ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮ ಹೊಣೆ: ಬಿ.ಚಂದ್ರಶೇಖರ ಹೆಬ್ಬಾರ್

ಅನುಭವ ಮಂಟಪ
Last Updated 28 ಮೇ 2020, 3:06 IST
ಅಕ್ಷರ ಗಾತ್ರ

‘ರಾಜ್ಯದ ಹೋಟೆಲ್‌ಗಳಲ್ಲಿ ಸುಮಾರು 15 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಲಾಕ್‌ಡೌನ್‌ ಬಳಿಕ ಹೋಟೆಲ್‌ಗಳು ಬಂದ್‌ ಆದಕಾರಣ, ಶೇ 80ಕ್ಕೂ ಹೆಚ್ಚು ಹೋಟೆಲ್ ಕಾರ್ಮಿಕರು ತವರಿಗೆ ಮರಳಿದ್ದಾರೆ. ಮುಂದಿನ ದಿನಗಳಲ್ಲಿ ಹೋಟೆಲ್ ಕಾರ್ಮಿಕರ ಕೊರತೆ ಎದುರಾಗಲಿದೆ’ ಎನ್ನುತ್ತಾರೆ ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಬಾರ್. ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ:

* ಹೋಟೆಲ್‌ಗಳು ತೆರೆಯಲು ಇನ್ನೇನು ಅವಕಾಶ ಸಿಗಲಿದೆ. ಹಿಂದಿನಂತೆ ವಹಿವಾಟು ನಡೆಸಲು ಉದ್ಯಮ ಸಿದ್ಧವಾಗಿದೆಯೇ?

ಕರ್ನಾಟಕದಲ್ಲಿ 50 ಸಾವಿರಕ್ಕೂ ಹೆಚ್ಚು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿವೆ. ಪ್ರತಿ ಹೋಟೆಲ್‌ನಲ್ಲಿ ಕನಿಷ್ಠ 15ರಿಂದ 30 ಮಂದಿ ಕೆಲಸ ಮಾಡುತ್ತಿದ್ದರು. ಇವರಲ್ಲಿ ಬಹುಪಾಲು ಕಾರ್ಮಿಕರು ಹೊರ ರಾಜ್ಯದವರಾಗಿದ್ದರು. ಎರಡೂವರೆ ತಿಂಗಳಿನಿಂದ ಹೋಟೆಲ್‌ಗಳು ಮುಚ್ಚಿವೆ. ಪಾರ್ಸೆಲ್ ಸೇವೆಗೆ ಅವಕಾಶ ನೀಡಿದ್ದರೂ ಅದನ್ನು ನಿರ್ವಹಿಸುವ ಕೆಲಸಗಾರರು ಲಭ್ಯವಿಲ್ಲ. ಹೋಟೆಲ್ ತೆರೆಯಲು ಅನುಮತಿ ಸಿಕ್ಕಮೇಲೂ ಕಾರ್ಮಿಕರ ಕೊರತೆ ತಪ್ಪಿದ್ದಲ್ಲ. ಹೀಗಾಗಿ ಮೊದಲಿನಂತೆ ವ್ಯಾಪಾರ ನಡೆಯುವುದು ಅನುಮಾನ. ಕುಶಲ ಬಾಣಸಿಗರ ಕೊರತೆಯಿಂದ ಎಲ್ಲ ಮಾದರಿಯ ಆಹಾರ ತಯಾರಿ ಸಹ ಕಷ್ಟ. ಹೊಸ ಕೆಲಸಗಾರರಿಗೆ ಅಡುಗೆ ತರಬೇತಿ ನೀಡುವುದು ಸವಾಲಿನ ಕೆಲಸ. ಈಗ ಲಭ್ಯವಾಗುವ ಕಾರ್ಮಿಕರಿಗೆ ಅನುಗುಣವಾಗಿ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತವೆ.

* ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯಲ್ಲೂ ವೇತನವನ್ನು ಕೊಟ್ಟಿದ್ದೀರಾ?

ನಮ್ಮಲ್ಲಿರುವ ಕೆಲಸಗಾರರು ಅಸಂಘಟಿತರು. ಸರ್ಕಾರದಿಂದ ನಮಗೆ ಯಾವುದೇ ಅನುದಾನ ಇಲ್ಲ. ಏಪ್ರಿಲ್-ಮೇ ತಿಂಗಳಿನಲ್ಲಿ ಹೋಟೆಲ್‌ಗಳು ಕಾರ್ಯನಿರ್ವಹಿಸಿಲ್ಲ. ಕೆಲಸ ಮಾಡದೆ ಸಂಬಳ ನೀಡಲು ಹೇಗೆತಾನೆ ಸಾಧ್ಯ? ಎಲ್ಲಾ ಕಾರ್ಮಿಕರು ಮಾಡಿರುವ ಕೆಲಸಕ್ಕೆ ಪೂರ್ಣ ಸಂಬಳವನ್ನು ಪಡೆದಿದ್ದಾರೆ. ನಷ್ಟದಲ್ಲಿರುವ ಮಾಲೀಕರಿಗೆ ಸಂಬಳ ನೀಡುವುದು ಹೊರೆಯಾಗಲಿದೆ.

* ಸಾರಿಗೆ ವ್ಯವಸ್ಥೆಯಿಲ್ಲದೆ ಕಾರ್ಮಿಕರು ನಡೆದುಹೋದರೂ ಉದ್ಯಮಿಗಳು ಸುಮ್ಮನೆ ಕುಳಿತಿದ್ದರು ಎನ್ನುವ ಆರೋಪ ಇದೆಯಲ್ಲ?

ಲಾಕ್‍ಡೌನ್ ಜಾರಿಗೂ ಮುನ್ನವೇ ಬಹುತೇಕ ಹೋಟೆಲ್‌ಗಳನ್ನು ಮುಚ್ಚಲಾಯಿತು. ರೈಲು, ಬಸ್ ಸೇವೆ ಬಳಸಿ ಆಗಲೇ ಹೋಟೆಲ್ ಕಾರ್ಮಿಕರು ಊರುಗಳಿಗೆ ತೆರಳಿದರು. ಈಗಿನಂತೆ ನಡೆದು ಕೊಂಡು ಊರು ಸೇರುವ ಸಮಸ್ಯೆಗೆ ಸಿಲುಕಲಿಲ್ಲ. ಅವರಿಗೆ ಸಾರಿಗೆ ಸಮಸ್ಯೆ ಎದುರಾಗಲಿಲ್ಲ. ತೀರಾ ಸಂಕಷ್ಟಕ್ಕೆ ಸಿಲುಕಿದವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಎಲ್ಲರೂ ಕ್ಷೇಮವಾಗಿ ತಲುಪಿದ್ದಾರೆ. ಉಳಿದವರಿಗೆ ಸಂಬಳರಹಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ.

* ಕಾರ್ಮಿಕರ ಭವಿಷ್ಯದ ಪ್ರಶ್ನೆಗೆ ಉತ್ತರವೇನು?

ಹೋಟೆಲ್‌ಗಳು ನಡೆಯುವುದೇ ಕಾರ್ಮಿಕರಿಂದ. ಅವರಿಲ್ಲದೆ ವ್ಯಾಪಾರ ನಡೆಸುವುದು ಕಷ್ಟ. ದೂರದ ಊರುಗಳಲ್ಲಿರುವ ಕಾರ್ಮಿಕರಿಗೆ ಹಿಂತಿರುಗುವಂತೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಕೊರೊನಾದಿಂದ ಕೆಲವರಿಗೆ ಇನ್ನೂ ಭಯ ಇದೆ. ಎಲ್ಲ ಸಹಜಸ್ಥಿತಿಗೆ ಬರುವವರೆಗೆ ಕೆಲಸಕ್ಕೆ ಹೋಗುವುದು ಬೇಡ ಎಂದು ಅವರ ಕುಟುಂಬಸ್ಥರು ತಡೆಯುತ್ತಿದ್ದಾರೆ. ವಾಪಸ್ ಬಂದರೆ ಕಾರ್ಮಿಕರಿಗೆ ಕೆಲಸ ಇದ್ದೇ ಇರುತ್ತದೆ. ಅವರ ಆರೋಗ್ಯ ರಕ್ಷಣೆ ನಮ್ಮ ಹೊಣೆ.

* ಸಂಕಷ್ಟದ ಈ ಸಮಯದಲ್ಲಿ ಹೋಟೆಲ್‌ ಉದ್ಯಮ ಕೈಗೊಂಡ ಎಚ್ಚರಿಕೆ ಕ್ರಮಗಳೇನು?

ವ್ಯಾಪಾರ ನಡೆಸುವುದಕ್ಕಿಂತ ಹೋಟೆಲ್‌ಗಳಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕರ ಆರೋಗ್ಯದ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸದಾಗಿ ಹೋಟೆಲ್ ಆರಂಭಿಸುವವರಿಗೆ ಇದು ಸೂಕ್ತ ಸಮಯವಲ್ಲ. ಸಹಜಸ್ಥಿತಿ ತಲುಪುವವರೆಗೆ ಹೋಟೆಲ್‌ಗಳ ಮೇಲೆ ಹೆಚ್ಚು ಬಂಡವಾಳ ಹಾಕುವುದು ಬೇಡ ಎಂಬ ಸಲಹೆಗಳನ್ನು
ಸಂಘದಿಂದ ನೀಡಲಾಗಿದೆ.

* ಹೋಟೆಲ್‍ಗಳಿಗೆ ಈಗ ಬೇಕಾಗಿರುವ ಬೆಂಬಲ ಎಂಥದ್ದು?

ಆಹಾರ ಪ್ರತಿಯೊಬ್ಬರಿಗೂ ಅಗತ್ಯ. ಲಾಕ್‌ಡೌನ್‌ನಿಂದ ಅನಿವಾರ್ಯವಾಗಿ ಆಹಾರ ಮಾರಾಟದ ಮೇಲೆ ಸರ್ಕಾರ ನಿರ್ಬಂಧ ಹೇರಿತು. ಆಹಾರದ ಕಿಟ್ ವಿತರಣೆಗೆ ಪರ್ಯಾಯವಾಗಿ ಹೋಟೆಲ್‌ಗಳಿಂದಲೇ ಆಹಾರ ತಯಾರಿಸಿ ಸರಬರಾಜು ಮಾಡುವ ವ್ಯವಸ್ಥೆ ಮಾಡಬಹುದಿತ್ತು. ಇದರಿಂದ ಹೋಟೆಲ್‌ಗಳು ನಷ್ಟ ಭರಿಸುವುದು ತಪ್ಪುತ್ತಿತ್ತು. ಹೋಟೆಲ್‌ಗಳಿಗೆ ಅನುಮತಿ ನೀಡದೆ ಸರ್ಕಾರ ಈಗಲೇ ವಿಳಂಬ ಮಾಡಿದೆ. ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲೇಬೇಕು. ಹೋಟೆಲ್‌ಗಳಿಗೆ ಎರಡು ತಿಂಗಳ ವಿದ್ಯುತ್ ಬಳಕೆ ಮೇಲಿನ ಶುಲ್ಕ ಮನ್ನಾ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT