ರಾಷ್ಟ್ರದ ರಾಜಧಾನಿ ನವದೆಹಲಿ, ಹತ್ತಕ್ಕೂ ಹೆಚ್ಚು ದಿನಗಳಿಂದ ವಾಯುಮಾಲಿನ್ಯದ ವಿಷವರ್ತುಲದಲ್ಲಿ ಸಿಲುಕಿಕೊಂಡಿದೆ. ದಟ್ಟ ಹೊಗೆ ಆವರಿಸಿಕೊಂಡು ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕಕಾರಿ. ಶ್ರೀಮಂತರು– ಬಡವರು, ಹಿರಿಯರು– ಕಿರಿಯರು ಹಾಗೂ ಗಂಡು –ಹೆಣ್ಣು ಭೇದಭಾವವಿಲ್ಲದೆ ಎಲ್ಲರ ಆರೋಗ್ಯಕ್ಕೂ ಹಾನಿ ಉಂಟುಮಾಡುವಂತಹ ಸ್ಥಿತಿ ಇದು. ರಸ್ತೆಗಳಲ್ಲಿನ ದೂಳು, ವಾಹನಗಳು ಹೊರಸೂಸುವ ಮಾಲಿನ್ಯ ಒಂದೆಡೆ, ಮತ್ತೊಂದೆಡೆ ಕಸಕ್ಕೆ ಬೆಂಕಿ ಹಚ್ಚುವುದು ಹಾಗೂ ನೆರೆ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುವುದರಿಂದ ಆವರಿಸಿಕೊಳ್ಳುವ ಹೊಗೆಯ ಅಪಾಯಕಾರಿ ಮಿಶ್ರಣ ದೆಹಲಿಯ ವಾತಾವರಣವನ್ನು ಸಂಪೂರ್ಣ ಹದಗೆಡಿಸಿದೆ.

ನಿಗದಿಪಡಿಸಲಾದ ಸುರಕ್ಷಿತ ಮಟ್ಟಕ್ಕಿಂತ ಶೇ 17ರಷ್ಟು ಹೆಚ್ಚಿನ ವಾಯುಮಾಲಿನ್ಯ ದೆಹಲಿಯಲ್ಲಿ ಕಂಡುಬಂದಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ನವದೆಹಲಿಯನ್ನು ‘ಗ್ಯಾಸ್ ಚೇಂಬರ್’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕರೆದಿದ್ದಾರೆ. ಇದೇ ರೀತಿ ‘ಕಿರು ಗ್ಯಾಸ್ ಚೇಂಬರ್ಗಳು’ ರಾಷ್ಟ್ರದ ವಿವಿಧ ನಗರಗಳು ಹಾಗೂ ಪಟ್ಟಣಗಳಲ್ಲಿ ಸೃಷ್ಟಿಯಾಗುವ ಹಂತದಲ್ಲಿವೆ ಎಂಬುದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ರಾಜ್ಯದಲ್ಲೂ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತಿದೆ ಎಂಬುದನ್ನು ಈಗಾಗಲೇ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅಧ್ಯಯನ ವರದಿಗಳು ಎತ್ತಿ ತೋರಿಸಿವೆ. ಹೀಗಾಗಿ, ಈ ಅಧ್ಯಯನಗಳನ್ನು ರಾಜ್ಯವೂ ಗಂಭೀರವಾಗಿ ಪರಿಗಣಿಸಬೇಕಾದುದು ಅಗತ್ಯ. ದೆಹಲಿ ಈಗ ಎದುರಿಸುತ್ತಿರುವ ಸಮಸ್ಯೆ ಬೆಂಗಳೂರಿಗೂ ತಟ್ಟದಿರುವಂತೆ ಮುಂಜಾಗ್ರತೆ ವಹಿಸುವುದು ಅವಶ್ಯ.

ದೆಹಲಿಯ ವಾಯುಮಾಲಿನ್ಯ ಸಮಸ್ಯೆ ನಿರ್ವಹಣೆಗೆ 13 ಕ್ರಮಗಳನ್ನು ದೆಹಲಿ ಸರ್ಕಾರ ಈಗ ಘೋಷಿಸಿದೆ. ಈ ಪೈಕಿ ಶಾಲೆಗಳಿಗೆ ಕೆಲವು ದಿನಗಳು ರಜೆ ಘೋಷಿಸಿರುವುದಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಐದು ದಿನ ನಿಷೇಧ ಹೇರಲಾಗಿದೆ. ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಡೀಸೆಲ್ ಜನರೇಟರ್ ಬಳಕೆಯನ್ನೂ ನಿಷೇಧಿಸಲಾಗಿದೆ. ಜೊತೆಗೆ ತ್ಯಾಜ್ಯಗಳನ್ನು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೆರೆಯ ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಬೆಳೆ ತ್ಯಾಜ್ಯಗಳನ್ನು ಬೆಂಕಿಗೆ ಹಾಕಿ ಸುಡುವುದು ಸಹ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ನವದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ರೂಪ ತಾಳಿರುವುದಕ್ಕೆ ಪಂಜಾಬ್ನ ರೈತರು ಕಾರಣರಲ್ಲ ಎಂದು ಕೇಂದ್ರ ಪರಿಸರ ಸಚಿವ ಅನಿಲ್ ದವೆ ಹೇಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಪಂಜಾಬ್ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಈ ಸಂದರ್ಭದಲ್ಲಿ, ಬಲವಾದ ರಾಜಕೀಯ ಶಕ್ತಿಯಾಗಿರುವ ರೈತರನ್ನು ಓಲೈಸುವ ಭರದಲ್ಲಿ ವಾಸ್ತವಗಳಿಗೆ ಕುರುಡಾಗಬಾರದು ಎಂಬ ಎಚ್ಚರ ರಾಜಕಾರಣಿಗಳಿಗೆಇರಬೇಕು.

ರಾಷ್ಟ್ರದ ರಾಜಧಾನಿಗೆ ಟ್ರಕ್ಗಳ ಪ್ರವೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿಷೇಧಿಸಿದೆ. ತ್ಯಾಜ್ಯಗಳನ್ನು ಸುಡುವುದನ್ನೂ ನಿಷೇಧಿಸಲಾಗಿದೆ ಎಂಬುದನ್ನೂ ಗಮನಿಸಬೇಕು. ಆದರೆ ಇವು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಇರುವುದರಿಂದ ಈ ನಿಷೇಧಗಳು ಹೆಚ್ಚು ಪರಿಣಾಮಕಾರಿ ಆಗುತ್ತಿಲ್ಲ. ಹಳೆಯದಾದ ಡೀಸೆಲ್ ವಾಹನಗಳನ್ನೂ ನಿಷೇಧಿಸಲಾಗಿದೆ. ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕಳೆದ ಕೆಲವು ತಿಂಗಳುಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ಅನೇಕ. ಆದರೆ, ನ್ಯಾಯಾಲಯಗಳು ಹಾಗೂ ಆಡಳಿತ ವ್ಯವಸ್ಥೆಯ ಆದೇಶಗಳು ಬರೀ ಕಾಗದದ ಮೇಲೇ ಉಳಿದಿವೆ ಎಂಬುದು ದುರದೃಷ್ಟಕರ. ಈ ಪರಿಸ್ಥಿತಿ ಹೀಗೇ ಮುಂದುವರಿಯಬಾರದು.

ನಗರಗಳಲ್ಲಿ ದೂಳು ಅಂಶ ನಿಯಂತ್ರಣಕ್ಕೆ ನಗರಗಳ ರಸ್ತೆಗಳ ಗುಣಮಟ್ಟ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಬೇಕಾದುದೂ ಅವಶ್ಯ. ಮಾಲಿನ್ಯ ಪ್ರಮಾಣವನ್ನು ಸುರಕ್ಷಿತ ಮಟ್ಟಕ್ಕೆ ಇಳಿಸಲು ಹೆಚ್ಚು ಕಠಿಣ ನಿರ್ಧಾರಗಳು ಹಾಗೂ ಸುಸ್ಥಿರ ಕ್ರಿಯೆ ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಜನರೂ ಪಾಲ್ಗೊಳ್ಳಬೇಕು. ಪಟಾಕಿ ಸುಡುವುದರಿಂದ ಆಗುವ ಮಾಲಿನ್ಯ ಯಾವ ಪರಿಯದ್ದು ಎಂಬುದರಿಂದ ಹಿಡಿದು ಮಾಲಿನ್ಯಕಾರಕವಾದ ಎಲ್ಲಾ ಬಗೆಯ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾಲಿನ್ಯ ಪಿಡುಗು ನಿವಾರಣೆ ನಮ್ಮ ಆದ್ಯತೆಯಾಗಬೇಕು. ಹಾಗೆಯೇ, ಮಾಲಿನ್ಯ ಉಂಟುಮಾಡುವವರ ಮೇಲೆ ಕ್ರಮ ಜರುಗಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.