ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ವ್ಯವಸ್ಥೆಗೆ ಭೀಮಬಲ ನೀಡಲಿದೆ ರಿಸ್ಯಾಟ್‌– 2ಬಿ

Last Updated 24 ಮೇ 2019, 19:57 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಒಂದು ದಿನ ಮುನ್ನ, ಇಸ್ರೊ ತನ್ನ ರಿಸ್ಯಾಟ್‌– 2ಬಿ ಉಪಗ್ರಹವನ್ನು ಉಡಾವಣೆ ಮಾಡಿ ನಿಗದಿತ ಕಕ್ಷೆಗೆ ಸೇರಿಸುವ ಮೂಲಕ, ಭಾರತೀಯ ಬಾಹ್ಯಾಕಾಶ ಚರಿತ್ರೆಯಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ. ಕೃಷಿ ಹವಾಮಾನ ಮುನ್ಸೂಚನೆ, ಬರ ನಿರ್ವಹಣೆ ವ್ಯವಸ್ಥೆ, ಅರಣ್ಯೀಕರಣ ಮತ್ತು ಅರಣ್ಯ ಬೆಂಕಿ ಮೇಲೆ ನಿಗಾ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು ಇವುಗಳಿಗಿಂತ ಮುಖ್ಯವಾಗಿ ಸೇನಾ ಕಣ್ಗಾವಲು ವ್ಯವಸ್ಥೆಯಲ್ಲಿ ಉಪಗ್ರಹವು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಭಾರತಕ್ಕೆ ಭೀಮಬಲ ಬಂದಂತಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮೇ 22ರಂದು ಬೆಳಿಗ್ಗೆ 5.30ಕ್ಕೆ ರಿಸ್ಯಾಟ್‌– 2ಬಿ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಸಿ–46 ರಾಕೆಟ್‌ ಬಾನಿಗೆ ಜಿಗಿಯಿತು. ಉಡಾವಣೆಯಾದ 15 ನಿಮಿಷ, 30 ಸೆಕೆಂಡುಗಳಲ್ಲಿ 615 ಕೆ.ಜಿ. ತೂಕದ ಉಪಗ್ರಹವನ್ನು ಭೂಮಿಯಿಂದ 556 ಕಿಲೊಮೀಟರ್‌ ದೂರದ ಕಕ್ಷೆಗೆ ಸೇರಿಸಲಾಯಿತು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ. ದೂರಸಂವೇದಿ ಉ‍ಪಗ್ರಹಗಳು ಸಾಮಾನ್ಯವಾಗಿ ಗೋಚರಿಸುವ ಬೆಳಕನ್ನು ಆಧಾರವಾಗಿ ಇರಿಸಿಕೊಂಡು ಕೆಲಸ ಮಾಡುತ್ತವೆ. ಇದರಿಂದಾಗಿ, ಉಪಗ್ರಹಗಳಿಂದ ಮಳೆಗಾಲದಲ್ಲಿ ಬರುವ ಮಾಹಿತಿಯನ್ನು ವಿಶ್ಲೇಷಿಸುವುದು ಕಷ್ಟವಾಗುತ್ತಿತ್ತು. ಆದರೆ 2012ರ ಏಪ್ರಿಲ್‌ನಲ್ಲಿ ಕಳುಹಿಸಿದ ರಿಸ್ಯಾಟ್‌– 1 ಮಾದರಿಯಲ್ಲೇ, ರಿಸ್ಯಾಟ್‌– 2ಬಿ ಸಹ ಮೈಕ್ರೊವೇವ್‌ ಅನ್ನು ಆಧರಿಸಿ ಕಾರ್ಯ ನಿರ್ವಹಿಸಲಿದೆ. ಈ ಮೈಕ್ರೊವೇವ್‌, ಗಗನದಲ್ಲಿರುವ ಮೋಡ, ದೂಳನ್ನು ದಾಟಿ ಭೂಮಿಯ ಮೇಲಿರುವ ವಸ್ತುವಿಗೆ ಬಡಿದು ಉಪಗ್ರಹಕ್ಕೆ ವಾಪಸಾಗಲಿದೆ.ನೈಸರ್ಗಿಕವಾಗಿ ಹೊರಹೊಮ್ಮುವ ಮೈಕ್ರೊವೇವ್‌ಗಳನ್ನು ಗ್ರಹಿಸುವ ಸೆನ್ಸರ್‌ಗಳು ಈ ಉಪಗ್ರಹದಲ್ಲಿಲ್ಲ. ಆದರೆ ತನ್ನಿಂದ ನಿಗದಿತ ಸಮಯದಲ್ಲಿ ಹೊರಹೊಮ್ಮುವ ಮೈಕ್ರೊವೇವ್‌ಗಳನ್ನು ಆಧರಿಸಿ ಕೆಲಸ ಮಾಡಲಿದೆ. ವಾಪಸಾಗುವ ಮೈಕ್ರೊವೇವ್‌ ಸಂಕೇತದ ಬಲ ಮತ್ತು ಸಂಕೇತ ವಾಪಸಾಗುವ ಸಮಯವನ್ನು ಆಧರಿಸಿ ಉಪಗ್ರಹವು ವಸ್ತುವಿನ ವಿಶ್ಲೇಷಣೆ ಮಾಡಲಿದೆ. ಇದರಿಂದಾಗಿ ದಟ್ಟ ಮೋಡವಿದ್ದರೂ ನಿಖರ ಮಾಹಿತಿ ದೊರಕಲಿದೆ. ಉಪಗ್ರಹವು ತನ್ನ ಐದು ವರ್ಷಗಳ ಜೀವಿತಾವಧಿಯಲ್ಲಿ ಹವಾಮಾನವನ್ನು ಲೆಕ್ಕಿಸದೆ, ರಾತ್ರಿ–ಹಗಲು ಎನ್ನದೆ ನಿರಂತರವಾಗಿ ಕೆಲಸ ಮಾಡಲಿದೆ. ಇದು ಭಾರತದ ಪಾಲಿಗೆ ಮಾಹಿತಿಯ ಭಂಡಾರವನ್ನೇ ಒದಗಿಸಲಿದೆ.

ರಿಸ್ಯಾಟ್‌– 2ಬಿ ಮೂಲಕ ಭಾರತಕ್ಕೆ ಇಸ್ರೊ ಹಲವು ಅಚ್ಚರಿಗಳನ್ನೇ ನೀಡಿದೆ. ಉಪಗ್ರಹದಲ್ಲಿ ಮೊದಲ ಬಾರಿಗೆ ಎಕ್ಸ್‌ ಬ್ಯಾಂಡ್‌ನ ಸಿಂಥೆಟಿಕ್‌ ಅಪರ್ಚರ್‌ ಅಳವಡಿಸಲಾಗಿದೆ. ಇದರಿಂದಾಗಿ ಉತ್ಕೃಷ್ಟ ಗುಣಮಟ್ಟದ ಚಿತ್ರಗಳು ದೊರಕುತ್ತವೆ. ಒಂದು ಚದರ ಮೀಟರ್‌ ವ್ಯಾಪ್ತಿಯಲ್ಲಿರುವ ವಸ್ತುಗಳನ್ನು ಉಪಗ್ರಹ ಕಳುಹಿಸುವ ಚಿತ್ರಗಳಿಂದ ಗುರುತಿಸಲು ಸಾಧ್ಯ. ಇಂತಹ ತಂತ್ರಜ್ಞಾನವನ್ನು ಸ್ವದೇಶದಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದೇ ವರ್ಷದಲ್ಲಿ ಇಸ್ರೊ ಇದೇ ಮಾದರಿಯ ನಾಲ್ಕು ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಇದರಿಂದಾಗಿ ನೇಪಾಳ, ಭೂತಾನ್‌, ಪಾಕಿಸ್ತಾನ, ಶ್ರೀಲಂಕಾವನ್ನು ಒಳಗೊಂಡ ಭಾರತ ಉಪಖಂಡದ ಮೇಲೆ ನಿರಂತರವಾಗಿ ನಿಗಾ ವಹಿಸಲು ಸಾಧ್ಯವಾಗಲಿದೆ. ಈ ಉಪಗ್ರಹ ಸರಣಿಯಿಂದ ಕೃಷಿ, ಅರಣ್ಯ, ನೈಸರ್ಗಿಕ ವಿಪತ್ತಿನ ನಿರ್ವಹಣೆಯಲ್ಲಿ ಭಾರತಕ್ಕೆ ಹೆಚ್ಚಿನ ಬಲ ದೊರಕಲಿದೆ. ಭಯೋತ್ಪಾದಕರ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಲೂ ಇದು ಸಹಕಾರಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT