ಮಕ್ಕಳ ಸಾಹಿತ್ಯ ರಚನೆಗೆ ಮಗು ಮನಸ್ಸಿರಬೇಕು

ಭಾನುವಾರ, ಜೂಲೈ 21, 2019
22 °C
ಫಟಾಫಟ್‌

ಮಕ್ಕಳ ಸಾಹಿತ್ಯ ರಚನೆಗೆ ಮಗು ಮನಸ್ಸಿರಬೇಕು

Published:
Updated:

ಯಾದಗಿರಿ ಜಿಲ್ಲೆಯ ಶಹಾಪುರದ ಚಂದ್ರಕಾಂತ ಕರದಳ್ಳಿ ಅವರ ‘ಕಾಡು ಕನಸಿನ ಬೀದಿಗೆ’ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. 33 ವರ್ಷಗಳ ಕಾಲ ಶಿಕ್ಷಕರಾಗಿ ಮಕ್ಕಳೊಡನೆ ಒಡನಾಡಿದ ಕರದಳ್ಳಿ, ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮಕ್ಕಳಿಗಾಗಿ ರಚಿಸಿದ ಕೃತಿಗಳು 25. 

* ಮಕ್ಕಳ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೇರಕವಾದ ಸಂಗತಿಗಳೇನು?

ಮಕ್ಕಳಿಗೆ ಪಾಠ ಮಾಡುವ ಸಂದರ್ಭದಲ್ಲಿ ಹಿರಿಯ ಕವಿಗಳ ಕವಿತೆಗಳನ್ನು ಹೇಳುವಾಗ, ಅವುಗಳ ಆಶಯ, ನುಡಿಯ ಬಗೆಗಿನ ಪ್ರೀತಿ ನನ್ನನ್ನು ಆಕರ್ಷಿಸಿದವು. ನಾನೂ ಹೀಗೆಯೇ ಬರೆಯಬಹುದಲ್ಲವಾ ಎಂದು ಅನಿಸಿತು. ಮಕ್ಕಳ ಮನಸ್ಸನ್ನು ಅವರ ಮುಖದಲ್ಲಿ ನೋಡುತ್ತಲೇ, ನಾನು ಅವರಿಗಾಗಿ ಪದ್ಯ–ಕಥೆಗಳನ್ನು, ಒಗಟು–ಶಿಶುಪ್ರಾಸಗಳನ್ನು ಬರೆಯತೊಡಗಿದೆ.

* ಸಾಹಿತ್ಯ ರಚನೆಯ ಮೇಲೆ ನಿಮ್ಮ ಬಾಲ್ಯದ ಪ್ರಭಾವವೇನು?

ನನ್ನ ಊರಿನ ಅಸ್ಮಿತೆ, ಅದರ ಓಣಿಗಳಲ್ಲಿ ನಾನು ಆಡಿದ ಆಟಗಳು, ಅದರಲ್ಲಿನ ಹಾಡುಗಳ ಪ್ರಭಾವ ನನ್ನ ಮೇಲೆ ಸಾಕಷ್ಟಾಗಿದೆ. ಮಗುವಿನ ಮನಸ್ಸಿದ್ದಾಗ ಮಾತ್ರ ಪೂರ್ಣ ಪ್ರಮಾಣದ ಮಕ್ಕಳ ಸಾಹಿತ್ಯ ರಚನೆ ಮಾಡಲು ಸಾಧ್ಯವಾಗುತ್ತದೆ. ಇದು ನಾನು ಕಂಡುಕೊಂಡ ಸತ್ಯ.

* ಈಗ ಯಾವ ಕೃತಿಗಳನ್ನು ರಚಿಸುತ್ತಿದ್ದೀರಿ?

ಇತ್ತೀಚೆಗೆ ಬಂಡೀಪುರಕ್ಕೆ ಬೆಂಕಿಬಿತ್ತಲ್ಲ. ಅದರ ಕುರಿತು ‘ಬಂಡೀಪುರದ ಕಾಡಿಗೆ ಬೆಂಕಿ’ ಎಂಬ ಕಾದಂಬರಿ ಬರೆದಿದ್ದೇನೆ. 

* ಇಂದು ಮಕ್ಕಳ ಸಾಹಿತ್ಯ ರಚಿಸುವವರ ಎದುರಿನ ಸವಾಲುಗಳೇನು?

ನಮ್ಮ ಬಾಲ್ಯದಲ್ಲಿದ್ದ ಸಮೃದ್ಧ ಜಗತ್ತು ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕಾಡು ಕಾಡಾಗಿ ಉಳಿದಿಲ್ಲ. ಬಾವಿಗಳು ಬತ್ತುತ್ತಿವೆ. ಗಿಡಗಳು ಒಣಗಿಹೋಗಿವೆ. ಹಕ್ಕಿಗಳು ಕಾಣುತ್ತಿಲ್ಲ. ಇವುಗಳ ಕುರಿತು ಅರಿವು ಮೂಡಿಸುವಂಥ ಸಾಹಿತ್ಯ ರಚಿಸುವುದು ಇಂದಿನ ಸವಾಲು. 

 * ಇಂದು ಮಕ್ಕಳು ಸಾಹಿತ್ಯವನ್ನು ಓದುತ್ತಾರೆಯೇ?

ಮಕ್ಕಳನ್ನು ಉದ್ದೇಶಿಸಿ ರಚನೆ ಮಾಡುವ ಸಾಹಿತ್ಯವನ್ನು ಮಕ್ಕಳೇ ಓದುವುದಿಲ್ಲ. ಮಕ್ಕಳ ಸಾಹಿತ್ಯ ಬರೆಯುವವರ ನಡುವೆಯಷ್ಟೇ ಅದು ವಿನಿಮಯಗೊಳ್ಳುತ್ತಿರುತ್ತದೆ. ಹೆಚ್ಚೆಂದರೆ ಪತ್ರಿಕೆಗಳಲ್ಲಿ ವಿಮರ್ಶೆ ಬರಬಹುದು. ಸಾಹಿತ್ಯದಲ್ಲಿ ಮಕ್ಕಳಿಗೆ ಅಭಿರುಚಿ ಹುಟ್ಟಿಸಬೇಕಿದೆ. ಮಕ್ಕಳಿದ್ದಲ್ಲಿಗೆ ಹೋಗಿ ಅವರಿಗೆ ಆಸಕ್ತಿ ಹುಟ್ಟಿಸುವ ರೀತಿ ಕಥೆ ಹೇಳಿದರೆ, ಪುಸ್ತಕದ ಕುರಿತು ಹೇಳಿದರೆ ಅವರಲ್ಲಿ ಅಭಿರುಚಿ ಬೆಳೆಯುತ್ತದೆ. 

 ಸಂದರ್ಶನ: ಪದ್ಮನಾಭ ಭಟ್‌

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !