧಿಕಾರಸ್ಥರು ನಡೆದುಕೊಳ್ಳುವ ಒಂದು ಸಜ್ಜನಿಕೆಯ ವಿಧಾನವೂ ಇದೆ. ಮುಖ್ಯಮಂತ್ರಿಯಾದವರು ಅದನ್ನು ಮರೆತು ಸಿಟ್ಟಿಗೆದ್ದು ಕೂಗಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ.

ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಕಾರ್ಮಿಕರ ಸಮಸ್ಯೆಗಳನ್ನು ಅಲ್ಲಿನ ಗ್ರಾಮಸ್ಥರ ಸಮಸ್ಯೆಯಷ್ಟೇ ಗಂಭೀರವಾಗಿ ಅವರು ಪರಿಗಣಿಸಬೇಕಿತ್ತು. ಪ್ರತಿಭಟಿಸುವ ತಮ್ಮ ಹಕ್ಕನ್ನು ಅಧಿಕಾರಸ್ಥರು ಕ್ಷುಲ್ಲಕವಾಗಿ ಪರಿಗಣಿಸುತ್ತಿದ್ದಾರೆ ಎನ್ನುವ ಭಾವನೆ ಆ ಕಾರ್ಮಿಕರಲ್ಲಿ ಬರಕೂಡದು. ಅಲ್ಲಿಯ ಮತದಾರರು ತಮ್ಮ ಮತವನ್ನು ಬಿಜೆಪಿಗೇ ಹಾಕಿದ್ದರೂ, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅದನ್ನು ಪ್ರಶ್ನಿಸುವುದು ಯುಕ್ತವಲ್ಲ. ಅದರ ಬದಲು, ತಮಗೆ ಸಿಕ್ಕಿರುವ ಅಧಿಕಾರವನ್ನು ಬಳಸಿ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಿದರೆ ಅದೇ ಮತದಾರರು ನಾಳೆ ಅವರನ್ನೂ ಹಾಡಿ ಹೊಗಳಬಹುದು.

‘ಗ್ರಾಮವಾಸ್ತವ್ಯ ಕಾರ್ಯಕ್ರಮದ ಜನಪ್ರಿಯತೆ ನೋಡಿ ಸಹಿಸಿಕೊಳ್ಳಲಾರದೆ, ಕುಮಾರಸ್ವಾಮಿಯವರ ಕೆಲಸಕ್ಕೆ ಅಡಚಣೆ ಮಾಡಲಾಗುತ್ತಿದೆ. ಇದರಲ್ಲಿ ಬಿಜೆಪಿಯ ಷಡ್ಯಂತ್ರವಿದೆ’ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡರು ಆರೋಪಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಸುಲಲಿತವಾಗಿ ಕೆಲಸ ಮಾಡದಂತೆ ನೋಡಿಕೊಳ್ಳಲು ರಾಜ್ಯದ ಬಿಜೆಪಿ ನಾಯಕರು ಬಹಳಷ್ಟು ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂಬ ಆಪಾದನೆಯೂ ಇದೆ. ಸರ್ಕಾರ ಉರುಳಿಸಲು ಬಿಜೆಪಿ ನಡೆಸಿದ ಪ್ರಯತ್ನಗಳು ಮತ್ತು ಈ ಸಂಬಂಧ ಆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುವಂತಿವೆ. ಈಗ ಕುಮಾರಸ್ವಾಮಿ ಯವರು ಗ್ರಾಮವಾಸ್ತವ್ಯದ ಮೂಲಕ ತಮ್ಮ ಸರ್ಕಾರಕ್ಕೆ ಜನಪ್ರಿಯತೆಯನ್ನು ತಂದುಕೊಡಬಹುದು ಎನ್ನುವ ಆತಂಕ ಬಿಜೆಪಿ ನಾಯಕರಿಗೆ ಇದ್ದಿರಬಹುದು. ಹಾಗೆಂದೇ ಪ್ರತಿಭಟನಕಾರರನ್ನು ಛೂಬಿಟ್ಟು ಮುಖ್ಯಮಂತ್ರಿ ತಾಳ್ಮೆ ಕಳೆದುಕೊಳ್ಳುವಂತೆ ತಂತ್ರ ಹೂಡಿರಲೂಬಹುದು. ಇಲ್ಲವಾದಲ್ಲಿ ಪ್ರತಿಭಟನಕಾರರು ಅಲ್ಲಿ ‘ಮೋದಿ ಮೋದಿ’ ಎಂದು ಘೋಷಣೆ ಕೂಗಬೇಕಾದ ಅಗತ್ಯ ಏನಿತ್ತು ಎಂಬ ಪ್ರಶ್ನೆ ಮೂಡುವುದು ಸಹಜ.

ಸರ್ಕಾರದ ಮುಖ್ಯಸ್ಥರೊಬ್ಬರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ಮನೆಬಾಗಿಲಿಗೆ ಬಂದಾಗ, ಅವರ ಜೊತೆ ಸಂಯಮದಿಂದ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಆದರೆ ಇಲ್ಲಿ ಬಿಜೆಪಿ ಕಾರ್ಯಕರ್ತರಿಗೆ ವೈಟಿಪಿಎಸ್‌ ಕಾರ್ಮಿಕರ ಸಮಸ್ಯೆ ಪರಿಹಾರಕ್ಕಿಂತ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದೇ ಮುಖ್ಯ ಉದ್ದೇಶ ಆಗಿದ್ದಂತೆ ಕಾಣಿಸುತ್ತದೆ. ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಉದ್ವೇಗದ ಕೂಗಾಟಗಳಿಂದ ವಿಫಲಗೊಳಿಸಲು ಆಗುವುದಿಲ್ಲ ಎನ್ನುವುದು ಕುಮಾರಸ್ವಾಮಿಯವರಿಗೆ ಗೊತ್ತಿರಬೇಕಿತ್ತು. ಸಾರ್ವಜನಿಕ ಜೀವನದಲ್ಲಿ ತಾಳ್ಮೆ ಮತ್ತು ಮುತ್ಸದ್ದಿತನದಿಂದ ಎಂತಹ ಸಂಘರ್ಷವನ್ನೂ ಗೆಲ್ಲಲು ಸಾಧ್ಯವಿದೆ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ರಾಜಕೀಯ ವಿರೋಧಿಗಳು ಹೆಣೆಯುವ ಬಲೆಗೆ ಬೀಳುವುದು ಅನುಭವಿ ನಾಯಕನ ಲಕ್ಷಣ ಅಲ್ಲ. ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯವನ್ನು ನಾಡಿನ ಜನರ ಒಳಿತಿಗೆ ಹೇಗೆ ಬಳಸಿಕೊಳ್ಳಬೇಕು ಎಂದು ಆಲೋಚಿಸುವುದನ್ನು ಬಿಟ್ಟು ಎಲ್ಲವನ್ನೂ ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವ ಸಂಗತಿಯಲ್ಲ.

Post Comments (+)