ಬುಧವಾರ, ಅಕ್ಟೋಬರ್ 16, 2019
22 °C

ಭಾನುವಾರ, 5–10–1969

Published:
Updated:

ಖಾಸಗಿ– ಸರ್ಕಾರಿ ಕ್ಷೇತ್ರಗಳ ನಡುವಣ ವಿವಾದ ಅಸಂಬದ್ಧ: ಇಂದಿರಾ

ಮಧುರೆ, ಅ. 4– ಖಾಸಗಿ ಮತ್ತು ಸರ್ಕಾರಿ ವಿಭಾಗಗಳ ನಡುವೆ ಸತತ ನಡೆಯುತ್ತಿರುವ ‘ಘರ್ಷಣೆ ಕೇವಲ ಅಸಂಬದ್ಧ  ವಿವಾದ’ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಮಧುರೆ– ರಾಮನಾಡು ವಣಿಕ ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಎರಡು ವಿಭಾಗಗಳೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ರಾಷ್ಟ್ರ ಮುನ್ನಡೆಯಬಹುದು ಎಂದು ತಿಳಿಸಿದರು. ಪ್ರಾದೇಶಿಕ ಅಸಮತೆಗಳನ್ನು ಅವರು ಪ್ರಸ್ತಾಪಿಸಿ, ವಿವಿಧ ಪ್ರದೇಶಗಳ ನಡುವೆ ಇರುವ ಆರ್ಥಿಕ ಅಸಮಾನತೆ ಮತ್ತು ವ್ಯತ್ಯಾಸಗಳನ್ನು ಒಮ್ಮೆಲೇ ನಿರ್ಮೂಲ ಮಾಡುವುದು ಸಾಧ್ಯವಿಲ್ಲ. ಈ ವ್ಯತ್ಯಾಸಗಳು ಹೋಗಬೇಕು. ಆದರೆ ಕಾರ್ಯವಿಧಾನ ನಿಧಾನವಾದದ್ದು ಎಂಬುದನ್ನು ತಿಳಿಯಬೇಕು ಎಂದರು.

ಮೈಸೂರಿನ ಮೋಹಕತೆ

ನವದೆಹಲಿ, ಅ. 4– ಮೈಸೂರು ರಾಜ್ಯದ ವೈವಿಧ್ಯಪೂರ್ಣ ಜೀವನವನ್ನು ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ಅವರು ಇಂದು ಇಲ್ಲಿ ಸ್ಮರಿಸಿದರು. ‘ಮೈಸೂರು ದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನ ರಾಜ್ಯಪಾಲರಾಗಿ ಇದ್ದ ಎರಡು ವರ್ಷಗಳಲ್ಲಿ ‘ಐತಿಹಾಸಿಕ ಸಂಪ್ರದಾಯ ಹಾಗೂ ನೈಸರ್ಗಿಕ ಸೌಂದರ್ಯದ ಸಿರಿಯನ್ನು ರಾಜ್ಯದಲ್ಲಿ ಹಾಗೂ ಅದರ ಸುತ್ತಮುತ್ತ’ ತಾವು ಕಂಡುದಾಗಿ ಅವರು ಹೇಳಿದರು.

ನಿರಶನದ ಎರಡನೇ ದಿನ ಗಡಿನಾಡು ಗಾಂಧಿ ಆರೋಗ್ಯ ತೃಪ್ತಿಕರ

ನವದೆಹಲಿ, ಅ. 4– ತಮ್ಮ ನಿರಶನ ವ್ರತದ ಎರಡನೇ ದಿನವಾದ ಇಂದು ಖಾನ್ ಅಬ್ದುಲ್ ಗಫಾರ್ ಖಾನರು ಅತ್ಯುತ್ಸಾಹದಿಂದ ನಗುಮುಖದಿಂದ ಹೊರಬಂದು, ಅಸಂಖ್ಯಾತ ಮಂದಿಯ ಅಭಿನಂದನೆಗಳನ್ನು ಕೈಜೋಡಿಸಿ ಕೃತಜ್ಞತೆಯಿಂದ ಸ್ವೀಕರಿಸಿದರು.

Post Comments (+)