ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ– ಉದಯಪುರ: ಘೋರ ಕೃತ್ಯಕ್ಕೆ ತಕ್ಕ ಶಿಕ್ಷೆ ತ್ವರಿತವಾಗಿ ಆಗಲಿ

Last Updated 1 ಜುಲೈ 2022, 1:03 IST
ಅಕ್ಷರ ಗಾತ್ರ

ರಾಜಸ್ಥಾನದ ಉದಯಪುರದಲ್ಲಿ ವ್ಯಕ್ತಿಯೊಬ್ಬರನ್ನು ಬೀಭತ್ಸವಾಗಿ ಹತ್ಯೆ ಮಾಡಿ, ಈ ಘೋರ ಕೃತ್ಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಡಲಾಗಿದೆ. ದೇಶದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ದ್ವೇಷ ಮತ್ತು ಅನಾಗರಿಕತೆಯ ಸಂಸ್ಕೃತಿಯು ಅದರ ಪಾತಾಳ ತಲುಪಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಪ್ರಕರಣದಲ್ಲಿ ಹಲವು ಸೂಕ್ಷ್ಮ ಅಂಶಗಳು ಒಳಗೊಂಡಿವೆ. ಈ ಘಟನೆಯು ಊಹೆಗೂ ಮೀರಿದ ಪರಿಣಾಮಗಳಿಗೆಕಾರಣವಾಗಬಹುದು.

ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ನೂಪುರ್‌ ಅವರನ್ನು ಬೆಂಬಲಿಸಿ ಕನ್ಹಯ್ಯ ಲಾಲ್‌ ಎಂಬ ಟೇಲರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇಬ್ಬರು ವ್ಯಕ್ತಿಗಳು ಕನ್ಹಯ್ಯ ಮೇಲೆ ದಾಳಿ ನಡೆಸಿ, ಅವರ ತಲೆ ಕತ್ತರಿಸಿ, ಈ ಕೃತ್ಯದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅವರಿಬ್ಬರನ್ನೂ ಗುರುತಿಸಿ, ಬಂಧಿಸಲಾಗಿದೆ. ಉದಯಪುರದಲ್ಲಿ ಪರಿಸ್ಥಿತಿ ‍ಪ್ರಕ್ಷುಬ್ಧವಾಗಿದೆ. ಅಲ್ಲಿ ಕರ್ಫ್ಯೂ ಮತ್ತು ಇತರ ನಿರ್ಬಂಧಗಳನ್ನು ಹೇರಲಾಗಿದೆ. ರಾಜಸ್ಥಾನದ ಇತರೆಡೆಗಳಲ್ಲಿ ಮತ್ತು ರಾಜ್ಯದ ಹೊರಗಿನ ಕೆಲವು ಸ್ಥಳಗಳಲ್ಲಿ ಕೂಡ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಹತ್ಯಾ ಕೃತ್ಯವು ಅತ್ಯಂತ ಹೇಯವಾದುದು ಮತ್ತು ಅದನ್ನು ಅತ್ಯಂತ ಕಟುವಾದ ಪದಗಳಲ್ಲಿ ಖಂಡಿಸಬೇಕು. ರಾಜಕೀಯ, ಧರ್ಮ ಮತ್ತು ಸಮುದಾಯಗಳನ್ನೆಲ್ಲ ಮೀರಿ ದೇಶದ ಎಲ್ಲೆಡೆ ಈ ಕೃತ್ಯಕ್ಕೆ ಖಂಡನೆ ಮತ್ತು ಬಲವಾದ ಪ್ರತಿಕ್ರಿಯೆ ವ್ಯಕ್ತಿವಾಗಿರುವುದು ಸ್ವಾಗತಾರ್ಹ.

ಖಂಡನೆಯು ಸರಿಯಾದ ಮತ್ತು ನ್ಯಾಯಸಮ್ಮತ ಕ್ರಮ. ಆದರೆ, ಈ ಕೃತ್ಯವನ್ನು ರಾಜಕೀಯಗೊಳಿಸಿ, ರಾಜಕೀಯ, ಕೋಮು ಮತ್ತು ಇತರ ಸಂಕುಚಿತ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬ ಪ‍್ರಲೋಭನೆಯು ಅತ್ಯಂತ ಕೆಟ್ಟ ರೀತಿಯ ಪ್ರತಿಕ್ರಿಯೆ. ತಲೆ ಕತ್ತರಿಸಿದ ಅಮಾನವೀಯ ಕೃತ್ಯವನ್ನು ಒಂದು ಸಮುದಾಯದ ಮೇಲಿನ ದಾಳಿ ಎಂಬಂತೆಯೋ ಇನ್ನೊಂದು ಸಮುದಾಯದ ಪರವಾಗಿ ನಡೆಸಿದ ಕೃತ್ಯ ಎಂಬಂತೆಯೋ ನೋಡಬಾರದು. ಇದು ಉನ್ಮತ್ತ ಮತ್ತು ವಿಕ್ಷಿಪ್ತ ಮನೋಭಾವದ ಇಬ್ಬರು ನಡೆಸಿದ ಭೀಕರ ಅಪರಾಧ ಕೃತ್ಯ. ಈ ಪ್ರಕರಣದ ತನಿಖೆ ಮತ್ತು ವಿಚಾರಣೆಯು ಅತ್ಯಂತ ತ್ವರಿತವಾಗಿ ನಡೆದು, ನ್ಯಾಯದಾನ ಆಗಬೇಕು. ಕೃತ್ಯದ ಹಿಂದೆ ‍ಪಾಕಿಸ್ತಾನದ ಕೈವಾಡ ಇದೆ ಎಂದು ಹೇಳಲಾಗಿದೆ. ಕೋಮು ನೆಲೆಯಲ್ಲಿ ಧ್ರುವೀಕರಣಗೊಂಡಿರುವ ಭಾರತದ
ವ್ಯವಹಾರಗಳಲ್ಲಿ ಮೂಗುತೂರಿಸುವುದು ಆ ದೇಶದ ಚಪಲವಾಗಿದೆ. ಪಾಕಿಸ್ತಾನದ ಕೈವಾಡದ ಬಗ್ಗೆಯೂ ತನಿಖೆ ನಡೆಯಬೇಕು.

ಭೀಕರ ಕೃತ್ಯದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ದುರದೃಷ್ಟಕರ. ಚಿತ್ರಗಳು ಹೀಗೆ ಹರಿದಾಡಿದರೆ, ಅದು ಸಂಘರ್ಷ ಸೃಷ್ಟಿಸುವ ಅಪಾಯ ಇದೆ. ಹಾಗಾಗಿ, ಈ ಚಿತ್ರ ಮತ್ತು ವಿಡಿಯೊಗಳು ಹರಿದಾಡುವುದನ್ನು ಸರ್ಕಾರವು ತಡೆಯಬೇಕು. ಇದು ಕೇಂದ್ರ ಮತ್ತು ರಾಜ್ಯದ ನಡುವಣ ಮೇಲಾಟದ ವಿಚಾರವೂ ಅಲ್ಲ. ರಾಜಕೀಯ ಲಾಭಕ್ಕಾಗಿ ಈ ಕೃತ್ಯವನ್ನು ಬಳಸಿಕೊಳ್ಳಬೇಕು ಎಂಬ ಹಂಬಲವು ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಳ್ಳಬಹುದು. ರಾಜಸ್ಥಾನ ವಿಧಾನಸಭೆಗೆ ಶೀಘ್ರವೇ ಚುನಾವಣೆ ನಡೆಯಲಿರುವುದರಿಂದ ಇಂತಹ ಅಪಾಯ ಇನ್ನೂ ಹೆಚ್ಚು. ಆದರೆ, ಹಾಗೆ ಮಾಡುವುದನ್ನು ಪ್ರಮಾದ ಎಂದೇ ಪರಿಗಣಿಸಬೇಕಾಗುತ್ತದೆ. ಕೋಮು ಸಂಘರ್ಷ ಮತ್ತು ಹಿಂಸೆಯಿಂದ ದೇಶಕ್ಕೆ ಯಾವ ಲಾಭವೂ ಇಲ್ಲ, ಬದಲಿಗೆ ನಷ್ಟವೇ ಹೆಚ್ಚು. ಹತ್ಯೆಯಿಂದ ಆಗಬಹುದಾದ ಇತರ ಪರಿಣಾಮಗಳನ್ನು ತಡೆಯಲು ಬೇಕಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ತಪ್ಪು ದಾರಿಗೆ ಎಳೆಯುವಂತಹ ಮಾಹಿತಿ ಹರಿದಾಡದಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ತೊಂದರೆಗೆ ಕಾರಣವಾಗಬಹುದಾದ ಪ್ರಚೋದನಕಾರಿ ನಡವಳಿಕೆಗೂ ತಡೆ ಒಡ್ಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT