ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪಕ್ಕೆ ಗೈರುಹಾಜರಿ ಅಕ್ಷಮ್ಯ ಕರ್ತವ್ಯಲೋಪ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಮ್ಮ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆ 225. ಕೋರಂಗೆ ಬೇಕಾಗಿರುವುದು ಅದರ ಶೇ 10ರಷ್ಟು ಮಾತ್ರ. ಅಂದರೆ ಬರೀ 25. ಆದರೆ ಗುರುವಾರ ಬೆಳಿಗ್ಗೆ ಸದನದ ಕಲಾಪ ಆರಂಭವಾಗಬೇಕಾದ ಸಮಯದಲ್ಲಿ 25

ಶಾಸಕರೂ ಇರಲಿಲ್ಲ. ಕೋರಂ ಅಭಾವ ಇದ್ದಾಗ ಸಾಮಾನ್ಯವಾಗಿ ಕೆಲ ನಿಮಿಷ ಗಂಟೆ ಬಾರಿಸಲಾಗುತ್ತದೆ. ಹೊರಗೆ ಮೊಗಸಾಲೆಯಲ್ಲಿ ಇರುವ ಸದಸ್ಯರು ಸಂದರ್ಭ ಅರಿತುಕೊಂಡು ತಕ್ಷಣ ಒಳಗೆ ಧಾವಿಸಿ ಬರುತ್ತಾರೆ. ಇದು ಹಿಂದೆಯೂ ಅನೇಕ ಸಲ ನಡೆದಿದೆ. ಆದರೆ ಗುರುವಾರ 25 ಶಾಸಕರನ್ನು ಸೇರಿಸಲು ಅರ್ಧ ತಾಸು ಗಂಟೆ ಹೊಡೆಯಬೇಕಾಯಿತು. ಅಷ್ಟೇ ಅಲ್ಲ, ಸಚಿವರೇ ಇಲ್ಲದ ಕಾರಣ ಪ್ರಶ್ನೋತ್ತರ ರದ್ದಾಯಿತು.

ವಿಧಾನ ಮಂಡಲದಲ್ಲಿ ಪ್ರಶ್ನೋತ್ತರ ಕೈಬಿಟ್ಟು ತಾವು ಪ್ರಸ್ತಾಪಿಸುವ ವಿಷಯವನ್ನು ತುರ್ತಾಗಿ ಚರ್ಚೆಗೆ ತೆಗೆದುಕೊಳ್ಳುವಂತೆ ವಿರೋಧ ಪಕ್ಷದವರು ಒತ್ತಾಯಿಸಿದರೂ ಆಡಳಿತ ಪಕ್ಷ ಒಪ್ಪಿಕೊಳ್ಳದಂತಹ ಬಹಳಷ್ಟು ಉದಾಹರಣೆಗಳಿವೆ. ಅಂದರೆ ಪ್ರಶ್ನೋತ್ತರ ಕಲಾಪಕ್ಕೆ ಅಷ್ಟೊಂದು ಮಹತ್ವ ಇದೆ. ಆದರೇನು ಪ್ರಯೋಜನ? ಸಚಿವರು ಹಾಜರಿಲ್ಲ; ಶಾಸಕರಿಗೆ ಆಸಕ್ತಿ ಇಲ್ಲ; ಹೀಗಾಗಿ ಪ್ರಶ್ನೋತ್ತರವೂ ಇಲ್ಲ.

ನಂತರ ಕಲಾಪ ಶುರುವಾದಾಗ, ಶಾಲೆಯಲ್ಲಿ ಮಕ್ಕಳ ಹಾಜರಿ ತೆಗೆದುಕೊಳ್ಳುವ ತರಹ ಸ್ಪೀಕರ್‌ ಅವರು, ಸದನದಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸಚಿವರ ಹೆಸರು ಕೂಗಿ ಹಾಜರಿ ತೆಗೆದುಕೊಂಡರಂತೆ. ಇದು ಖಂಡಿತವಾಗಿಯೂ ನಮ್ಮ ಜನಪ್ರತಿನಿಧಿಗಳಿಗೆ ಶೋಭೆ ತರುವ ಸಂಗತಿಯಲ್ಲ. ಅವರನ್ನು ಚುನಾಯಿಸಿ  ಕಳಿಸಿದ ಮತದಾರರಿಗೆ ಮತ್ತು ಪವಿತ್ರವಾದ ಸದನಕ್ಕೆ ತೋರಿಸಿದ ಅಗೌರವ. ಸದನವನ್ನು ಈ ರೀತಿ ಹಗುರವಾಗಿ ಪರಿಗಣಿಸುವುದು ಯಾರೂ ಒಪ್ಪುವ ನಡವಳಿಕೆಯಂತೂ ಅಲ್ಲವೇ ಅಲ್ಲ.

ವಿಧಾನ ಪರಿಷತ್ತಿನಲ್ಲೂ ಪರಿಸ್ಥಿತಿ ಬಹಳ ಸಮಾಧಾನಪಡುವ ತರಹ ಏನೂ ಇರಲಿಲ್ಲ. ಅಲ್ಲಿಯೂ ಸದಸ್ಯರ ಸಂಖ್ಯೆ ವಿರಳವಾಗಿತ್ತು. ವಿಧಾನಸಭೆಯಂತೆ ಅಲ್ಲೂ ಹಾಜರಿದ್ದದ್ದು ಒಬ್ಬರೇ ಮಂತ್ರಿ. ‘ಸರ್ಕಾರ ಕಾಟಾಚಾರಕ್ಕೆ ಅಧಿವೇಶನ  ನಡೆಸುತ್ತಿದೆ.

ಸಚಿವರೇ ಇಲ್ಲದ ಮೇಲೆ ಯಾರಿಗೋಸ್ಕರ ಚರ್ಚೆ ಮಾಡಬೇಕು? ಇದು ಸರ್ಕಾರ, ಸದನಕ್ಕೆ ತೋರುತ್ತಿರುವ ಅಗೌರವ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಗುಡುಗಿದರಂತೆ. ಆದರೆ ವಿಧಾನಸಭೆಯಲ್ಲಿನ ಕೋರಂ ಕೊರತೆಗೆ ಅವರ ಪಕ್ಷದ ಸದಸ್ಯರೂ ಕಾರಣ ಎಂಬುದು ಅವರಿಗೆ ಹೇಗೆ ಮರೆಯಿತೋ ಗೊತ್ತಿಲ್ಲ.

ಜನ ಬಹಳಷ್ಟು ಆಸೆ, ನಿರೀಕ್ಷೆಗಳನ್ನು ಇಟ್ಟುಕೊಂಡು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಅವರ ಆ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂಬ ಪ್ರಜ್ಞೆ ಚುನಾಯಿತರಾದವರಿಗೆ ಇರಬೇಕು. ಅಷ್ಟಕ್ಕೂ ಬಗೆಬಗೆಯ ಆಸೆ ಆಮಿಷ ಒಡ್ಡಿ ಗೆದ್ದು ಶಾಸಕರಾದವರೇನೂ ಉಚಿತವಾಗಿ ಕೆಲಸ ಮಾಡುವುದಿಲ್ಲ.

ಅವರ ಸಂಬಳ, ಸಾರಿಗೆ, ಸವಲತ್ತುಗಳಿಗೆ ಜನರ ತೆರಿಗೆಯಿಂದ ಸಂಗ್ರಹಿಸಿದ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಸದನದ ಒಂದೊಂದು ದಿನದ ಕಲಾಪಕ್ಕೂ ಸುಮಾರು ₹ 80 ಲಕ್ಷ  ವೆಚ್ಚವಾಗುತ್ತದೆ. ಒಂದು ಪ್ರಶ್ನೆಗೆ ಉತ್ತರಿಸಲು ಆಗುವ ಖರ್ಚು, ಮಾನವಶ್ರಮ ಸಣ್ಣದೇನಲ್ಲ.

ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಬರೀ ಸಹಿ ಮಾಡಿದರೆ ಸಾಕು; ಎರಡು ಸಾವಿರ ರೂಪಾಯಿ ದಿನಭತ್ಯೆ ಸಿಗುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ಇಡೀ ದಿನ ಬಿಸಿಲಲ್ಲಿ ದುಡಿದರೂ ಇವರ ದಿನ ಭತ್ಯೆಯ ಅರ್ಧದಷ್ಟೂ ಗಳಿಕೆ ಆಗುವುದಿಲ್ಲ. ಎರಡು ವರ್ಷದ ಹಿಂದೆ ಶಾಸಕರು, ಸಚಿವರು ತಮ್ಮ ವೇತನ, ಭತ್ಯೆಯನ್ನು ತಾವೇ ಸರ್ವಾನುಮತದಿಂದ ಸರಾಸರಿ ಶೇ 75ರಷ್ಟು ಹೆಚ್ಚಿಸಿಕೊಂಡಿದ್ದಾರೆ. ನಿವೃತ್ತಿ ವೇತನ ಏರಿಸಿಕೊಂಡಿದ್ದಾರೆ.

ಸಾರ್ವಜನಿಕ ಬೊಕ್ಕಸದಿಂದ ಇಷ್ಟೆಲ್ಲ ಅನುಕೂಲ ಪಡೆದುಕೊಂಡವರಿಗೆ, ಸದನಕ್ಕೆ ಹಾಜರಾಗುವುದಕ್ಕಿಂತ ಮಹತ್ವದ ಬೇರೆ ಕೆಲಸ ಏನಿದೆ?  ಶಾಸಕರು  ಕಲಾಪಕ್ಕೆ ಗೈರುಹಾಜರಾಗುತ್ತಿರುವುದು, ಕೋರಂ ಭರ್ತಿಯಾಗುವವರೆಗೂ ಕಲಾಪ ಶುರು ಮಾಡದೇ ಕಾಯುವುದು ಯಾವುದೋ ಒಂದು ದಿನದ ಕತೆಯಲ್ಲ. ಸೋಮವಾರದಿಂದಲೂ ಹೀಗೇ ನಡೆಯುತ್ತಿದೆ.

ಅತ್ತ ಕ್ಷೇತ್ರದಲ್ಲೂ ಇಲ್ಲ; ಇತ್ತ ಕಲಾಪದಲ್ಲೂ ಪಾಲ್ಗೊಳ್ಳುತ್ತಿಲ್ಲ. ಇದು ನಿಜವಾಗಿಯೂ ನಿರಾಶಾದಾಯಕ. ಮತದಾರರು ಇದನ್ನು ಪ್ರಶ್ನಿಸಬೇಕು. ಆಗಮಾತ್ರ ಇವರೆಲ್ಲ ಎಚ್ಚೆತ್ತುಕೊಂಡಾರು. ಅದಕ್ಕಿಂತ ಹೆಚ್ಚಾಗಿ ಕಲಾಪಕ್ಕೆ ಹಾಜರಾಗದೆ ತಾವು ಸಾಧಿಸಿದ್ದೇನು, ಜನಸೇವೆ ಮಾಡಿದ್ದೇನು ಎಂದು ಶಾಸಕರು, ಸಚಿವರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT