ಶನಿವಾರ, ಆಗಸ್ಟ್ 15, 2020
21 °C

ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಅಮೆರಿಕ– ಚೀನಾ ವಾಣಿಜ್ಯ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವಣ ಸುಂಕ ಸಮರವು ವಿಶ್ವದಾದ್ಯಂತ ಆತಂಕದ ಕಂಪನ ಮೂಡಿಸಿದೆ. ಜಾಗತಿಕ ಆರ್ಥಿಕತೆಯು ಸೂಕ್ಷ್ಮ ಘಟ್ಟದಲ್ಲಿ ಇರುವಾಗ ಅಮೆರಿಕದ ನಿಲುವು ವಿಶ್ವ ಸಮುದಾಯದ ಪಾಲಿಗೆ ಕಂಟಕವಾಗಿ ಪರಿಣಮಿಸಲಿದೆ. ವಾಣಿಜ್ಯ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ನಡೆದ ಹಲವು ಸುತ್ತಿನ ಮಾತುಕತೆ ಫಲ ನೀಡಿಲ್ಲ. ಈ ಮಧ್ಯೆ, ಚೀನಾದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳ ಮೇಲೆ ಅಮೆರಿಕ ಸುಂಕ ಹೆಚ್ಚಿಸಿದೆ. ಇದರಿಂದ ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಚಂಚಲವಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ವಹಿವಾಟು ನಡೆದ ಸತತ ಎಂಟು ದಿನಗಳಲ್ಲಿ ಮುಂಬೈ ಷೇರುಪೇಟೆ ನಿರಂತರ ಕುಸಿತ ಕಂಡಿದೆ. ದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆ ಮೌಲ್ಯದಲ್ಲಿ ₹ 4.95 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಈ ಸಂಘರ್ಷವು ತಾರಕಕ್ಕೆ ಏರಿದರೆ ಭಾರತದ ಆರ್ಥಿಕತೆ ಅದರಲ್ಲೂ ವಿಶೇಷವಾಗಿ ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಲಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಹಿನ್ನಡೆ ಕಾಣಲಿದೆ. ಆಮದು ಸುಂಕ ಕುರಿತ ವಾಣಿಜ್ಯ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿರುವುದು ದುರದೃಷ್ಟಕರ ಬೆಳವಣಿಗೆ. ಈ ವಾಣಿಜ್ಯ ಸಮರದ ಪರಿಣಾಮ ವ್ಯಾಪಕವಾಗಿದೆ. ಸ್ವಹಿತಾಸಕ್ತಿ ರಕ್ಷಣಾ ಧೋರಣೆ ಮತ್ತು ವಾಣಿಜ್ಯ ಬಾಂಧವ್ಯಕ್ಕೆ ಸಂಬಂಧಿಸಿದ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆಗೆ ಎದುರಾಗಿರುವ ಪ್ರಮುಖ ಗಂಡಾಂತರಗಳಾಗಿವೆ. ಅಮೆರಿಕದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಚೀನಾ ಕದ್ದಿರುವುದು ತನಿಖೆಯಿಂದ ಪತ್ತೆಯಾದ ಬಳಿಕ ಅಮೆರಿಕವು ಸುಂಕ ಹೆಚ್ಚಿಸುವ ಕಠಿಣ ನಿರ್ಧಾರಕ್ಕೆ ಬಂದಿದೆ. ಚೀನಾ ರಫ್ತು ಮಾಡುತ್ತಿರುವ ಬಹುತೇಕ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕಂಪನಿಗಳೇ ತಯಾರಿಸುತ್ತಿವೆ. ಇದರಲ್ಲಿ ಅಮೆರಿಕದ ಕಂಪನಿಗಳೂ ಇವೆ. ಹೀಗಾಗಿ ಈ ವಾಣಿಜ್ಯ ಸಮರವು ವಿಶ್ವ ವ್ಯಾಪಾರದ ಬುಡವನ್ನೇ ಅಲುಗಾಡಿಸಲಿದೆ. 