ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾಗೆ ‘ನ್ಯಾಯ’ ಮಹಿಳಾ ಸುರಕ್ಷತೆ ಮರೀಚಿಕೆ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ತಪ್ಪಿತಸ್ಥರಿಗೆ ದೆಹಲಿ ಹೈಕೋರ್ಟ್‌ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಹೀಗಾಗಿ ಈ ಪ್ರಕರಣದಲ್ಲಿ ನಾಲ್ವರು ಗಲ್ಲಿಗೇರುವುದು ಬಹತೇಕ ಖಚಿತವಾಗಿದೆ. ಕ್ಷಮಾದಾನಕ್ಕೆ ರಾಷ್ಟ್ರಪತಿಗಳನ್ನು ಕೋರುವ ಪ್ರಕ್ರಿಯೆಯಷ್ಟೇ ಅವರಿಗೆ ಬಾಕಿ ಉಳಿದಿರುವುದು. ರಾಷ್ಟ್ರದಾದ್ಯಂತ ಈ ಪ್ರಕರಣದ ಕುರಿತು ವ್ಯಕ್ತವಾಗಿದ್ದ ಭಾವನೆಗಳಿಗೆ  ಈ ತೀರ್ಪು ಅನುಗುಣವಾಗಿದೆ. ವಿಳಂಬವಾದರೂ  ಕಡೆಗೂ ಈ ಪ್ರಕರಣದಲ್ಲಿ ನ್ಯಾಯ ಸಿಕ್ಕಂತಾಗಿದೆ ಎಂಬ ಭಾವನೆ ವ್ಯಾಪಕವಾಗಿದೆ.  ಈ ಪ್ರಕರಣದ ಸಂತ್ರಸ್ತೆಯ  ಪೋಷಕರೂ ಸುಪ್ರೀಂ ಕೋರ್ಟ್‌ನ ಈ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.  ಈ ಪ್ರಕರಣದ  ಮತ್ತೊಬ್ಬ ಆರೋಪಿ ಈ ಹಿಂದೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲ ಆರೋಪಿ ಸುಧಾರಣಾ ಗೃಹದಲ್ಲಿ ಮೂರು ವರ್ಷ ಕಳೆದು ಈಗಾಗಲೇ  ಬಿಡುಗಡೆಯಾಗಿದ್ದಾನೆ.

ಅತ್ಯಂತ ಬರ್ಬರವಾಗಿ, ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ  ನಿರ್ಭಯಾ ಪ್ರಕರಣ ರಾಷ್ಟ್ರದಾದ್ಯಂತ ಆಘಾತದ ಅಲೆ ಎಬ್ಬಿಸಿತ್ತು.  2012ರ ಡಿಸೆಂಬರ್‌ 16ರಂದು ಚಲಿಸುವ ಬಸ್‌ನಲ್ಲಿ   ಈ ವೈದ್ಯಕೀಯ ವಿದ್ಯಾರ್ಥಿನಿಯ  ಮೇಲೆ ನಡೆದ ಅತ್ಯಾಚಾರ ಹಾಗೂ ನಂತರ ಸಿಂಗಪುರದ ಆಸ್ಪತ್ರೆಯಲ್ಲಿ  ಅವರು ಸಾಯುವವರೆಗಿನ  ಆ 13 ದಿನಗಳು, ಲೈಂಗಿಕ ದೌರ್ಜನ್ಯವನ್ನು ಭಾರತ ನೋಡುವ ರೀತಿಯನ್ನೇ ಬದಲಾಯಿಸಿಬಿಟ್ಟಿತು.  ಅದೂ ಅತ್ಯಾಚಾರ ಮತ್ತು ದೌರ್ಜನ್ಯದ ಘೋರ ವಿವರಗಳು ಬಹಿರಂಗವಾಗುತ್ತಿದ್ದಂತೆಯೇ  ರಾಷ್ಟ್ರದಾದ್ಯಂತ ಪ್ರತಿಭಟನೆ ಇನ್ನಷ್ಟು ತೀವ್ರವಾಗಿ ಕೇಂದ್ರ ಸರ್ಕಾರವನ್ನು ಬಲವಾಗಿ ತಟ್ಟಿತ್ತು. ಮಹಿಳಾ ಸುರಕ್ಷತೆಗೆ ಕಠಿಣ ಕಾನೂನಿನ ಅಗತ್ಯದ ಚರ್ಚೆ ಆಗ ತಾರಕಕ್ಕೇರಿತ್ತು. ಹೀಗಾಗಿ, ಈ ತೀವ್ರತರ ಪ್ರತಿಭಟನೆಗೆ ಮಣಿದ ಸರ್ಕಾರ, ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ ಶಿಫಾರಸುಗಳ ಅನ್ವಯ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ,  ಭಾರತೀಯ ಸಾಕ್ಷ್ಯ ಕಾಯ್ದೆಯ ವಿವಿಧ ಸೆಕ್ಷನ್‌ಗಳಿಗೆ ತಿದ್ದುಪಡಿ ಮಾಡಿದ್ದು  ಈಗ ಇತಿಹಾಸ. ಆದರೆ ಇಷ್ಟೆಲ್ಲಾ ಕಠಿಣ ಕಾನೂನುಗಳು ರಾಷ್ಟ್ರದಲ್ಲಿ ಜಾರಿಯಾಗಿದ್ದರೂ ಈಗಲೂ ದಿನನಿತ್ಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇರುವುದು ವಿಪರ್ಯಾಸ. ಹಾಗೆಯೇ ಮರಣದಂಡನೆಯಿಂದಲೂ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂಬುದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂಬುದೂ ಅನೇಕ ಮಹಿಳಾ ಪರ ಹೋರಾಟಗಾರರ ಅಭಿಪ್ರಾಯವಾಗಿದೆ. ಯಾವುದೇ ಪ್ರಕರಣದಲ್ಲೂ ಮರಣ ದಂಡನೆಯಿಂದ ಅಪರಾಧ ಪ್ರಕರಣಗಳನ್ನು ತಗ್ಗಿಸುವುದು ಸಾಧ್ಯವಿಲ್ಲ. ಅಲ್ಲದೆ ಈವರೆಗೆ ಮರಣದಂಡನೆ ಶಿಕ್ಷೆಗೊಳಗಾದವರು ಸಮಾಜದ ಅತ್ಯಂತ ಕೆಳಸ್ತರಗಳಿಗೆ ಸೇರಿದವರು. ಹೀಗಾಗಿ ಮರಣದಂಡನೆ ಕಾನೂನು ಬಳಕೆಯಲ್ಲೂ ತಾರತಮ್ಯಗಳಿವೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿರುವುದನ್ನು ಅವರು ಎತ್ತಿ ಹೇಳುತ್ತಾರೆ. ನ್ಯಾಯಮೂರ್ತಿ ವರ್ಮಾ ಸಮಿತಿ ಸಹ ಅತ್ಯಾಚಾರಕ್ಕೆ ಮರಣದಂಡನೆಯನ್ನು  ಶಿಫಾರಸು ಮಾಡಿಲ್ಲ.

ವಾಸ್ತವವಾಗಿ ಲೈಂಗಿಕ ದೌರ್ಜನ್ಯ ಕಾನೂನು ಜಾರಿಗೊಳಿಸುವ ಬದ್ಧತೆ ಹಾಗೂ ಸೂಕ್ಷ್ಮತೆ  ನಮ್ಮ ಜಾರಿ ವ್ಯವಸ್ಥೆಯಲ್ಲಿ ಇನ್ನೂ ಅಂತರ್ಗತವಾಗಬೇಕಿದೆ.  ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಹಾಗೂ ಕಠಿಣ ಶಿಕ್ಷೆ ನೀಡುವುದು ಈ ಅಪರಾಧಗಳ ತಡೆಗೆ ಬಹಳ ಮುಖ್ಯವಾದುದು. ಇದಕ್ಕಾಗಿ ಈ ಪ್ರಕರಣಗಳ ನಿರ್ವಹಣೆ ರೀತಿಯಲ್ಲಿಯೇ ಸಾಂಸ್ಥಿಕ ಸುಧಾರಣೆಗಳಾಗಬೇಕಾದುದು ಅಗತ್ಯ. ಈ ನಿಟ್ಟಿನಲ್ಲಿ ಪೊಲೀಸ್ ತರಬೇತಿ ಹಾಗೂ ಸುಧಾರಣೆ ಮಹತ್ವ ಪಡೆದುಕೊಳ್ಳುತ್ತದೆ. ಇಂತಹ ಕ್ರಮಗಳು ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT