ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್: ಎಡವಿದ ಭಾರತ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪರೋಕ್ಷ `ಕ್ಷಿಪ್ರ ಕ್ರಾಂತಿ~ಯಿಂದಾಗಿ ರಾಜಕೀಯ ತಳಮಳಕ್ಕೆ ಸಿಕ್ಕಿರುವ ಇಸ್ಲಾಂ ಪ್ರಾಬಲ್ಯದ ದ್ವೀಪರಾಶಿ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಶಾಂತಿ ಸ್ಥಾಪಿಸಿ ಪ್ರಸಕ್ತ ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಹಿಡಿಯಲು ಭಾರತ, ಅಮೆರಿಕ, ಬ್ರಿಟನ್, ಯೂರೋಪ್ ಒಕ್ಕೂಟದ ಪ್ರತಿನಿಧಿಗಳು ನಡೆಸುತ್ತಿರುವ ಪ್ರಯತ್ನಗಳು ಇನ್ನೂ ಸಫಲವಾಗಿಲ್ಲ. ಪದಚ್ಯುತ ಅಧ್ಯಕ್ಷ ಮಹಮದ್ ನಷೀದ್ ಮತ್ತು ಪ್ರಸ್ತುತ ಅಧ್ಯಕ್ಷ ಮಹಮದ್ ವಹೀದ್ ನಡುವೆ ರಾಜಿ ಮಾಡಿಸುವ ಯತ್ನಗಳು ಮುಂದುವರಿದಿವೆ.

2008ರಲ್ಲಿ ಪ್ರಜಾತಂತ್ರ ವಿಧಾನದಲ್ಲಿ ಆಯ್ಕೆಯಾಗಿದ್ದ ನಷೀದ್ ಪದಚ್ಯುತಿ ಮೊದಮೊದಲು ಅಂತರರಾಷ್ಟ್ರೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾದರೂ ಕ್ರಮೇಣ ರಾಜಕೀಯ ಕಾರಣಗಳಿಗಾಗಿ ಹೊಸ ಅಧ್ಯಕ್ಷ ವಹೀದ್ ಅವರನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯನ್ನು ಅದು ಎದುರಿಸುವಂತಾಗಿದೆ.

ಹಿಂದಿನ ಸರ್ಕಾರ ಭಾರತ, ಕ್ರೈಸ್ತರು ಮತ್ತು ಇಸ್ರೇಲ್ ಪರವಾದ ನಿಲುವು ತಳೆದಿತ್ತು ಎಂದು ವಹೀದ್ ಬೆಂಬಲಿಗರು ಆರೋಪಿಸಿದರೆ ತಮ್ಮನ್ನು ಪದಚ್ಯುತಗೊಳಿಸಿದವರು ಇಸ್ಲಾಂ ಉಗ್ರವಾದದ ಬೆಂಬಲಿಗರು ಎಂದು ನಷೀದ್ ಬೆಂಬಲಿಗರು ಆರೋಪಿಸುತ್ತಿದ್ದಾರೆ.

ಮೂರು ದಶಕಗಳ ಕಾಲ ದೇಶವನ್ನಾಳಿದ ಸರ್ವಾಧಿಕಾರಿ ಮಮೂನ್ ಅಬ್ದುಲ್ ಗಯೂಮ್ ಬೆಂಬಲಿಗರು ಪ್ರಜಾತಂತ್ರವನ್ನು ನಾಶ ಮಾಡಿ ಮತ್ತೆ ಅಧಿಕಾರ ಕಬಳಿಸಲು ನಡೆಸಿದ ಸಂಚು ಇದಾಗಿದೆಯೆಂದು ಅವರು ಹೇಳುತ್ತಿದ್ದಾರೆ.

ಮಾಲ್ಡೀವ್ಸ್‌ನ ಬೆಳವಣಿಗೆಗಳು ಒಂದು ರೀತಿಯಲ್ಲಿ ಇಸ್ಲಾಂನ ಉದಾರವಾದಿಗಳು ಮತ್ತು ಉಗ್ರವಾದಿಗಳ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಾಗಿರಬಹುದಾದ ಸಾಧ್ಯತೆಯಿದೆ.

 ಹಿಂದೂ ಮಹಾಸಾಗರದಲ್ಲಿರುವ ದ್ವೀಪ ಸಮುದಾಯ ರಾಷ್ಟ್ರ ಮಾಲ್ಡೀವ್ಸ್. ಅಲ್ಲಿನ ಬೆಳವಣಿಗೆಗಳನ್ನು ನೆರೆಯ ಭಾರತ ಕಣ್ಣಲ್ಲಿ ಕಣ್ಣಿಟ್ಟು ಗಮನಿಸಬೇಕಿತ್ತು. ಅದರಲ್ಲಿಯೂ ಅಲ್ ಖೈದಾ, ತಾಲಿಬಾನ್ ಮತ್ತಿತರ ಇಸ್ಲಾಂ ಭಯೋತ್ಪಾದಕರು ಅಲ್ಲಿ ನೆಲೆ ಸ್ಥಾಪಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಇರುವಾಗ ಭಾರತ ಇನ್ನೂ ಎಚ್ಚರಿಕೆಯಿಂದ ಇರಬೇಕಿತ್ತು. 2008ರಲ್ಲಿಯಷ್ಟೇ ಅಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿತವಾಗಿದೆ. ಅದನ್ನು ಉಳಿಸುವ ಜವಾಬ್ದಾರಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ನೆರೆಯ ಭಾರತಕ್ಕೆ ಇದೆ.

ಆದರೆ ಕಳೆದ ಒಂದು ವರ್ಷದಿಂದ ಅಲ್ಲಿ ಆಗುತ್ತಿದ್ದ ಬೆಳವಣಿಗೆಗಳಿಗೆ ಮತ್ತು ಅಂತಿಮವಾಗಿ ಮೊನ್ನೆ ನಡೆದ ಪರೋಕ್ಷ ಕ್ಷಿಪ್ರ ಕ್ರಾಂತಿಗೆ ಸರಿಯಾಗಿ ಭಾರತ ಸ್ಪಂದಿಸದೇ ಇದ್ದುದು ವಿಪರ್ಯಾಸ.
 
ಆ ದೇಶದ ಆಂತರಿಕ ವಿಚಾರಗಳಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸವಕಲು ನೀತಿಯನ್ನು ಭಾರತ ಮುಂದೊಡ್ಡಿಕೊಂಡು ತನ್ನ ಸಹಜ ಹಕ್ಕನ್ನು ಚಲಾಯಿಸದೆ ಸುಮ್ಮನಿದ್ದುದರಿಂದ ಇದೀಗ ಅಮೆರಿಕ, ಬ್ರಿಟನ್, ಯೂರೋಪ್ ರಾಷ್ಟ್ರಗಳು ಅಲ್ಲಿನ ವಿದ್ಯಮಾನಗಳಲ್ಲಿ ತಲೆಹಾಕಿವೆ.
 
ಹೊಸ ಅಧ್ಯಕ್ಷ ವಹೀದ್ ಸರ್ಕಾರಕ್ಕೆ ಮಾನ್ಯತೆ ನೀಡಲು ಭಾರತ ಮುಂದಾದದ್ದು ಕೂಡಾ ಸರಿಯಾದ ಕ್ರಮ ಅಲ್ಲ. ಪ್ರಜಾತಂತ್ರ ಮಾದರಿಯಲ್ಲಿ ಆಯ್ಕೆಯಾದ ಅಧ್ಯಕ್ಷರ ಮೇಲೆ ಪೊಲೀಸರು ಮತ್ತು ಮಿಲಿಟರಿ ಒತ್ತಡ ಹೇರಿ ರಾಜೀನಾಮೆ ಪಡೆಯುವಂಥ ಬೆಳವಣಿಗೆ ಅಪಾಯಕಾರಿಯಾದದ್ದು.
 
ನಾಗರಿಕ ಆಡಳಿತದಲ್ಲಿ ಮಿಲಿಟರಿ ಅಥವಾ ಪೊಲೀಸರ ಹಸ್ತಕ್ಷೇಪವನ್ನು ಬೆಂಬಲಿಸುವಂತಹ ಕ್ರಮವನ್ನು ಭಾರತ ತೆಗೆದುಕೊಳ್ಳಬಾರದಿತ್ತು. ನೆರೆಯ ರಾಷ್ಟ್ರಗಳ ವಿದ್ಯಮಾನಗಳನ್ನು ನಿರ್ವಹಿಸುವಲ್ಲಿ ಮತ್ತು ಆ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾರತ ಪದೇ ಪದೇ ಎಡವುತ್ತಿರುವುದು ಆಘಾತಕಾರಿಯಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT