ಕಠಿಣ ಕಾನೂನಷ್ಟೇ ಸಾಲದು ಮನೋಭಾವ ಬದಲಾಗಲಿ

7

ಕಠಿಣ ಕಾನೂನಷ್ಟೇ ಸಾಲದು ಮನೋಭಾವ ಬದಲಾಗಲಿ

Published:
Updated:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ (ಎಸ್‍ಸಿ– ಎಸ್‍ಟಿ ಕಾಯ್ದೆ) ಇದ್ದ ಮೂಲ ಅಂಶಗಳನ್ನು ಉಳಿಸಿಕೊಳ್ಳುವುದಕ್ಕಾಗಿ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೂರು ದಾಖಲಾದ ತಕ್ಷಣವೇ ಎಫ್‍ಐಆರ್ ದಾಖಲು ಹಾಗೂ ಬಂಧನಕ್ಕೆ ಇದ್ದ ಅವಕಾಶವನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ಈ ವರ್ಷ ಮಾರ್ಚ್ 20ರಂದು ತೀರ್ಪು ನೀಡಿತ್ತು.

ಈ ತೀರ್ಪು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. 1989ರ ಎಸ್‍ಸಿ– ಎಸ್‍ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಯತ್ನ ಇದು ಎಂಬಂಥ ಟೀಕೆಗಳನ್ನು ಮಾಡಲಾಗಿತ್ತು. ನಂತರ ರಾಷ್ಟ್ರದಾದ್ಯಂತ ಏಪ್ರಿಲ್ 2ರಂದು ದಲಿತರು ನಡೆಸಿದ ಪ್ರತಿಭಟನಾ ಪ್ರದರ್ಶನಗಳು ಹಿಂಸೆಗೆ ತಿರುಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಜೊತೆಗೆ, ಈ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎ.ಕೆ. ಗೋಯಲ್ ಅವರನ್ನು ಇತ್ತೀಚೆಗೆ ಅವರ ನಿವೃತ್ತಿ ನಂತರ ರಾಷ್ಟ್ರೀಯ ಹಸಿರು ಪೀಠದ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದ್ದು ದಲಿತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಳೆದ ನಾಲ್ಕು ತಿಂಗಳುಗಳಿಂದಲೂ ಈ ಆಕ್ರೋಶ ಕುದಿಯುತ್ತಲೇ ಇತ್ತು. ಇದೇ ಆಗಸ್ಟ್ 9ರಂದು ರಾಷ್ಟ್ರವ್ಯಾಪಿ ಬಂದ್‍ಗೆ ದಲಿತ ಗುಂಪುಗಳು ಕರೆ ನೀಡಿದ್ದು ಸಮಸ್ಯೆಯನ್ನು ಮತ್ತಷ್ಟು ಸೂಕ್ಷ್ಮವಾಗಿಸಿತ್ತು. ಈ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳ ಜೊತೆಗೆ, ತನ್ನದೇ ಮಿತ್ರಪಕ್ಷಗಳಿಂದಲೂ ಕೇಂದ್ರದ ಎನ್‍ಡಿಎ ಸರ್ಕಾರ ಒತ್ತಡಕ್ಕೆ ಒಳಗಾಗಿತ್ತು.

ದಲಿತರ ಪರವಾಗಿ ಎಲ್‍ಜೆಪಿ, ಜೆಡಿಯು ಹಾಗೂ ಆರ್‌ಪಿಐ ಪಕ್ಷಗಳು ಬಹಿರಂಗವಾಗಿ ಬೆಂಬಲ ಘೋಷಿಸಿದ್ದವು. ಈ ಬೆಳವಣಿಗೆಗಳಿಂದಾಗಿ ಹಾಗೂ ದೂರದೃಷ್ಟಿಯ ರಾಜಕೀಯ ಕಾರಣಗಳಿಗಾಗಿ ಎನ್‌ಡಿಎ ಸರ್ಕಾರ ಮಣಿಯಬೇಕಾಗಿ ಬಂತು ಎಂಬುದು ಸ್ಪಷ್ಟ. ದಲಿತರು ಮತ್ತಿತರ ದಮನಿತರು ಒಟ್ಟಾಗಿ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಕಡೆಗಣಿಸಲಾಗದು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡಗಳಿಗೆ ಈ ವರ್ಷಾಂತ್ಯಕ್ಕೆ ಚುನಾವಣೆಗಳು ಬೇರೆ ನಡೆಯಲಿವೆ. ಈ ಮೂರೂ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯ ದಲಿತ ಹಾಗೂ ಆದಿವಾಸಿ ಜನಸಮುದಾಯದವರಿದ್ದಾರೆ.

ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಪಕ್ಷದ ಎಂಪಿಗಳ ಸಂಖ್ಯೆ ಲೋಕಸಭೆಯಲ್ಲಿ 6 ಮಾತ್ರ ಇರಬಹುದು. ಆದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರ, ಬಿಜೆಪಿಗೆ ಮುಖ್ಯವಾದುದು. ಆದರೆ ದಲಿತರ ಉದ್ಧಾರದ ವಿಷಯ ಈ ಬಗೆಯ ರಾಜಕೀಯ ಲೆಕ್ಕಾಚಾರಗಳಿಗಷ್ಟೇ ಸೀಮಿತವಾಗುವುದು ಸಲ್ಲದು.

ದಲಿತರ ಮೇಲಿನ ತಾರತಮ್ಯ ಹಾಗೂ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹುರಿಮೀಸೆ ಬಿಟ್ಟವನು ಅಥವಾ ಕುದುರೆ ಸವಾರಿ ಮಾಡಿದವನು ದಲಿತ ಎಂಬ ಕಾರಣಕ್ಕಾಗಿಯೇ ದೌರ್ಜನ್ಯಕ್ಕೆ ಒಳಗಾಗಬೇಕಾದ ಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿ. ದಲಿತ ಸಮುದಾಯಕ್ಕೆ ಸೇರಿದ ಪಶುವೈದ್ಯೆಗೆ ಕುಡಿಯಲು ನೀರು ಕೊಡಲು ನಿರಾಕರಿಸಿದ ಪ್ರಕರಣ, ಉತ್ತರ ಪ್ರದೇಶದ ಕೌಶಾಂಬಿಯಿಂದ ಈಗ ವರದಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಕಾಯ್ದೆಯ ಮೂಲ ಅಂಶಗಳನ್ನು ಉಳಿಸಿಕೊಂಡಿರುವುದರಿಂದ ದಲಿತರ ಬದುಕಿನಲ್ಲಿ ತಕ್ಷಣವೇ ದೊಡ್ಡ ಸುಧಾರಣೆ ಆಗಿಬಿಡುತ್ತದೆ ಎಂದೇನೂ ಭಾವಿಸಲಾಗದು.

ಶ್ರೇಣೀಕೃತ ಜಾತಿ ವ್ಯವಸ್ಥೆಯ ಪೂರ್ವಗ್ರಹಗಳು ತನಿಖೆ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಸಹಜವಾಗಿಯೇ ಶಿಕ್ಷೆಯ ಪ್ರಮಾಣ ಕುಸಿಯುತ್ತದೆ. ಈ ಕಾನೂನಿನ ಅಡಿ 2016ರಲ್ಲಿ ಶಿಕ್ಷೆಯಾದ ಪ್ರಮಾಣ ಕೇವಲ ಶೇ 16ರಷ್ಟು ಎಂಬುದು ಕಹಿ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತದೆ. ಕರ್ನಾಟಕದಲ್ಲಂತೂ 2016ರಲ್ಲಿ ಈ ಕಾನೂನಿನ ಅಡಿ ಆದ ಶಿಕ್ಷೆಯ ಪ್ರಮಾಣ ಕೇವಲ ಶೇ 2.8. ರಾಷ್ಟ್ರದಲ್ಲೇ ಇದು ಅತಿ ಕಡಿಮೆ  ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳಬ್ಯೂರೊ ವರದಿ ಹೇಳಿದೆ. ಹೀಗಾಗಿ ಬರೀ ಕಠಿಣ ಕಾನೂನು ಸಾಲದು.

ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನವೂ ಅಗತ್ಯ. ಆದರೆ ಭಾರತದಂತಹ ವೈವಿಧ್ಯಮಯ ಸಂಕೀರ್ಣ ರಾಷ್ಟ್ರದಲ್ಲಿ ಎಸ್‍ಸಿ–ಎಸ್‍ಟಿ ಕಾಯ್ದೆಯ ಸಾಂಕೇತಿಕತೆಯೂ ಮುಖ್ಯ. ದಲಿತರು ಹಾಗೂ ಆದಿವಾಸಿಗಳಿಗೆ ಇದು ನೀಡುವ ಅಧಿಕಾರ ಹಾಗೂ ಘನತೆಯ ಭಾವನೆಯೂ ಮುಖ್ಯವಾದುದು. ಕಾನೂನಿನ ಆಶಯ ಪೂರ್ಣಗೊಳಿಸಲು ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಸ್ಥಿತಿಯೂ ನಿರ್ಮಾಣವಾಗಬೇಕು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !