ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀತಾಗಳ ನಿರ್ವಹಣೆ ಅಗತ್ಯ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಶತಮಾನದಷ್ಟು ಹಳೆಯದಾದ ಮೈಸೂರಿನ  ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ  ಚೀತಾ ಮರಿ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ  ಮೈಸೂರು ಮೃಗಾಲಯಕ್ಕೆ ತರಲಾದ `ಬೇಟೆಯಾಡುವ ಚೀತಾ~ `ಬೃಂದಾ~ಗೆ  2011ರ ಏಪ್ರಿಲ್‌ನಲ್ಲಿ ಜನಿಸಿದ ಮೂರುಮರಿಗಳ ಪೈಕಿ ಒಂದಾಗಿತ್ತು ಇದು. ಇದರ ಜನನವಾದಾಗ ಮೃಗಾಲಯಗಳ ಕೃತಕ ಪರಿಸರದಲ್ಲಿ  ವನ್ಯ ಮೃಗಗಳ ಸಂತಾನ ವೃದ್ಧಿ ಮಾಡಿಸಿ ಬೆಳೆಸುವಂತಹ (ಕ್ಯಾಪ್ಟಿವ್ ಬ್ರೀಡಿಂಗ್) ಕಾರ್ಯಕ್ರಮದಲ್ಲಿ ಹೊಸ ಅಧ್ಯಾಯ ತೆರೆದಂತಾಗಿತ್ತು. ಈ ಚೀತಾ ಮರಿ ಕಳೆದ ವಾರ ಮರದ ಮೇಲಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದೇ ಸಾವಿಗೆ ನೆಪವಾಗಿದೆ. ಆಗ ಯಾವುದೇ ಊತ ಕಂಡುಬಂದಿರಲಿಲ್ಲ. ಚೀತಾ ಮರಿ ಕುಂಟುತ್ತ ಓಡಾಡಿಕೊಂಡೇ ಇತ್ತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಚೀತಾ ಮರಿಯ ಬಲತೊಡೆಯಲ್ಲಿ ಹೆಚ್ಚಿನ ಊತವಿದ್ದದ್ದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಸ್ನಾಯುಗಳ ತೀವ್ರ ಕುಗ್ಗುವಿಕೆಯಿಂದ ಒಳಗೆ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ಮಾಹಿತಿಯನ್ನು ಮೃಗಾಲಯದ ವೈದ್ಯರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲು ಈ ವರದಿಯನ್ನು ಈ ಚೀತಾಗಳ ಮೂಲ ಆವಾಸಸ್ಥಾನವಾಗಿದ್ದ ದಕ್ಷಿಣ ಆಫ್ರಿಕಾ ಮೃಗಾಲಯದ ಜೊತೆ ಹಂಚಿಕೊಳ್ಳಲಾಗುತ್ತಿದೆ. ಬದುಕುಳಿದಿರುವ ಇನ್ನೆರಡು ಚೀತಾ ಮರಿಗಳ ರಕ್ಷಣೆಗೆ ಇದು ನೆರವಾಗಬಹುದೆಂಬುದು ಆಶಯ.  ಕಳೆದ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಈ ಮೃಗಾಲಯದಲ್ಲಿ ಸಾವನ್ನಪ್ಪುತ್ತಿರುವ ಮೂರನೇ ಚೀತಾ ಇದು ಎಂಬುದು ಆತಂಕದ ವಿಚಾರ.

ಜೂನ್12ರಂದು  ಹೆಣ್ಣು ಚೀತಾ `ಮಾಯಾ~ ಕಾಯಿಲೆಯಿಂದ ಮೃತಪಟ್ಟಿತ್ತು. ನಂತರ ಇದರ ಒಂದು ಮರಿ ಜೂನ್ 26ರಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಚೀತಾಗಳ ಈ ಸರಣಿ ಸಾವುಗಳನ್ನು ಮೃಗಾಲಯ ಗಂಭೀರವಾಗಿ ಪರಿಗಣಿಸಬೇಕಾದುದು ಅಗತ್ಯ.
 ಮೃಗಾಲಯಗಳ ಕೃತಕ ಪರಿಸರದಲ್ಲಿ ವನ್ಯಮೃಗಗಳ ಸಂತತಿ ವೃದ್ಧಿ ಮಾಡುವ ಕಾರ್ಯ ವನ್ಯಮೃಗಗಳ ಸಂರಕ್ಷಣೆಯ ಕಾರ್ಯದಲ್ಲಿ ಮಹತ್ತರವಾದುದು. ಮೈಸೂರು ಮೃಗಾಲಯ ವಿಶ್ವದಲ್ಲೇ ಅತ್ಯಂತ ಹಳೆಯದು. ಅನೇಕ ವನ್ಯಪ್ರಾಣಿಗಳ ಯಶಸ್ವಿ ಸಂತಾನಾಭಿವೃದ್ಧಿಗೂ ಅದು ಹೆಸರಾಗಿದೆ. ಸಾರ್ವಜನಿಕರಿಗೆ ವನ್ಯಮೃಗಗಳ ಕುರಿತಾದ ಮಾಹಿತಿ ಪ್ರಸರಣ ಕಾರ್ಯವನ್ನೂ ಅದು ಮಾಡುತ್ತಿದೆ. ವಸಾಹತುಶಾಹಿ ಕಾಲದಲ್ಲಿ  ಭಾರತೀಯ ಚೀತಾಗಳ ಸಂತತಿ ಅಳಿದುಹೋದದ್ದು ಈಗ ಇತಿಹಾಸ. ಏಷ್ಯನ್ ಚೀತಾಗಳ ಪೈಕಿ ಈಗ ಉಳಿದಿರುವುದು ಇರಾನಿಯನ್ ಚೀತಾಗಳು ಮಾತ್ರ. ಹೀಗೆಂದೇ ಅಳಿದುಹೋದ ಭಾರತೀಯ ಚೀತಾ ಸಂತತಿಯನ್ನು ಭಾರತದ ನೆಲದಲ್ಲಿ ಪುನರುಜ್ಜೀವಗೊಳಿಸುವ ಆಶಯದಿಂದ ಆಫ್ರಿಕಾದ ಚೀತಾಗಳನ್ನು ಮೈಸೂರು, ಹೈದ್ರಾಬಾದ್ ಹಾಗೂ ಜುನಾಗಢ ಮೃಗಾಲಯಗಳಿಗೆ ಕರೆತರಲಾಗಿದೆ. ಈ ಪೈಕಿ ಈ ಚೀತಾಗಳ ಸಂತಾನಾಭಿವೃದ್ಧಿಯ ಕಾರ್ಯ ಯಶಸ್ವಿಯಾದದ್ದು ಮೈಸೂರು ಮೃಗಾಲಯದಲ್ಲಿ ಮಾತ್ರ. ಈಗ ಇದೇ ಚೀತಾದ ಒಂದು ಮರಿ ಸಾವನ್ನಪ್ಪಿರುವುದು ಕಳವಳಕಾರಿ. ವಾಸ್ತವವಾಗಿ ಆಫ್ರಿಕಾದ ಈ ಚೀತಾಗಳ ನಿರ್ವಹಣೆ ನಮಗೆ ಅಧ್ಯಯನ ಹಾಗೂ ಸಂಶೋಧನೆಗಳ ವಸ್ತುವೂ ಆಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಮುಂದೆ ಈ ವನ್ಯಜೀವಿಗಳ ಸಾವುಗಳಾಗದಂತೆ ಎಚ್ಚರ ಅಗತ್ಯ. ಇದಕ್ಕಾಗಿ ಈ ವನ್ಯಜೀವಿಗಳ ನಿರ್ವಹಣೆಯಲ್ಲಿ ಸೂಕ್ತ ಮಾಹಿತಿ ಹಾಗೂ ತರಬೇತಿಯೂ ಅತ್ಯಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT