ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಶಿಫಾರಸು

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 49 ಗಣಿ ಕಂಪೆನಿಗಳ ಗುತ್ತಿಗೆಯನ್ನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಉನ್ನತಾಧಿಕಾರ ಸಮಿತಿ (ಸಿಇಸಿ) ಮಾಡಿರುವ ಶಿಫಾರಸು ಅತ್ಯಂತ ಮಹತ್ವದ್ದು.

ಸರ್ಕಾರ ವಶಪಡಿಸಿಕೊಂಡಿರುವ ಅದಿರನ್ನು ಹರಾಜು ಹಾಕಿ ಬರುವ ಹಣದಿಂದ ಹಾಳಾಗಿರುವ ಅರಣ್ಯ ಮತ್ತು ಪರಿಸರವನ್ನು ಪುನರ್‌ರೂಪಿಸಬೇಕು ಎಂಬ ಸಿಇಸಿ ಶಿಫಾರಸು ಸ್ವಾಗತಾರ್ಹ.
 
ಗಣಿ ಕಂಪೆನಿಗಳು ಅರಣ್ಯ ಮತ್ತು ಪರಿಸರ ಕಾನೂನುಗಳನ್ನು ಉಲ್ಲಂಘಿಸಲು ರಾಜ್ಯ ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು ಎಂದು ಸಿಇಸಿ ಸ್ಪಷ್ಟವಾಗಿ ಹೇಳಿದೆ. `ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ~ ಎಂದೇ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತ ಬಂದಿದ್ದರು.
 
ಗಣಿ ಸಂಪತ್ತನ್ನು ಕೊಳ್ಳೆ ಹೊಡೆದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರನ್ನು ಸಮರ್ಥಿಸಿಕೊಂಡಿದ್ದರು. `ಅವರು ಸುಳ್ಳು ಹೇಳಿದ್ದರು~ ಎಂಬುದು ಸಿಇಸಿ ವರದಿಯಿಂದ ಸಾಬೀತಾಗಿದೆ. ಅಧಿಕಾರ ಉಳಿಸಿಕೊಳ್ಳಲು ಖನಿಜ ಸಂಪತ್ತಿನ ಲೂಟಿಯನ್ನು ತಡೆಯುವ ಪ್ರಯತ್ನವನ್ನೇ ಮಾಡದೆ ಯಡಿಯೂರಪ್ಪ ರಾಜ್ಯದ ಜನತೆಗೆ ದ್ರೋಹ ಬಗೆದರು. ಅವರ ಬೇಜವಾಬ್ದಾರಿ ನಡವಳಿಕೆಯಿಂದ ಮೂರು ಜಿಲ್ಲೆಗಳ ಪರಿಸರ ಹಾಳಾಯಿತು.
 
ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಯಿತು. ಬಿಜೆಪಿಯ ಕೆಲ ಸಚಿವರು, ಶಾಸಕರು ಮತ್ತು ಇತರೆ ಪಕ್ಷಗಳ ಪ್ರಭಾವಿಗಳು ಗಣಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಕ್ರಮಗಳಿಗೆ ಕುಮ್ಮಕ್ಕು ನೀಡಿದ ಸರ್ಕಾರಿ ಅಧಿಕಾರಿಗಳೂ ತಪ್ಪಿತಸ್ಥರೇ. ತಡವಾದರೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಬಂತು ಎಂಬುದೇ ಸಮಾಧಾನದ ಸಂಗತಿ.

 ಗಣಿ ಸಂಪತ್ತನ್ನು ಕೊಳ್ಳೆ ಹೊಡೆದ ರಾಜಕೀಯ ಮುಖಂಡರು ಮತ್ತೆ ಚುನಾಯಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮತದಾರರದ್ದು. ಗಣಿ ಅಕ್ರಮಗಳಿಗೆ ಉತ್ತೇಜನ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಹಿಂಜರಿಯಬಾರದು. ಮತ್ತೆ ಗಣಿಗಾರಿಕೆ ಆರಂಭಿಸಲು ಕೆಲವು ಷರತ್ತುಗಳನ್ನು ಸಿಇಸಿ ಸೂಚಿಸಿದೆ. ಈ ಷರತ್ತುಗಳನ್ನು ಸರ್ಕಾರ ಪಾಲಿಸಬೇಕು. ಗಣಿ ನಿಯಮಗಳನ್ನು ಉಲ್ಲಂಘನೆ ಮಾಡುವ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗ ಇರುವ ಕಾನೂನಿನಲ್ಲೇ ಅವಕಾಶವಿದೆ.
 
ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ರಾಜಕೀಯ ಮುಖಂಡರು ಮತ್ತು ಸರ್ಕಾರ ಅವಕಾಶ ಕೊಡುತ್ತಿಲ್ಲ. ಚುನಾಯಿತ ಪ್ರತಿನಿಧಿಗಳೇ ಅಕ್ರಮಗಳಲ್ಲಿ ತೊಡಗುತ್ತಿರುವುದರಿಂದ ಅಧಿಕಾರಿಗಳು ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
 
ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಈ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಚಿಂತನೆ ನಡೆಸಬೇಕು. ಲೋಕಾಯುಕ್ತ ವರದಿ ಮತ್ತು ಸಿಇಸಿ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕವೇ ಬಿಜೆಪಿ ಸರ್ಕಾರ ತನಗೆ ಅಂಟಿಕೊಂಡಿರುವ ಕಳಂಕಗಳಿಂದ ಹೊರಬರಬೇಕು. ಗಣಿಗಾರಿಕೆಯಿಂದ ನಾಶವಾಗಿರುವ ಅರಣ್ಯ ಮತ್ತು ಪರಿಸರವನ್ನು ಪುನರ್‌ರೂಪಿಸಿದ ನಂತರವೇ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT