ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸಂಪುಟಕ್ಕೆ 21 ಹೊಸಬರು ಸೇರ್ಪಡೆಯಾಗಿದ್ದಾರೆ. ಇದು ಸುಮಾರು ಆರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಎನ್ಡಿಎ ಸಂಪುಟದ ಮೊದಲ ವಿಸ್ತರಣೆ. ನಿರೀಕ್ಷೆಯಂತೆ ಮನೋಹರ್ ಪರಿಕ್ಕರ್, ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರ ಮಗ ಜಯಂತ ಸಿನ್ಹಾ ಸಚಿವರಾಗಿದ್ದಾರೆ. ಇವರಿಬ್ಬರೂ ಪ್ರತಿಷ್ಠಿತ ಐಐಟಿಗಳಲ್ಲಿ ಓದಿದವರು. ಪರಿಕ್ಕರ್ ಅವರದು ಕಳಂಕರಹಿತ ಚಾರಿತ್ರ್ಯ.

ದೇಶದ ಇತಿಹಾಸದಲ್ಲಿಯೇ ದೊಡ್ಡ ಹಗರಣ ಎನ್ನಲಾಗುವ ಕಲ್ಲಿದ್ದಲು ಗಣಿ ಹಂಚಿಕೆ ಹಗರಣವನ್ನು ಬಯಲಿಗೆಳೆದು ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದ ಮಹಾರಾಷ್ಟ್ರದ ಬಿಜೆಪಿ ಮುಖಂಡ ಹನ್ಸರಾಜ್ ಅಹಿರ್, ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ವಿದ್ಯುತ್ ಮಂತ್ರಿಯಾಗಿ ವಿದ್ಯುತ್ ಕ್ಷೇತ್ರದ ಸುಧಾರಣೆಗೆ ನಾಂದಿ ಹಾಡಿದ್ದ ಸುರೇಶ್ ಪ್ರಭು, ಒಲಿಂಪಿಕ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ರಾಜವರ್ಧನಸಿಂಗ್ ರಾಠೋಡ್, ಪಶ್ಚಿಮ ಬಂಗಾಳದ ಜನಪ್ರಿಯ ಗಾಯಕ ಬಬುಲ್ ಸುಪ್ರಿನೊ, 4 ದಶಕಗಳ ಕಾಲ ಕಾಂಗ್ರೆಸ್ ಸಂಗವನ್ನು ಕಳೆದುಕೊಂಡು ಕೇವಲ 3 ತಿಂಗಳ ಹಿಂದೆ ಬಿಜೆಪಿಗೆ ಬಂದಿರುವ ಹರಿಯಾಣದ ಜಾಟ್ ಮುಖಂಡ ಬೀರೇಂದ್ರ ಸಿಂಗ್ ಮತ್ತಿತರರು ಮಂತ್ರಿಗಳಾಗಿದ್ದಾರೆ.

ಆದರೆ ಕಳೆದ ಚುನಾವಣೆಯಲ್ಲಿ ‘ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಲಿ’ ಎಂಬ ಪ್ರಚೋದನಕಾರಿ ಹೇಳಿಕೆ ಕೊಟ್ಟು ಚುನಾವಣಾ ಆಯೋಗದಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಗಿರಿರಾಜ್ ಸಿಂಗ್ ಅವರಿಗೆ ಮಂತ್ರಿ ಸ್ಥಾನದ ಉಡುಗೊರೆ ಸಿಕ್ಕಿದ್ದು ಆಶ್ಚರ್ಯ. ಬಿಹಾರ, ಜಾರ್ಖಂಡ್ಗಳಿಗೆ ಸದ್ಯದಲ್ಲೇ ನಡೆಯುವ ಚುನಾವಣೆ ಮೇಲೆ ಕಣ್ಣಿಟ್ಟೇ ಪ್ರಧಾನಿ ಈ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಂತಿದೆ. ಇದರ ನಡುವೆಯೇ ಬಿಜೆಪಿ- ಶಿವಸೇನಾ ಸಂಬಂಧ ಮತ್ತಷ್ಟು ಹಳಸಿದೆ. ಸೇನಾ ಕಡೆಯಿಂದ ಮಂತ್ರಿಯಾಗಬೇಕಿದ್ದ ಅನಂತ ದೇಸಾಯಿ ಪ್ರಮಾಣ ಸ್ವೀಕರಿಸದೆ ವಿಮಾನ ನಿಲ್ದಾಣದಿಂದಲೇ ಮುಂಬೈಗೆ ವಾಪಸ್ಸಾಗಿದ್ದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಸಾಕಷ್ಟು ಬಲಿಷ್ಠವಾಗಿಯೇ ಇರುವ ಬಿಜೆಪಿಯ ಮುಖಂಡರು ಸೇನಾ ಬೆದರಿಕೆಗೆ ಸೊಪ್ಪು ಹಾಕಿಲ್ಲ. ಇದೊಂದು ಗಮನಾರ್ಹ ಬೆಳವಣಿಗೆ.

ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ನಂತರ ಸಂಪುಟ ವಿಸ್ತರಣೆ ಎಂದರೆ ಅಂಗಪಕ್ಷಗಳನ್ನು ಓಲೈಸಿ ಹೈರಾಣಾಗುವ ದೊಡ್ಡ ಕಸರತ್ತಾಗಿತ್ತು. ಅಂಥ ದಯನೀಯ ಸ್ಥಿತಿ ಮೋದಿಯವರಿಗೆ ಇಲ್ಲ. ಹೀಗಾಗಿ ಪ್ರತಿಭಾವಂತರು, ವಿವಿಧ ಕ್ಷೇತ್ರಗಳ ತಜ್ಞರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆ. ಈ ವಿಸ್ತರಣೆ ಅಗತ್ಯವಾಗಿತ್ತು. ಸ್ವತಃ ಪ್ರಧಾನಿ ಮೇಲೆಯೇ ಅನೇಕ ಖಾತೆಗಳ ಭಾರ ಇದೆ. ಪೂರ್ಣಾವಧಿ ಸಚಿವರ ಅಗತ್ಯ ಇರುವ ಹಣಕಾಸು ಮತ್ತು ರಕ್ಷಣೆ ಎರಡನ್ನೂ ಜೇಟ್ಲಿ ಒಬ್ಬರೇ ನೋಡಿಕೊಳ್ಳುತ್ತಿದ್ದರು. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ವಾಗ್ದಾನ ಉಳಿಸಿಕೊಳ್ಳುವ ಹೊಣೆಯೂ ಪ್ರಧಾನಿ ಮೇಲಿತ್ತು. ಈ ವಿಸ್ತರಣೆ ಮೂಲಕ ಅವರು ದೇಶಕ್ಕೆ ಅಂಥ ಸಕಾರಾತ್ಮಕ ಸಂದೇಶ ರವಾನಿಸಲು ಯತ್ನಿಸಿದ್ದಾರೆ. ಪ್ರತಿಭೆ, ಪ್ರಾದೇಶಿಕ ಸಮತೋಲನಕ್ಕೆ ಒತ್ತು ಕೊಡುವ ಪ್ರಯತ್ನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.