ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಹೊರಗುಳಿದ 148 ಮಕ್ಕಳು

ವಿಶೇಷ ದಾಖಲಾತಿ ಅಭಿಯಾನದ ಮೂಲಕ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ಯತ್ನ
Last Updated 29 ಮೇ 2018, 10:47 IST
ಅಕ್ಷರ ಗಾತ್ರ

ಮಂಡ್ಯ: ಬೇಸಿಗೆ ರಜೆ ಮುಗಿಸಿದ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ 148 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಅವರನ್ನು ಮರಳಿ ಶಾಲೆಗೆ ಸೇರಿಸಿಕೊಳ್ಳಲು ದಾಖಲಾತಿ ಆಂದೋಲನ ಜಿಲ್ಲೆಯಾದ್ಯಂತ ನಡೆಯುತ್ತಿದೆ.

ಶಾಲೆಯಿಂದ ಹೊರಗುಳಿದ 6ರಿಂದ 13 ವರ್ಷ ವಯಸ್ಸಿನ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಆಂದೋಲನ ಆರಂಭಗೊಂಡಿದೆ. ವಲಸೆ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಗುರುತಿಸಿದ್ದಾರೆ.

ಅದರಲ್ಲಿ ಕೆಲವು ಮಕ್ಕಳು ಶಾಲೆಗೆ ದಾಖಲಾಗಿ ಗೈರು ಹಾಜರಾಗಿದ್ದರೆ ಇನ್ನೂ ಕೆಲವರು ಶಾಲೆಗೆ ದಾಖಲಾಗಿಲ್ಲ. ವಲಯ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಪಟ್ಟಣ, ಗ್ರಾಮ ಸೇರಿ ಜನವಸತಿ ಪ್ರದೇಶಗಳ ಮನೆ–ಮನೆಗೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ 148 ಮಕ್ಕಳನ್ನು ಗುರುತಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 45 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ನಾಗಮಂಗಲ ತಾಲ್ಲೂಕಿನಲ್ಲಿ ಅತೀ ಕಡಿಮೆ ಇಬ್ಬರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬುದನ್ನು ಸಮೀಕ್ಷೆಯಲ್ಲಿ ಪತ್ತೆ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಬಂದು ಕಲ್ಲಿನ ಕ್ವಾರಿ ಮತ್ತಿತರ ಕಡೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಅವರನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದೆ. ವಿಶೇಷ ದಾಖಲಾತಿ ಅಭಿಯಾನ ಹಾಗೂ ಸಾಮಾನ್ಯ ದಾಖಲಾತಿ ಅಭಿಯಾನ ಎಂಬ ಎರಡು ಹಂತಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ.

‘ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೂ ಕ್ವಾರಿ ಕಾರ್ಮಿಕರು, ಕೃಷಿ ಕಾರ್ಮಿಕರು ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ. ಅಲ್ಲದೇ ಕೆಲವು ಮಕ್ಕಳು ಶಾಲೆಗೆ ದಾಖಲಾಗಿಯೂ ಗೈರು ಹಾಜರಾಗಿದ್ದಾರೆ. ಅವರನ್ನು ವಿಶೇಷ ದಾಖಲಾತಿ ಅಭಿಯಾನದ ಮೂಲಕ ಮರಳಿ ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಪ್ರಕಾಶ್‌ಮೂರ್ತಿ ಹೇಳಿದರು.

ಜಾಗೃತಿ ಜಾಥಾ : ವಿಶೇಷ ದಾಖಲಾತಿ ಅಭಿಯಾನದ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಹಳ್ಳಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಶಿಕ್ಷಣದ ಮಹತ್ವ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಬೀದಿನಾಟಕ, ಸಭೆ ಸಮಾರಂಭಗಳನ್ನು ಆಯೋಜನೆ ಮಾಡಿ ಮಕ್ಕಳನ್ನು ಶಾಲೆಗೆ ಮರಳಿ ಬರುವಂತೆ ಪ್ರೇರಣೆ ನೀಡಲಾಗುತ್ತಿದೆ. ವಿಶೇಷ ಅಭಿಯಾನ ಮೇ 16ರಿಂದಲೇ ಆರಂಭವಾಗಿದ್ದು ಮೇ 31ರವರೆಗೂ ನಡೆಯಲಿದೆ.

‘ವಿಶೇಷ ಅಭಿಯಾನದಲ್ಲಿ ಮಗು ವಾಸಿಸುತ್ತಿರುವ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಪ್ರಮಾಣ ಪತ್ರ ವಿತರಣೆ ಮಾಡುತ್ತಾರೆ. ಆ ಪತ್ರದ ಆಧಾರದ ಮೇಲೆ ಶಿಕ್ಷಣ ಇಲಾಖೆ ಸಿಬ್ಬಂದಿ ಆ ಮಗುವಿಗೆ ದಾಖಲಾತಿ ನೀಡುತ್ತಾರೆ’ ಎಂದು ಮಂಡ್ಯ ಉತ್ತರ ವಲಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗರಾಜ್‌ ಹೇಳಿದರು.

ಸಾಮಾನ್ಯ ದಾಖಲಾತಿ ಅಭಿಯಾನ : ಸಾಮಾನ್ಯ ದಾಖಲಾತಿ ಅಭಿಯಾನದ ಮೂಲಕ ಹೊಸದಾಗಿ ಅರ್ಹ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಜೂನ್‌ 1ರಿಂದ 30ರವರೆಗೂ ಈ ಅಭಿಯಾನ ಎಲ್ಲ ಶಾಲೆಗಳಲ್ಲಿ ನಡೆಯಲಿದೆ. 5 ವರ್ಷ 5 ತಿಂಗಳು ತುಂಬಿದ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿದೆ.

‘ಮಕ್ಕಳಿಗೆ ಈಗಾಗಲೇ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ತಿಂಗಳೊಳಗೆ ಸಮವಸ್ತ್ರ, ಶೂ, ಸಾಕ್ಸ್‌ ವಿತರಣೆ ಮಾಡಲಾಗುತ್ತದೆ. ಶಾಲಾ ಸುಧಾರಣ ಮತ್ತು ಮೇಲುಸ್ತುವಾರಿ ಸಮಿತಿ ಮೂಲಕ ಮಕ್ಕಳಿಗೆ ಪಠ್ಯೋಪಕರಣ ವಿತರಣೆ ಮಾಡಲಾಗುವುದು’ ಎಂದು ಡಿಡಿಪಿಐ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT