ಐಎಸ್ ಉಗ್ರರ ದೌರ್ಜನ್ಯ ತಡೆಯಲಾಗದೆ ಲಕ್ಷಾಂತರ ಸಿರಿಯನ್ನರು ಈಗ ಐರೋಪ್ಯ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ.

ಐಎಸ್ ಉಗ್ರರ ಭೀಕರ ಅಟ್ಟಹಾಸದ ಬಿಸಿ ಈಗ ಯುರೋಪ್ನ ಅನೇಕ ದೇಶಗಳಿಗೆ ಜೋರಾಗಿಯೇ ತಟ್ಟತೊಡಗಿದೆ. ಟರ್ಕಿಯ ಕಡಲ ದಂಡೆಯಲ್ಲಿ ಸಿರಿಯಾದ ಕೊಬಾನಿಯ ಮೂರು ವರ್ಷದ ಬಾಲಕ ಅಯ್ಲನ್ ಕುರ್ದಿ ಮೃತದೇಹದ ದೃಶ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರ ಪ್ರಜ್ಞೆಯನ್ನು ಕಲಕಿದೆ. ಗ್ರೀಸ್ಗೆ ವಲಸೆ ಹೋಗಲು ಈ ಬಾಲಕನ ಕುಟುಂಬ ನಡೆಸಿದ ಪ್ರಯತ್ನದಲ್ಲಿ ಸಂಭವಿಸಿರುವ ಈ ಅವಘಡ ನಿರಾಶ್ರಿತರು ಅನುಭವಿಸುತ್ತಿರುವ ಸಂಕಟದತ್ತ ಬೆಳಕು ಚೆಲ್ಲಿದೆ.

ಉಗ್ರರ ಅಮಾನುಷ, ನಿರ್ದಯ ಕುಕೃತ್ಯಗಳಿಂದ ಭಯಪಟ್ಟ ಸಿರಿಯಾದ ಲಕ್ಷಾಂತರ ಜನ, ಜೀವ ಉಳಿಸಿಕೊಳ್ಳಲು ಕುಟುಂಬ ಸಮೇತ ಅನೇಕ ಐರೋಪ್ಯ ದೇಶಗಳತ್ತ ಪಲಾಯನ ಮಾಡುತ್ತಿದ್ದಾರೆ, ಮಾನವೀಯ ನೆಲೆಯಲ್ಲಿ ಆಶ್ರಯ ಯಾಚಿಸುತ್ತಿದ್ದಾರೆ. ಇಷ್ಟೆಲ್ಲ ಜನರಿಗೆ ಅನ್ನ, ನೀರು, ಸೂರು, ಔಷಧ, ಬಟ್ಟೆ ಮತ್ತಿತರ ಮೂಲ ಸೌಕರ್ಯ ಒದಗಿಸುವುದು ಈ ದೇಶಗಳಿಗೂ ಕಷ್ಟವಾಗುತ್ತಿದೆ. ಈ ಹಿಂದೆ ಇಂಥ ಸಮಸ್ಯೆಯನ್ನು ಭಾರತವೂ ಅನುಭವಿಸಿದೆ. 1972ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಅವಧಿಯಲ್ಲಿ ಪಾಕ್ ಸೇನೆಯ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಬಾಂಗ್ಲಾದೇಶಿಯರು, 1966-67ರ ಅವಧಿಯಲ್ಲಿ ಚೀನದ ದಬ್ಬಾಳಿಕೆಯಿಂದ ಲಕ್ಷಾಂತರ ಟಿಬೆಟಿಯನ್ನರು ವಲಸೆ ಬಂದಾಗ ಭಾರತ ಆಶ್ರಯ ನೀಡಿದೆ.

ಒಂದು ಕಡೆ ಮಾನವೀಯ ನೆರವು ನೀಡಬೇಕಾದ ಕರ್ತವ್ಯ, ಇನ್ನೊಂದು ಕಡೆ ಇದರಿಂದ ಆಗುವ ಸಾಮಾಜಿಕ, ಆರ್ಥಿಕ ಹೊರೆಗಳ ಅಡಕತ್ತರಿಯ ಕಷ್ಟ ಏನು ಎಂಬುದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಐರೋಪ್ಯ ರಾಷ್ಟ್ರಗಳು ನೆರವಿನ ಹಸ್ತ ಚಾಚಲು ಈಗ ಮುಂದಾಗಿವೆ. ಗಡಿಯಲ್ಲಿನ ರೈಲು ನಿಲ್ದಾಣಗಳು ಮಿತಿಮೀರಿದ ಪ್ರಯಾಣಿಕರ ಒತ್ತಡದಿಂದ ತತ್ತರಿಸಿ ಹೋಗಿವೆ. ಇಂಥ ಸಂಕಷ್ಟ ಸಮಯದಲ್ಲಿ ನೆರವು ಕೇಳಿ ಬಂದವರನ್ನು ವಾಪಸ್ ಕಳಿಸಬಾರದು ಎನ್ನುವ ಭಾವನೆ ಯುರೋಪ್ನಲ್ಲಿ ಬಲಗೊಳ್ಳುತ್ತಿದೆ ಎನ್ನುವುದು ಸಮಾಧಾನದ ಸಂಗತಿ.

‘ಹಿಂದೆ, ಹಿಟ್ಲರನ ನಾಜಿಗಳ ಸಾಮೂಹಿಕ ಹತ್ಯಾಕಾಂಡಕ್ಕೆ ಬೆದರಿ ವಲಸೆ ಹೋದ ಪ್ರತಿಯೊಬ್ಬ ಜರ್ಮನ್ ಪ್ರಜೆಗೂ ಜೀವದಾನ ಸಿಕ್ಕಿತ್ತು. ಆಗ ಬೇರೆ ದೇಶಗಳು ಜರ್ಮನ್ನರ ಬಗ್ಗೆ ತೋರಿದ ಔದಾರ್ಯವನ್ನು ಈಗ ಜರ್ಮನಿಯೂ ತೋರಿಸಬೇಕು’ ಎಂದು ಅಲ್ಲಿ ಪ್ರದರ್ಶನ, ಮೆರವಣಿಗೆಗಳು ನಡೆದಿವೆ. ಕೈಗೆ ಸಿಕ್ಕ ಸಣ್ಣ ದೋಣಿಯೇರಿ ಸಮುದ್ರದಲ್ಲಿ ಮುಳುಗಿದ ಅಸಂಖ್ಯಾತ ಜನರ ಬಗ್ಗೆ ಎಲ್ಲೆಡೆ ಅನುಕಂಪ ಮೂಡುತ್ತಿದೆ. ಗಡಿಯಲ್ಲಿ ಬೇಲಿ ನಿರ್ಮಿಸಿದ, ಬೇರೊಂದು ದೇಶಕ್ಕೆ ಹೋಗಲು ನಿರಾಶ್ರಿತರು ತಮ್ಮ ದೇಶದ ರೈಲುಗಳನ್ನು ಏರುವುದನ್ನು ತಡೆಯಲೆತ್ನಿಸಿದ ಒಂದೆರಡು ದೇಶಗಳು ಈಗ ನಿಲುವು ಬದಲಿಸಿಕೊಂಡಿವೆ.

ಹಂಗೆರಿ ಪ್ರಧಾನಿ ವಿಕ್ಟರ್ ಓರ್ಬನ್ ಮಾತಿನಲ್ಲಿಯೇ ಹೇಳುವುದಾದರೆ, ‘ಹೀಗೆ ಬರುತ್ತಿರುವ ನಿರಾಶ್ರಿತರು ಬೇರೊಂದು ಧರ್ಮದ ನಂಬಿಕೆ, ಸಂಸ್ಕೃತಿಯಡಿ ಬೆಳೆದವರು, ಇವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದು ಬಹಳ ಮುಖ್ಯ ಅಂಶ. ಏಕೆಂದರೆ ಯುರೋಪ್ನ ಸಂಸ್ಕೃತಿ ಕ್ರೈಸ್ತ ಮೂಲದ್ದು’. ಈ ಆತಂಕ ವ್ಯಕ್ತಪಡಿಸುವುದರ ಜತೆಜತೆಗೇ ಅವರು ನಿರಾಶ್ರಿತರಿಗೆ ಸೌಕರ್ಯ ಕಲ್ಪಿಸುತ್ತಿದ್ದಾರೆ. ಫಿನ್ಲ್ಯಾಂಡ್ ಪ್ರಧಾನಿ ಜುಹಾ ಸಿಪಿಲಾ ಅವರಂತೂ ತಮ್ಮ ಹಳ್ಳಿ ಮನೆಯಲ್ಲಿ ನಿರಾಶ್ರಿತರ ವಸತಿಗೆ ಏರ್ಪಾಟು ಮಾಡಲು ಮುಂದಾಗಿದ್ದಾರೆ. ಎಷ್ಟೋ ಜನ ಕಾಲ್ನಡಿಗೆಯಲ್ಲಿಯೇ ದೇಶದಿಂದ ದೇಶಕ್ಕೆ ನೂರಾರು ಕಿ.ಮೀ. ಪ್ರಯಾಣ ಬೆಳೆಸುತ್ತಿದ್ದಾರೆ.

ಐಎಸ್ ಉಗ್ರರ ಮೂಲಭೂತವಾದ ಬಹು ದೊಡ್ಡ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತಿರುವುದು ದೊಡ್ಡ ದುರಂತ. ತಮ್ಮದೇ ಜನರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಮಾನವೀಯತೆಯ ಎಲ್ಲೆ ಮೀರಿರುವುದು ಆತಂಕಕಾರಿ. ಅವರೇ ಪ್ರತಿಪಾದಿಸುತ್ತಿರುವ ಧರ್ಮದ ಸೋದರ ಭಾವಕ್ಕೆ ಇದು ವಿರುದ್ಧ. ಎರಡನೇ ಮಹಾಯುದ್ಧದ ನಂತರ ಇಷ್ಟೊಂದು ಜನರ ಸಾಮೂಹಿಕ ವಲಸೆ ನಡೆಯುತ್ತಿರುವುದು ಇದೇ ಮೊದಲು. ಸಿರಿಯಾದ ಬಿಕ್ಕಟ್ಟು ಈ ಪರಿ ಹೆಚ್ಚಾಗುವಲ್ಲಿ ತಮ್ಮ ಪಾತ್ರವನ್ನು ಕುರಿತಂತೆಯೂ ಯುರೋಪ್ ಹಾಗೂ ಅಮೆರಿಕ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಬಷರ್ ಅಲ್ ಅಸ್ಸಾದ್ ಆಡಳಿತಕ್ಕೆ ಇರಾನ್ ಹಾಗೂ ರಷ್ಯಾ ಬೆಂಬಲ ಇದ್ದದ್ದರಿಂದ ಅಸ್ಸಾದ್ ಆಡಳಿತದಲ್ಲಿ ಅಸ್ಥಿರತೆ ಮೂಡಿಸುವಂತಹ ಕಾರ್ಯಾಚರಣೆಗಳಿಗೆ ಈ ದೇಶಗಳು ಕುಮ್ಮಕ್ಕು ನೀಡಿರುವುದು ನಿಜ. ಇದರಿಂದ ಐಎಸ್ನಂತಹ ಕ್ರೂರ ವ್ಯವಸ್ಥೆ ಈಗ ತಲೆ ಎತ್ತಿದೆ. ಇಂತಹದೊಂದು ಪರಿಣಾಮ ಉಂಟಾಗಬಹುದು ಎಂಬುದನ್ನು ಊಹಿಸಿರದ ಪಾಶ್ಚಿಮಾತ್ಯ ನೀತಿಗಳ ರಾಜಕೀಯ ವೈಫಲ್ಯ ಇದು ಎಂದೇ ಹೇಳಬೇಕಾಗುತ್ತದೆ. ಈಗಾಗಲೇ ಸಿರಿಯಾ ನಿರಾಶ್ರಿತರು ಅಂದಾಜು 10.6 ಲಕ್ಷ ಮಂದಿ ಟರ್ಕಿಯಲ್ಲಿ, 10.17 ಲಕ್ಷ ಮಂದಿ ಲೆಬನಾನ್ನಲ್ಲಿ, 6 ಲಕ್ಷ ಮಂದಿ ಜೋರ್ಡನ್ನಲ್ಲಿ ಆಶ್ರಯ ಪಡೆದಿದ್ದಾರೆ. ಯುರೋಪ್ನಲ್ಲಿ ಈವರೆಗೆ ಆಶ್ರಯ ಪಡೆದಿರುವವರ ಸಂಖ್ಯೆ 3 ಲಕ್ಷ ಮಾತ್ರ ಎಂಬುದನ್ನೂ ಗಮನಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.