ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸನಾತನ ಧರ್ಮ: ಸೃಷ್ಟಿಯಾಗಿರುವ ವಿವಾದವು ಈ ಕಾಲಕ್ಕೆ ಹಿಡಿದ ಕನ್ನಡಿ

Published 7 ಸೆಪ್ಟೆಂಬರ್ 2023, 22:08 IST
Last Updated 7 ಸೆಪ್ಟೆಂಬರ್ 2023, 22:08 IST
ಅಕ್ಷರ ಗಾತ್ರ

ಡಿಎಂಕೆ ಮುಖಂಡ ಮತ್ತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಯು ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ವಿರೋಧಿ ಪಕ್ಷಗಳು ಇತ್ತೀಚೆಗೆ ರೂಪಿಸಿಕೊಂಡಿರುವ (ಡಿಎಂಕೆ ಇದರ ಭಾಗವಾಗಿದೆ) ಐ.ಎನ್‌.ಡಿ.ಐ.ಎ. (‘ಇಂಡಿಯಾ’) ಮೈತ್ರಿಕೂಟದ ಮೇಲೆ ವಾಗ್ದಾಳಿ ನಡೆಸುವುದಕ್ಕಾಗಿ ಬಿಜೆಪಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ. ಸನಾತನ ಧರ್ಮವನ್ನು ಕೊರೊನಾ ವೈರಾಣು, ಮಲೇರಿಯಾ ಮತ್ತ ಡೆಂಗಿಗೆ ಉದಯನಿಧಿ ಹೋಲಿಸಿದ್ದಾರೆ. ಇಂತಹವುಗಳನ್ನು ವಿರೋಧಿಸಿದರಷ್ಟೇ ಸಾಲದು, ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ಉದಯನಿಧಿ ಅವರು ಸಾಮಾನ್ಯ ಮುಖಂಡ ಅಲ್ಲ, ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಮಗ. ಹೀಗಾಗಿಯೇ ಅವರ ಹೇಳಿಕೆಯು ಹೆಚ್ಚು ಗಮನ ಸೆಳೆದಿದೆ ಮಾತ್ರವಲ್ಲ ಅದಕ್ಕೊಂದು ಅಧಿಕೃತತೆಯೂ ಬಂದಿದೆ. ಐ.ಎನ್‌.ಡಿ.ಐ.ಎ. ಮೈತ್ರಿಕೂಟದ ಮುಖಂಡರನ್ನು ಈ ಹೇಳಿಕೆಯು ಇಕ್ಕಟ್ಟಿಗೆ ಸಿಲುಕಿಸಿದೆ ಮತ್ತು ಅವರು ರಕ್ಷಣಾತ್ಮಕವಾಗುವಂತೆ ಮಾಡಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಬಿಜೆಪಿ, ಇದು ಹಿಂದೂ ಧರ್ಮದ ಮೇಲೆ ಮತ್ತು ದೇಶದ ವಿಶಿಷ್ಟ ಅಸ್ಮಿತೆ, ಪರಂಪರೆ ಹಾಗೂ ಮೌಲ್ಯಗಳ ಮೇಲೆ ನಡೆಸಿದ ದಾಳಿ ಎಂದು ಬಿಂಬಿಸಿದೆ. ಚುನಾವಣೆಗಳು ಸನಿಹವಿರುವ ಈ ಸಂದರ್ಭದಲ್ಲಿ ಇದು ಅನಾಯಾಸವಾಗಿ ಸಿಕ್ಕ ಅವಕಾಶ ಎಂದು ಬಿಜೆಪಿ ಭಾವಿಸಿದೆ. 

ತನ್ನ ರಾಜಕೀಯ ಮತ್ತು ಚುನಾವಣಾ ಸಂಕಥನದ ಭಾಗವಾಗಿ ಈಗ ಸೃಷ್ಟಿಯಾಗಿರುವ ವಿವಾದವನ್ನು ಬಿಜೆಪಿ ಬಳಸಿಕೊಂಡರೆ ಅದರಿಂದ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ ಆಗಬಹುದು. ಹಾಗಾಗಿಯೇ ಮೈತ್ರಿಕೂಟದ ಮುಖಂಡರಲ್ಲಿ ಗೊಂದಲ ಉಂಟಾಗಿದೆ. ಮೈತ್ರಿಕೂಟ ದಲ್ಲಿರುವ ಹೆಚ್ಚಿನ ಪಕ್ಷಗಳು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿವೆ. ಕಾಂಗ್ರೆಸ್‌ನಿಂದ ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ನಾಜೂಕಿನಿಂದ ಅಲ್ಲಗಳೆಯುವ ಯತ್ನ, ಬೆಂಬಲ, ವಿರೋಧ... ಹೀಗೆ ಎಲ್ಲ ರೀತಿಯ ಅಭಿಪ್ರಾಯಗಳೂ ಅದರಲ್ಲಿ ಸೇರಿವೆ. ಆದರೆ, ಹೆಚ್ಚಿನ ಪಕ್ಷಗಳು ಬಹಳ ಎಚ್ಚರ ವಹಿಸಿವೆ ಮತ್ತು ಹೇಳಿಕೆಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ. ಹೇಳಿಕೆಯು ಎಷ್ಟು ಸಮಸ್ಯಾತ್ಮಕವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಉದಯನಿಧಿ ಅವರು ಸರಿಯಾದ ರೀತಿಯಲ್ಲಿ ಈ ಹೇಳಿಕೆಯನ್ನು ನೀಡಿಲ್ಲ. ಯಾವುದೇ ಹಾನಿ ಇಲ್ಲದ ಹಾಗೆ ಸಮರ್ಥಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ರೀತಿಯಲ್ಲಿ ಈ ಹೇಳಿಕೆ ಇದೆ. ಈ ಹೇಳಿಕೆಯನ್ನು ಬಿಜೆಪಿ ತನಗೆ ಬೇಕಾದಂತೆ ವ್ಯಾಖ್ಯಾನಿಸುತ್ತಿದೆ. ಉದಯನಿಧಿ ಅವರು ನರಮೇಧಕ್ಕೆ ಕರೆ ಕೊಟ್ಟಿದ್ದಾರೆ ಎಂದೂ ಬಿಜೆಪಿ ಹೇಳಿದೆ. ಇದು ದ್ವೇಷ ಭಾಷಣಕ್ಕೆ ಸಮಾನ ಎಂಬ ಕಾರಣಕ್ಕೆ ಉದಯನಿಧಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಪ್ರತಿದೂರುಗಳು ಕೂಡ ದಾಖಲಾಗಿವೆ. 

ತಮ್ಮ ಪಕ್ಷದ ದ್ರಾವಿಡ ಸಿದ್ಧಾಂತವನ್ನು ಉದಯನಿಧಿ ಅವರು ಪುನರುಚ್ಚರಿಸಿದ್ದಾರೆ. ದ್ರಾವಿಡ ಸಿದ್ಧಾಂತದ ಪ್ರಕಾರ, ಸನಾತನ ಧರ್ಮ ಎಂಬುದು ವೈದಿಕ ಧರ್ಮ ಮತ್ತು ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆ. ಉದಯನಿಧಿ ಅವರು ತಮ್ಮ ಮಾತುಗಳನ್ನು ಹೆಚ್ಚು ಸ್ವೀಕಾರಾರ್ಹ ರೀತಿಯಲ್ಲಿ ಆಡಬಹುದಿತ್ತು. ಸನಾತನ ಧರ್ಮ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯೆ ಎಂದೂ ಇರಲಿಲ್ಲ. ಇದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಕಾರಣದಿಂದಾಗಿ ಸನಾತನ ಧರ್ಮವು ಬೇರೆ ಬೇರೆ ವ್ಯಕ್ತಿಗಳ ಪಾಲಿಗೆ ಬೇರೆ ಬೇರೆ ರೀತಿಯಲ್ಲಿ ಕಾಣಬಹುದು. ಇದೇ ಇದರ ಶಕ್ತಿ ಎಂಬಂತೆ ಭಾಸವಾಗುತ್ತದೆ. ಉದಯನಿಧಿ ಹೇಳಿಕೆಯು ರಾಷ್ಟ್ರ ಮಟ್ಟದಲ್ಲಿ ಸೃಷ್ಟಿಸಿದ ಸಂಚಲನ ಮತ್ತು ವಿವಾದವು ನಮ್ಮ ಕಾಲವು ಹೇಗಿದೆ ಎಂಬುದರ ಸೂಚಕವೂ ಹೌದು. ಕೆಲವು ವರ್ಷಗಳ ಹಿಂದೆ ಆಗಿದ್ದರೆ ಈ ಹೇಳಿಕೆಯು ಪೌರನೊಬ್ಬನ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳಿ ನಿರ್ಲಕ್ಷ್ಯ ಅಥವಾ ಅಲ್ಲಗಳೆಯುವಿಕೆಗೆ ಒಳಗಾಗುತ್ತಿತ್ತೇನೋ. ಹೇಳಿಕೆ ಮತ್ತು ಅದರ ಪರಿಣಾಮಗಳ ಬಗೆಗಿನ ಚರ್ಚೆ ಹೆಚ್ಚು ಗದ್ದಲವಿಲ್ಲದೆ ನಡೆಯಬಹುದಿತ್ತು. ಆದರೆ, ಸನಾತನ ಧರ್ಮ ಮತ್ತು ಅದರ ವ್ಯಾಖ್ಯೆಯ ಮೇಲೆ ಏಕಸ್ವಾಮ್ಯ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಈಗ ಸೃಷ್ಟಿಯಾಗಿರುವ ವಿವಾದವು ಸಹಜವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT