ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

Published 26 ಏಪ್ರಿಲ್ 2024, 21:27 IST
Last Updated 26 ಏಪ್ರಿಲ್ 2024, 21:27 IST
ಅಕ್ಷರ ಗಾತ್ರ
ದಶಕದ ಹಿಂದೆ ಕೇಂದ್ರ ಸರ್ಕಾರವನ್ನೇ ನಿಯಂತ್ರಿಸುವ ಸ್ಥಿತಿಯಲ್ಲಿದ್ದ ಎಡ ಪಕ್ಷಗಳು 2019ರ ಲೋಕಸಭಾ ಚುನಾವಣೆಯಲ್ಲಿ ಪಾತಾಳಕ್ಕೆ ಕುಸಿದವು. ಈ ಪಕ್ಷಗಳು ಒಂದೊಂದೇ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿವೆ. ಈ ಸಲ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರಾಗಿರುವ ಎಡ ಪಕ್ಷಗಳು ಉಳಿವಿಗಾಗಿ ಹೋರಾಟ ನಡೆಸುತ್ತಿವೆ. ಇಂಡಿಯಾ ಮೈತ್ರಿಕೂಟದ ಚುನಾವಣಾ ಕಾರ್ಯತಂತ್ರ, ಅವರ ಪಕ್ಷದ ಭವಿಷ್ಯದ ಬಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಭಾಗ ಇಲ್ಲಿದೆ.
ಪ್ರ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ನಿಮ್ಮ ಪಕ್ಷದ ನಿರೀಕ್ಷೆಗಳೇನು? 

ಲೋಕಸಭಾ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆದರೆ ‘ಇಂಡಿಯಾ’ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತಮ ಅವಕಾಶ ಇದೆ. ಬಿಜೆಪಿಯ ಸೀಟುಗಳ ಸಂಖ್ಯೆ ಗಣನೀಯ ಕುಸಿತ ಕಾಣಲಿದೆ. ಬಿಜೆಪಿಗೆ ಈ ಬಗ್ಗೆ ಅರಿವಾಗಿದೆ. ‍ಪ್ರಧಾನಿ ನರೇಂದ್ರ ಮೋದಿ ಅವರ ಈಚಿನ ಚುನಾವಣಾ ಪ್ರಚಾರ ಭಾಷಣಗಳೇ ಇದಕ್ಕೆ ಸಾಕ್ಷಿ. ಪಕ್ಷದ ತಳಪಾಯ ಕುಸಿಯುತ್ತಿರುವ ಅನುಭವ ಅವರಿಗೆ ಆದಂತಿದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಕನಿಷ್ಠ ಸ್ಥಾನಗಳನ್ನು ಗಳಿಸಿತ್ತು. ಈ ಚುನಾವಣೆಯಲ್ಲಿ ಆ ವೈಫಲ್ಯವನ್ನು ಮೀರಿ ನಿಲ್ಲಬೇಕು ಎಂಬುದು ನಮ್ಮ ಆಶಯ. ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದು, ಪುನರುತ್ಥಾನ ಆಗಲಿದೆ ಎಂಬ ವಿಶ್ವಾಸವಿದೆ. 

ಪ್ರ

ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ನಿಮಗೆ ಅಸಮಾಧಾನ ಇದೆಯೇ?

ಹೌದು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ‍ಪ್ರಕರಣಗಳಲ್ಲಿ ಆಯೋಗದ ಕ್ರಮ ಪಕ್ಷಪಾತದಿಂದ ಕೂಡಿದೆ. ಪ್ರಧಾನಿ ಹಾಗೂ ಬಿಜೆಪಿಯ ಅತ್ಯಂತ ನಿರ್ಲಜ್ಜ ಉಲ್ಲಂಘನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗದ ಕ್ರಮ ಮುಕ್ತ ಹಾಗೂ ನ್ಯಾಯಸಮ್ಮತವಾಗಿಲ್ಲ.

ಪ್ರ

ಮೊದಲ ಹಂತದ ಮತದಾನ ಮುಗಿದ ಬಳಿಕ ಪ್ರಧಾನಿ ಅವರ ಪ್ರಚಾರ ವೈಖರಿಯಲ್ಲಿ ಬದಲಾವಣೆ ಆಗಿದೆ. ಮುಸ್ಲಿಂ ಮೀಸಲಾತಿ, ಪಿತ್ರಾರ್ಜಿತ ಆಸ್ತಿ ಹಂಚಿಕೆ, ಮಾಂಗಲ್ಯ ಸರದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪ್ರಧಾನಿ ಅವರಿಗೆ ಸೋಲಿನ ಸುಳಿವು ಸಿಕ್ಕಿದೆ. ಹೀಗಾಗಿ, ಅವರು ಹತಾಶರಾಗಿದ್ದಾರೆ. ಮತದಾನದ ಶೇಕಡಾವಾರು ಕುಸಿತವು ಆಡಳಿತ ಪಕ್ಷಕ್ಕೆ ಎಂದಿಗೂ ಒಳ್ಳೆಯದಲ್ಲ. ಈ ಸಲ ಯಾವುದೇ ಅಲೆ ಇಲ್ಲ ಎಂಬುದು ಸ್ಪಷ್ಟ. ಅಲೆ ಇಲ್ಲದೆ ಮೋದಿ ಅವರು ಗೆಲ್ಲುವುದು ಕಷ್ಟ. ಈ ಕಾರಣಕ್ಕೆ ಅವರು ಕೋಮು ಧ್ರುವೀಕರಣಕ್ಕೆ ಹೊರಟಿದ್ದಾರೆ. ಹಿಂದೂಗಳು–ಮುಸ್ಲಿಮರ ನಡುವೆ ಮತ್ತಷ್ಟು ವೈಷಮ್ಯ ಬೆಳೆಸಲು ಮುಂದಾಗಿದ್ದಾರೆ. ಪ್ರತಿನಿತ್ಯ ದ್ವೇಷ ಭಾಷಣ ಮಾಡುತ್ತಿದ್ದಾರೆ.

ಪ್ರ

ಈ ‘ಕೋಮು ಕಾರ್ಡ್‌’ ಕೆಲಸ ಮಾಡುತ್ತದೆ ಎಂದು ನೀವು ಭಾವಿಸುತ್ತೀರಾ? 

ಪ್ರಧಾನಿಯವರು ದೈನಂದಿನ ಜೀವನದ ಬವಣೆಗಳ ಕುರಿತು ಮಾತನಾಡುತ್ತಿಲ್ಲ. ಈ ಕುರಿತು ದಿವ್ಯ ಮೌನ ತಾಳಿದ್ದಾರೆ. ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಹಸಿವು ಹಾಗೂ ಬಡತನಗಳ ಬಗ್ಗೆ ಭಾಷಣಗಳಲ್ಲಿ ಪ್ರಸ್ತಾಪವೇ ಇಲ್ಲ. ಅವರ ಈಚಿನ ಚುನಾವಣಾ ಭಾಷಣಗಳು ಹಾಸ್ಯಾಸ್ಪದವಾದುದು. ಅವರ ಅತ್ಯಂತ ಕ್ರೂರ ಹಾಗೂ ಅತಿರೇಕದ ಭಾಷಣಗಳನ್ನು ಮಾಡುತ್ತಿದ್ದಾರೆ. ಇದು ಹತಾಶೆಯ ಪರಮಾವಧಿ.

ಪ್ರ

ನಿಮ್ಮ ಪಕ್ಷವು ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಸೀಟುಗಳನ್ನು ಅಪೇಕ್ಷಿಸಿತ್ತು. ಕಾಂಗ್ರೆಸ್‌ ಹೆಚ್ಚಿನ ಸೀಟುಗಳನ್ನು
ಬಿಟ್ಟುಕೊಟ್ಟಿಲ್ಲವಲ್ಲ?

ಸೀಟು ಹಂಚಿಕೆಯಲ್ಲಿ ಹೆಚ್ಚಿನ ನಮ್ಯತೆ ಇರಬೇಕಿತ್ತು. ಡಿಎಂಕೆ ಹಾಗೂ ಆರ್‌ಜೆಡಿ  ವೈಜ್ಞಾನಿಕವಾಗಿ ಸೀಟು ಹಂಚಿಕೆ ಮಾಡಿವೆ. ಮಹಾರಾಷ್ಟ್ರದಲ್ಲಿ ಹೆಚ್ಚು ಪಕ್ಷಗಳಿದ್ದ ಕಾರಣ ಪ್ರಕ್ರಿಯೆ ಜಟಿಲವಾಯಿತು. ಆದರೆ, ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿರುವ ಇತರ ರಾಜ್ಯಗಳಲ್ಲಿ ಇನ್ನಷ್ಟು ಹೊಂದಾಣಿಕೆ ಆಗಬೇಕಿತ್ತು. ಆಗ ಇನ್ನಷ್ಟು ಚೆನ್ನಾಗಿರುತ್ತಿತ್ತು.

‘ತೃಪ್ತಿಕರ ಸೀಟು ಹೊಂದಾಣಿಕೆ’
ಪ್ರ

‘ಇಂಡಿಯಾ’ ಮೈತ್ರಿಕೂಟದಲ್ಲಿ ಒಗ್ಗಟ್ಟೇ ಇಲ್ಲವಲ್ಲ?

ರಾಜ್ಯ ಮಟ್ಟದಲ್ಲಿ ಮಾತ್ರ ಸೀಟು ಹೊಂದಾಣಿಕೆ ಸಾಧ್ಯ ಎಂಬುದನ್ನು ನಾವು ಆರಂಭದಲ್ಲೇ ಹೇಳಿದ್ದೆವು. ರಾಷ್ಟ್ರ ಮಟ್ಟದಲ್ಲಿ ಸೀಟು ಹಂಚಿಕೆ ಕಷ್ಟ ಸಾಧ್ಯ. ಮಿತ್ರ ಪಕ್ಷಗಳ ಮನವೊಲಿಸಲು ಸ್ವಲ್ಪ ಸಮಯ ಹಿಡಿಯಿತು. ರಾಜ್ಯವಾರು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಹಾಗೂ ಅದು ತೃಪ್ತಿಕರವಾಗಿದೆ. ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟದ ಸದಸ್ಯರೇ ಎದುರಾಳಿಗಳಾಗಿದ್ದೇವೆ. ಪಂಜಾಬ್‌, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಕಷ್ಟ ಸಾಧ್ಯವಾಗಿತ್ತು.

ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶ. ಪಶ್ಚಿಮ ಬಂಗಾಳದಲ್ಲಿ ತ್ರಿಕೋನ ಹೋರಾಟ ನಡೆದರೆ ಮಾತ್ರ ಬಿಜೆಪಿಯನ್ನು ಸೋಲಿಸಲು ಸಾಧ್ಯ. ಪಂಜಾಬ್‌ನಲ್ಲಿ ಎಎಪಿ ಹಾಗೂ ಕಾಂಗ್ರೆಸ್‌ ಸೀಟು ಹಂಚಿಕೆ ಮಾಡಿಕೊಂಡರೆ ಬಿಜೆಪಿ ಹಾಗೂ ಅಕಾಲಿ ದಳಕ್ಕೆ ಲಾಭವಾಗುತ್ತದೆ. ಆಡಳಿತ ವಿರೋಧಿ ಅಲೆಯ ಬಿಸಿ ಎರಡೂ ಪಕ್ಷಗಳಿಗೆ ತಟ್ಟುತ್ತದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಸೀಟು ಹಂಚಿಕೆ ವ್ಯವಸ್ಥಿತವಾಗಿ ನಡೆದಿದೆ. ಇದು ಸಕಾರಾತ್ಮಕ ಬೆಳವಣಿಗೆ.

‘ರಾಹುಲ್‌ ಹೇಳಿಕೆ ದುರದೃಷ್ಟಕರ’
ಪ್ರ

ತನಿಖಾ ಸಂಸ್ಥೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪ. ಆದರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪಿಣರಾಯಿ ಅವರನ್ನು ಇನ್ನೂ ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಇಂತಹ ಹೇಳಿಕೆ ನೀಡಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ. ವಾಸ್ತವದಲ್ಲಿ ಕೇರಳದ ಮುಖ್ಯಮಂತ್ರಿ ಅವರನ್ನು ಬಂಧಿಸಲು ಮೋದಿ ಅವರನ್ನು ಆಹ್ವಾನಿಸುವುದು ದುರದೃಷ್ಟಕರ. ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ರಾಹುಲ್‌ ಇಂತಹುದೇ ಹೇಳಿಕೆ ನೀಡಿದ್ದರು. ಅದು ಪ್ರತಿಕೂಲ ಪರಿಣಾಮ ಬೀರಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT