ರಾಜ್ಯ ಸರ್ಕಾರದ ವತಿಯಿಂದ ನಡೆದ ‘ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ’ ಕಾರ್ಯಕ್ರಮದಲ್ಲಿ ಜರುಗಿದ ಘಟನೆಗಳು ನಾಡಿನ ಸಾಂಸ್ಕೃತಿಕ ಆರೋಗ್ಯದ ಬಗ್ಗೆ ಆತಂಕ ಮೂಡಿಸುವಂತಿವೆ. ಚರ್ಚೆಗಳ ಮೂಲಕ ಬಗೆಹರಿಯಬೇಕಾದ ಸಂಗತಿಗಳಿಗೆ ಸಂಘರ್ಷಗಳ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಸರಿಯಲ್ಲ.

‘ದೇವರ ದಾಸಿಮಯ್ಯ ವಚನಕಾರನೇ ಅಲ್ಲ’ ಎಂದು ಘೋಷಣೆ ಕೂಗಿದ ಡಾ. ಎಂ. ಚಿದಾನಂದ ಮೂರ್ತಿ ಹಾಗೂ ಅವರ ಸಂಗಡಿಗರನ್ನು ಪೊಲೀಸರು ಬಂಧಿಸಿ ಸಭಾಂಗಣದಿಂದ ಹೊರಗೆ ಕರೆದೊಯ್ದ ಘಟನೆ ಯಾರಿಗೂ ಶೋಭೆ ತರುವಂತಹದ್ದಲ್ಲ. ‘ಆದ್ಯ ವಚನಕಾರ’ ಎನ್ನುವ ಗೌರವ ಜೇಡರ ದಾಸಿಮಯ್ಯನಿಗೆ ಸಲ್ಲಬೇಕು ಎನ್ನುವುದು ಚಿದಾನಂದ ಮೂರ್ತಿ ಅವರ ನಿಲುವು. ತಮ್ಮ ಅನಿಸಿಕೆಯನ್ನು ಅವರು ಈಗಾಗಲೇ ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ.

ಅಂತೆಯೇ ಜೇಡರ ದಾಸಿಮಯ್ಯ ಹಾಗೂ ದೇವರ ದಾಸಿಮಯ್ಯ ಇಬ್ಬರೂ ಒಂದೇ ಎನ್ನುವ ವಾದವನ್ನು ಮಂಡಿಸುವ ಸಂಶೋಧಕರೂ ಇದ್ದಾರೆ. ಆರ್.ಸಿ. ಹಿರೇಮಠ್, ಎಲ್. ಬಸವರಾಜು, ಚಂದ್ರಶೇಖರ ಕಂಬಾರ ಅವರಂಥ ವಿದ್ವಾಂಸರು ದೇವರ ದಾಸಿಮಯ್ಯನನ್ನು ವಚನಕಾರನಾಗಿಯೇ ಗುರ್ತಿಸಿದ್ದಾರೆ. ಹೀಗೆ ವಿದ್ವಜ್ಜನರಲ್ಲೇ ಭಿನ್ನಾಭಿಪ್ರಾಯ ಇರುವಾಗ, ಅದನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. ಇದರ ಬದಲಾಗಿ, ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು ಯಾರ ಘನತೆಗೂ ತಕ್ಕುದಾದ ವರ್ತನೆಯಲ್ಲ.

ವಚನಕಾರನಾಗಿ ದೇವರ ದಾಸಿಮಯ್ಯನನ್ನು ಗುರ್ತಿಸುವ ಹಾಗೂ ನಿರಾಕರಿಸುವ ಈ ಚರ್ಚೆಯಲ್ಲಿ ವಿವೇಕಕ್ಕಿಂತಲೂ ಭಾವೋದ್ರೇಕ ಹಾಗೂ ಜಾತಿವಾಸನೆಯ ನಿಲುವುಗಳು ಹೆಚ್ಚು ಕಾಣುತ್ತಿವೆ. ದೇವರ ದಾಸಿಮಯ್ಯ ಏನನ್ನೂ ಬರೆದಿಲ್ಲ ಹಾಗೂ ಆತನ ಜಯಂತಿಯನ್ನು ಆಚರಿಸುವ ಮೂಲಕ ಸರ್ಕಾರ ಅಪರಾಧ ಎಸಗುತ್ತಿದೆ ಎನ್ನುವ ನಿಲುವಿನಲ್ಲೂ ಭಾವುಕತೆ ಇದೆ. ಅಂತೆಯೇ ಚಿದಾನಂದ ಮೂರ್ತಿ ಅವರು ದೇವರ ದಾಸಿಮಯ್ಯನಿಗೆ ಅವಮಾನ ಮಾಡುತ್ತಿದ್ದಾರೆ ಎನ್ನುವ ಧೋರಣೆ ಕೂಡ ಸಾಂಸ್ಕೃತಿಕ ವಾಗ್ವಾದಕ್ಕೆ ತಕ್ಕುದಾದುದಲ್ಲ.

‘ದೇವರ ದಾಸಿಮಯ್ಯನ ಜಯಂತಿ’ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಕೂಡ ಸಮರ್ಥನೀಯವಲ್ಲ. ಸಮುದಾಯದ ಆಚರಣೆಗಳಿಗೆ ಅಧಿಕೃತ ಮೊಹರು ದೊರಕಿಸಿಕೊಡುವುದು ಸರ್ಕಾರದ ಕೆಲಸ ಆಗಬಾರದು. ಇಂಥ ಚಟುವಟಿಕೆಗಳಲ್ಲಿ ಜನಪ್ರತಿನಿಧಿಗಳ ಉತ್ಸಾಹ ಅರ್ಥವಾಗದ್ದೇನಲ್ಲ. ರಾಜಕಾರಣಿಗಳಿಗೆ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯನ ನಡುವೆ ವ್ಯತ್ಯಾಸವೇನಿಲ್ಲ. ಯಾರನ್ನು ಎತ್ತಿ ಮೆರೆಸಿದರೆ ಉಪಯೋಗ ಆಗಬಹುದು ಎನ್ನುವ ‘ಜಾತಿ ರಾಜಕಾರಣ’ದ ಲೆಕ್ಕಾಚಾರ ಅವರದು.

ಈ ಮೊದಲು ವಾಲ್ಮೀಕಿ ಜಯಂತಿಗೆ ಸಂಬಂಧಿಸಿದಂತೆಯೂ ಹಿಂದಿನ ಬಿಜೆಪಿ ಸರ್ಕಾರ ಇದೇ ರೀತಿಯ ಉತ್ಸಾಹ ವ್ಯಕ್ತಪಡಿಸಿತ್ತು. ವಾಲ್ಮೀಕಿಯ ಹಿನ್ನೆಲೆ ಬಗ್ಗೆಯೂ ಚರ್ಚೆ ನಡೆದು, ಸದ್ಯಕ್ಕದು ಕಾವು ಕಳೆದುಕೊಂಡಂತೆ ಕಾಣಿಸುತ್ತಿದೆ. ಈಗ ದೇವರ ದಾಸಿಮಯ್ಯನ ಸರದಿ. ಬಹುಶಃ ಸರ್ಕಾರ ತಟಸ್ಥವಾಗಿದ್ದರೆ ಪ್ರಸ್ತುತ ಚರ್ಚೆಯೂ ತಣ್ಣಗೆ ಆಗುತ್ತಿತ್ತೇನೋ? ಈಚಿನ ದಿನಗಳಲ್ಲಂತೂ ‘ಇವ ನಮ್ಮವ’ ಎಂದು ಐತಿಹಾಸಿಕ ವ್ಯಕ್ತಿಗಳನ್ನು ತಂತಮ್ಮ ವರ್ಗಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳು ಹೆಚ್ಚುತ್ತಿವೆ.

ಎಲ್ಲ ಸಮುದಾಯಗಳಿಗೂ ಐತಿಹಾಸಿಕ ವ್ಯಕ್ತಿತ್ವಗಳ ವರ್ಚಸ್ಸು ಬೇಕಾದಂತಿದೆ. ಆದರೆ, ಚಾರಿತ್ರಿಕ ನಾಯಕರನ್ನು ಒಂದು ಸಮುದಾಯಕ್ಕೆ ಕಟ್ಟಿಹಾಕುವುದು ಅವಿವೇಕ. ಬಸವಣ್ಣ, ವಾಲ್ಮೀಕಿ, ದಾಸಿಮಯ್ಯನಂಥವರು ಸಮುದಾಯಗಳ ಚೌಕಟ್ಟನ್ನು ಮೀರಿ ಇಡೀ ಸಮಾಜಕ್ಕೆ ಬೇಕಾದವರು. ಈಗ ಆಗಬೇಕಿರುವುದು ಇಷ್ಟೇ– ದಾಸಿಮಯ್ಯ ವಚನಕಾರನೋ ಅಲ್ಲವೋ ಎನ್ನುವುದನ್ನು ಸರ್ಕಾರ ವಿದ್ವಜ್ಜನರ ಸಂಶೋಧನೆ, ಚರ್ಚೆಗಳಿಗೆ ಬಿಡಲಿ. ದಾಸಿಮಯ್ಯನ ಕುರಿತ ಸರ್ವಸಮ್ಮತ ತೀರ್ಮಾನ ವ್ಯಕ್ತವಾಗುವವರೆಗಾದರೂ ಸರ್ಕಾರ ಮೌನವಾಗಿ ಇರುವುದು ಒಳ್ಳೆಯದು. ತಲೆಕೆಡಿಸಿಕೊಳ್ಳಲು ಸಾಕಷ್ಟು ಸಂಗತಿಗಳು ಇರುವಾಗ, ಜಯಂತಿಗಳ ಕುರಿತು ಕಾಲಕ್ಷೇಪ ಮಾಡುವಷ್ಟು ಬಿಡುವು ಸರ್ಕಾರಗಳಿಗೆ ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.