2019ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇ 3.5ರಿಂದ ಶೇ 3.3ಕ್ಕೆ ಇಳಿಯಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜು ಮಾಡಿದೆ. ಈ ವಾಣಿಜ್ಯ ಸಮರವು ವಿಶ್ವದ ಆರ್ಥಿಕ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೆಲವು ದೇಶಗಳ ವಿರುದ್ಧ ಕೈಗೊಂಡ ಕೆಲ ನಿರ್ಧಾರಗಳಿಂದ ಇಡೀ ವಿಶ್ವವೇ ಬೆಲೆ ತೆರಬೇಕಾಗಿದೆ. ‘ಟ್ರಂಪ್‌ ಅವರ ನಿರ್ಧಾರಗಳು ಆರ್ಥಿಕವಾಗಿ ತರ್ಕಬದ್ಧವಲ್ಲ. ಆಮದು ಸುಂಕ ಹೆಚ್ಚಳದ ಹೊರೆಯನ್ನು ಅಮೆರಿಕದ ಗ್ರಾಹಕರೇ ಭರಿಸಬೇಕಾಗುತ್ತದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಅವಕಾಶಗಳೂ ಕಡಿಮೆಯಾಗಲಿವೆ’ ಎಂಬ ವಿಶ್ಲೇಷಣೆಗಳು ಇವೆ.

ಮಾತುಕತೆ ಪ್ರಗತಿಯಲ್ಲಿ ಇರುವಾಗಲೇ ಸುಂಕವನ್ನು ಶೇ 10ರಿಂದ ಶೇ 25ಕ್ಕೆ ಹೆಚ್ಚಿಸಿದ ಟ್ರಂಪ್‌ ನಿರ್ಧಾರ ಏಕಪಕ್ಷೀಯ. ಸಂಧಾನ ಕುದುರಬಹುದೆಂಬ ವಿಶ್ವಾಸ ವ್ಯಕ್ತಪಡಿಸುತ್ತಲೇ, ಅಮೆರಿಕ ನಿರ್ಧಾರಕ್ಕೆ ತಕ್ಕ ಉತ್ತರ ನೀಡುವುದಾಗಿ ಚೀನಾ ಹೇಳಿದೆ. ಸಂಭವನೀಯ ‘ಆರ್ಥಿಕ ಬಿರುಗಾಳಿ’ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಈ ಮೊದಲೇ ನೀಡಿರುವ ಎಚ್ಚರಿಕೆಯನ್ನು ವಿಶ್ವ ಸಮುದಾಯ ಗಂಭೀರವಾಗಿ ಪರಿಗಣಿಸಿ, ಇದರಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಕ್ರಮ ಜರುಗಿಸಿದರೆ ಮಾತ್ರ ಈ ಬಿಕ್ಕಟ್ಟಿನಿಂದ ಪಾರಾಗಬಹುದು. ಆಮದು ಸುಂಕಗಳಿಗೆ ಸಂಬಂಧಿಸಿದ ಉದ್ವಿಗ್ನತೆ ಶಮನಕ್ಕೆ ಎರಡೂ ದೇಶಗಳು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಭಾರತ ಕೂಡ ತನ್ನ ಆರ್ಥಿಕ ಸುಸ್ಥಿರತೆಯನ್ನು ಇನ್ನಷ್ಟು ಶಿಸ್ತಿನಿಂದ ಕಾಯ್ದುಕೊಳ್ಳಬೇಕಾಗಿದೆ. ಗರಿಷ್ಠ ಪ್ರಮಾಣದ ಆರ್ಥಿಕ ಬೆಳವಣಿಗೆ ದರ ಕಾಯ್ದುಕೊಳ್ಳಲು ದೇಶಿ ಬಂಡವಾಳ ಹೂಡಿಕೆ ಮತ್ತು ಸರಕುಗಳ ಬಳಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು