ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ವಕ್ಫ್‌ ತಿದ್ದುಪಡಿ ಮಸೂದೆ: ಶಂಕೆ ನಿವಾರಿಸಿ, ಮನವರಿಕೆ ಮಾಡಿಕೊಡಿ

Published : 17 ಆಗಸ್ಟ್ 2024, 0:15 IST
Last Updated : 17 ಆಗಸ್ಟ್ 2024, 0:15 IST
ಫಾಲೋ ಮಾಡಿ
Comments

ದೇಶದ ವಕ್ಫ್‌ ಮಂಡಳಿಗಳ ನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಉದ್ದೇಶಿಸಿರುವ ವಕ್ಫ್‌ (ತಿದ್ದುಪಡಿ) ಮಸೂದೆಯು ಮುಸ್ಲಿಂ ಸಮುದಾಯದಿಂದ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ವಕ್ಫ್‌ ಎಂಬುದು ಇಸ್ಲಾಂ ಧರ್ಮದ ವಿಶಿಷ್ಟವಾದ ದತ್ತಿ ವ್ಯವಸ್ಥೆಗಳಲ್ಲಿ ಒಂದು. ಈ ಮಸೂದೆಯನ್ನು ಈಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದೆ. ಈಗ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಲಾಗಿದೆ. ಈ ಮಸೂದೆಯು ಅಸಾಂವಿಧಾನಿಕ, ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಹಾಗೂ ವಿಭಜನಕಾರಿ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ವಕ್ಫ್‌ಗೆ ಬಹಳ ಮುಖ್ಯವಾದ ಪಾತ್ರ ಇದೆ. ವಕ್ಫ್‌ ಅಂದರೆ ಮುಸ್ಲಿಮರು ಧಾರ್ಮಿಕ ಹಾಗೂ ದತ್ತಿ ಉದ್ದೇಶಕ್ಕಾಗಿ ನೀಡಿರುವ ಆಸ್ತಿಗಳು. ಇಂತಹ ಆಸ್ತಿಗಳ ಒಟ್ಟು ವಿಸ್ತೀರ್ಣವು 9.4 ಲಕ್ಷ ಎಕರೆ ಎಂದು ಅಂದಾಜಿಸಲಾಗಿದೆ. ಇವುಗಳ ಮೌಲ್ಯ ಅಂದಾಜು ₹1.2 ಲಕ್ಷ ಕೋಟಿ ಆಗಬಹುದು. ಈ ಆಸ್ತಿಗಳು ವಕ್ಫ್‌ ಮಂಡಳಿಗಳ ನಿಯಂತ್ರಣದಲ್ಲಿ ಇವೆ. ವಕ್ಫ್‌ ಮಂಡಳಿಗಳು ಆಸ್ತಿ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ, ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಮಂಡಳಿಗಳ ಕಾರ್ಯನಿರ್ವಹಣೆ ದಕ್ಷವಾಗಿಲ್ಲ ಎಂಬ ಟೀಕೆಗಳು ಇವೆ. ಮಂಡಳಿಗಳು ದಕ್ಷವಾಗಿ ಕೆಲಸ ನಿರ್ವಹಿಸುವಂತೆ ಮಾಡುವುದು ಈ ಮಸೂದೆಯ ಘೋಷಿತ ಉದ್ದೇಶ. ಆದರೆ, ಈ ಉದ್ದೇಶವನ್ನು ಸೂಕ್ಷ್ಮವಲ್ಲದ ರೀತಿಯಲ್ಲಿ ಈಡೇರಿಸಿಕೊಳ್ಳಲು ಸರ್ಕಾರವು ಮುಂದಾಗಿದೆ.

ಮಸೂದೆಯಲ್ಲಿ ಇರುವ ತಿದ್ದುಪಡಿಗಳು ಕಾನೂನಿನ ರೂಪ ಪಡೆದು ಜಾರಿಗೆ ಬಂದಲ್ಲಿ, ರಾಜ್ಯ ಮಟ್ಟದ ವಕ್ಫ್‌ ಮಂಡಳಿಗಳ ಬಹುತೇಕ ಅಧಿಕಾರ ಇನ್ನಿಲ್ಲವಾಗುತ್ತದೆ. ಮಂಡಳಿಗೆ ಚುನಾವಣೆ ನಡೆಸುವ ಬದಲು, ಅಲ್ಲಿಗೆ ವ್ಯಕ್ತಿಗಳನ್ನು ನಾಮನಿರ್ದೇಶನದ ಮೂಲಕ ನೇಮಿಸಲು ಅವಕಾಶ ಆಗುತ್ತದೆ. ವಕ್ಫ್‌ ಜಮೀನುಗಳ ಸರ್ವೆ ಅಧಿಕಾರಿಯಾಗಿ ಜಿಲ್ಲಾಧಿಕಾರಿಯನ್ನು ನೇಮಿಸಲು ಅವಕಾಶ ಇರುತ್ತದೆ. ವಿವಾದ ಉಂಟಾದಲ್ಲಿ ಜಮೀನಿನ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವು ಜಿಲ್ಲಾಧಿಕಾರಿಯ ಕೈಯಲ್ಲಿರುತ್ತದೆ. ವಕ್ಫ್‌ ಆಸ್ತಿಗಳು ಮುಸ್ಲಿಮರಿಗೆ ಸೇರಿದವು. ಆದರೆ, ವಕ್ಫ್‌ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕೂಡ ನೇಮಕ ಮಾಡಲು ಮಸೂದೆಯು ಅವಕಾಶ ನೀಡುತ್ತದೆ. ಯಾವುದೇ ವಕ್ಫ್‌ನ ಲೆಕ್ಕಪರಿಶೋಧನೆ ನಡೆಸುವಂತೆ ಮಹಾಲೇಖಪಾಲರಿಗೆ (ಸಿಎಜಿ) ಸೂಚಿಸುವ ಅಧಿಕಾರವು ಸರ್ಕಾರಕ್ಕೆ ದೊರೆಯುತ್ತದೆ. ಈ ಎಲ್ಲ ತಿದ್ದುಪಡಿಗಳ ಪರಿಣಾಮವಾಗಿ ವಕ್ಫ್ ಆಸ್ತಿಗಳ ಆಡಳಿತವು ಮುಸ್ಲಿಂ ಸಮುದಾಯದ ನಿಯಂತ್ರಣ
ವಿರುವ ಮಂಡಳಿಗಳು ಹಾಗೂ ನ್ಯಾಯಮಂಡಳಿಗಳಿಂದ ಸರ್ಕಾರದ ಕೈಗೆ ಸಿಗುತ್ತದೆ. ಬಹಳ ದೊಡ್ಡ ಮಟ್ಟದಲ್ಲಿ ಇರುವ ವಕ್ಫ್‌ ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಈ ತಿದ್ದುಪಡಿಗಳ ಉದ್ದೇಶ ಎಂಬ ಟೀಕೆಯೂ ಇದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಬಹಳ ಮುಖ್ಯವಾದ ಸಂಸ್ಥೆಯೊಂದರ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶವಿರುವ ಮಸೂದೆಯನ್ನು ಆ ಸಮುದಾಯದ ಜೊತೆ ವ್ಯಾಪಕ ಸಮಾಲೋಚನೆ ನಡೆಸದೆಯೇ ರೂಪಿಸಿರುವುದು ಆಶ್ಚರ್ಯ ಮೂಡಿಸುವಂಥದ್ದು. ಮಸೂದೆಯಲ್ಲಿನ ಅಂಶಗಳ ಬಗ್ಗೆ ಸಂಬಂಧಪಟ್ಟ ಎಲ್ಲರ ಜೊತೆಯೂ ಮಾತುಕತೆ ನಡೆಸುವ ಕೆಲಸವು ಸರ್ಕಾರದ ಕಡೆಯಿಂದ ಆಗಬೇಕಿತ್ತು. ಮಸೂದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಬಿಜೆಪಿಯ ಮಿತ್ರಪಕ್ಷಗಳಿಗೆ ತಮ್ಮದೇ ಆದ ಅನುಮಾನಗಳು, ಪ್ರಶ್ನೆಗಳು ಇವೆ. ಸಂವಿಧಾನದ 25 ಹಾಗೂ 26ನೇ ವಿಧಿಗಳು ಧಾರ್ಮಿಕ ಅಲ್ಪಸಂಖ್ಯಾತ
ರಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಈ ಮಸೂದೆಯು ಉಲ್ಲಂಘಿಸುತ್ತದೆ ಎಂಬ ಕಳವಳಗಳು ವ್ಯಕ್ತವಾಗಿವೆ. ಆದರೆ, ಈ ಮಸೂದೆಯು ಮುಸ್ಲಿಂ ಸಮುದಾಯದ ಹಿತವನ್ನು ಕಾಯುವ ಕೆಲಸವನ್ನು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿ ಹೇಳಿವೆ. ಅದು ನಿಜವೇ ಆಗಿದ್ದರೆ, ಆ ವಿಚಾರವನ್ನು ಮುಸ್ಲಿಂ ಸಮುದಾಯದವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT